ಭಾನುವಾರ, ಅಕ್ಟೋಬರ್ 17, 2021
23 °C

ಶೂಟೌಟ್‌: ಮಿದುಳು ನಿಷ್ಕ್ರಿಯಗೊಂಡಿದ್ದ ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಮೋರ್ಗನ್ಸ್‌ಗೇಟ್‌ನಲ್ಲಿ ಉದ್ಯಮಿ ಹಾರಿಸಿದ ಗುಂಡು ತಗುಲಿ ಮಿದುಳು ನಿಷ್ಕ್ರಿಯಗೊಂಡಿದ್ದ ಬಾಲಕ ಶುಕ್ರವಾರ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾನೆ.

ಉದ್ಯಮಿ ರಾಜೇಶ್ ಪ್ರಭು ಅವರ ಪುತ್ರ ಸುಧೀಂದ್ರ (16) ಮೃತ ಬಾಲಕ. ಅ.5ರಂದು ತಂದೆಯಿಂದಲೇ ಗುಂಡೇಟಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಸುಧೀಂದ್ರನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಆತನ ಮಿದುಳು ನಿಷ್ಕ್ರಿಯಗೊಂಡ ವಿಷಯವನ್ನು ವೈದ್ಯರು ಘೋಷಿಸಿದ್ದರು. ಶುಕ್ರವಾರ ನಸುಕಿನಜಾವ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಪ್ರಕರಣ ವಿವರ: ಮೋರ್ಗನ್ಸ್‌ಗೇಟ್‌ನ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊ ಸರಕು ಸಾಗಾಟ ಸಂಸ್ಥೆಯಲ್ಲಿ ಸೆ. 30ರಂದು ಅಶ್ರಫ್, ಚಂದ್ರಹಾಸ ಎಂಬವರು ಕೆಲಸಕ್ಕೆ ಸೇರಿಕೊಂಡಿದ್ದರು. ಅದೇ ದಿನ ಗೂಡ್ಸ್ ಕಂಟೈನರ್ ವಾಹನಕ್ಕೆ ಚಾಲಕ, ಕ್ಲೀನರ್‌ ಆಗಿ ಮುಂಬೈಗೆ ತೆರಳಿ ಅ.3ಕ್ಕೆ ವಾಪಸಾಗಿದ್ದರು. ಅವರಿಗೆ ಮೊದಲೇ ₹10 ಸಾವಿರ ಸಂಬಳ ನೀಡಲಾಗಿತ್ತು. ಇನ್ನುಳಿದ ₹4ಸಾವಿರ ನೀಡುವುದಾಗಿ ಮಾಲೀಕ ರಾಜೇಶ್ ಪ್ರಭು ಎರಡು ದಿನ ಸತಾಯಿಸಿದ್ದು, ಅ.5ರಂದು ಮಧ್ಯಾಹ್ನ 3.30ಕ್ಕೆ ಕಚೇರಿಗೆ ಬಂದ ಚಾಲಕ, ಕ್ಲೀನರ್, ಬಾಕಿ ಹಣ ನೀಡುವಂತೆ ಸಂಸ್ಥೆಯ ಮಾಲೀಕನ ಪತ್ನಿ ಶಾಂತಲಾ ಪ್ರಭು ಅವರಲ್ಲಿ ಒತ್ತಾಯಿಸಿದ್ದರು.

ಈ ವೇಳೆ ಅವರು ಪತಿ, ಪುತ್ರನನ್ನು ಕರೆಸಿದ್ದರು. ಅಶ್ರಫ್, ಚಂದ್ರಹಾಸ, ರಾಜೇಶ್ ಪ್ರಭು, ಸುಧೀಂದ್ರ ಪ್ರಭು ನಡುವೆ ಮಾತಿನ ಚಕಮಕಿ ನಡೆದು ವಾಗ್ವಾದಕ್ಕೆ ಕಾರಣವಾಗಿತ್ತು. ತಳ್ಳಾಟದ ವೇಳೆ ರಾಜೇಶ್ ಎರಡು ಸುತ್ತಿನ ಗುಂಡು ಹಾರಿಸಿದ್ದು, ಅಶ್ರಫ್, ಚಂದ್ರಹಾಸರತ್ತ ಹಾರಿಸಿದ್ದ ಗುಂಡು ಮಗ ಸುಧೀಂದ್ರನ ಎಡಗಣ್ಣಿನ ಪಕ್ಕ ಹಾದು, ತಲೆಯ ಒಳಭಾಗದಲ್ಲಿ ಹೊಕ್ಕಿತ್ತು.

ಗಂಭೀರ ಗಾಯಗೊಂಡ ಪುತ್ರನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಉದ್ಯಮಿ ರಾಜೇಶ್ ಪ್ರಭು ಅವರನ್ನು ಗುರುವಾರ ಬಂಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.