ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಯ್ಯೋ... ಪಾದಚಾರಿ ನಿನಗೆಲ್ಲಿದೆ ದಾರಿ?

ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಯಂಚಿನಲ್ಲಿ ಅಪಾಯಕಾರಿ ನಡಿಗೆ
ಜೋಮನ್‌ ವರ್ಗೀಸ್‌
Published 27 ನವೆಂಬರ್ 2023, 6:27 IST
Last Updated 27 ನವೆಂಬರ್ 2023, 6:27 IST
ಅಕ್ಷರ ಗಾತ್ರ

ಮಂಗಳೂರು: ಶರವೇಗದಲ್ಲಿ ನುಗ್ಗಿ ಬರುವ ವಾಹನಗಳು, ಹೆಜ್ಜೆಯೂರಲೂ ಅವಕಾಶ ಇಲ್ಲದಂತೆ ರಸ್ತೆಯ ಇಕ್ಕೆಲದ ಜಾಗವನ್ನು ಆಕ್ರಮಿಸಿಕೊಂಡು ಪಾರ್ಕಿಂಗ್‌ ಮಾಡಿರುವ ವಾಹನಗಳು, ಕಾಲು ಎಡವಿದರೆ ನೇರ ಗುಂಡಿಯೊಳಗೆ ಬೀಳುವಂತೆ ಕಿತ್ತುಬಂದಿರುವ ಪೇವರ್ಸ್‌, ಹೆಜ್ಜೆ ಇರಿಸುತ್ತಿದ್ದಂತೆ ಕಾಲಿಗೆ ಅಡ್ಡ ಸಿಗುವ ಪ್ಲಾಸ್ಟಿಕ್‌ ಚೀಲಗಳಲ್ಲಿ ಕಟ್ಟಿ ಎಸೆದಿರುವ ಕಸ, ಕೆಲವೆಡೆ ಮಾರ್ಗವೇ ಕಾಣದಂತೆ ಬೆಳೆದು ನಿಂತ ಹುಲ್ಲಿನ ಪೊದೆ, ದಾರಿಯಲ್ಲೇ ಸಂಗ್ರಹಿಸಿಟ್ಟಿರುವ ಮರಳು, ಜಲ್ಲಿ, ಇಟ್ಟಿಗೆ... ಈ ಅಡೆತಡೆ ದಾಟಿದರೆ ಮಾರ್ಗ ಮಧ್ಯೆ ಎಳನೀರು, ಹೂವು, ಮೀನು ಮಾರಾಟದ ಭರಾಟೆ...

ಸ್ಮಾರ್ಟ್‌ಸಿಟಿ ಮಂಗಳೂರಿನ ಪಾದಚಾರಿ ಮಾರ್ಗದ ಅವ್ಯವಸ್ಥೆ ಇದು. ಇಡೀ ನಗರವನ್ನೊಮ್ಮೆ ಸುತ್ತಿ ಬಂದರೆ ‘ಅಯ್ಯೋ ಪಾದಚಾರಿ ನಿನಗೆಲ್ಲಿದೆ ದಾರಿ’ ಎಂಬ ಪ್ರಶ್ನೆ ಕಾಡುತ್ತದೆ. ರಸ್ತೆಯಂಚಿನಲ್ಲಿ ನಡೆದಾಡುವ ಜನಸಾಮಾನ್ಯರ ಅಪಾಯಕಾರಿ ಕಸರತ್ತು ಗಮನಿಸಿದರೆ ಇಲ್ಲಿ ನಿರ್ಮಾಣಗೊಂಡಿರುವ ಪಾದಚಾರಿ ಮಾರ್ಗ ಯಾರ ಬಳಕೆಯಾಗಿ ಎಂಬ ಪ್ರಶ್ನೆಯೂ ಏಳುತ್ತದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದ ಹಲವೆಡೆ ರಸ್ತೆ ವಿಸ್ತರಣೆ ಆಗಿದ್ದರೂ, ಸಮರ್ಪಕ ಪಾರ್ಕಿಂಗ್‌ ಸೌಲಭ್ಯ ಅಭಿವೃದ್ಧಿಪಡಿಸದ ಕಾರಣ ನಗರದ ಶೇ 80ರಷ್ಟು ಕಡೆ ಪಾದಚಾರಿ ಮಾರ್ಗವೇ ವಾಹನ ನಿಲುಗಡೆ ಸ್ಥಳವಾಗಿದೆ. ‘ನಾನು ಪಾದಚಾರಿ ನನ್ನ ದಾರಿ ಕಸಿಯಬೇಡಿ’ ಎನ್ನುವುದು ನಗರದಲ್ಲಿ ಅರಣ್ಯರೋದನವಾಗಿದೆ. ರಸ್ತೆಯಂಚಿನ ಮಳಿಗೆಯವರು ತಮ್ಮ ಅಂಗಡಿಗೆ ಬರುವ ಗ್ರಾಹಕರ ವಾಹನ ನಿಲುಗಡೆಗೆ  ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಶಾಲಾ ಮಕ್ಕಳು, ಹಿರಿಯ ನಾಗರಿಕರು ಅಕ್ಷರಶಃ ರಸ್ತೆಯ ಮಧ್ಯಕ್ಕೆ ಇಳಿದು ನಡೆಯಬೇಕಾಗಿದೆ.

ನಂತೂರು ವೃತ್ತದಿಂದ ಪಡೀಲ್‌ಗೆ ಹೋಗುವ ಹೆದ್ದಾರಿ ಬೈಪಾಸ್‌ನ ಪಕ್ಕದಲ್ಲಂತೂ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ನಡೆಯುತ್ತಾರೆ. ಇಲ್ಲಿ ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗವನ್ನೇ ಅಭಿವೃದ್ಧಿಪಡಿಸಿಲ್ಲ. ಇರುವ ಕಚ್ಚಾ ರಸ್ತೆ ಮುಖ್ಯ ರಸ್ತೆಗೆ ಸಮನಾಗಿಲ್ಲ. ಮಳೆಗಾಲದಲ್ಲಿ ನೀರು ಹರಿದು ಕೊರಕಲು ಬಿದ್ದಿದೆ. ದ್ವಿಚಕ್ರ ವಾಹನ ಸವಾರರು ಈ ಕಚ್ಚಾ ರಸ್ತೆಯಲ್ಲೇ ವಾಹನಗಳನ್ನು ನುಗ್ಗಿಸಿಕೊಂಡು ಬರುತ್ತಾರೆ. ರಸ್ತೆಯಂಚಿನಲ್ಲಿ ಸಾಗುವ ಪಾದಚಾರಿಗೆ ವಾಹನ ಉಜ್ಜಿಕೊಂಡು ಹೋಗುವುದು ಸಾಮಾನ್ಯ ದೃಶ್ಯವಾಗಿದೆ.

ಕೈಕಂಬ ಜಂಕ್ಷನ್‌ನಿಂದ ಕುಲಶೇಖರ ಬಸ್‌ ನಿಲ್ದಾಣದವರೆಗಿನ ಮಾರ್ಗದ ಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲೂ ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗ ಇಲ್ಲ. ಕುಲಶೇಖರ ಸೆಕ್ರೇಡ್‌ ಹಾರ್ಟ್‌ ಶಾಲೆಯ ಮಕ್ಕಳು ರಸ್ತೆಯಂಚಿನಲ್ಲಿ ಪೋಷಕರ ಕೈ ಹಿಡಿದುಕೊಂಡು ಸಾಗುತ್ತಾರೆ. ಇಲ್ಲಿ ರಸ್ತೆಯೂ ಕಿರಿದಾಗಿದೆ, ಪಾದಚಾರಿ ಮಾರ್ಗವೂ ಇಲ್ಲ. ಇರುವ ಕಚ್ಚಾ ರಸ್ತೆಯಲ್ಲಿ ಮಳೆನೀರು ಹರಿದು ಕೊರಕಲು ಬಿದ್ದಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ.

ನಂತೂರು ಸರ್ಕಲ್‌ನಿಂದ ಕದ್ರಿ, ಮಲ್ಲಿಕಟ್ಟೆ, ಕಂಕನಾಡಿ, ಬಂಟ್ಸ್ ಹಾಸ್ಟೆಲ್, ಕೊಡಿಯಾಲ್‌ಬೈಲ್‌ ಕಡೆಗೆ ಸಾಗುವ ರಸ್ತೆಯಲ್ಲಿ ಪಾದಚಾರಿ ಮಾರ್ಗ ಇದೆ. ಆದರೆ, ಇನ್ನೂರು – ಮುನ್ನೂರು ಮೀಟರ್‌ಗೊಮ್ಮೆ ಈ ಹಾದಿ ಕಡಿತಗೊಳ್ಳುತ್ತದೆ. ನಂತರ ರಸ್ತೆಗಿಳಿದು ಅಡೆತಡೆ ಓಟ ಆರಂಭಿಸಬೇಕು. ಕೆಲವೆಡೆ ರಸ್ತೆಯ ಒಂದು ಬದಿಯ ಪಾದಚಾರಿ ಮಾರ್ಗವನ್ನು ಸಂಪೂರ್ಣ ವಾಹನ ನಿಲುಗಡೆಗೆಂದೇ ಮೀಸಲಿಡಾಗಿದೆ. ಮಲ್ಲಿಕಟ್ಟೆ ಬಳಿ ಪಾದಚಾರಿ ಮಾರ್ಗದಲ್ಲೇ ಕಟ್ಟಡ ನಿರ್ಮಾಣದ ಸಾಮಗ್ರಿ ಇರಿಸಲಾಗಿದೆ. ಇಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಪಾದಚಾರಿ ಮಾರ್ಗದಲ್ಲೇ ಇದೆ. ಬಲ್ಮಠ ಆರ್ಯ ಸಮಾಜ ರಸ್ತೆಯಲ್ಲಿ ಪಾದಚಾರಿ ಮಾರ್ಗವೇ ವಾಹನ ನಿಲುಗಡೆ ತಾಣವಾಗಿದೆ. ಕೆಆರ್‌ಆರ್ ರಸ್ತೆಯಂಚಿನಲ್ಲಿ ಪಾದಚಾರಿ ಮಾರ್ಗ ಇರಬೇಕಾದಲ್ಲಿ ತೆರೆದ ಚರಂಡಿ ಇದೆ. ಇಲ್ಲಿನ ಕೋರ್ಟ್ ರಸ್ತೆಯ ಒಂದು ಬದಿ ವಾಹನ ನಿಲುಗಡೆಗೆ ಮೀಸಲಾಗಿದ್ದರೆ ಇನ್ನೊಂದು ಬದಿಯಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗ ಇದೆ.  ಕೊಡಿಯಾಲ್ ಬೈಲ್ ರಸ್ತೆ, ಪಿವಿಎಸ್ ಸರ್ಕಲ್ ಬಳಿ ರಸ್ತೆಯ ಒಂದು ಬದಿಯ ಪಾದಚಾರಿ ಮಾರ್ಗ ವಾಹನಗಳಿಂದ ಸರಕು ಇಳಿಸುವ ಸ್ಥಳವಾಗಿದೆ.

ಸೂಚನಾ ಫಲಕ ಇದ್ದರೂ ಪಾರ್ಕಿಂಗ್‌: ನಗರದ ಕೆಲವೆಡೆ  ರಸ್ತೆಯಂಚಿನಲ್ಲಿ ವಾಹನ ನಿಲುಗಡೆಗೆ ಅವಕಾಶ ಇಲ್ಲ. ‘ಟೋ ಅವೇ ವಲಯ’ ಎಂಬ ಬೋರ್ಡ್ ಹಾಕಲಾಗಿದೆ. ಆದರೆ, ಈ ಬೋರ್ಡ್‌ನ ಕೆಳಗೇ ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಲಾಗಿದೆ. ಸಿಟಿ ಸೆಂಟರ್ ಮಾಲ್ ಬಳಿಯೂ ರಸ್ತೆಯ ಒಂದು ಬದಿ ಪಾದಚಾರಿ ಮಾರ್ಗ ಇದೆ. ಇನ್ನೊಂದು ಬದಿಯಲ್ಲಿ ಇಲ್ಲ. ಹಂಪನಕಟ್ಟಾ ಮಾರುಕಟ್ಟೆ ರಸ್ತೆಯಲ್ಲಿ ಪಾದಚಾರಿಗಳ ಸ್ಥಿತಿ ದೇವರಿಗೇ ಪ್ರೀತಿ. ಇಲ್ಲಿ  ಮಾರ್ಗವೇ ಕಾಣದಂತೆ ಅಂಗಡಿಗಳು ಫುಟ್‌ಪಾತ್‌ ದಾಟಿಕೊಂಡು ಮುಖ್ಯ ರಸ್ತೆಯವರೆಗೆ ಬಂದಿವೆ. ಅಂಗಡಿಗಳಲ್ಲಿ ಮಾರಾಟಕ್ಕೆ ತೂಗು ಹಾಕಿರುವ ಚಪ್ಪಲಿ, ಬ್ಯಾಗ್‌, ಕೊಡೆ, ಇನ್ನಿತರ ವಸ್ತುಗಳನ್ನು ಮೈಗೆ ಉಜ್ಜಿಕೊಂಡೇ ಪಾದಚಾರಿ ನಡೆಯಬೇಕಿದೆ. ಚರಂಡಿ ಕಾಮಗಾರಿಗಾಗಿ ಪುಟ್‌ಪಾತ್‌ ಅಗೆದು ಅದರ ಮಧ್ಯೆ ಬ್ಯಾರಿಕೇಡ್ ಇಟ್ಟಿರುವುದರಿಂದ ಜನರು ರಸ್ತೆಗಿಳಿದು ನಡೆಯಬೇಕಿದೆ.

ನಗರದ ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಜ್ಯೋತಿ ಸರ್ಕಲ್‌, ಬಲ್ಮಠ ರಸ್ತೆ ಸುತ್ತಮುತ್ತ ಪಾದಚಾರಿ ಮಾರ್ಗಗಳು ಸೂಕ್ತ ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ. ಆಸ್ಪತ್ರೆ, ಮಾರುಕಟ್ಟೆ, ಶಾಲಾ, ಕಾಲೇಜುಗಳು ಬಸ್‌ ನಿಲ್ದಾಣ ಸೇರಿದಂತೆ ನಿತ್ಯ ಸಾವಿರಾರು ಜನರು ಇಲ್ಲಿನ ಪಾದಚಾರಿ ಮಾರ್ಗ ಅವಲಂಬಿಸಿದ್ದಾರೆ. ಆದರೆ, ಹಲವೆಡೆ ಪೇವರ್ಸ್‌ಗಳು ಎದ್ದು ಬಂದಿವೆ. ಮಾರ್ಗದಲ್ಲೇ ಕಸ ಸುರಿಯಲಾಗಿದೆ. ಚರಂಡಿ ಕಾಮಗಾರಿಗಾಗಿ ಮಣ್ಣು ಅಗೆದು ಅದನ್ನು ಫುಟ್‌ಪಾತ್‌ ಮೇಲೆ ಸುರಿಯಲಾಗಿದೆ. ಕೊಂಕ್ಣಿ ನಾಟಕ್ ಸಭಾ ಕಟ್ಟಡದ ಸಮೀಪ ರಸ್ತೆಯ ಒಂದು ಬದಿಯಲ್ಲಿ ಪಾದಚಾರಿ ಮಾರ್ಗದಲ್ಲಿ ಪೊದೆಯೇ ಬೆಳೆದಿದೆ.

ಪಾಂಡೇಶ್ವರ, ಮೋರ್ಗನ್‌ಗೇಟ್‌, ಫಳ್ನೀರ್‌, ಉರ್ವ ಬಳಿ ಪಾದಚಾರಿ ಮಾರ್ಗ ಕಿರಿದಾಗಿದ್ದು, ಹೆಚ್ಚಿನ ಕಡೆ ವಾಹನ ನಿಲುಗಡೆಗಾಗಿ ಒತ್ತುವರಿಯಾಗಿದೆ. ಮಂಗಳಾದೇವಿ ದೇವಸ್ಥಾನ ರಸ್ತೆ, ರೊಜಾರಿಯೊ ಕ್ಯಾಥೆಡ್ರೆಲ್‌,  ಹ್ಯಾಮಿಲ್ಟನ್‌ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಓಲ್ಡ್‌ಕೆಂಟ್‌ ರಸ್ತೆ, ರಾಮಕೃಷ್ಣ ಮಠದ ಎದುರು ಪಾದಚಾರಿ ಮಾರ್ಗದ ನಿರ್ವಹಣೆ ಇದ್ದುದರಲ್ಲೇ ಚೆನ್ನಾಗಿದೆ. ಜೆಪ್ಪು ಮಾರುಕಟ್ಟೆ ಪ್ರದೇಶ, ಅತ್ತಾವರದಲ್ಲಿ ಕೆಲವೆಡೆ ಪಾದಚಾರಿ ಮಾರ್ಗದವರೆಗೆ ಅಂಗಡಿಗಳು ವಿಸ್ತರಿಸಿಕೊಂಡಿವೆ.

ಜೆಪ್ಪುವಿನ ಶಾಂತಿನಗರದ ಬಳಿ ಪಾದಚಾರಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಸುತ್ತಮುತ್ತ ಪಾದಚಾರಿ ಮಾರ್ಗ ಇಕ್ಕಟ್ಟಾಗಿದೆ. ಕರಾವಳಿ ವೃತ್ತದಿಂದ ಪಂಪ್‌ವೆಲ್‌ವರೆಗೆ ಸಾಗಬೇಕಾದರೆ ಒಂದು ಬದಿ ಪಾದಚಾರಿ ಮಾರ್ಗವೇ ಇಲ್ಲ, ಇನ್ನೊಂದು ಬದಿ ಪೊದೆಯಿಂದ ಆವೃತ್ತವಾಗಿದೆ.  ಕಂಕನಾಡಿ ಮಾರುಕಟ್ಟೆ, ಕರಾವಳಿ ವೃತ್ತ, ಬೆಂದೂರ್‌ವೆಲ್‌ ಸರ್ಕಲ್‌ನಲ್ಲಿ ಹೆಸರಿಗೆ ಪಾದಚಾರಿ ಮಾರ್ಗ ಇದ್ದರೂ, ತ್ಯಾಜ್ಯದ ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಇಲ್ಲಿ ಓಡಾಡಬೇಕಿದೆ.

ಬಂಟ್ಸ್‌ ಹಾಸ್ಟೆಲ್ ಬಳಿ ಪಾದಚಾರಿ ಮಾರ್ಗದಲ್ಲಿ ಹುಲ್ಲಿನ ಪೊದೆ ಬೆಳೆದಿದ್ದು  ರಸ್ತೆಯಲ್ಲಿ ಸಾಗುತ್ತಿರುವ ಜನರು
ಬಂಟ್ಸ್‌ ಹಾಸ್ಟೆಲ್ ಬಳಿ ಪಾದಚಾರಿ ಮಾರ್ಗದಲ್ಲಿ ಹುಲ್ಲಿನ ಪೊದೆ ಬೆಳೆದಿದ್ದು  ರಸ್ತೆಯಲ್ಲಿ ಸಾಗುತ್ತಿರುವ ಜನರು
ನಂತೂರು ಜಂಕ್ಷನ್‌ ಬಳಿ ಪಾದಚಾರಿ ಮಾರ್ಗ ಇಲ್ಲ. ಜನರು ನಡೆದಾಡಲು ಇರುವ ಕಚ್ಚಾ ರಸ್ತೆಯಲ್ಲೇ ಸಾಗುತ್ತಿರುವ ದ್ವಿಚಕ್ರ ವಾಹನಗಳು
ನಂತೂರು ಜಂಕ್ಷನ್‌ ಬಳಿ ಪಾದಚಾರಿ ಮಾರ್ಗ ಇಲ್ಲ. ಜನರು ನಡೆದಾಡಲು ಇರುವ ಕಚ್ಚಾ ರಸ್ತೆಯಲ್ಲೇ ಸಾಗುತ್ತಿರುವ ದ್ವಿಚಕ್ರ ವಾಹನಗಳು
ಬಿಜೈ ಮುಖ್ಯ ರಸ್ತೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ರಸ್ತೆಯ ಮಧ್ಯದಲ್ಲೇ ನಡೆದುಕೊಂಡು ಹೋಗುತ್ತಿರುವ ಪಾದಚಾರಿಗಳು
ಪ್ರಜಾವಾಣಿ ಚಿತ್ರಗಳು: ಫಕ್ರುದ್ದೀನ್ ಎಚ್
ಬಿಜೈ ಮುಖ್ಯ ರಸ್ತೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ರಸ್ತೆಯ ಮಧ್ಯದಲ್ಲೇ ನಡೆದುಕೊಂಡು ಹೋಗುತ್ತಿರುವ ಪಾದಚಾರಿಗಳು ಪ್ರಜಾವಾಣಿ ಚಿತ್ರಗಳು: ಫಕ್ರುದ್ದೀನ್ ಎಚ್
ಪಾದಚಾರಿ ಮಾರ್ಗ ಅತಿಕ್ರಮಣ ಆಗಿರುವ ಬಗ್ಗೆ ದೂರುಗಳು ಬರುತ್ತಿದ್ದು ಶೀಘ್ರದಲ್ಲೇ ಮಹಾನಗರ ಪಾಲಿಕೆ ಸಹಕಾರದಲ್ಲಿ ‘ಪಾದಚಾರಿಗಳಿಗಾಗಿ ಫುಟ್‌ಪಾತ್’ ಅಭಿಯಾನ ಆರಂಭಿಸಲಾಗುವುದು
– ಅನುಪಮ್ ಅಗರ್ವಾಲ್ ನಗರ ಪೊಲೀಸ್ ಕಮಿಷನರ್
ಪಾದಚಾರಿ ಮಾರ್ಗಗಳು ಅತಿಕ್ರಮಣವಾಗಿದ್ದು ಕಾಲ್ನಡಿಗೆಯಲ್ಲಿ ಸಾಗುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಹೆದ್ದಾರಿಯ ಇಕ್ಕೆಲದಲ್ಲೂ ಪಾದಚಾರಿ ಮಾರ್ಗ ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಕಲ್ಪಿಸಬೇಕು
ಸಂಜೀವ ಪೂಜಾರಿ ಕುಲಶೇಖರ
ನಗರದ ಹಲವೆಡೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ವಾಹನಗಳು ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗದಲ್ಲಿ ನಿಲ್ಲುತ್ತವೆ. ಪಾರ್ಕಿಂಗ್‌ ಸಮಸ್ಯೆಗೆ ಪಾಲಿಕೆ ಪರಿಹಾರ ಕಲ್ಪಿಸಬೇಕು
–ಸೋಮಶೇಖರ ಅಂಚನ್‌
ಬಲ್ಮಠ ವೃತ್ತದಿಂದ ಬೆಂದೂರ್‌ವೆಲ್ ಸರ್ಕಲ್‌ವರೆಗೆ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗಲು ಭಯವಾಗುತ್ತದೆ. ಇಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದು ನಿರ್ವಹಣೆ ಸರಿಯಾಗಿಲ್ಲ
ಅನೀಶ್‌ ಡಿಸೋಜ ವಿದ್ಯಾರ್ಥಿ

ಇಲ್ಲಿವೆ ಉತ್ತಮ ನಡಿಗೆ ಪಥಗಳು

ನಗರದ ಕೆಲವಡೆ ಪಾದಚಾರಿ ಮಾರ್ಗಗಳು ಉತ್ತಮವಾಗಿವೆ. ಅದಕ್ಕೆ ಉತ್ತಮ ಉದಾಹರಣೆ ಎಂ.ಜಿ. ರಸ್ತೆ ಮತ್ತು ಮಂಗಳೂರು ಲೇಡಿಸ್ ಕ್ಲಬ್ ಅಲೋಶಿಯಸ್ ಕಾಲೇಜು ಬಳಿ ನಿರ್ಮಿಸಿರುವ ಪಾದಚಾರಿ ಮಾರ್ಗ. ಮಂಗಳೂರು ಮಹಾನಗರ ಪಾಲಿಕೆಯವರು ಟ್ಯಾಗೋರ್‌ ಪಾರ್ಕ್ ಬಳಿ ನಿರ್ಮಿಸಿರುವ ಪಾದಚಾರಿ ಮಾರ್ಗ ವಿಶಾಲವಾಗಿದ್ದು ಜನರು ಧೈರ್ಯದಿಂದ ಇಲ್ಲಿ ಹೆಜ್ಜೆ ಹಾಕಬಹುದು. ಯು.ಪಿ ಮಲ್ಯ ರಸ್ತೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಬಳಿ ನಿರ್ಮಿಸಿರುವ ಪಾದಚಾರಿ ಮಾರ್ಗದಲ್ಲಿ ಹೆಜ್ಜೆ ಹಾಕುವುದು ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿ ಪಾದಚಾರಿ ಮಾರ್ಗದ ಒಂದು ಬದಿಯಲ್ಲಿ ಗೋಡೆಗಳ ಮೇಲೆ ರಾಮಕೃಷ್ಣ ಮಿಶನ್ ಸ್ವಚ್ಛ ಭಾರತದ ಆಂದೋಲನದ ಅಂಗವಾಗಿ ರಚಿಸಿರುವ ಭಿತ್ತಿ ಚಿತ್ರಗಳು ಗಮನ ಸೆಳೆಯುತ್ತವೆ. ಫುಟ್‌ಪಾತ್‌ನ ಇನ್ನೊಂದು ಬದಿಯಲ್ಲಿ ಸ್ಟೀಲ್‌ ತಡೆಗೋಡೆ ಅಳವಡಿಸಲಾಗಿದ್ದು ಪಾದಚಾರಿಗಳು ಎಡವಿ ರಸ್ತೆಗೆ ಬೀಳದಂತೆ ರಕ್ಷಣೆ ನೀಡುತ್ತದೆ. ಎಂ.ಜಿ ರಸ್ತೆ ಲಾಲ್‌ಬಾಗ್‌ ಲೇಡಿಹಿಲ್‌ ವೃತ್ತದಲ್ಲೂ ಪಾದಚಾರಿ ಮಾರ್ಗದ ನಿರ್ವಹಣೆ ಚೆನ್ನಾಗಿದೆ. ಎ.ಬಿ. ಶೆಟ್ಟಿ ವೃತ್ತ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ಮಾರ್ಗದಲ್ಲೂ ಪಾದಚಾರಿ ಮಾರ್ಗ ಚೆನ್ನಾಗಿದೆ. ಇಲ್ಲಿ ರಸ್ತೆಯಂಚಿನಲ್ಲಿ ನೆರಳು ಹರಡಿಕೊಂಡು ನಿಂತಿರುವ ವೃಕ್ಷಗಳು ಹಸಿರಿನಿಂದ ಈ ಮಾರ್ಗ ಕಣ್ಮನ ಸೆಳೆಯುತ್ತದೆ. ವೆಲೆನ್ಶಿಯಾದ ಸಂತ ಜೋಸೆಫರ ಸೆಮಿನರಿ ಬಳಿ ಅಭಿವೃದ್ಧಿಪಡಿಸಿರುವ ಪಾದಚಾರಿ ಮಾರ್ಗವೂ ಉತ್ತಮವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT