ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮದ ಅನುಷ್ಠಾನದಿಂದ ಶಾಂತಿ, ಸಾಮರಸ್ಯ’

ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನ
Published 12 ಡಿಸೆಂಬರ್ 2023, 6:15 IST
Last Updated 12 ಡಿಸೆಂಬರ್ 2023, 6:15 IST
ಅಕ್ಷರ ಗಾತ್ರ

ಉಜಿರೆ: ‘ಬದುಕಿನಲ್ಲಿ ಶಾಂತಿ, ತೃಪ್ತಿ, ನೆಮ್ಮದಿ ಮತ್ತು ಸಂತೊಷ ನೀಡುವುದೇ ಎಲ್ಲ ಧರ್ಮಗಳ ಸಾರವಾಗಿದೆ. ಧರ್ಮದ ಮರ್ಮವನ್ನರಿತು ಬದುಕಿನಲ್ಲಿ ಅನುಷ್ಠಾನಗೊಳಸಿದಾಗ ಶಾಂತಿ, ಸಾಮರಸ್ಯದ ಜೀವನ ಸಾಧ್ಯ’ ಎಂದು ವಿದ್ವಾಂಸ ಗುರುರಾಜ ಕರಜಗಿ ಹೇಳಿದರು.

ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ಸೋಮವಾರ ನಡೆದ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಎಲ್ಲೆಲ್ಲೂ ಧರ್ಮದ ಹೆಸರಿನಲ್ಲಿ ಹಿಂಸೆ ತಾಂಡವವಾಡುತ್ತಿದೆ. ಧರ್ಮದ ನೆಪದಲ್ಲಿ ಹಿಂಸೆ ಮತ್ತು ಭಯೋತ್ಪಾದನೆ ಸಲ್ಲದು. ಸರ್ವಧರ್ಮ ಸಮನ್ವಯದಿಂದ ಪಾವಿತ್ರ್ಯ, ಉದಾರತೆ ಮತು ಶಕ್ತಿವರ್ಧನೆಯೊಂದಿಗೆ ಸಾಮಾಜಿಕ ಸಾಮರಸ್ಯ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದ ಜೀವನ ನಡೆಸಬಹುದು. ಧರ್ಮದ ಮರ್ಮವನ್ನರಿತು ಬದುಕಿನಲ್ಲಿ ಅನುಷ್ಠಾನ ಮಾಡಿದರೆ ಧರ್ಮದ ತತ್ವಗಳನ್ನೂ ರಕ್ಷಣೆ ಮಾಡಿದಂತಾಗುತ್ತದೆ’ ಎಂದರು.

ದೇವಸ್ಥಾನ, ವ್ಯಕ್ತಿಯ ಸಾಧನೆ ಮತ್ತು ಜನರ ಆಶಯ, ಅಪೇಕ್ಷೆಗಳ ಈಡೇರಿಕೆಯಿಂದ ಯಾವುದೇ ಕ್ಷೇತ್ರ ಪವಿತ್ರ ತೀರ್ಥಕ್ಷೇತ್ರವಾಗಿ ಬೆಳೆಯುತ್ತದೆ, ಬೆಳಗುತ್ತದೆ. ಮಂಜುನಾಥ ಸ್ವಾಮಿ ಮತ್ತು ಧರ್ಮದೇವತೆಗಳ ಸಾನ್ನಿಧ್ಯ, ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಸಾಧನೆ ಮತ್ತು ಬಹುಮುಖಿ ಸಮಾಜ ಸೇವಾಕಾರ್ಯಗಳಿಂದಾಗಿ ಧರ್ಮಸ್ಥಳ ಇಂದು ಸರ್ವಧರ್ಮ ಸಮನ್ವಯ ಕೇಂದ್ರವಾಗಿ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಹಾಗೂ ಗೌರವ ಹೊಂದಿದೆ ಎಂದು ಶ್ಲಾಘಿಸಿದರು.

ಮಾನವ ಜನಾಂಗದ ಕಲ್ಯಾಣವೇ ಧರ್ಮದ ಧ್ಯೇಯ: ಧರ್ಮವು ಶಾಶ್ವತ ಮತ್ತು ನಿತ್ಯವಾದುದು. ಕಾಮ, ಭಯ, ಲೋಭ ಮತ್ತು ಬದುಕುವ ಉದ್ದೇಶ ಮೊದಲಾದ ಯಾವುದೇ ಕಾರಣಕ್ಕೂ ಧರ್ಮವನ್ನು ತ್ಯಜಿಸಬಾರದು. ನಮ್ಮ ಸಾರ್ಥಕ ಬದುಕಿಗೆ ಬೆಳಕು ನೀಡಿ ದಾರಿ ತೋರಿಸುವ ಸಾಧನವನ್ನು ‘ಧರ್ಮ’ ಎಂದು ಕರೆಯುತ್ತಾರೆ. ಮಾನವ ಜನಾಂಗದ ಕಲ್ಯಾಣವೇ ಧರ್ಮದ ಗುರಿಯಾಗಿದೆ ಎಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

ದೇಶದಲ್ಲಿ ಕಾಲಕಾಲಕ್ಕೆ ಧಾರ್ಮಿಕ, ಆರ್ಥಿಕ ಹಾಗೂ ಸಾಮಾಜಿಕ ಏರುಪೇರಾಗುತ್ತದೆ. ಇಂಥ ಪರಿಸ್ಥಿತಿಗಳಲ್ಲೂ ಧರ್ಮವು ನಿರಂತರತೆಯನ್ನು ಕಾಯ್ದುಕೊಳ್ಳುವುದೇ ಸವಾಲಾಗಿದೆ. ಆದರೆ, ಧರ್ಮಸ್ಥಳದಲ್ಲಿ ಬದ್ಧತೆಯಿಂದ, ಪ್ರಾಮಾಣಿಕವಾಗಿ ಕೊರೊನಾ ಸಂದರ್ಭಗಲ್ಲೂ ಧರ್ಮದಲ್ಲಿ ನಿರಂತರತೆ ಕಾಯ್ದುಕೊಂಡು ಯಶಸ್ವಿಯಾಗಿದ್ದೇವೆ ಎಂದು ಅವರು ಹೇಳಿದರು.

ಸಮಾಜದಲ್ಲಿ ಭಿನ್ನಾಭಿಪ್ರಾಯ ಸಹಜವಾಗಿರುತ್ತವೆ. ಆದರೆ, ಭಿನ್ನಾಭಿಪ್ರಾಯಗಳು ಬಂದಾಗ ಧರ್ಮಿಷ್ಟರು, ಜ್ಞಾನಿಗಳು ಅವುಗಳನ್ನು ಬಿಟ್ಟುಬಿಡದೆ ಜತೆಗೂಡಿಸಿಕೊಂಡೇ ಹೋಗಬೇಕಾಗುತ್ತದೆ. ಅಂತಿಮವಾಗಿ ಸತ್ಯ ಮತ್ತು ಧರ್ಮಕ್ಕೆ ಜಯವಾಗುತ್ತದೆ. ಎಲ್ಲ ಧರ್ಮಗಳ ಮೂಲ ಸಂದೇಶ ಶಾಂತಿ, ಅಹಿಂಸೆ ಮತ್ತು ಸಹಬಾಳ್ವೆಯೇ ಆಗಿದೆ. ಅವುಗಳ ಪಾಲನೆಯಿಂದ ಪ್ರಗತಿ ಮತ್ತು ವಿಶ್ವಶಾಂತಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ ಧರ್ಮಸ್ಥಳದಲ್ಲಿ ನಿತ್ಯೋತ್ಸವವಾಗಿದ್ದು, ಬದುಕಿನಲ್ಲಿ ನೊಂದು, ಬೆಂದು ಬಂದವರಿಗೆ ಇಲ್ಲಿ ಹೊಸಬೆಳಕು ಸಿಗುತ್ತದೆ. ಹೆಗ್ಗಡೆ ಅವರ ಹಿತವಚನ ಹಾಗೂ ಅಭಯದಾನದಿಂದ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಬಂದು ಅವರು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ.
ಪ್ರಾಚೀನ ಪರಂಪರೆ, ಆಧುನಿಕತೆ ಮತ್ತು ಆಧ್ಯಾತ್ಮಿಕದ ತ್ರಿವೇಣಿ ಸಂಗಮವಾಗಿದೆ ಎಂದರು.

‘ಆಧುನಿಕ ಭಾರತ- ಧರ್ಮ ಸಮನ್ವಯತೆ’ ಕುರಿತು ಎಂ.ಆರ್.ವೆಂಕಟೇಶ್ ಉಪನ್ಯಾಸ ನೀಡಿದರು.

‘ಪ್ರಾಚೀನ ಭಾರತ- ಧರ್ಮ ಸಮನ್ವಯ’ ಕುರಿತು ವಿ.ಬಿ.ಆರತಿ, ‘ಮಧ್ಯಕಾಲೀನ ಭಾರತ- ಧರ್ಮ ಸಮನ್ವಯ’ ಎಂಬ ವಿಷಯದಲ್ಲಿ ಮಹಮ್ಮದ್ ಗೌಸ್ ರಶೀದ್‌ ಅಹ್ಮದ ಹವಾಲ್ದಾರ ಉಪನ್ಯಾಸ ನೀಡಿದರು.

ಎಸ್.ಆರ್.ವಿಘ್ನರಾಜ್ ಸಂಪಾದಿಸಿದ ‘ಭೈರವೇಶ್ವರ ಪುರಾಣ’ ಗ್ರಂಥವನ್ನು ಸ್ವಾಮೀಜಿ ಬಿಡುಗಡೆ ಮಾಡಿದರು.

ಹೇಮಾವತಿ ವಿ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್ ಭಾಗವಹಿಸಿದ್ದರು.

ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ವಂದಿಸಿದರು. 

ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಿತು.

ಸರ್ವಧರ್ಮ ಸಮ್ಮೇಳನವನ್ನು ಗುರುರಾಜ ಕರಜಗಿ ಉದ್ಘಾಟಿಸಿದರು
ಸರ್ವಧರ್ಮ ಸಮ್ಮೇಳನವನ್ನು ಗುರುರಾಜ ಕರಜಗಿ ಉದ್ಘಾಟಿಸಿದರು
ಗುರುರಾಜ ಕರಜಗಿ ಮಾತನಾಡಿದರು
ಗುರುರಾಜ ಕರಜಗಿ ಮಾತನಾಡಿದರು
ವೀರೇಂದ್ರ ಹೆಗ್ಗಡೆ ಮಾತನಾಡಿದರು
ವೀರೇಂದ್ರ ಹೆಗ್ಗಡೆ ಮಾತನಾಡಿದರು
ಸರ್ವಧರ್ಮ ಸಮ್ಮೇಳನದಲ್ಲಿ ಕೃತಿ ಬಿಡುಗಡೆ ಮಾಡಲಾಯಿತು
ಸರ್ವಧರ್ಮ ಸಮ್ಮೇಳನದಲ್ಲಿ ಕೃತಿ ಬಿಡುಗಡೆ ಮಾಡಲಾಯಿತು

Graphic text / Statistics - ಉಜಿರೆ: ‘ಬದುಕಿನಲ್ಲಿ ಶಾಂತಿ ತೃಪ್ತಿ ನೆಮ್ಮದಿ ಮತ್ತು ಸಂತೊಷ ನೀಡುವುದೇ ಎಲ್ಲ ಧರ್ಮಗಳ ಸಾರವಾಗಿದೆ. ಬಣ್ಣದ ಗಾಜಿನ ಮೂಲಕ ಬರುವ ಬೆಳಕು ಬೇರೆ ಬೇರೆ ಬಣ್ಣ ಹೊಂದಿದರೂ ಮೂಲ ಬೆಳಕಿನ ಬಣ್ಣ ಒಂದೇ ಆಗಿದೆ. ಧರ್ಮದ ಮರ್ಮವನ್ನರಿತು ಬದುಕಿನಲ್ಲಿ ಅನುಷ್ಠಾನಗೊಳಸಿದಾಗ ಶಾಂತಿ ಸಾಮರಸ್ಯದ ಜೀವನ ಸಾಧ್ಯ ಎಂದು ಖ್ಯಾತ ವಿದ್ವಾಂಸ ಗುರುರಾಜ ಕರ್ಜಗಿ ಹೇಳಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ ೯೧ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಎಲ್ಲೆಲ್ಲೂ ಧರ್ಮದ ಹೆಸರಿನಲ್ಲಿ ಹಿಂಸೆ ತಾಂಡವವಾಡುತ್ತಿದೆ. ಧರ್ಮದ ನೆಪದಲ್ಲಿ ಹಿಂಸೆ ಮತ್ತು ಭಯೋತ್ಪಾದನೆ ಸಲ್ಲದು. ಸರ್ವಧರ್ಮ ಸಮನ್ವಯದಿಂದ ಪವಿತ್ರತೆ ಉದಾರತೆ ಮತು ಶಕ್ತಿವರ್ಧನೆಯೊಂದಿಗೆ ಸಾಮಾಜಿಕ ಸಾಮರಸ್ಯ ಶಾಂತಿ ನೆಮ್ಮದಿ ಹಾಗೂ ಸೌಹಾರ್ದಯುತ ಜೀವನ ನಡೆಸಬಹುದು. ಧರ್ಮದ ಮರ್ಮವನ್ನರಿತು ಬದುಕಿನಲ್ಲಿ ಅನುಷ್ಠಾನ ಮಾಡಿದರೆ ಧರ್ಮದ ತತ್ವಗಳನ್ನೂ ರಕ್ಷಣೆ ಮಾಡಿದಂತಾಗುತ್ತದೆ. ದೇವಸ್ಥಾನ ವ್ಯಕ್ತಿಯ ಸಾಧನೆ ಮತ್ತು ಜನರ ಆಶಯ ಅಪೇಕ್ಷೆಗಳ ಈಡೇರಿಕೆಯಿಂದ ಯಾವುದೇ ಕ್ಷೇತ್ರ ಪವಿತ್ರ ತೀರ್ಥಕ್ಷೇತ್ರವಾಗಿ ಬೆಳೆಯುತ್ತದೆ ಬೆಳಗುತ್ತದೆ. ಶ್ರೀ ಮಂಜುನಾಥ ಸ್ವಾಮಿ ಮತ್ತು ಧರ್ಮ ದೇವತೆಗಳ ಸಾನ್ನಿಧ್ಯ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸಾಧನೆ ಮತ್ತು ಬಹುಮುಖಿ ಸಮಾಜ ಸೇವಾಕಾರ್ಯಗಳಿಂದಾಗಿ ಧರ್ಮಸ್ಥಳ ಇಂದು ಸರ್ವಧರ್ಮ ಸಮನ್ವಯ ಕೇಂದ್ರವಾಗಿ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಹಾಗೂ ಗೌರವ ಹೊಂದಿದೆ ಎಂದು ಕರ್ಜಗಿ ಶ್ಲಾಘಿಸಿ ಅಭಿನಂದಿಸಿದರು. ಮಾನವ ಜನಾಂಗದ ಕಲ್ಯಾಣವೇ ಧರ್ಮದ ಧ್ಯೇಯ: ಡಿ. ವೀರೇಂದ್ರ ಹೆಗ್ಗಡೆ. ಧರ್ಮವು ಶಾಶ್ವತ ಮತ್ತು ನಿತ್ಯವಾದುದು. ಕಾಮ ಭಯ ಲೋಭ ಮತ್ತು ಬದುಕುವ ಉದ್ದೇಶ ಮೊದಲಾದ ಯಾವುದೇ ಕಾರಣಕ್ಕಾಗಿಯೂ ಧರ್ಮವನ್ನು ತ್ಯಜಿಸಬಾರದು. ನಮ್ಮ ಸಾರ್ಥಕ ಬದುಕಿಗೆ ಬೆಳಕು ನೀಡಿ ದಾರಿ ತೋರಿಸುವ ಸಾಧನವನ್ನು “ಧರ್ಮ” ಎಂದು ಕರೆಯುತ್ತಾರೆ. ಮಾನವ ಜನಾಂಗದ ಕಲ್ಯಾಣವೇ ಧರ್ಮದ ಗುರಿಯಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣದಲ್ಲಿ ಹೇಳಿದರು. ವಿಶ್ವದಲ್ಲಿ ಅನೇಕ ಧರ್ಮಗಳಿದ್ದು ಅವುಗಳ ಆಚರಣೆ ಕ್ರಿಯೆ ಹಾಗೂ ಸ್ವರೂಪದಲ್ಲಿ ವ್ಯತ್ಯಾಸ ಇದ್ದರೂ ಅಂತಿಮ ಗುರಿ ಮಾನವ ಜನಾಂಗದ ಕಲ್ಯಾಣವೇ ಆಗಿದೆ ಎಂದು ಅವರು ತಿಳಿಸಿದರು. ದೇಶದಲ್ಲಿ ಕಾಲಕಾಲಕ್ಕೆ ಧಾರ್ಮಿಕ ಆರ್ಥಿಕ ಹಾಗೂ ಸಾಮಾಜಿಕ ಏರಪೇರುಗಳಾಗುತ್ತವೆ. ಇಂತಹ ಪರಿಸ್ಥಿತಿಗಳಲ್ಲಿಯೂ ಧರ್ಮವು ನಿರಂತರತೆಯನ್ನು ಕಾಯ್ದುಕೊಳ್ಳುವುದೇ ಸವಾಲಾಗಿದೆ. ಆದರೆ ಧರ್ಮಸ್ಥಳದಲ್ಲಿ ಬದ್ಧತೆಯಿಂದ ಪ್ರಾಮಾಣಿಕವಾಗಿ ಕೊರೊನಾ ಸಂದರ್ಭಗಳಲ್ಲಿ ಕೂಡಾ ಧರ್ಮದಲ್ಲಿ ನಿರಂತರತೆಯನ್ನು ಕಾಯ್ದುಕೊಂಡು ಯಶಸ್ವಿಯಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನಗಳ ಇಂದಿನ ಯುಗದಲ್ಲಿ ಜ್ಞಾನಕ್ಕೆ ಮಹತ್ವ ಹೆಚ್ಚಾಗಿದೆ. ವಿಜ್ಞಾನ ಜ್ಞಾನವೇ ಮತ್ತು ಜ್ಞಾನ ವಿಜ್ಞಾನವೇ ಆಗಿದೆ. ಅವು ಪರಸ್ಪರ ಪೂರಕ ಮತ್ತು ಪ್ರೇರಕ. ಆದರೆ ವಿಜ್ಞಾನವಾಗಲಿ ಜ್ಞಾನವಾಗಲಿ ನಿಂತ ನೀರಗಬಾರದು. ಅನೇಕ ಸಮಸ್ಯೆಗಳು ಬಂದಾಗ ಅವುಗಳನ್ನು ಸಹಿಸಿಕೊಂಡು ನಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಂಡು ಪರಿಹರಿಸಬೇಕಾಗುತ್ತದೆ. ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿರುತ್ತವೆ. ಆದರೆ ಭಿನ್ನಾಭಿಪ್ರಾಯಗಳು ಬಂದಾಗ ಧರ್ಮೀಷ್ಠರು ಜ್ಞಾನಿಗಳು ಅವುಗಳನ್ನು ಬಿಟ್ಟುಬಿಡದೆ ಜೊತೆಗೂಡಿಸಿಕೊಂಡೇ ಹೋಗಬೇಕಾಗುತ್ತದೆ. ಅಂತಿಮವಾಗಿ ಸತ್ಯ ಮತ್ತು ಧರ್ಮಕ್ಕೆ ಜಯವಾಗುತ್ತದೆ. ಎಲ್ಲಾ ರ್ಧಗಳ ಮೂಲ ಸಂದೇಶ ಶಾಂತಿ ಅಹಿಂಸೆ ಮತ್ತು ಸಹಬಾಳ್ವೆಯೇ ಆಗಿದೆ. ಅವುಗಳ ಪಾಲನೆಯಿಂದ ಪ್ರಗತಿ ಮತ್ತು ವಿಶ್ವಶಾಂತಿ ಸಾಧ್ಯವಾಗುತ್ತದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು. ಯಾರು ಧರ್ಮವನ್ನು ರಕ್ಷಿಸುತ್ತಾರೊ ಅವರನ್ನು ಧರ್ಮವೇ ರಕ್ಷಿಸುತ್ತದೆ. ಧರ್ಮಸ್ಥಳದಲ್ಲಿ ಅನ್ನದಾನ ಅಭಯದಾನ ಔಷಧದಾನ ಮತ್ತು ವಿದ್ಯಾದಾನ ನಿತ್ಯೋತ್ಸವವಾಗಿದ್ದು ಮಾನವ ಕಲ್ಯಾಣಕ್ಕೆ ನಿರಂತರ ಪ್ರಯತ್ನ ಮಾಡಲಾಗುತ್ತದೆ. ಧರ್ಮಸ್ಥಳದಲ್ಲಿ ೧೯೩೩ ರಿಂದ ಪ್ರತಿವರ್ಷವೂ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನದ ಮೂಲಕ ಭಕ್ತರಿಗೆ ಉತ್ತಮ ಸಂದೇಶ ನೀಡಲಾಗುತ್ತಿದೆ. ಅಂತರAಗದ ಶುದ್ಧತೆ ಹಾಗೂ ಪರಿಪಕ್ವತೆಯಿಂದ ಧರ್ಮದ ಆಚರಣೆಯೊಂದಿಗೆ ಬದುಕಿನಲ್ಲಿ ಎಲ್ಲರೂ ಒಳಿತನ್ನು ಕಾಣಬೇಕೆಂಬುದೇ ಸರ್ವಧರ್ಮ ಸಮ್ಮೇಳನದ ೯೧ನೆ ಅಧಿವೇಶನದ ಆಶಯ ಮತ್ತು ಸಂದೇಶವಾಗಿದೆ ಎಂದು ಹೆಗ್ಗಡೆಯವರು ಹೇಳಿದರು. ಅಧ್ಯಕ್ಷತೆ ವಹಿಸಿದ ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ ಅನ್ನದಾನ ವಿದ್ಯಾದಾನ ಔಷಧದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ಧರ್ಮಸ್ಥಳದಲ್ಲಿ ನಿತ್ಯೋತ್ಸವವಾಗಿದ್ದು ಬದುಕಿನಲ್ಲಿ ನೊಂದು ಬೆಂದು ಬಂದವರಿಗೆ ಇಲ್ಲಿ ಹೊಸಬೆಳಕು ಮೂಡಿಬರುತ್ತದೆ. ಹೆಗ್ಗಡೆಯವರ ಹಿತವಚನ ಹಾಗೂ ಅಭಯದಾನದಿಂದ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಬಂದು ಅವರು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಪ್ರಾಚೀನ ಪರಂಪರೆ ಆಧುನಿಕತೆ ಮತ್ತು ಆಧ್ಯಾತ್ಮಿಕತೆಯ ತ್ರಿವೇಣಿ ಸಂಗಮದೊAದಿಗೆ ವೀರೇಂದ್ರ ಹೆಗ್ಗಡೆಯವರು ಅಮೋಘ ಸಾಧನೆ ಮಾಡಿದ್ದಾರೆ. ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯೊಂದಿಗೆ ಮಾನವೀಯತೆ ಮೆರೆದರೆ ವಿಶ್ವಶಾಂತಿ ಸಾಧ್ಯವಾಗುತ್ತದೆ. ಭಾರತದಲ್ಲಿ ಮಾತ್ರ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ ಎಂದು ಸ್ವಾಮೀಜಿ ನುಡಿದರು. “ಆಧುನಿಕ ಭಾರತ- ಧರ್ಮ ಸಮನ್ವಯತೆ” ಎಂಬ ವಿಷಯದ ಬಗ್ಯೆ ಡಾ. ಎಂ. ಆರ್. ವೆಂಕಟೇಶ್ ಉಪನ್ಯಾಸ ನೀಡಿದರು. “ಪ್ರಾಚೀನ ಭಾರತ- ಧರ್ಮ ಸಮನ್ವಯತೆ” ಎಂಬ ವಿಚಾರದಲ್ಲಿ ಡಾ. ವಿ.ಬಿ. ಆರತಿ ಮತ್ತು “ಮಧ್ಯಕಾಲೀನ ಭಾರತ- ಧರ್ಮ ಸಮನ್ವಯತೆ” ಎಂಬ ವಿಷಯದಲ್ಲಿ ಮಹಮ್ಮದ್ ಗೌಸ್ ರಶೀದ ಅಹ್ಮದ ಹವಾಲ್ದಾರ ಉಪನ್ಯಾಸ ನೀಡಿದರು. ಎಸ್.ಆರ್. ವಿಘ್ನರಾಜ್ ಸಂಪಾದಿಸಿದ “ಭೈರವೇಶ್ವರ ಪುರಾಣ” ಗ್ರಂಥವನ್ನು ಸ್ವಾಮೀಜಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಹೇಮಾವತಿ ವಿ. ಹೆಗ್ಗಡೆ ಡಿ. ಸುರೇಂದ್ರ ಕುಮಾರ್ ಡಿ. ಹರ್ಷೇಂದ್ರ ಕುಮಾರ್ ಮತ್ತು ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು. ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದವಿತ್ತರು. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT