ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿಶ್ವವಿದ್ಯಾಲಯ: ಅರಿವು, ಅನ್ನದ ದಾರಿ ತೋರಿದ ಅಕ್ಷರ ದೇಗುಲ

150ರ ಸಂಭ್ರಮದಲ್ಲಿ ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜು: ಕಾರ್ಯಕ್ರಮ ನಾಳೆ
Last Updated 4 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಗೆ ಅಕ್ಷರ ಪರಂಪರೆಯ ಭದ್ರ ಬುನಾದಿ ಹಾಕಿಕೊಟ್ಟ ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿಗೆ ಈಗ 150 ವರ್ಷಗಳ ಸಂಭ್ರಮ. ಇದೇ 6ರಂದು ಸಂಭ್ರಮಾ‌ಚರಣೆ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

ಸಾಮಾನ್ಯರಿಗೆ ಅಕ್ಷರವೇ ದೂರವಾಗಿದ್ದ ಸಂದರ್ಭದಲ್ಲಿ ಪ್ರಮುಖರ ದೂರದೃಷ್ಟಿ, ಸಮಾಜಮುಖಿ ಚಿಂತನೆ ಫಲವಾಗಿ 1868ರಲ್ಲಿ ಅಸ್ತಿತ್ವಕ್ಕೆ ಬಂದ ‘ಸರ್ಕಾರಿ ಕಾಲೇಜು’, ಈ ತನಕ ಲಕ್ಷಾಂತರ ಮಂದಿಗೆ ಅರಿವು, ಅನ್ನದ ದಾರಿ ತೋರಿದೆ. ಇಂತಹ ಕಾಲೇಜು ಆರಂಭಗೊಂಡಿರುವುದೇ ಒಂದು ಚಳವಳಿ, ಆಂದೋಲನವಾಗಿ. ಈ ನೆಲ ‘ಬುದ್ಧಿವಂತರ ಜಿಲ್ಲೆ’ ಎನಿಸಿಕೊಳ್ಳುವಲ್ಲಿಯೂ ಕಾಲೇಜು ಪಾತ್ರ ಹಿರಿದು.

1860ರ ದಶಕದಲ್ಲಿ ಕರಾವಳಿಗರು ಹೆಚ್ಚಿನ ಶಿಕ್ಷಣಕ್ಕೆ ಮದ್ರಾಸ್‌ (ಚೆನ್ನೈ)ಗೆ ಹೋಗಬೇಕಿತ್ತು. ಸಾಮಾನ್ಯರಿಗೆ ‘ಶಿಕ್ಷಣ’ ದೂರದ ಮಾತಾಗಿತ್ತು. ಆಗ, ಮಂಗಳೂರಿನ ಎಂ. ರಾಮಪ್ಪ, ಶ್ರೀನಿವಾಸ ರಾವ್, ರಾಮಚಂದ್ರಯ್ಯ, ಎನ್. ಗುಂಡೂರಾವ್, ಎನ್. ತಿಮ್ಮಪ್ಪಯ್ಯ, ಸಾದಾತ್ ಖಾನ್, ಸಿ. ರಂಗಪ್ಪ, ನಾರಾಯಣ ಪೈ, ಮುತ್ತುಸ್ವಾಮಿ ಅಯ್ಯರ್ ಮತ್ತಿತರರು ಸಾರ್ವಜನಿಕರಿಂದ ಸುಮಾರು ₹ 65 ಸಾವಿರ ಸಂಗ್ರಹಿಸಿ, ಅಂದಿನ ಮದರಾಸು ಸರ್ಕಾರಕ್ಕೆ ನೀಡಿದ್ದರು. ಆಗಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥ ಪಾವೆಲ್‍ ಸಂಸ್ಥೆ ಕಾಲೇಜು ಮಂಜೂರು ಮಾಡಿದ್ದರು.

ಹೀಗೆ, ‘ಪ್ರಾಂತೀಯ ಶಾಲೆ’ಯು 315 ವಿದ್ಯಾರ್ಥಿಗಳಿಂದ ಆರಂಭಗೊಂಡಿತ್ತು. 1870ರಲ್ಲಿ ಸ್ವಂತ ಕಟ್ಟಡ ಹೊಂದಿತು. 1879ರಲ್ಲಿ ‘ಸರ್ಕಾರಿ ಕಾಲೇಜು ಮಂಗಳೂರು’ ಎಂದು ನಾಮಕರಣಗೊಂಡಿತು.1902ರಲ್ಲಿ ಮೊದಲ ಬಾರಿಗೆ ಹುಡುಗಿಯರು ಪ್ರವೇಶ ಪಡೆದರು. 1905ರ ಮಾರ್ಚ್ 18ರಂದು ಮೊದಲ ವಾರ್ಷಿಕೋತ್ಸವವನ್ನೂ ಆಚರಿಸಲಾಯಿತು.

‘1920ರಲ್ಲಿ ಪ್ರಾಂಶುಪಾಲರಾದ ಗೋವಿಂದ ಕೃಷ್ಣ ಚೆಟ್ಟೂರ್‌ ಕಾಲೇಜಿಗೆ ಗಟ್ಟಿ ಸ್ವರೂಪ ನೀಡಿದರು. ‘ಕಾಲೇಜ್ ಟೈಮ್ಸ್’ ಸಾಪ್ತಾಹಿಕ ಭಿತ್ತಿಪತ್ರಿಕೆ, ವಿದ್ಯಾರ್ಥಿ ಸಹಕಾರಿ ಸಂಘ, ಶಿಕ್ಷಕ-ರಕ್ಷಕ ಸಂಘಗಳು ಆರಂಭಗೊಂಡವು. ಕಾಲೇಜಿನ ವಾರ್ಷಿಕ ಸಂಚಿಕೆ 'ಮಿಸಲೇನಿ'ಯ ಪ್ರಥಮ ಸಂಚಿಕೆ 1923ರಲ್ಲಿ ಪ್ರಕಟವಾಯಿತು’ ಎಂದು ಕಾಲೇಜು ಪ್ರಾಂಶುಪಾಲ ಡಾ.ಉದಯಕುಮಾರ್‌ ಎಂ.ಎ. ವಿವರಿಸುತ್ತಾರೆ.

1922ರಲ್ಲಿ ವಿಶ್ವಕವಿ ರವೀಂದ್ರನಾಥ ಟಾಗೋರ್ ಭೇಟಿ ನೀಡಿದ ಸ್ಮರಣಾರ್ಥ 'ಅಕಾಡೆಮಿ ಹಾಲ್' ನಿರ್ಮಿಸಲಾಯಿತು. ಅದಕ್ಕೆ 1996ರಲ್ಲಿ 'ರವೀಂದ್ರ ಕಲಾ ಭವನ' ಎಂದು ಹೆಸರಿಡಲಾಯಿತು. 2015 ಸೆಪ್ಟೆಂಬರ್‌ನಲ್ಲಿ ಈ ಕಟ್ಟಡವನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಪಾರಂಪರಿಕ ಕಟ್ಟಡವೆಂದು ಪರಿಗಣಿಸಿ, ಪುನಶ್ಚೇತನಗೊಳಿಸಿತು.

1993ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕಾಲೇಜಿನ ಹಳೇ ವಿದ್ಯಾರ್ಥಿ ಎಂ.ವೀರಪ್ಪ ಮೊಯಿಲಿ ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜು ಆಗಿ ಪರಿವರ್ತನೆಗೊಳಿಸಿದರು. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಂಸ್ಥೆ (ನ್ಯಾಕ್)ಯು ‘ಎ’ ಶ್ರೇಣಿ ನೀಡಿದೆ.

ಪ್ರಸ್ತುತ 4 ಸ್ನಾತಕ ಮತ್ತು 5 ಸ್ನಾತಕೋತ್ತರ ವಿಭಾಗಗಳಿದ್ದು ಸುಮಾರು 1,800ರಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 51 ಕಾಯಂ, 50 ಅತಿಥಿ ಉಪನ್ಯಾಸಕರು, 20 ಆಡಳಿತ ಸಿಬ್ಬಂದಿ ಇದ್ದಾರೆ.

ಶಿಕ್ಷಕರು, ಶಿಕ್ಷಕೇತರರು ಹಾಗೂ ದಾನಿಗಳ ಸಹಕಾರದಿಂದ2016ರಿಂದ 200 ಜನ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಧ್ಯಾಹ್ನದ ಭೋಜನ ಆರಂಭಿಸಲಾಗಿತ್ತು. 2016ರಲ್ಲಿ ಇಲ್ಲಿ ಸಂಧ್ಯಾ ಕಾಲೇಜು ಆರಂಭಗೊಂಡಿತು.

ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳ ಕಚೇರಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.

ಗ್ರಂಥಾಲಯ ವಿಜ್ಞಾನ ಪಿತಾಮಹ ಎಸ್. ಆರ್. ರಂಗನಾಥನ್ 1917-21ರ ಅವಧಿಯಲ್ಲಿ ಈ ಕಾಲೇಜಿನಲ್ಲಿ ವಿಜ್ಞಾನ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಇಲ್ಲಿ ಅಪೂರ್ವ ಗ್ರಂಥಾಲಯವಿದೆ. ಅದನ್ನು ಸುಮಾರು ₹1 ಕೋಟಿ ವೆಚ್ಚದಲ್ಲಿ ಡಿಜಿಟಲೀಕರಣಗೊಳಿಸಬೇಕಾಗಿದೆ.

ಕರ್ಣಾಟಕ ಬ್ಯಾಂಕ್‌ ಸಹಯೋಗದಲ್ಲಿ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಆಟದ ಮೈದಾನವನ್ನು ನವೀಕರಣಗೊಳಿಸಲಾಗಿದೆ. ಇಲ್ಲಿನ ಪ್ರಾಧ್ಯಾಪಕರು ಸಂಶೋಧನೆಯ ಮೂಲಕ ಪೇಟೆಂಟ್ ಹಕ್ಕಗಳನ್ನೂ ಪಡೆದಿದ್ದಾರೆ. ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದಲ್ಲಿ ನೀರು ಪರೀಕ್ಷಾ ಪ್ರಯೋಗಾಲಯ ಹೊಂದಿದ್ದು, ಇದು ನಗರದಲ್ಲಿರುವ ನೀರು ಪರೀಕ್ಷಾ ಕೇಂದ್ರವಾಗಿದೆ. ಹೀಗೆ ಹಲವು ಕೊಡುಗೆಗಳನ್ನು ನೀಡಿದ ಕಾಲೇಜಿಗೆ ಈಗ 150.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT