ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಕೈಗಾರಿಕೆ: ವಹಿವಾಟು ಚೇತರಿಕೆ

ಕಾರ್ಮಿಕರ ಕೊರತೆ ಎದುರಿಸುತ್ತಿರುವ ಘಟಕಗಳು, ಉತ್ಪಾದನೆ ಪುನರಾರಂಭ
Last Updated 13 ಡಿಸೆಂಬರ್ 2020, 7:25 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ಲಾಕ್‌ಡೌನ್ ವೇಳೆ ಸ್ಥಗಿತಗೊಂಡಿದ್ದ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ದೂಳು ಮೆತ್ತಿಕೊಂಡಿದ್ದ ಯಂತ್ರಗಳು ಮತ್ತೆ ತಿರುಗಲಾರಂಭಿಸಿವೆ. ದುಡಿಮೆಯಿಲ್ಲದೇ ಬೇಸತ್ತಿದ್ದ ಕೈಗಳಿಗೆ ಕೆಲಸ ದೊರೆತಿವೆ.

ಜಿಲ್ಲೆಯಲ್ಲಿ ಆಹಾರ ಸಂಸ್ಕರಣೆ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳು, ಬಟ್ಟೆ ತಯಾರಿಕಾ ಘಟಕಗಳು, ಮರಗೆಲಸ ಆಧಾರಿತ ಉದ್ದಿಮೆಗಳು ಪ್ರಾಮುಖ್ಯವಾಗಿವೆ. 25 ಸಾವಿರಕ್ಕೂ ಹೆಚ್ಚು ಜನರು ಆಹಾರ ಸಂಸ್ಕರಣಾ ಘಟಕಗಳ ಉದ್ಯೋಗ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿರುವ ಸುಮಾರು 17,883 ಸಣ್ಣ ಉದ್ಯಮ ಘಟಕಗಳಿಂದ 1 ಲಕ್ಷ ಜನರಿಗೆ ಉದ್ಯೋಗದ ಅವಕಾಶಗಳು ಲಭಿಸಿವೆ. ಕೋವಿಡ್–19 ಸಾಂಕ್ರಾಮಿಕ ಕಾಯಿಲೆಯ ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಣೆಯಾದಾಗ, ಬೆರಳೆಣಿಕೆಯ ಉದ್ಯಮಗಳನ್ನು ಹೊರತುಪಡಿಸಿ, ಉಳಿದೆಲ್ಲವು ಬಾಗಿಲು ಮುಚ್ಚಿದ್ದವು. ಲಾಕ್‌ಡೌನ್ ತೆರವುಗೊಂಡ ಮೇಲೆ, ಕೈಗಾರಿಕಾ ವಲಯದಲ್ಲಿ ಮತ್ತೆ ಜೀವಕಳೆ ತುಂಬಿದೆ. ಕಾರ್ಮಿಕರ ಚುರುಕಿನ ಓಡಾಟ, ವಾಹನಗಳ ಭರಾಟೆ, ಯಂತ್ರಗಳ ಸದ್ದು ಕೇಳಲಾರಂಭಿಸಿದೆ.

‘ಸಣ್ಣ ಕೈಗಾರಿಕಾ ವಲಯದಲ್ಲಿ ಆಹಾರ ಸಂಸ್ಕರಣೆ, ಪ್ಯಾಕೇಜಿಂಗ್, ಪ್ಲಾಸ್ಟಿಕ್ ಘಟಕದಂತಹ ಕೆಲವೇ ಉದ್ದಿಮೆಗಳು ಲಾಕ್‌ಡೌನ್ ವೇಳೆಯಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸಿದವು. ಇನ್ನುಳಿದವು ಅಕ್ಷರಶಃ ಬಾಗಿಲು ಮುಚ್ಚಿದ್ದವು. ಲಾಕ್‌ಡೌನ್ ಹಂತ ಹಂತವಾಗಿ ತೆರವುಗೊಂಡ ಮೇಲೆ ಉದ್ದಿಮೆಗಳು ಬಾಗಿಲು ತೆರೆದಿವೆ. ಕೋವಿಡೋತ್ತರ ಕಾಲದಲ್ಲಿ ಮೂಲಸೌಕರ್ಯ ಧಾರಿತ ಉದ್ದಿಮೆಗಳು ಹಿಂದಿನ ಉಚ್ಛ್ರಾಯ ಮಾರ್ಗದತ್ತ ಸಾಗಿವೆ’ ಎನ್ನುತ್ತಾರೆ ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಅಜಿತ್ ಎಂಟರ್‌ ಪ್ರೈಸಸ್ ಮಾಲೀಕ ಅಜಿತ್ ಕಾಮತ್.

‘ಇಲ್ಲಿನ ಉದ್ಯಮಗಳು ಬಹುತೇಕ ವಲಸೆ ಕಾರ್ಮಿಕರನ್ನು ಅವಲಂಬಿಸಿವೆ. ಅಸ್ಸಾಂ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್ ಮೊದಲಾದ ರಾಜ್ಯಗಳಿಂದ ಬಂದಿದ್ದ ವಲಸೆ ಕಾರ್ಮಿಕರು, ಒಂದನೇ ಹಂತದ ಲಾಕ್‌ಡೌನ್ ತೆರವಾದ ವೇಳೆ ರೈಲಿನ ವ್ಯವಸ್ಥೆ ಕಲ್ಪಿಸಿದಾಗ ಊರಿಗೆ ಹೋಗಿದ್ದರು. ಹೀಗೆ ಮೂಲನೆಲೆಗಳಿಗೆ ಹೋಗಿರುವ ಕಾರ್ಮಿಕರು ಇನ್ನೂ ವಾಪಸ್ ಬಂದಿಲ್ಲ. ಮತ್ತೆ ಉದ್ಯೋಗಕ್ಕೆ ಬರಲು ಆಸಕ್ತರಾದರೂ, ರೈಲು ಸಂಚಾರ ಆರಂಭವಾಗದ ಕಾರಣ ಅವರಿಗೆ ಹಳೆಯ ಉದ್ಯೋಗ ಸ್ಥಾನಕ್ಕೆ ಬಂದು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಶೇ 60ರಷ್ಟು ಉದ್ಯಮಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಿವೆ’ ಎಂದು ಅವರು ತಿಳಿಸಿದರು.

‘ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ವಲಯವು ಒಂದು ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಕೊರೊನಾ ಕಾರಣಕ್ಕೆ ಎಲ್ಲ ಉದ್ಯಮಗಳಿಗೆ ಕೊಡಲಿಪೆಟ್ಟು ಬಿತ್ತು. ಸ್ಯಾನಿಟೈಸರ್, ಫಾರ್ಮಾ ಉದ್ದಿಮೆಗಳು ಸಂತೃಪ್ತಿದಾಯಕವಾಗಿವೆ. ಆಹಾರ ಸಂಸ್ಕರಣೆ ಉದ್ಯಮ ಚೇತರಿಸಿಕೊಂಡಿದೆ. ಜವಳಿ ಉದ್ಯಮವೂ ಆಶಾದಾಯಕವಾಗಿದೆ. ಚೀನಾದ ಆಟಿಕೆಗಳು ಹಿಂದೆ ಬಿದ್ದಿದ್ದು, ಸ್ಥಳೀಯ ಆಟಿಕೆ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಿದಂತೆ, ಈ ಉದ್ಯಮವೂ ಭರವಸೆ ಮೂಡಿಸಿದೆ’ ಎಂದು ಕೆನರಾ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಅಧ್ಯಕ್ಷ ಐಸಾಕ್‌ ವಾಸ್‌ ಹೇಳಿದರು.

‘ಆದರೆ, ಕೇಟರಿಂಗ್, ಇವೆಂಟ್ ಮ್ಯಾನೇಜ್‌ಮೆಂಟ್‌ (ಕಾರ್ಯಕ್ರಮ ನಿರ್ವಹಣೆ)ನಂತಹ ಉದ್ದಿಮೆಗಳು ಕೊರೊನಾ ಹೊಡೆತಕ್ಕೆ ನಲುಗಿವೆ. ಒಂದು ವರ್ಷದ ಸುದೀರ್ಘ ನಷ್ಟ ಭರಿಸುವುದು ಸುಲಭವಲ್ಲ. ಹೀಗಾಗಿ, ಶೇ 35ರಷ್ಟು ಕೈಗಾರಿಕೆಗಳು ಇನ್ನೂ ಮುಚ್ಚಿದ ಬಾಗಿಲು ತೆರೆದಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

‌ಒಟ್ಟಾರೆಯಾಗಿ ಪರಿಗಣಿಸಿದಾಗ ಸಣ್ಣ ಕೈಗಾರಿಕಾ ವಲಯ ನಷ್ಟದಿಂದ ಚೇತರಿಸಿಕೊಂಡಿಲ್ಲ. ನಿರ್ದಿಷ್ಟ ಕ್ಷೇತ್ರಗಳು ಸುಧಾರಣೆಯ ಹಾದಿಯಲ್ಲಿ ಸಾಗಿವೆ.
- ಐಸಕ್ ವಾಸ್, ಕೆಸಿಸಿಐ ಅಧ್ಯಕ್ಷ

ಉದ್ದಿಮೆಗಳು ಆರಂಭವಾದರೂ ಕಾರ್ಮಿಕರ ಕೊರತೆ ಎದುರಿಸುತ್ತಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

- ಅಜಿತ್ ಕಾಮತ್, ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ

ಅತಿಸಣ್ಣ, ಸಣ್ಣ ಕೈಗಾರಿಕೆ ವಿಧ: ಘಟಕಗಳ ಸಂಖ್ಯೆ

ಆಹಾರ ಮತ್ತು ಕೃಷಿ ಆಧಾರಿತ;2507

ರೆಡಿಮೇಡ್ ಬಟ್ಟೆ ಮತ್ತು ಜವಳಿ;3179

ಮರ ಮತ್ತು ಮರಗೆಲಸ ಆಧಾರಿತ;2818

ಚರ್ಮ ಆಧಾರಿತ;464

ಕಾಗದ ಮತ್ತು ಕಾಗದ ಆಧಾರಿತ;874

ಪ್ಲಾಸ್ಟಿಕ್ ಮತ್ತು ರಾಸಾಯನಿಕ ಆಧಾರಿತ;936

ಮಿನಿರಲ್ ಆಧಾರಿತ;240

ಲೋಹ ಆಧಾರಿತ;1865

ಎಂಜಿನಿಯರಿಂಗ್ ಘಟಕ;555

ಎಲೆಕ್ಟ್ರಿಕಲ್ ಮತ್ತು ಸಾಗಾಣಿಕಾ ಸಾಮಗ್ರಿ;920

ದುರಸ್ತಿ ಮತ್ತು ಸೇವಾ ಚಟುವಟಿಕೆ;3525

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT