ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಧಾರಾವಾಹಿಯಲ್ಲಿ ಹೆಲ್ಮೆಟ್‌ರಹಿತ ಪ್ರಯಾಣ ಪ್ರಸಾರ: ದಂಡ ವಿಧಿಸಿದ ಇಲಾಖೆ

ಪೊಲೀಸರಿಗೆ ದೂರು ಅರ್ಜಿ ಸಲ್ಲಿಸಿದ್ದ ಮಂಗಳೂರಿನ ಜಯಪ್ರಕಾಶ್ ಎಕ್ಕೂರು
Published 12 ಮೇ 2024, 5:20 IST
Last Updated 12 ಮೇ 2024, 5:20 IST
ಅಕ್ಷರ ಗಾತ್ರ

ಮಂಗಳೂರು: ಕನ್ನಡ ಟಿ.ವಿ. ವಾಹಿನಿಯೊಂದರಲ್ಲಿ ಪ್ರಸಾರವಾದ ಧಾರಾವಾಹಿಯಲ್ಲಿ ಮಹಿಳೆಯೊಬ್ಬರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ದೃಶ್ಯ ವೀಕ್ಷಿಸಿದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸ್ ಇಲಾಖೆ, ಆ ಧಾರಾವಾಹಿಯ ನಿರ್ದೇಶಕರಿಗೆ ದಂಡ ವಿಧಿಸಿದೆ.

‘ಸೀತಾರಾಮ’ ಎಂಬ ಧಾರಾವಾಹಿಯ 14ನೇ ಎಪಿಸೋಡ್‌ನಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರೆ ಹೆಲ್ಮೆಟ್‌ ಇಲ್ಲದೆ ಪ್ರಯಾಣಿಸುತ್ತಿದ್ದ ದೃಶ್ಯ ಪ್ರಸಾರವಾಗಿದೆ ಎಂದು ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್‌ ಎಕ್ಕೂರು ಅವರು 2023 ಆಗಸ್ಟ್ 24ರಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು.

ಇದರ ವಿಚಾರಣೆ ಕೈಗೆತ್ತಿಕೊಂಡ ಕದ್ರಿ ಸಂಚಾರ ಪೂರ್ವ ಠಾಣೆಯ ಪೊಲೀಸ್ ಇನ್‌ಸ್ಟೆಕ್ಟರ್ ಅವರು ವಾಹಿನಿಯ ನಿರ್ದೇಶಕ ಮೋಹನ್ ಕುಮಾರ್ ಮತ್ತು ಮಹಿಳೆ ಸವಾರಿ ಮಾಡುತ್ತಿದ್ದ (ಕೆಎ 03, ಎಚ್‌ಆರ್‌ 6218) ದ್ವಿಚಕ್ರ ವಾಹನ ಮಾಲೀಕರು ಹಾಗೂ ಧಾರಾವಾಹಿ ನಿರ್ದೇಶಕ ಬಿ. ಮಧುಸೂದನ್ ಅವರಿಗೆ ನೋಟಿಸ್ ಜಾರಿಗೊಳಿಸಿ ಮಾಹಿತಿ ನೀಡುವಂತೆ ಸೂಚಿಸಿದ್ದರು. ನೋಟಿಸ್‌ಗೆ ಉತ್ತರಿಸಿದ ಅವರು ‘ಧಾರಾವಾಹಿಯ ದೃಶ್ಯವನ್ನು ಬೆಂಗಳೂರು ನಗರದ ನಂದಿನಿ ಲೇಔಟ್‌ನಲ್ಲಿ ಚಿತ್ರೀಕರಿಸಲಾಗಿದೆ’ ಎಂದು ತಿಳಿಸಿದ್ದರು. ಪ್ರಕರಣವನ್ನು ನಿಂದಿನಿ ಲೇಔಟ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಕದ್ರಿ ಠಾಣೆ ಪೊಲೀಸರು ಹಿಂಬರಹ ನೀಡಿದ್ದರು.

ಜಯಪ್ರಕಾಶ್ ಅವರು 27 ಫೆಬ್ರುವರಿ 2024ರಂದು ನಂದಿನಿ ಠಾಣೆಗೆ ಪತ್ರ ಬರೆದು ಕದ್ರಿ ಠಾಣೆಯಿಂದ ವರ್ಗಾವಣೆಗೊಂಡಿರುವ ದೂರಿನ ಬಗ್ಗೆ ಕೈಕೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಕೋರಿದ್ದರು. ಇದಕ್ಕೆ ಉತ್ತರಿಸಿದ ಇಲಾಖೆ ‘ಸೀತಾರಾಮ’ ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್‌ ಅವರಿಗೆ ನೋಟಿಸ್ ಜಾರಿಗೊಳಿಸಿರುವುದಾಗಿ ತಿಳಿಸಿತ್ತು.

‘ಜಯಪ್ರಕಾಶ್ ಅವರು ಮಂಗಳೂರು ಪೊಲೀಸ್ ಕಮಿಷನರ್‌ಗೆ ನೀಡಿರುವ ದೂರು ಅರ್ಜಿಯು ವಿಚಾರಣೆಗಾಗಿ ರಾಜಾಜಿನಗರ ಸಂಚಾರ ಠಾಣೆಗೆ ಬಂದಿದ್ದು, ‘ಸೀತಾರಾಮ‘ ಧಾರಾವಾಹಿಯ 14ನೇ ಎಪಿಸೋಡ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಮಹಿಳೆಯೊಬ್ಬರು ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ ದೃಶ್ಯ ಪ್ರಸಾರವಾಗಿದ್ದು, ಇದು ರಾಜಾರೋಷವಾಗಿ ನಡೆದ ಸಂಚಾರ ನಿಯಮದ ಉಲ್ಲಂಘನೆಯಾಗಿದೆ. ಈ ಬಗ್ಗೆ ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗಬೇಕು’ ಎಂದು ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್‌ ಅವರಿಗೆ ಮೇ 8ರಂದು ನೀಡಿದ ಪೊಲೀಸ್ ನೋಟಿಸ್‌ನಲ್ಲಿ ತಿಳಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಪ್ಪು ಒಪ್ಪಿಕೊಂಡಿರುವ ಧಾರಾವಾಹಿ ತಂಡವು, ಇನ್ನು ಮುಂದೆ ನಮ್ಮ ಧಾರಾವಾಹಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವುದಿಲ್ಲ. ನಿಯಮ ಪಾಲಿಸುತ್ತೇವೆ’ ಎಂದು ಮುಚ್ಚಳಿಕೆ ಬರೆದುಕೊಟ್ಟಿದೆ. ಪೊಲೀಸ್ ಇಲಾಖೆಯ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಮೇ 10ರಂದು ವಾಹನ ಮಾಲೀಕರಿಗೆ ₹500 ದಂಡ ವಿಧಿಸಿದೆ. ಜೊತೆಗೆ ಇದರ ಪ್ರತಿಯನ್ನು ಜಯಪ್ರಕಾಶ್ ಅವರಿಗೆ ಕಳುಹಿಸಿದೆ.

‘ಹೋರಾಟಕ್ಕೆ ಸಿಕ್ಕದ ಜಯ’

‘ಇತ್ತೀಚೆಗೆ ನಡೆದ ಹಲವಾರು ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಜೀವ ಕಳೆದುಕೊಂಡ ಘಟನೆಗಳನ್ನು ಗಮನಿಸಿದ್ದೇನೆ. ಹೆಲ್ಮೆಟ್ ಧರಿಸಿ ಪ್ರಯಾಣಿಸಲು ಪೊಲೀಸ್ ಇಲಾಖೆ ಸಾಮಾಜಿಕ ಸಂಸ್ಥೆಗಳು ಪ್ರೇರೇಪಿಸುವ ಕಾರ್ಯ ಮಾಡುತ್ತವೆ. ಹೀಗಿರುವಾಗ ಪ್ರಬಲ ಟಿ.ವಿ. ಮಾಧ್ಯಮದಲ್ಲಿ ಹೆಲ್ಮೆಟ್ ಇಲ್ಲದೆ ಹಿಂಬದಿ ಸವಾರೆ ಪ್ರಯಾಣಿಸುವ ದೃಶ್ಯ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಜೊತೆಗೆ ಹೆಲ್ಮೆಟ್ ರಹಿತ ಪ್ರಯಾಣಕ್ಕೆ ಪ್ರೇರಣೆ ನೀಡಿದಂತಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸಿದ ಧಾರಾವಾಹಿ ನಿರ್ದೇಶಕರು ನಟಿ ಹಾಗೂ ವಾಹಿನಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾನು ಅಂದಿನ ನಗರ ಪೊಲೀಸ್ ಕಮಿಷನರ್‌ ಕುಲದೀಪ್‌ಕುಮಾರ್ ಜೈನ್ ಅವರಿಗೆ ದೂರು ಅರ್ಜಿ ಸಲ್ಲಿಸಿದ್ದೆ. ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ’ ಎಂದು ಜಯಪ್ರಕಾಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT