ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿಬೆಟ್ಟು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣಗೋಡೆ ಕುಸಿಯುವ ಭೀತಿ

Published 7 ಜೂನ್ 2024, 4:26 IST
Last Updated 7 ಜೂನ್ 2024, 4:26 IST
ಅಕ್ಷರ ಗಾತ್ರ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸಮೀಪದ ಅಜ್ಜಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ವರ್ಷದಿಂದ ಆವರಣಗೋಡೆಯ ಕಲ್ಲು ಕುಸಿಯತೊಡಗಿದ್ದು, ಮಳೆ ಆರಂಭಗೊಳ್ಳುತ್ತಿದ್ದಂತೆಯೇ ಆವರಣ ಗೋಡೆ ಮತ್ತು ಶೌಚಾಲಯಕ್ಕೆ ಕುಸಿತದ ಭೀತಿ ಎದುರಾಗಿದೆ.

ಸುಮಾರು 100 ವರ್ಷ ಹಳೆಯ ಈ ಸರ್ಕಾರಿ ಶಾಲೆ ಉಳಿವಿಗೆ ಶಾಲಾಭಿವೃದ್ಧಿ ಸಮಿತಿ ಮತ್ತು ಸ್ಥಳೀಯ ದಾನಿಗಳು ಪಣ ತೊಟ್ಟಿದ್ದು, ಸರ್ಕಾರದ ನಿರ್ಲಕ್ಷ್ಯದಿಂದ ಮೂಲಸೌಲಭ್ಯಕ್ಕೆ ಅಡ್ಡಿಯಾಗಿದೆ ಎಂಬ ಆರೋಪ ಎದುರಾಗಿದೆ.

ಈಗಾಗಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದ್ದು, ಕಂಪ್ಯೂಟರ್ ಶಿಕ್ಷಣವೂ ಸಿಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಿದೆ. ಆವರಣಗೋಡೆಗೆ ಕುಸಿತದ ಭೀತಿ ಎದುರಾಗಿರುವುದರಿಂದ ಪಕ್ಕದಲ್ಲೇ ಇರುವ ಶೌಚಾಲಯವೂ ಕುಸಿಯುವ ಭೀತಿಯಲ್ಲಿದೆ. ವಿದ್ಯಾರ್ಥಿಗಳ ಜತೆಗೆ ಶಿಕ್ಷಕರೂ ಶೌಚಾಲಯ ಬಳಿ ಸುರಕ್ಷತೆಗಾಗಿ ಕಾದು ನಿಲ್ಲುವ ದುಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಮಕ್ಕಳ ಪೋಷಕರು.

ಆವರಣಗೋಡೆ ಕುಸಿತದ ಭೀತಿ ಎದುರಿಸುತ್ತಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಮುಖ್ಯಶಿಕ್ಷಕಿ ಲಕ್ಷ್ಮೀ ತಿಳಿಸಿದ್ದಾರೆ.

ಕೇವಲ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿಗೆ ಜವಾಬ್ದಾರಿ ನೀಡುವುದರ ಜತೆಗೆ ಸರ್ಕಾರದ ತ್ವರಿತ ಸ್ಪಂದನೆಯೂ ಅಗತ್ಯವಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT