ಸೋಮವಾರ, ಆಗಸ್ಟ್ 2, 2021
27 °C
ಕೋವಿಡ್‌ ಸೋಂಕಿತರ ಸಾವುಗಳ ಕುರಿತು ತಜ್ಞರ ಸಮಿತಿ ವರದಿ

ಅನ್ಯರೋಗ, ವಿಳಂಬವೇ ಸಾವು ಹೆಚ್ಚಳಕ್ಕೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್‌ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದರಲ್ಲಿ ವಿಳಂಬವಾಗುತ್ತಿರುವುದು ಮತ್ತು ಗಂಭೀರ ಸ್ವರೂಪದ ಇತರ ಕಾಯಿಲೆಗಳಿಂದ ಬಳಲುತ್ತಿರುವುದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವುಗಳ ಸಂಖ್ಯೆ ಹೆಚ್ಚಲು ಕಾರಣ ಎಂದು ಮರಣ ಪ್ರಕರಣಗಳ ಪರಿಶೀಲನೆ ನಡೆಸಿರುವ ತಜ್ಞರ ಸಮಿತಿ ಹೇಳಿದೆ.

ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಕೋವಿಡ್‌–19 ಸೋಂಕಿತರ ಮರಣ ಪ್ರಕರಣಗಳ ಪರಿಶೀಲನೆಗೆ (ಡೆತ್‌ ಆಡಿಟ್‌) ನೇಮಿಸಿರುವ ತಜ್ಞರ ಸಮಿತಿಯು ಶನಿವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರಿಗೆ ವರದಿ ಸಲ್ಲಿಸಿದೆ. ಈವರೆಗೆ ಸಂಭವಿಸಿರುವ 35 ಸಾವುಗಳ ಪರಿಶೀಲನೆ ನಡೆಸಿರುವ ಸಮಿತಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಕೋವಿಡ್‌ ಸೋಂಕು ಹಬ್ಬುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ.

‘ಕೋವಿಡ್‌ ಸೋಂಕಿತರ ಸಾವಿನ ಪ್ರಕರಣಗಳನ್ನು ಪರಿಶೀಲಿಸಿದಾಗ, ಹೆಚ್ಚಿನ ಜನರು ಕೋವಿಡ್‌ ಸೋಂಕಿನ ಲಕ್ಷಣಗಳನ್ನು ಸಾಮಾನ್ಯ ಶೀತ ಎಂದು ನಿರ್ಲಕ್ಷಿಸಿ ಆಸ್ಪತ್ರೆಗೆ ಬರಲು ವಿಳಂಬ ಮಾಡಿರುವುದು ಕಂಡುಬಂದಿದೆ. ಹೆಚ್ಚಿನ ಜನರು ಆಸ್ಪತ್ರೆಗೆ ಬರುವುದಕ್ಕೆ ಭಯಪಡುತ್ತಿದ್ದಾರೆ. ಇದು ಕೂಡ ಸಾವಿನ ಸಂಖ್ಯೆ ಹೆಚ್ಚಲು ಕಾರಣ’ ಎಂದು ತಜ್ಞರ ಸಮಿತಿಯ ಸದಸ್ಯರಾದ ಡಾ.ಹಂಸರಾಜ್‌ ಆಳ್ವ ಮತ್ತು ಡಾ.ಮರುಳೀಧರ ಯಡಿಯಾಳ್‌ ಹೇಳಿದರು.

ಜ್ವರ, ಶೀತದಿಂದ ಬಳಲುತ್ತಿರುವವರು ಹೆಚ್ಚಿನ ಜಾಗ್ರತೆ ವಹಿಸಬೇಕು. ಸ್ವಯಂ ಔಷಧ ತೆಗೆದುಕೊಳ್ಳುವ ಬದಲಿಗೆ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ಶೀತದ ಲಕ್ಷಣಗಳಿರುವ ಜನರು ತಾವಾಗಿಯೇ ಇತರರಿಂದ ಪ್ರತ್ಯೇಕಗೊಳ್ಳಬೇಕು. ಚಿಕಿತ್ಸೆ ಮುಗಿಯುವವರೆಗೂ ಏಕಾಂತ ವಾಸದಲ್ಲಿರುವುದರಿಂದ ಇತರರನ್ನು ಸೋಂಕಿನ ಭೀತಿಯಿಂದ ಪಾರು ಮಾಡಬಹುದು ಎಂದರು.

ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ ಶ್ಯಾನುಭೋಗ್‌ ಮಾತನಾಡಿ, ‘ಜಿಲ್ಲೆಯಲ್ಲಿ ಈ ವರೆಗೆ 38 ಮಂದಿ ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ 35 ಸಾವುಗಳ ಕುರಿತು ತಜ್ಞರ ಸಮಿತಿ ಪರಿಶೀಲನೆ ಪೂರ್ಣಗೊಳಿಸಿದೆ. ಮೃತಪಟ್ಟವರಲ್ಲಿ ಒಂಭತ್ತು ಮಂದಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. 10 ಜನರು 50ರಿಂದ 60 ವರ್ಷ ವಯಸ್ಸಿನವರು. 11 ಮಂದಿ 60ರಿಂದ 70 ವರ್ಷದವರು. ಐದು ಜನರು 70 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು’ ಎಂದರು.

35 ಮರಣ ಪ್ರಕರಣಗಳಲ್ಲಿ 26 ಜನರು ಕೋವಿಡ್‌ ಜೊತೆಗೆ ಅಧಿಕ ರಕ್ತದೊತ್ತಡ, ನರರೋಗ, ಹೃದ್ರೋಗ ಸೇರಿದಂತೆ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿದ್ದರು. ನಾಲ್ಕು ಜನರು ಗಂಭೀರ ಸ್ವರೂಪದ ಇತರ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವಾಗ ಪರೀಕ್ಷಿಸಿದ್ದರಿಂದ ಕೋವಿಡ್‌ ಸೋಂಕು ಪತ್ತೆಯಾಗಿತ್ತು. ನಾಲ್ವರು ಕೋವಿಡ್‌ನಿಂದ ಉಂಟಾದ ನ್ಯುಮೋನಿಯಾದಿಂದ ಮೃತಪಟ್ಟಿದ್ದಾರೆ. ಒಂದು ಸಾವು ಕೋವಿಡ್‌ ಅಲ್ಲದ ಕಾರಣದಿಂದ ಸಂಭವಿಸಿದೆ ಎಂದು ವಿವರ ನೀಡಿದರು.

ನಿರ್ಲಕ್ಷಿಸದಂತೆ ಮನವಿ: ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಮಾತನಾಡಿ, ‘ಜಿಲ್ಲೆಯ ಎಲ್ಲ ವೈದ್ಯಕೀಯ ಕಾಲೇಜುಗಳು, 10 ನಗರ ಆರೋಗ್ಯ ಕೇಂದ್ರಗಳು ಮತ್ತು ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಫೀವರ್‌ ಕ್ಲಿನಿಕ್‌’ ತೆರೆಯಲಾಗಿದೆ. ಜನರು ಜ್ವರದ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಜ್ವರದ ಲಕ್ಷಣಗಳು ಕಂಡುಬಂದರೆ ‘ಫೀವರ್‌ ಕ್ಲಿನಿಕ್‌’ಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಯಾವುದೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ದುಬಾರಿ ಶುಲ್ಕ ಪಡೆಯುತ್ತಿದ್ದಲ್ಲಿ, ಸಾರ್ವಜನಿಕರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಬಹುದು. ಅದನ್ನು ವಿಚಾರಣೆಗಾಗಿ ಕರ್ನಾಟಕ ಖಾಸಗಿ ವೈದ್ಯಕೀಯ ಕೇಂದ್ರಗಳ ಕಾಯ್ದೆಯ ಅಡಿಯಲ್ಲಿ ನೇಮಿಸಿರುವ ಸಮಿತಿಗೆ ವಿಚಾರಣೆಗಾಗಿ ನೀಡಲಾಗುವುದು. ಎಲ್ಲ ಆಸ್ಪತ್ರೆಗಳೂ ಕಡ್ಡಾಯವಾಗಿ ನೋಟಿಸ್‌ ಫಲಕದಲ್ಲಿ ಪ್ರಕಟಿಸಬೇಕು ಎಂದರು.

‘ಚಿಕಿತ್ಸೆಗೆ ಹಾಸಿಗೆಗಳ ಕೊರತೆಯಿಲ್ಲ’

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಇಲ್ಲ. ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ 270 ಹಾಸಿಗೆಗಳಿವೆ. ಸದ್ಯ ಅಲ್ಲಿ 130 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜತೆಯಲ್ಲೇ ಖಾಸಗಿ ಆಸ್ಪತ್ರೆಗಳೂ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿವೆ’ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದರು.

ಕೊಣಾಜೆಯಲ್ಲಿ ಆರಂಭಿಸಿರುವ ‘ಕೋವಿಡ್‌ ಕೇರ್‌ ಸೆಂಟರ್‌’ನಲ್ಲಿ ಎಂಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೇಂದ್ರಗಳಲ್ಲಿ ವೈದ್ಯಕೀಯ ಸಿಬ್ಬಂದಿ ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಮಾತನಾಡಿ, ‘ಕ್ವಾರಂಟೈನ್‌ ಕೇಂದ್ರಗಳಾಗಿದ್ದ 80 ಹಾಸ್ಟೆಲ್‌ಗಳನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಾಗಿ ಪರಿವರ್ತಿಸಲಾಗುತ್ತಿದೆ. ಈಗ ಈ ಹಾಸ್ಟೆಲ್‌ಗಳಲ್ಲಿ 2,287 ಹಾಸಿಗೆಗಳು ಸಜ್ಜುಗೊಂಡಿವೆ. ಅಲ್ಲಿ ಒಟ್ಟು 13,000 ಹಾಸಿಗೆಗಳನ್ನು ಸಿದ್ಧಪಡಿಸಲು ಸಾಧ್ಯವಿದೆ’ ಎಂದು ತಿಳಿಸಿದರು.

ವೆನ್ಲಾಕ್‌ ಕೋವಿಡ್‌ ಚಿಕಿತ್ಸಾ ತಂಡದ ಮುಖ್ಯಸ್ಥ ಡಾ.ಶರತ್‌ ಬಾಬು, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತ್ನಾಕರ್‌, ವೈದ್ಯರಾದ ಡಾ.ಸಂದೀಪ್‌ ರೈ, ಡಾ.ಚಕ್ರಪಾಣಿ ಮತ್ತು ಡಾ.ತಾಜುದ್ದೀನ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು