ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಡ್ಡೂರು ಸೇತುವೆಯಡಿ ಅಕ್ರಮ ಮರಳುಗಾರಿಕೆ ತಡೆಯಿರಿ: ಭರತ್ ಶೆಟ್ಟಿ

ಶಾಸಕ ಡಾ.ವೈ.ಭರತ್ ಶೆಟ್ಟಿ ಒತ್ತಾಯ
Published 23 ಆಗಸ್ಟ್ 2024, 6:27 IST
Last Updated 23 ಆಗಸ್ಟ್ 2024, 6:27 IST
ಅಕ್ಷರ ಗಾತ್ರ

ಮಂಗಳೂರು: ‘ಪೊಳಲಿ ಕ್ಷೇತ್ರವನ್ನು ಸಂಪರ್ಕಿಸುವ ಅಡ್ಡೂರು ಸೇತುವೆ ಶಿಥಿಲಗೊಳ್ಳಲು, ಅದರಡಿ ಅಕ್ರಮವಾಗಿ ನಡೆಯುತ್ತಿರುವ   ಮರಳುಗಾರಿಕೆಯೇ ಕಾರಣ. ಇದನ್ನು ಜಿಲ್ಲಾಡಳಿತ ತಡೆಯಬೇಕು’ ಎಂದು ಶಾಸಕ ಡಾ. ವೈ.ಭರತ್ ಶೆಟ್ಟಿ  ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಅಲ್ಲಿ ಅಕ್ರಮ ಮರಳುಗಾರಿಕೆ ನಡೆಯುವ ಬಗ್ಗೆ ಅನೇಕ ಸಲ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ ಕ್ರಮವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಈ ಬಗ್ಗೆ ಗಮನ ಹರಿಸಬೇಕು. ಇದನ್ನು ತಡೆಯದಿದ್ದರೆ ಮುಲ್ಲರಪಟ್ಣದ ಸೇತುವೆ ಕುಸಿತದಂತೆಯೇ ಅಡ್ಡೂರು ಸೇತುವೆಯೂ ಕುಸಿಯಬಹುದು. ಅಲ್ಲಿ ಮರಳುಗಾರಿಕೆಗೆ  ಜಿಲ್ಲಾಡಳಿತ ಕಡಿವಾಣ ಹಾಕದಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಎಚ್ಚರಿಸಿದರು

‘ಸೇತುವೆ ಶಿಥಿಲವಾದ ಕಾರಣಕ್ಕೆ ಅದರಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅಕ್ರಮವಾಗಿ ಮರಳುಗಾರಿಕೆ ನಡೆಸುವವರಿಗೆ ಇದು ವರದಾನವಾಗಿದೆ.  ಮರಳು ಮಾಫಿಯಾಕ್ಕೆ ರಕ್ಷಣೆ ನೀಡುತ್ತಿರುವವರು ಯಾರು. ಈ ಕೃತ್ಯದಲ್ಲಿ ತೊಡಗಿದವರು ಯಾರು ಎಂಬುದು ಬಯಲಾಗಬೇಕು. ಅಲ್ಲಿ ಮರಳುಗಾರಿಕೆ ನಿಲ್ಲದಿದ್ದರೆ ಸೇತುವೆಗೂ ಅಪಾಯ ತಪ್ಪಿದ್ದಲ್ಲ. ಸೇತುವೆಯ 100 ಮೀ. ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಬಾರದು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಡ್ಡೂರು ಬಳಿ ಹೊಸ ಸೇತುವೆಯನ್ನು ನಿರ್ಮಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್‌ ಕೊಠಾರಿ, ಮುಖಂಡರಾದ ಸಂದೀಪ್‌ ಪಚ್ಚನಾಡಿ, ಭರತರಾಜ್‌ ಕೃಷ್ಣಾಪುರ, ಶ್ರವಣ್‌ ಶೆಟ್ಟಿ, ಆಶ್ರಿತ್‌ ನೋಂಡಾ  ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT