ಶುಕ್ರವಾರ, ಜನವರಿ 27, 2023
17 °C
ತೊಕ್ಕೊಟ್ಟಿನ ಜ್ಯುವೆಲ್ಲರಿ ಮಳಿಗೆ ಕಳವಿಗೆ ಸಂಚು

ಮಂಗಳೂರು: ಜಾರ್ಖಂಡ್‌ನ ಕುಖ್ಯಾತ ಸಾಹೀಬ್ ಗಂಜ್ ದರೋಡೆ ತಂಡದ 9 ಮಂದಿಯ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ತೊಕ್ಕೊಟ್ಟಿನ ಜ್ಯುವೆಲ್ಲರಿ ಮಳಿಗೆಯಲ್ಲಿ ಕನ್ನ ಕೊರೆದು ಕಳವು ನಡೆಸಲು ಸಂಚು ರೂಪಿಸಿದ್ದ ಅಂತರರಾಜ್ಯ ಕಳ್ಳರ ತಂಡದ ಒಂಬತ್ತು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ವಿವಿಧ ಸಾಮಾಗ್ರಿಗಳನ್ನು ಅವರಿಂದ ವಶಪಡಿಸಿಕೊಂಡಿದ್ದಾರೆ.

ಬಂಧಿತರು ಜಾರ್ಖಂಡ್‌ನ ಕುಖ್ಯಾತ ‘ಸಾಹೇಬ್ ಗಂಜ್ ದರೋಡೆ ತಂಡ’ದ ಸದಸ್ಯರು. ಕೃತ್ಯ ನಡೆಸಲು ಸಂಚು ರೂಪಿಸಿದ್ದ ಸಾಹೇಬ್‌ ಗಂಜ್‌ ತಂಡವು ಮನೆಯೊಂದರಲ್ಲಿ ಉಳಿದುಕೊಂಡಿದ್ದ ವೇಳೆ  ಸಿಸಿಬಿಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ದಾಳಿ ನಡೆಸಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗುಜರಾತಿನ ಗಾಂಧಿವಾಡಿಯ ಭಾಸ್ಕರ ಬೆಳ್ಚಾಡ (65), ನೇಪಾಳದ ಬೋಜಾನ ಜಿಲ್ಲೆಯ ದಿನೇಶ್ ರಾವಲ್ ಅಲಿಯಾಸ್‌ ಸಾಗರ್  (38), ಕೈಲಾಲಿ ಜಿಲ್ಲೆಯ ಬಿಸ್ತ ರೂಪ್ ಸಿಂಗ್ (34), ಅಚ್ಚಾಂ ಜಿಲ್ಲೆಯ ಕೃಷ್ಣ ಬಹದ್ದೂರ್ ಬೋಗಟಿ (41)  ಜಾರ್ಖಂಡ್‌ನ  ಸಾಹೇಬ್ ಗಂಜ್ ಜಿಲ್ಲೆಯ ಮೊಹಮ್ಮದ್ ಜಾಮೀಲ್ ಶೇಖ್(29), ಇಮ್ದದುಲ್ ರಝಾಕ್ ಶೇಖ್ (32), ಪಾಕೂರ್ ಜಿಲ್ಲೆಯ ಮಾಣಿಕಪಾರಾದ ಇಂಜಮಾಮ್ ಉಲ್ ಹಕ್ (27), ಉತ್ತರ ಪಿಯಾರ್ಪುರದ ಬಿವುಲ್ ಶೇಖ್ (31), ಅಜುಲ್ ತೋಲಾದ ಇಮ್ರಾನ್ ಶೇಖ್ (30) ಬಂಧಿತರು. 

‘ತೊಕ್ಕೊಟ್ಟಿನ ಸೂಪರ್ ಗೋಲ್ಡ್ ಆ್ಯಂಡ್‌ ಡೈಮಂಡ್ಸ್ ಮಳಿಗೆಯನ್ನು ದರೋಡೆ ಮಾಡುವ ಉದ್ದೇಶದಿಂದ ತಂಡವು  15 ದಿನಗಳ ಹಿಂದೆ ಮಂಗಳೂರಿಗೆ ರೈಲಿನಲ್ಲಿ ಬಂದಿತ್ತು. ಕೆಲವರು ತೊಕ್ಕೊಟ್ಟು ಬಳಿಯ ವಸತಿಗೃಹವೊಂದರಲ್ಲಿ ಉಳಿದಿದ್ದರು. ಇನ್ನು ಕೆಲವರು ತೊಕ್ಕೊಟ್ಟು ಮಂಚಿಲ ಬಳಿಯ ವ್ಯಕ್ತಿಯೊಬ್ಬರ ಮನೆಯೊಂದನ್ನು ಬಾಡಿಗೆಗೆ ಪಡೆದು, ಅಲ್ಲಿ ಉಳಿದುಕೊಂಡಿದ್ದರು. ಕೃತ್ಯಕ್ಕೆ ಅಗತ್ಯವಿರುವ ಗ್ಯಾಸ್ ಕಟ್ಟರ್, ಆಕ್ಸಿಜನ್ ಸಿಲಿಂಡರ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟಿಂಗ್ ನೋಜಲ್, ಕಟ್ಟಿಂಗ್ ಹೋಸ್ ಪೈಪ್, ಲೆದರ್ ಹ್ಯಾಂಡ್ ಗ್ಲೌಸ್, ಕಬ್ಬಿಣದ ರಾಡ್, ತಲವಾರು, ಅಕ್ಸೋ ಬ್ಲೇಡ್, ಸುತ್ತಿಗೆ, ಸ್ಕ್ರೂಡ್ರೈವರ್, ಮೆಣಸಿನ ಹುಡಿ, ನೈಲಾನ್ ಹಗ್ಗ ಹಾಗೂ ಇತರ ಹಲವಾರು ಸೊತ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಸ್ವತ್ತುಗಳ ಒಟ್ಟು ಮೌಲ್ಯ ₹ 2.90 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಆಂಬಿಕಾ ರೋಡ್, ಉಚ್ಚಿಲ ಬಳಿಯಿಂದ ರಾತ್ರಿ ವೇಳೆಯಲ್ಲಿ ಮೂರು ದ್ವಿಚಕ್ರ ವಾಹನದ ಸವಾರರನ್ನು ಅಡ್ಡಗಟ್ಟಿ ಹಿಂದಿ ಭಾಷೆಯಲ್ಲಿ ಬೈದು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಅವರಿಂದ ಸ್ಕೂಟರ್‌ಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದರು. ಈ ದ್ವಿಚಕ್ರ ವಾಹನಗಳಿಗಾಗಿ ಹುಡುಕುತ್ತಿದ್ದಾಗ ಸಾಹೇಜ್ ಗಂಜ್ ದರೋಡೆ ತಂಡದ ಆರೋಪಿಗಳು ಜ್ಯುವೆಲ್ಲರಿ ದರೋಡೆ ನಡೆಸಲು ಸಂಚು ರೂಪಿಸಿದ್ದು ಬೆಳಕಿಗೆ ಬಂದಿದೆ. ಆರೋಪಿಗಳು ಸ್ಥಳೀಯವಾಗಿ ಓಡಾಡುವ ಉದ್ದೇಶದಿಂದ ದ್ವಿಚಕ್ರ ವಾಹನ ಕಿತ್ತುಕೊಂಡಿದ್ದರು.  ಈ ಮೂರೂ ವಹಾನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಲ್ಲಿ ಭಾಸ್ಕರ ಬೆಳ್ಚಾಡ, ದಿನೇಶ್ ರಾವಲ್, ಇಂಜಮಾಮ್ ಉಲ್ ಹಕ್, ಬಿಸ್ತ ರೂಪ್ ಸಿಂಗ್, ಕೃಷ್ಣ ಬಹದ್ದೂರ್ ಬೋಗಟಿ ಎಂಬವರ ವಿರುದ್ಧ ಮುಂಬೈ, ಪುಣೆ, ಸೂರತ್, ಮಧ್ಯಪ್ರದೇಶದ ಮಾಧವ ನಗರ, ಕೇರಳದ ತ್ರಿಶೂರ್, ಪಂಜಾಬ್ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಬ್ಯಾಂಕ್ ದರೋಡೆ, ಜ್ಯುವೆಲ್ಲರಿ ದರೋಡೆ ಪ್ರಕರಣಗಳು ದಾಖಲಾಗಿವೆ.

ಸಿಸಿಬಿಯ ಪಿಎಸ್ಐ ರಾಜೇಂದ್ರ ಬಿ., ಪ್ರದೀಪ ಟಿ.ಆರ್, ಎಎಸ್ಐಗಳಾದ ಶಶಿಧರ ಶೆಟ್ಟಿ, ಮೋಹನ್ ಕೆ.ವಿ, ಹರೀಶ ಪಿ ಹಾಗೂ  ಸಿಬ್ಬಂದಿ ಪಾಲ್ಗೊಂಡಿದ್ದರು.

ಏನಿದು ‘ಸಾಹೇಜ್ ಗಂಜ್ ಗ್ಯಾಂಗ್’?

‘ಸಾಹೇಬ್ ಗಂಜ್ ಗ್ಯಾಂಗ್ ಜಾರ್ಖಂಡ್ ರಾಜ್ಯದ ಕುಖ್ಯಾತ ದರೋಡೆಕೋರರ ತಂಡ. ಇದರಲ್ಲಿ ನೇಪಾಳಿ ಪ್ರಜೆಗಳೂ ಇದ್ದಾರೆ.  ನಗರಗಳ ಬ್ಯಾಂಕ್, ಜ್ಯುವೆಲ್ಲರಿ ಅಂಗಡಿಗಳನ್ನು ಗುರುತಿಸಿ ಅಲ್ಲಿಯ ಪರಿಸರದಲ್ಲಿ ಬಾಡಿಗೆಗೆ ಮನೆಯಲ್ಲಿ ಅಥವಾ ಲಾಡ್ಜ್‌ನಲ್ಲಿ ಉಳಿದುಕೊಂಡು ದರೋಡೆಗೆ ಬೇಕಾದ ಸಲಕರಣೆಗಳನ್ನು ಖರೀದಿಸುತ್ತಾರೆ. ಕನ್ನ ಕೊರೆದು ಸೊತ್ತುಗಳನ್ನು ದರೋಡೆ ಮಾಡುತ್ತಾರೆ. ಕೃತ್ಯ ನಡೆಸಿದ ನಂತರ ಸೊತ್ತಿನೊಂದಿಗೆ ನೇಪಾಳಕ್ಕೆ ಪರಾರಿಯಾಗುತ್ತಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು