ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ ಗಲಭೆ: ಹಿಂದೂಗಳ ಮೇಲಿನ ಪ್ರಕರಣ ಹಿಂಪಡೆಯಲು ಸಂತ ಸಮಿತಿ ಆಗ್ರಹ

Published : 20 ಸೆಪ್ಟೆಂಬರ್ 2024, 0:06 IST
Last Updated : 20 ಸೆಪ್ಟೆಂಬರ್ 2024, 0:06 IST
ಫಾಲೋ ಮಾಡಿ
Comments

ಮಂಗಳೂರು: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆಗೆ ಸಂಬಂಧಿಸಿ ಹಿಂದೂಗಳ ಮೇಲೆ ದಾಖಲಿಸಿರುವ ಪ್ರಕರಣ ಹಿಂಪಡೆಯದಿದ್ದರೆ, ಬೆಂಗಳೂರು ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಘಟಕದ ಅಧ್ಯಕ್ಷರಾಗಿರುವ ಮಂಗಳೂರಿನ ಓಂ ಶ್ರೀ ಮಠದ ಮಹಾಮಂಡಲೇಶ್ವರ ಸ್ವಾಮೀಜಿ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸಿ, ಬಹುಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ. ಹಿಂದೂ ಸಮಾಜಕ್ಕೆ ಅನ್ಯಾಯವಾದಲ್ಲಿ, ಸಂತ ಸಮಿತಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ. ಸಂಘಟನೆಯಲ್ಲಿ 130ಕ್ಕೂ ಹೆಚ್ಚು ಸ್ವಾಮಿಗಳು ಸದಸ್ಯತ್ವ ಪಡೆದಿದ್ದಾರೆ. ಜಾತಿ, ಪಂಥ ಮೀರಿ ಎಲ್ಲ ಹಿಂದೂ ಸಮುದಾಯಗಳ ಸ್ವಾಮಿಗಳು ಒಂದಾಗಿ ಶಕ್ತಿ ತೋರಿಸಬೇಕು’ ಎಂದರು.

‘ಹಿಂದೂ ಸಂಸ್ಕೃತಿ ಪ್ರಧಾನವಾದ ರಾಷ್ಟ್ರದಲ್ಲಿ ಹಿಂದೂ ಸಮಾಜದ ಆಚರಣೆಗಳ ಅನುಷ್ಠಾನಕ್ಕೆ ಅನ್ಯಮತದವರು ಅಡ್ಡಿಪಡಿಸುವ ಮೂಲಕ, ಭೀತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಸ್ಲಿಂ ಧರ್ಮದ ಬಗ್ಗೆ ನಮ್ಮ ವಿರೋಧವಿಲ್ಲ. ಹಿಂದೂ ರಾಷ್ಟ್ರದಲ್ಲಿರುವ ಅವರು ಹಿಂದೂಗಳೊಡನೆ ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯಬೇಕು. ಮುಸ್ಲಿಂ ಧರ್ಮದಲ್ಲೂ ಹಿಂದೆ ಆಗಿ ಹೋದವರು ಒಳಿತನ್ನೇ ಬೋಧಿಸಿದ್ದರು. ಆದರೆ, ಈಗ ಸನ್ನಿವೇಶ ಬದಲಾಗಿದ್ದು, ಮುಸ್ಲಿಂ ನಾಯಕರು ತಮ್ಮ ಸಮುದಾಯದ ಯುವಜನರಿಗೆ ಬುದ್ಧಿ ಹೇಳಬೇಕು’ ಎಂದು ಹೇಳಿದರು.

‘ಲವ್ ಜಿಹಾದ್ ನಡೆಸಿ ಹಿಂದೂ ಹೆಣ್ಣು ಮಕ್ಕಳಿಗೆ ತೊಂದರೆ ನೀಡಿದರೆ, ಧರ್ಮಕ್ಕೆ ಕಂಟಕ ಬಂದರೆ ಸಂತ ಸಮಿತಿ ಹೋರಾಟ ನಡೆಸುತ್ತದೆ’ ಎಂದು ಅರಸಿಗುಪ್ಪೆಯ ಮಂಜುನಾಥ ಕ್ಷೇತ್ರದ ರಾಜೇಶ್‌ನಾಥ್ ಗುರೂಜಿ ಹೇಳಿದರು. 

ಸಂತ ಸಮಿತಿಯ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ, ಸದ್ಗುರು ಜಯಪ್ರಕಾಶ್ ಸ್ವಾಮೀಜಿ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಮಾತಾಶ್ರೀ ಓಂಶ್ರೀ ಶಿವಜ್ಞಾ ನಮಿ ಸರಸ್ವತಿ ಇದ್ದರು. ನಂತರ ಕಾರ್ಯಕಾರಿ ಸಮಿತಿ ಸಭೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT