ಗುರುವಾರ , ಫೆಬ್ರವರಿ 9, 2023
30 °C

ಮಂಗಳೂರು | ಕೆಲಸ, ಹಣದ ಆಮಿಷವೊಡ್ಡಿ ಮತಾಂತರ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೆಲಸ ಕೊಡಿಸುವ ಹಾಗೂ ಹಣದ ಆಮಿಷವೊಡ್ಡಿ ಮುಸ್ಲಿಂ ಧರ್ಮಕ್ಕೆ ಮತಾಂತರ ನಡೆಸಿದ ಬಗ್ಗೆ ನಗರದ ಯುವತಿಯೊಬ್ಬರು ನಗರದ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಎಫ್‌ಐಆರ್‌ ದಾಖಲಾಗಿದೆ.

ನಗರದ ಬಿಕರ್ನಕಟ್ಟೆಯಲ್ಲಿ ಮಳಿಗೆ ಹೊಂದಿರುವ ಕಲ್ಲಾಪುವಿನ ಖಲೀಲ್‌, ಕಂಕನಾಡಿಯ ಡಾ.ಜಮೀಲಾ, ಭದ್ರಾವತಿಯ ಐಮಾನ್‌ ಹಾಗೂ ಇತರ ಮೂವರು ಈ ಪ್ರಕರಣದಲ್ಲಿ ಆರೋಪಿಗಳು.

‘ನಾನು ಹತ್ತನೇ ತರಗತಿ ವ್ಯಾಸಂಗ ಮುಗಿಸಿದ ಬಳಿಕ ಬಿಕರ್ನಕಟ್ಟೆಯ ಫ್ಯಾನ್ಸಿ ಮಳಿಗೆಯೊಂದರಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದ್ದೆ. ಆಗ ಸಮೀಪದ ಖಲೀಲ್‌ ಮಳಿಗೆಯಲ್ಲಿ ಮೊಬೈಲ್‌ಗೆ ರಿಚಾರ್ಜ್‌ ಮಾಡಿಸುತ್ತಿದ್ದೆ. ಒಳ್ಳೆಯ ಕೆಲಸ ಕೊಡಿಸುತ್ತೇನೆ, ಹಣ ನೀಡುತ್ತೇನೆ ಎಂದು ಆಮಿಷವೊಡ್ಡಿ ಖಲೀಲ್‌ 2021ರ ಜ.14ರಂದು ಕಲ್ಲಾಪುವಿನ ಮನೆಗೆ ಕರೆದೊಯ್ದಿದ್ದ. ಇವಳು ಹಿಂದೂವಾಗಿದ್ದು, ಕುರಾನ್‌ ಓದಿಸಿ, ನಮಾಜ್‌ ಮಾಡಿಸಿ ಮತಾಂತರ ಮಾಡುವಂತೆ ಮನೆಯ ಮಹಿಳೆಯರಿಗೆ ಹೇಳಿ ನನ್ನನ್ನು ಅಲ್ಲೇ ಬಿಟ್ಟು ಹೋಗಿದ್ದ. ಆ ಮನೆಯ ಹೆಂಗಸರು  ಒತ್ತಾಯಪೂರ್ವಕವಾಗಿ ನನ್ನಿಂದ ನಮಾಜ್‌ ಮಾಡಿಸಿದ್ದರು’ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.

‘ಖಲೀಲ್‌ ನನಗೆ ಲೈಂಗಿಕ ಕಿರುಕುಳವನ್ನೂ ನೀಡಿದ್ದ. ನನ್ನ ಹೆಸರನ್ನು ಆಯಿಷಾ ಎಂದು ಬದಲಾಯಿಸಿದ್ದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ನಿನ್ನನ್ನು ಕೆಲಸದಿಂದ ತೆಗೆಸುತ್ತೇನೆ. ಮನೆಯಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದ’ ಎಂದೂ ಯುವತಿ ಆರೋಪಿಸಿದ್ದಾರೆ.

‘ನಂತರ ನಾನು ಫ್ಯಾನ್ಸಿ ಮಳಿಗೆಯ ಕೆಲಸ ತೊರೆದು ಆಸ್ಪತ್ರೆಯ ಮಾಲೀಕರೊಬ್ಬರ ಬಲ್ಮಠದ ಮನೆಯಲ್ಲಿ 8 ತಿಂಗಳು ಕೆಲಸ ಮಾಡಿದ್ದೆ. ಅಲ್ಲಿ ಕೆಲಸಕ್ಕಿದ್ದ ಮಹಿಳೆ ಕಾಸರಗೋಡಿನ ಮನೆಯೊಂದರಲ್ಲಿ ಕೆಲಸ ಕೊಡಿಸಿದ್ದು, ಅಲ್ಲಿ 7 ತಿಂಗಳೂ ಕೆಲಸ ಮಾಡಿದ್ದೆ. ಆ ಕೆಲಸ ಬಿಟ್ಟು ಏಳು ತಿಂಗಳು ಮನೆಯಲ್ಲೇ ಇದ್ದೆ. ಬಳಿಕ ಡಾ.ಜಮೀಲಾ ಹಾಗೂ ಡಾ. ಸೈಯದ್‌ ಮನೆಯಲ್ಲಿ ಕೆಲಸಕ್ಕಿದ್ದೆ. ಆಗ ಜಮೀಲಾ ಅವರು ಧರಿಸುವುದಕ್ಕೆ ಬುರ್ಖಾ ನೀಡಿ, ಯಾರಾದರೂ ಕೇಳಿದರೆ ಮುಸ್ಲಿಂ ಎಂದೇ ಹೇಳಬೇಕು ಎಂದು ಸೂಚಿಸಿದ್ದರು. ಅಲ್ಲಿನ  ಮಾನಸಿಕ ಒತ್ತಡದಿಂದಾಗಿ ಅ.25ರಂದು ಆ ಕೆಲಸ ತ್ಯಜಿಸಿ ಮನೆಗೆ ಮರಳಿದ್ದೆ. ಜಮೀಲಾ ‌ಮನೆಯಲ್ಲಿ ಕೆಲಸಕ್ಕಿದ್ದಾಗ ಭದ್ರಾವತಿಯ ಐಮಾನ್‌ ಎಂಬಾತನ ಪರಿಚಯವಾಗಿತ್ತು. ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದ, ಆತ  2022ರ ಆ. 30ರಂದು ಮನೆಗೆ ಕರೆಸಿಕೊಂಡಿದ್ದ’

‘ನನಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಮತಾಂತರ ಮಾಡಿದ ಖಲೀಲ್‌ ಮೇಲೆ ಇದಕ್ಕೆ ಸಹಕಾರ ನೀಡಿದ ಆತನ ಸಂಬಂಧಿಕರ ಮೇಲೆ, ಡಾ.ಜಮೀಲಾ ಹಾಗೂ ಐಮಾನ್‌ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಸಂತ್ರಸ್ತ ಯುವತಿ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು