ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಡಿ ರಸ್ತೆ: 4 ವರ್ಷಗಳ ಬಳಿಕ ಸಂಕಷ್ಟ ಮುಕ್ತಿ

ಶಿರಾಡಿ ಘಾಟಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ
Last Updated 13 ಜುಲೈ 2018, 12:50 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾಡಿ ಘಾಟ್ ರಸ್ತೆಯ 2ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣ ಹಂತಕ್ಕೆ ತಲುಪಿದ್ದು, ಸದಾ ಹೊಂಡ-ಗುಂಡಿಗಳಿಂದ ಕೂಡಿ ‘ಶಾಪಗ್ರಸ್ತ’ ಎಂಬಂತಿದ್ದ ಘಾಟ್ ರಸ್ತೆ ಕೊನೆಗೂ ಸಂಕಷ್ಟಗಳಿಗೆ ಮುಕ್ತಿ ದೊರಕುವಂತೆ ಆಗಿದೆ. ವಾಹನಗಳ ಓಡಾಟ ಆರಂಭಕ್ಕೆ ದಿನಗಣನೆ ಆರಂಭ ಆಗಿದೆ.

2ನೇ ಹಂತದ ಕಾಮಗಾರಿ ಪೂರ್ಣಗೊಳ್ಳುವ ಮೂಲಕ ಸಕಲೇಶಪುರದ ಹೆಗ್ಗದ್ದೆಯಿಂದ ಶಿರಾಡಿ ಅಡ್ಡಹೊಳೆ ತನಕದ 27 ಕಿ. ಮೀ. ರಸ್ತೆ ಸಂಪೂರ್ಣ ಕಾಂಕ್ರೀಕರಣಗೊಂಡು ಸುಗಮ ಸಂಚಾರಕ್ಕೆ ಹಾದಿ ಸುಗಮಆಗಿದೆ. ವಾಹನ ಸಂಚಾರ ನಿಷೇಧ ತೆರವುಗೊಳಿಸುವ ಬಗ್ಗೆ ಜಿಲ್ಲಾಢಳಿತದಿಂದ ಆದೇಶ ಮಾತ್ರ ಹೊರ ಬೀಳಲು ಬಾಕಿ ಇದ್ದು, ವಾಹನ ಚಾಲಕರು ಮತ್ತು ಸ್ಥಳೀಯರು ಕಾತರರಾಗಿದ್ದಾರೆ.

ಜನವರಿ 20ರಿಂದ ಸಂಚಾರ ಬಂದ್: ಕಾಮಗಾರಿ ಸಲುವಾಗಿ ಈ ರಸ್ತೆಯಲ್ಲಿ 2018 ಜನವರಿ 20ರಿಂದ ವಾಹನ ಸಂಚಾರ ನಿಷೇಧ ಹೇರಲಾಗಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಕಾಮಗಾರಿ ಅವಧಿ 2019ರ ಏಪ್ರಿಲ್ ವರೆಗೆ ಇದ್ದು, ಹೆದ್ದಾರಿ ಇಲಾಖೆ ಎಂಜಿನಿಯರ್ ಮತ್ತು ಗುತ್ತಿಗೆದಾರರು ಕೆಲಸ ಪೂರ್ಣಗೊಳಿಸಿ ಜೂನ್ ಅಂತ್ಯದ ಒಳಗಾಗಿ ಬಿಟ್ಟು ಕೊಡುವ ಬಗ್ಗೆ ಚಿಂತನೆ ನಡೆದಿತ್ತು. ಆದರೆ, ಒಂದೂವರೆ ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಮಗಾರಿ ವೇಗಕ್ಕೆ ಹಿನ್ನಡೆ ಆಗಿತ್ತು. ಈಗ 6 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡು ರಸ್ತೆ ಸಂಚಾರಕ್ಕೆ ಮುಕ್ತ ಆಗುವ ರೀತಿಯಲ್ಲಿ ಸಿದ್ಧವಾಗಿದೆ.

‌2014ರಲ್ಲಿ ಮಂಜೂರು ಆಗಿದ್ದ ಯೋಜನೆ: ಮೊದಲ ಹಂತದ ಕಾಮಗಾರಿ ಸಕಲೇಶಪುರದ ಹೆಗ್ಗದ್ದೆಯಿಂದ ಕೆಂಪುಹೊಳೆ ತನಕ 11.77 ಕಿ.ಮೀ. ಕಾಂಕ್ರಿಟೀಕರಣ 69.90 ಕೋಟಿ ರೂಪಾಯಿಯಲ್ಲಿ ಆಗಿದ್ದು, ಇದೀಗ ಕಾಮಗಾರಿ ನಿರ್ವಹಿಸಿರುವ ಓಷಿಯನ್ ಕನ್‍ಸ್ಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಟ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡು ಕಾಮಗಾರಿ ನಡೆಸಿತ್ತು. 2015 ಆಗಸ್ಟ್ 10ರಂದು ಕೇಂದ್ರ ಸರ್ಕಾರದ ಭೂಸಾರಿಗೆ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಮತ್ತು ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉಪಸ್ಥಿತಿಯಲ್ಲಿ ರಸ್ತೆ ಉದ್ಘಾಟನೆಗೊಂಡಿತ್ತು.

3 ಗುತ್ತಿಗೆ ಸಂಸ್ಥೆಯಿಂದಾಗಿ 3 ವರ್ಷ ವಿಳಂಬ: ಶಿರಾಡಿ ಘಾಟ್ ರಸ್ತೆ ಕಳೆದ ಹತ್ತಾರು ವರ್ಷಗಳಿಂದ ಮಳೆಗಾಲ ಆರಂಭ ಆಗುತ್ತಿದ್ದಂತೆ ರಸ್ತೆಯಲ್ಲಿ ಹೊಂಡ ಬಿದ್ದು ಗಾಡಿ ರಸ್ತೆಯಾಗಿ ಮಾರ್ಪಾಟು ಆಗುತ್ತಿತ್ತು. ವಾಹನ ಚಾಲಕರು ತೀರಾ ಸಂಕಷ್ಟ ಅನುಭವಿಸುತ್ತಿದ್ದರು. ಹೀಗಾಗಿ 2014ರಲ್ಲಿ ಕೇಂದ್ರ ಸರ್ಕಾರದಲ್ಲಿ ಭೂ ಸಾರಿಗೆ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಈ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಮಾಡುವ ಬಗ್ಗೆ ಚಿಂತನೆ ನಡೆಸಿ, ಹೆಗ್ಗದ್ದೆಯಿಂದ ಅಡ್ಡಹೊಳೆ ತನಕದ ರಸ್ತೆಗೆ ಒಟ್ಟು 185 ಕೋಟಿ ರೂಪಾಯಿ ಮಂಜೂರು ಮಾಡಿದ್ದರು.

ಕಾಮಗಾರಿಯನ್ನು 2 ಹಂತವಾಗಿ ವಿಂಗಡಿಸಲಾಗಿತ್ತು. ಮೊದಲ ಹಂತದ ಕಾಮಗಾರಿಗೆ 2015 ಜನವರಿ 2ರಿಂದ ಶಿರಾಡಿ ಘಾಟ್ ರಸ್ತೆಯನ್ನು ಬಂದ್ ಮಾಡಲಾಗಿ ಕಾಮಗಾರಿ ಆರಂಭಗೊಂಡಿತ್ತು. ಒಟ್ಟು 7 ತಿಂಗಳ ಅವಧಿಯಲ್ಲಿ 2015 ಆಗಸ್ಟ್ 10ರಂದು ಉದ್ಘಾಟನೆ ಆಗಿತ್ತು.

ಬಳಿಕ 2ನೇ ಹಂತದ ಕಾಮಗಾರಿ ಗುತ್ತಿಗೆ ಟೆಂಡರು ಕರೆಯಲಾಗಿತ್ತು. ಆಂಧ್ರಪ್ರದೇಶ ಮೂಲದ ಮೆ. ಜಿ.ವಿ.ಆರ್. ಕನ್‍ಸ್ಟ್ರಕ್ಷನ್ ಸಂಸ್ಥೆಗೆ ಟೆಂಡರು ಆಗಿತ್ತು. ಆದರೆ ಸಂಸ್ಥೆ ಈ ಕಾಮಗಾರಿಯನ್ನು "ಸೂರ್ಯೋದಯ ಕನ್‍ಸ್ಟ್ರಕ್ಷನ್" ಸಂಸ್ಥೆಗೆ ಉಪಗುತ್ತಿಗೆ ವಹಿಸಿಕೊಟ್ಟಿತ್ತು. ಈ ಸಂಸ್ಥೆ 2015 ಅಕ್ಟೋಬರ್ ಬಳಿಕ ಗುಂಡ್ಯ ಅಡ್ಡಹೊಳೆ ಎಂಬಲ್ಲಿ ಮಿಕ್ಸಿಂಗ್‍ಗಾಗಿ ಜಾಗ ಗುರುತಿಸಿಕೊಂಡು 2016 ಫೆಬ್ರವರಿಯಲ್ಲಿ ಕಾಮಗಾರಿ ಆರಂಭಗೊಳಿಸುವುದಾಗಿ ಹೇಳಿಕೊಂಡಿತ್ತು. ಆದರೆ ಕಾಮಗಾರಿ ಆರಂಭಿಸಿರಲಿಲ್ಲ. ಬಳಿಕ ಜಿ.ವಿ.ಆರ್. ಕನ್‍ಸ್ಟ್ರಕ್ಷನ್ ಸಂಸ್ಥೆ ಮತ್ತೆ ಬೆಂಗಳೂರು ಮೂಲದ ವಿ.ಆರ್.ಸಿ.ಪಿ. ಸಂಸ್ಥೆಗೆ ಉಪಗುತ್ತಿಗೆ ನೀಡಿತು. ಈ ಸಂಸ್ಥೆ 2017 ಜನವರಿಯಲ್ಲಿ ಕೆಲಸ ಪ್ರಾರಂಭಿಸಿ 6 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿತ್ತು. ಆದರೆ ಕಾಮಗಾರಿ ಆರಂಭ ಆಗಲೇ ಇಲ್ಲ.

ಹೆದ್ದಾರಿ ಇಲಾಖೆ ಜಿ.ವಿ.ಆರ್. ಕನ್‍ಸ್ಟ್ರಕ್ಷನ್ ಸಂಸ್ಥೆಗೆ ನೀಡಿದ್ದ ಅವಧಿ ಮುಕ್ತಾಯ ಆಗುತ್ತಾ ಬಂದಿತ್ತು. ಕೆಲಸ ಆರಂಭಿಸದ ಕಾರಣ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಗುತ್ತಿಗೆ ಸಂಸ್ಥೆ ವಿರುದ್ಧ ಹೈಕೋರ್ಟುನಲ್ಲಿ ದಾವೆ ಹೂಡಿತ್ತು. ಹೈಕೋರ್ಟು ಮತ್ತೆ ಟೆಂಡರು ಪ್ರಕ್ರಿಯೆ ನಡೆಸಲು ತೀರ್ಪು ನೀಡಿ ಆದೇಶಿಸಿತ್ತು. ಅದರಂತೆ 2017 ನವೆಂಬರ್ ತಿಂಗಳಿನಲ್ಲಿ ಟೆಂಡರು ಪ್ರಕ್ರಿಯೆ ನಡೆದು ಓಷಿಯನ್ ಸಂಸ್ಥೆಗೆ ಗುತ್ತಿಗೆ ಕಾಯಂ ಆಗಿ, 2018 ಜನವರಿಯಲ್ಲಿ ಕೆಲಸ ಆರಂಭಿಸಿ, ಇದೀಗ 6 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT