ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ನಿವೃತ್ತ ಎಂಜಿನಿಯರ್‌ಗೆ ₹ 1.60 ಕೋಟಿ ವಂಚನೆ: ಎಫ್‌ಐಆರ್‌ ದಾಖಲು

ಸಿಬಿಐನ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಬೆದರಿಕೆ
Published 9 ಮೇ 2024, 16:04 IST
Last Updated 9 ಮೇ 2024, 16:04 IST
ಅಕ್ಷರ ಗಾತ್ರ

ಮಂಗಳೂರು: ಹಡಗಿನಲ್ಲಿ ಎಂಜಿನಿಯ‌ರ್ ಆಗಿ ನಿವೃತ್ತರಾಗಿರುವ ನಗರದ ವ್ಯಕ್ತಿಯೊಬ್ಬರಿಗೆ ಸಿಬಿಐನ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ‘ನಿಮ್ಮ ಹೆಸರಲ್ಲಿ ಥಾಯ್ಲೆಂಡಿಗೆ ಕಳುಹಿಸಲಾದ ಪಾರ್ಸೆಲ್ ನಲ್ಲಿ ಮಾದಕ ಪದಾರ್ಥ ಪತ್ತೆಯಾಗಿದೆ’ ಎಂದು ಹೇಳಿ ಬೆದರಿಸಿ ₹ 1.60 ಕೋಟಿ ವಂಚಿಸಿದ ಬಗ್ಗೆ ಇಲ್ಲಿನ ಸೆನ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ನಗರದ 72 ವರ್ಷದ ನಿವೃತ್ತ ಎಂಜಿನಿಯರ್‌ಗೆ ಈಚೆಗೆ ಕರೆ ಬಂದಿತ್ತು. ಮಾತನಾಡಿದ ವ್ಯಕ್ತಿಯು ತನ್ನ ಹೆಸರು ರಾಜೇಶ್ ಕುಮಾರ್, ಫೆಡೆಕ್ಸ್‌ ಕಂಪನಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. ನೀವು ಮುಂಬೈನಿಂದ ಥಾಯ್ಲೆಂಡ್ ದೇಶಕ್ಕೆ ಒಂದು ಪಾರ್ಸೆಲ್ ಕಳಿಸಿದ್ದು, ಅದನ್ನು ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಅಫ್ಘಾನಿಸ್ತಾನ ಮತ್ತು ಕೀನ್ಯಾದ ಐದು ಪಾಸ್‌ಪೋರ್ಟ್‌ಗಳು ಮೂರು ಕ್ರೆಡಿಟ್ ಕಾರ್ಡ್‌ಗಳು, 140 ಗ್ರಾಂ ಎಂಡಿಎಂಎ, 4 ಕೆ.ಜಿ. ಬಟ್ಟೆ ಹಾಗೂ ಒಂದು ಲ್ಯಾಪ್‌ಟಾಪ್‌ ಇತ್ತು. ಈ ಬಗ್ಗೆ ಮುಂಬೈ ಅಪರಾಧ ವಿಭಾಗದವರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದ.’

‘ನಂತರ,  ಇನ್ನೊಬ್ಬ ವ್ಯಕ್ತಿ ಕರೆ ಮಾಡಿದ್ದು, ತನ್ನನ್ನು  ಮುಂಬೈ ಕ್ರೈಮ್ ಬ್ರಾಂಚ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಸಿಬಿಐ ಅಧಿಕಾರಿ ರುದ್ರ ರಾಥೋಡ್ ನಿಮಗೆ ಹೆಚ್ಚುವರಿ ಮಾಹಿತಿ ನೀಡುತ್ತಾರೆ. ಅವರನ್ನು ಇ–ಮೇಲ್ ಮೂಲಕ ಸಂಪರ್ಕಿಸುವಂತೆ ಹೇಳಿ ಇಮೇಲ್‌ ವಿಳಾಸವನ್ನು ನೀಡಿದ್ದ. ಅದೇ ದಿನ ಮತ್ತೊಬ್ಬ ವ್ಯಕ್ತಿ ನಿವೃತ್ತ ಎಂಜಿನಿಯರ್‌ಗೆ ಕರೆ ಮಾಡಿ, ತನ್ನನ್ನು ರುದ್ರ ರಾಥೋಡ್ ಎಂದು  ಪರಿಚಯಿಸಿಕೊಂಡಿದ್ದ. ಈ ಪ್ರಕರಣದಲ್ಲಿ ಹಲವಾರು ಮಕ್ಕಳನ್ನು ಕೊಲೆಗೈದ ತಂಡವು ಶಾಮೀಲಾಗಿದೆ. ನೀವು ತನಿಖೆಗೆ ನಮಗೆ ಸಹಕರಿಸದೇ ಹೋದರೆ ಇಂಟರ್‌ಪೋಲ್‌ ಮೂಲಕ ನಿಮ್ಮ ಮಗ ಮತ್ತು ಮಗಳನ್ನು ಬಂಧಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದ.’ 

‘ಸ್ಕೈಪ್‌ ಆ್ಯಪ್‌ನಲ್ಲಿ ಖಾತೆಯನ್ನು ತೆರೆಯುವಂತೆ ಕರೆ ಮಾಡಿದ ತಂಡವು ಹೇಳಿತ್ತು. ನಂತರ ವಿಡಿಯೊ ಕರೆ ಮಾಡಿಯೂ ಬೆದರಿಸಿದ್ದರು. ಸ್ಕೈಪ್‌ ಆ್ಯಪ್‌ನಲ್ಲಿ ಸಿಬಿಐ ಹೆಸರಿನಲ್ಲಿ ಹಲವಾರು ನೋಟಿಸ್‌ಗಳನ್ನು ತಂಡವು ಕಳುಹಿಸಿತ್ತು. ಬಂಧನದಿಂದ ತಪ್ಪಿಸಿಕೊಳ್ಳಬೇಕಿದ್ದರೆ ಬಾಂಡ್ ರೂಪದಲ್ಲಿ ಹಣ ಕಟ್ಟಬೇಕು ಎಂದು ಹೇಳಿತ್ತು. ಪ್ರಕರಣದಲ್ಲಿ ನಿಮ್ಮ ಪಾತ್ರ ಇಲ್ಲದಿದ್ದರೆ  ಹಣವನ್ನು ಮರಳಿಸಲಾಗುತ್ತದೆ ಎಂದೂ ನಂಬಿಸಿದ್ದರು. ಇದನ್ನು ನಂಬಿದ್ದ ನಿವೃತ್ತ ಎಂಜಿನಿಯರ್‌ ತಮ್ಮ ಬ್ಯಾಂಕ್ ಖಾತೆಯಿಂದ ಮೇ 2ರಂದು ₹ 1.10 ಕೋಟಿ ಪಾವತಿಸಿದ್ದರು. ನಂತರ ಮೇ 6ರಂದು ಕ್ರೈಂ ಬ್ರಾಂಚ್ ಕಡೆಯಿಂದ  ಅವರಿಗೆ ಮತ್ತೆ ಕರೆ ಬಂದಿತ್ತು. ಆಗ ಮತ್ತೆ ₹ 50 ಲಕ್ಷವನ್ನು ಅವರು ಸೂಚಿಸಿದ ಬ್ಯಾಂಕ್ ಖಾತೆಗೆ ಕಳುಹಿಸಿದ್ದರು.  ಮರುದಿನ ಕರೆ ಮಾಡಿದಾಗ, ಅಪರಿಚಿತರ ಕಡೆಯಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಆಗ  ಸಂಶಯದಿಂದ  ಮಗಳಿಗೆ ಈ ವಿಷಯ ತಿಳಿಸಿದ್ದರು. ಮೋಸ ಹೋಗಿರುವುದನ್ನು ತಿಳಿದು ಸೆನ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT