ಶುಕ್ರವಾರ, ನವೆಂಬರ್ 27, 2020
18 °C

ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಘಟಕ ರಚನೆ: ಸಭೆಯಲ್ಲಿ ಮೇಯರ್ ದಿವಾಕರ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಹಸಿ ಕಸಿ, ಒಣ ಕಸ ವಿಂಗಡನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಆಡಳಿತ ಪಕ್ಷ, ಪ್ರತಿಪಕ್ಷದ ಸದಸ್ಯರು, ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಘಟಕವನ್ನು ರಚಿಸಲಾಗುವುದು ಎಂದು ಮೇಯರ್‌ ದಿವಾಕರ ಪಾಂಡೇಶ್ವರ ಘೋಷಿಸಿದರು.

ಪಾಲಿಕೆಯ ಮಂಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಪಾಲಿಕೆ ಸದಸ್ಯರು, ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಘನತ್ಯಾಜ್ಯ ನಿರ್ವಹಣೆ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪಾಲಿಕೆ ಸದಸ್ಯರು, ಅಧಿಕಾರಿಗಳ ಮಧ್ಯೆ ಸಮನ್ವಯ ಅಗತ್ಯವಾಗಿದೆ. ಈ ಪ್ರತ್ಯೇಕ ಘಟಕದಿಂದ ಘನ ತ್ಯಾಜ್ಯ ನಿರ್ವಹಣೆ, ಕಸ ವಿಂಗಡನೆ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಾಲಿಕೆ ಆಯುಕ್ತ ಅಕ್ಷಯ ಶ್ರೀಧರ್ ಮಾತನಾಡಿ, ಕಸ ವಿಂಗಡನೆ ಮಾಡುವ ಮೂಲಕ ಸಾರ್ವಜನಿಕರು ಪಾಲಿಕೆಯ ಜೊತೆಗೆ ಕೈಜೋಡಿಸಿದರೆ ಮಾತ್ರ ಘನ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪಾಲಿಕೆಯ ಪರಿಸರ ಎಂಜಿನಿಯರ್ ಮಧು ಮನೋಹರ್‌ ಮಾತನಾಡಿ, ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ನಗರದ ಘನ ತ್ಯಾಜ್ಯ ವಿಲೇವಾರಿಯನ್ನು ಗಂಭೀರವಾಗಿ ಪರಿಗಣಿಸಿದೆ. ಘನ ತ್ಯಾಜ್ಯ ನಿರ್ವಹಣೆ ಕಾಯ್ದೆ 2016 ಅನ್ನು ಪರಿಣಾಮಕಾರಿ ಅನುಷ್ಠಾನ ಮಾಡುವಂತೆ ಮಹಾನಗರ ಪಾಲಿಕೆಗೆ ಹೈಕೋರ್ಟ್ ಸೂಚನೆ ನೀಡಿದೆ. ಅದರಂತೆ ಕಸ ವಿಂಗಡನೆ ಮಾಡುವ ವಿಷಯದಲ್ಲಿ ತ್ಯಾಜ್ಯ ಉತ್ಪಾದಕರು, ಪಾಲಿಕೆಗೆ ತಮ್ಮದೇ ಆದ ಜವಾಬ್ದಾರಿ ಇದೆ ಎಂದು ಹೇಳಿದರು.

ನಗರದಲ್ಲಿ ಶೇ 100 ರಷ್ಟು ಮನೆ ಕಸ ಸಂಗ್ರಹಣೆ ಗುರಿ ಹಾಕಿಕೊಳ್ಳಲಾಗಿದೆ. ಡಂಪಿಂಗ್ ಯಾರ್ಡ್‌ಗೆ ವಿಂಗಡಿಸಿದ ಕಸ ಮಾತ್ರ ಬರಬೇಕಾಗಿದೆ. ಭಾರಿ ತ್ಯಾಜ್ಯ ಉತ್ಪಾದಕರು ತ್ಯಾಜ್ಯ ನಿರ್ವಹಣೆ ಘಟಕಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಎಲ್ಲ ನಿವಾಸಿಗಳು ಕಸವನ್ನು ವಿಂಗಡಿಸಿಯೇ ನೀಡಬೇಕು. ಶುಕ್ರವಾರ ಹೊರತುಪಡಿಸಿ, ಉಳಿದೆಲ್ಲ ದಿನಗಳಲ್ಲಿ ಮನೆಗಳಿಂದ ಹಸಿ ತ್ಯಾಜ್ಯವನ್ನು ಮಾತ್ರ ಸಂಗ್ರಹಿಸಲಾಗುವುದು. ಶುಕ್ರವಾರ ಒಣ ಕಸ ಮಾತ್ರ ಸಂಗ್ರಹಣೆ ಮಾಡಲಾಗುವುದು ಎಂದು ತಿಳಿಸಿದರು.

ಪಾಲಿಕೆ ಪ್ರತಿಪಕ್ಷದ ಸದಸ್ಯರ ಪ್ರವೀಣಚಂದ್ರ ಆಳ್ವ ಮಾತನಾಡಿ, ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಕಸ ಸಂಗ್ರಹಣೆಗೆ ಕ್ಯೂಆರ್‌ ಕೋಡ್‌ ವ್ಯವಸ್ಥೆಯನ್ನು ಅಳವಡಿಸಬೇಕು. ಕಸ ವಿಂಗಡನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸ್ವಚ್ಛತಾ ನಿರೀಕ್ಷಕರು ಮನೆ ಮನೆಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು