ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ‘ರೈತ ಸ್ಪಂದನ’ 14ಕ್ಕೆ

ಕೃಷಿ, ಕೃಷಿಯೇತರ ಸಾಲ ವಿತರಣೆ
Last Updated 13 ಜುಲೈ 2021, 9:16 IST
ಅಕ್ಷರ ಗಾತ್ರ

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ಆಶ್ರಯದಲ್ಲಿ ವಿವಿಧ ಕೃಷಿ ಸಾಲ ನೀಡುವ ‘ರೈತ ಸ್ಪಂದನ’ ಕಾರ್ಯಕ್ರಮ ಇದೇ 14ರ ಮಧ್ಯಾಹ್ನ 11.30ಕ್ಕೆ ಬ್ಯಾಂಕ್‌ನ ಸಭಾಭವನದಲ್ಲಿ ನಡೆಯಲಿದೆ. ಒಟ್ಟು ₹300 ಕೋಟಿ ಸಾಲ ವಿತರಿಸಲು ಬ್ಯಾಂಕ್ ಮುಂದಾಗಿದೆ’ ಎಂದು ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ನೆರವಾಗಿ, ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 700 ರೈತರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ರೈತರ ಜತೆಗೆ ಬ್ಯಾಂಕ್ ಗ್ರಾಹಕರಿಗೆ ನೆರವಾಗುವ ಉದ್ದೇಶದಿಂದ ಚಿನ್ನಾಭರಣ ಈಡಿನ ಸಾಲದ ಬಡ್ಡಿದರ ಇಳಿಕೆ ಮಾಡಲಾಗಿದೆ. ತಿಂಗಳ ಬಡ್ಡಿ ಶೇ 0.75ರಷ್ಟು ನಿಗದಿಪಡಿಸಲಾಗಿದೆ’ ಎಂದರು

ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಬ್ಯಾಂಕ್ ಉತ್ತೇಜನ ನೀಡಲಿದೆ. ಎಲೆಕ್ಟ್ರಿಕ್‌ ಸ್ಕೂಟರ್, ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಸಾಮಾನ್ಯ ವಾಹನ ಸಾಲ ಬಡ್ಡಿಯಲ್ಲಿ ರಿಯಾಯಿತಿ ನೀಡುವ ಜತೆಗೆ, ವಿಳಂಬವಿಲ್ಲದೆ ಸಾಲ ಮಂಜೂರು ಮಾಡಲಾಗುತ್ತದೆ. ಕೋಳಿ ಸಾಕಣೆ, ಮೀನು ಸಾಕಣೆಗೂ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ. ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

‘ರೈತ ಸ್ಪಂದನ’ ಉದ್ಘಾಟನೆ: ರೈತ ಸ್ಪಂದನ ಕಾರ್ಯಕ್ರಮದ ಉದ್ಘಾಟನೆ ಇದೇ 14ರ ಮಧ್ಯಾಹ್ನ 11.30ಕ್ಕೆ ಕೊಡಿಯಾಲ್‌ ಬೈಲ್‌ನಲ್ಲಿರುವ ಬ್ಯಾಂಕ್‌ನ ಸಭಾಭವನದಲ್ಲಿ ನಡೆಯಲಿದೆ. ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಕೃಷಿ ಸಾಲ ವಿತರಿಸುವರು. ಸಂಸದ ನಳಿನ್‌ಕುಮಾರ್ ಕಟೀಲ್ ಮೀನುಗಾರರಿಗೆ ಸಾಲ ವಿತರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸುವರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಪ್ರಧಾನಮಂತ್ರಿ ಸ್ವನಿಧಿ ಸಾಲ, ಶಾಸಕ ಯು.ಟಿ. ಖಾದರ್ ಹೈನುಗಾರಿಕಾ ಫಲಾನುಭವಿಗಳಿಗೆ ಸಾಲ ವಿತರಣೆ ಮಾಡುವರು. ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಅಧ್ಯಕ್ಷತೆ ವಹಿಸುವರು.

ಅತಿಥಿಗಳಾಗಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಮೇಯರ್ ಪ್ರೇಮಾನಂದ ಶೆಟ್ಟಿ, ಸಹಕಾರ ಸಂಘಗಳ ನಿಬಂಧಕ ಎಸ್‌.ಜಿಯಾವುಲ್ಲಾ ಭಾಗವಹಿಸುವರು.

‘₹ 1 ಲಕ್ಷವರೆಗಿನ ಕೃಷಿ ಸಾಲಮನ್ನಾ’

ಕೋವಿಡ್ ವೇಳೆ ಮರಣಹೊಂದಿದ ರೈತರ ₹ 1 ಲಕ್ಷದವರೆಗಿನ ಸಾಲಮನ್ನಾ ಮಾಡಲು ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ಧರಿಸಿದೆ. ಜೂನ್ ಅಂತ್ಯದವರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ 152 ಜನರು ಮರಣ ಹೊಂದಿದ್ದಾರೆ. ಅವರ ₹ 1 ಲಕ್ಷದವರೆಗಿನ ಸಾಲಮನ್ನಾ ಮಾಡಲಾಗುವುದು. ಈ ಯೋಜನೆಯನ್ನು ರಾಜ್ಯವ್ಯಾಪ್ತಿ ನಡೆಸುವಂತೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಜೊತೆಗೂಡಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT