ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಳ್ಳುಗಾಡಿಗೆ, ಕುಳಿತು ವ್ಯಾಪಾರಕ್ಕೆ ಅಡ್ಡಿ ಇಲ್ಲ: ಆಯುಕ್ತ

ಟೈಗರ್ ಕಾರ್ಯಾಚರಣೆ ವಿರೋಧಿಸಿ ಬೀದಿ ಬದಿ ವ್ಯಾಪಾರಿಗಳಿಂದ ಭಾರಿ ಪ್ರತಿಭಟನೆ, ಜಾಥಾಕ್ಕೆ ಸಮಾನ ಮನಸ್ಕ ಸಂಘಟನೆ ಬೆಂಬಲ
Published : 8 ಆಗಸ್ಟ್ 2024, 4:42 IST
Last Updated : 8 ಆಗಸ್ಟ್ 2024, 4:42 IST
ಫಾಲೋ ಮಾಡಿ
Comments

ಮಂಗಳೂರು: ನಗರದಲ್ಲಿಯ ಅನಧಿಕೃತ ಗೂಡಂಗಡಿ ತೆರವುಗೊಳಿಸಲು ಪಾಲಿಕೆ ನಡೆಸುತ್ತಿರುವ ಟೈಗರ್ ಕಾರ್ಯಾಚರಣೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೀದಿಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಇಲ್ಲಿ ಬುಧವಾರ ಭಾರಿ ಪ್ರತಿಭಟನೆ ನಡೆಯಿತು.

ಪಿವಿಎಸ್ ವೃತ್ತದಿಂದ ಲಾಲ್‌ಭಾಗ್‌ವರೆಗೆ ಮೆರವಣಿಗೆಯಲ್ಲಿ ಸಾಗಿದ ಬೀದಿ ಬದಿ ವ್ಯಾಪಾರಿಗಳು ಪಾಲಿಕೆ ಕಚೇರಿ ಎದುರು ಧರಣಿ ನಡೆಸಿದರು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಬೀದಿ ಬದಿ ವ್ಯಾಪಾರಿಗಳು, ‘ಪಾಲಿಕೆ ದುಡಿದುಣ್ಣುವ ಬಡವರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಿಸಬೇಕು.‌ ಸ್ವಾಧೀನಪಡಿಸಿಕೊಂಡ ಸೊತ್ತುಗಳನ್ನು ಮರಳಿಸಬೇಕು’ ಎಂದು ಆಗ್ರಹಿಸಿದರು. ಸಮಾನ ಮನಸ್ಕ ಸಂಘಟನೆಗಳ ಪ್ರಮುಖರೂ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತ ಸಿ.ಎಲ್.ಆನಂದ್, 'ಬೀದಿ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿದ ಶಾಶ್ವತ ರಚನೆಗಳನ್ನಷ್ಟೇ ತೆರವುಗೊಳಿಸುತ್ತೇವೆ. ತಳ್ಳುಗಾಡಿಗಳನ್ನು ತೆರವುಗೊಳಿಸುವುದಿಲ್ಲ. ಕುಳಿತು ನಡೆಸುವ ವ್ಯಾಪಾರಕ್ಕೆ ಅಡ್ಡಿಪಡಿಸುವುದಿಲ್ಲ. 15 ದಿನಗಳೊಳಗೆ ಪಟ್ಟಣ ವ್ಯಾಪಾರ ಸಮಿತಿಯ ಸಭೆ ನಡೆಸುತ್ತೇನೆ. ಬೀದಿ ಬದಿ ವ್ಯಾಪಾರ ವಲಯ ಗುರುತಿಸಿ ಅಲ್ಲಿ ಎಲ್ಲ‌ ಸೌಕರ್ಯ ಕಲ್ಪಿಸಿ ಗೌರವಯುತವಾಗಿ ವ್ಯಾಪಾರ ನಡೆಸಲು ವ್ಯವಸ್ಥೆ ಕಲ್ಪಿಸುತ್ತೇವೆ' ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಸಂಘದ ಗೌರವಾಧ್ಯಕ್ಷ ಬಿ. ಕೆ . ಇಮ್ತಿಯಾಜ್, 'ಕಾನೂನುಬಾಹಿರವಾಗಿ ತೆರವು ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಬಡ ವ್ಯಾಪಾರಿಗಳ ಜೊತೆ ಅನಾಗರಿಕವಾಗಿ, ಅಮಾನುಷವಾಗಿ ವರ್ತಿಸಿದ್ದಾರೆ. ಪಾಲಿಕೆ ದಬ್ಬಾಳಿಕೆಯಿಂದ ಬಡ ವ್ಯಾಪಾರಿಗಳ ಎಷ್ಟೋ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ' ಎಂದು ದೂರಿದರು.

ನಗರದ ರಸ್ತೆ ಪಾದಚಾರಿ ಮಾರ್ಗವನ್ನು ಸ್ವಚ್ಛವಾಗಿಟ್ಟು ನಿರ್ಮಲ ನಗರ ನಿರ್ಮಿಸಲಾಗದು. ಇಲ್ಲಿನ ಜನರ ಬದುಕನ್ನೂ ಸುಂದರವಾಗಿಟ್ಟರೆ ಮಾತ್ರ ಇದು ಸಾಧ್ಯ.
ಮನೋಜ್ ವಾಮಂಜೂರು, ವಕೀಲ

'ನಾವು ಹೋರಾಟಕ್ಕೆ ಇಳಿದಿರುವುದು ಒಂದೊಂದು ಗಾಡಿ ಇಟ್ಟು ಬದುಕು ಕಟ್ಟಿಕೊಳ್ಳಲು ವ್ಯಾಪಾರ ನಡೆಸುವವರ ಪರ. ಒಬ್ಬೊಬ್ಬರು 200 ತಳ್ಳು ಗಾಡಿ ಹೊಂದಿದ್ದಾರೆ ಎಂಬ ಆರೋಪವನ್ನು ಮೇಯರ್ ‌ಸಾಬೀತುಪಡಿಸಿದರೆ ನಾವು ಹೋರಾಟವನ್ನು ತ್ಯಜಿಸುತ್ತೇವೆ' ಎಂದು ಸವಾಲು ಹಾಕಿದರು.

‘ನಗರದಲ್ಲಿ 8,500 ಮಂದಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಕ್ಕೆ ಸಾಲ ಕೊಡಲಾಗಿದೆ. ಆದರೆ 667 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಸಾಧ್ಯ ಆಗಿಲ್ಲ. ಪಾಲಿಕೆ ಹಾಕಿರುವ ಷರತ್ತು ಬೀದಿ ಬದಿ ವ್ಯಾಪಾರಕ್ಕೆ ಸಂಬಂಧಿಸಿದ ಕಾನೂನಿಗೆ ವಿರುದ್ಧವಾಗಿದೆ.  ಬಿಜೆಪಿ ಎಂದರೆ ಬುಲ್ಡೋಜರ್ ಪಕ್ಷ ಎನ್ನುವುದನ್ನು ಮಂಗಳೂರಿನಲ್ಲಿ ಟೈಗರ್ ಕಾರ್ಯಾಚರಣೆ ಮೂಲಕ ಸಾಬೀತು ಪಡಿಸಿದ್ದಾರೆ’ ಎಂದರು.

ರೈತ ಮುಖಂಡ ಯಾದವ ಶೆಟ್ಟಿ 'ಪಾಲಿಕೆಯು ಮೇಯರ್ ಅಥವಾ ಸದಸ್ಯರ ಪಿತ್ರಾರ್ಜಿತ ಆಸ್ತಿ ಅಲ್ಲ. ಇದು ನಮ್ಮ ಭೂಮಿ. ಬೀದಿ ಬದಿ ವ್ಯಾಪಾರ ನಮ್ಮ ಹಕ್ಕು. ನಮ್ಮ ಜಿಲ್ಲೆಯಲ್ಲಿ ಬಿಜೆಪಿಯ ಉತ್ತರ ಪ್ರದೇಶ ಮಾದರಿ ನಡೆಯದು' ಎಂದು ಹೇಳಿದರು.

ಸಾಮರಸ್ಯ ಮಂಗಳೂರು ಸಂಘಟನೆಯ ಮಂಜುಳಾ ನಾಯಕ್, ‘ಶಾಸಕ ವೇದವ್ಯಾಸ ಕಾಮತ್ ಗೆ ತಾಕತ್ತಿದ್ದರೆ ಎಲ್ಲ ಬೀದಿ ಬದಿ ವ್ಯಾಪಾರಿಗಳಿಗೆ ಕೆಲಸ ಕೊಡಲಿ. ಆಗ ಅವರು ಬೀದಿ ವ್ಯಾಪಾರ ನಿಲ್ಲಿಸುತ್ತಾರೆ' ಎಂದು ಸವಾಲು ಹಾಕಿದರು.

ಪ್ರಮುಖರಾದ ಎಂ. ದೇವದಾಸ್ , ಬಿ.ಎಂ.ಭಟ್, ಸುನಿಲ್ ಕುಮಾರ್ ಬಜಾಲ್, ಮನೋಜ್ ವಾಮಂಜೂರು, ಸಂತೋಷ್ ಕುಮಾರ್‌ ಬಜಾಲ್, ಜಯಂತಿ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಶೇಖರ್ ಮೊದಲಾದವರು ಮಾತನಾಡಿದರು.

ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಾಫ, ಪ್ರಧಾನ ಕಾರ್ಯದರ್ಶಿ ಹರೀಶ್‌ ಪೂಜಾರಿ, ಪ್ರಮುಖರಾದ ಕರುಣಾಕರ್, ಪದ್ಮಾವತಿ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ವಿ. ಕುಕ್ಯಾನ್, ಸೀತಾರಾಂ ಬೇರಿಂಜ, ಮುಹಮ್ಮದ್ ಕುಂಜತ್ತಬೈಲ್, ನವೀನ್ ಕೊಂಚಾಡಿ, ರಿಜ್ವಾನ್ ಹರೇಕಳ, ಮೀನ ಟೆಲ್ಲಿಸ್, ಮಂಜುಳಾ ನಾಯಕ್, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸುರೇಶ್ ಕುಮಾರ್, ಶೇಖರ್, ದಯಾನಂದ್ ಶೆಟ್ಟಿ , ಕವಿತಾ ವಾಸು, ಭಾರತಿ ಬೋಳಾರ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

‘ಮೇಯರ್‌ ಕೂಡ ಬೀದಿ ಬದಿ ವ್ಯಾಪಾರಿ ಮಗ’

'ಮೇಯರ್ ಸುಧೀರ್ ಶೆಟ್ಟಿ ಅವರೂ ಕೂಡ ಒಬ್ಬ ಬೀದಿ ಬದಿ ವ್ಯಾಪಾರಿ ಮಗ ಎಂಬುದು ನೆನಪಿರಲಿ. ಅವರ ತಂದೆ ಇಟ್ಟಿದ್ದ ಗೂಡಂಗಡಿಯನ್ನು ಇದೇ ರೀತಿ ತೆರವು ಮಾಡುತ್ತಿದ್ದರೆ ಇಂದು ಸುಧೀರ್ ಶೆಟ್ಟಿ ಮೇಯರ್ ಆಗುತ್ತಿರಲಿಲ್ಲ. ಮೇಯರ್ ಆಗಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವುದು ಅಮಾನವೀಯ' ಎಂದು ಬಿ.ಕೆ.ಇಮ್ತಿಯಾಜ್‌ ಹೇಳಿದರು.

ಎಸ್‌ಡಿಟಿಯುಗೆ ಅವಕಾಶ ನಿರಾಕರಣೆ

ಸೋಷಿಯಲ್ ಡೆಮಾಕ್ರೆಟಿಕ್ ಕಾರ್ಮಿಕ ಸಂಘಟನೆ (ಎಸ್‌ಡಿಟಿಯು) ಕಾರ್ಯಕರ್ತರು ತಮ್ಮ ಸಂಘಟನೆಯ ಬಾವುಟ ದೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದರು. ಇದಕ್ಕೆ ಬೀದಿ ಬದಿಬದಿ ವ್ಯಾಪಾರಿಗಳ ಸಂಘಟನೆಯ ಪ್ರಮುಖರು ಆಕ್ಷೇಪಿಸಿದರು. ‘ಸಮಾನ ಮನಸ್ಕರ ಸಂಘಟನೆ ಸಮಸ್ತ ಧರ್ಮಗಳ ಪರವಾಗಿದೆ. ಧರ್ಮಾಂಧ ಸಂಘಟನೆಗಳ ಜೊತೆ ಗುರುತಿಸಿಕೊಂಡವರ ಬೆಂಬಲ ನಮಗೆ ಬೇಡ. ಕೆಂಬಾವುಟ ಬಿಟ್ಟು ಬೇರೆ ಬಾವುಟ ಪ್ರದರ್ಶನಕ್ಕೆ ಅವಕಾಶ ಇಲ್ಲ’ ಎಂದು  ಅವರನ್ನು ಹಿಂದಕ್ಕೆ ಕಳುಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT