ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ದೀಪ ಇಲ್ಲದ ಬೀದಿ: ತೋಡಿಲ್ಲದ ರೋಡು

Published 21 ಫೆಬ್ರುವರಿ 2024, 7:07 IST
Last Updated 21 ಫೆಬ್ರುವರಿ 2024, 7:07 IST
ಅಕ್ಷರ ಗಾತ್ರ

ಮಂಗಳೂರು: ನಗರಕ್ಕೆ ಹೊಂದಿಕೊಂಡಿದ್ದರೂ ಗ್ರಾಮೀಣ ಪ್ರದೇಶದ ಪ್ರಶಾಂತ ಅನುಭವ ನೀಡುವ ಮಾಲೆಮಾರ್, ಮಾಲಾಡಿ ಕೋರ್ಟ್ ಭಾಗದ ನಿವಾಸಿಗಳು ಹಲವು ‘ಇಲ್ಲ’ಗಳ ನಡುವೆ ದಿನ ಕಳೆಯುತ್ತಿದ್ದಾರೆ.

ಮಾಲಾಡಿ ಕೋರ್ಟ್‌ನ ಜಾರಂದಾಯ ಸ್ಥಾನದಿಂದ ಎಂ.ವಿ.ಶೆಟ್ಟಿ ಕಾಲೇಜು ಸೇತುವೆಯವರೆಗೆ ಬೀದಿ ದೀಪದ ವ್ಯವಸ್ಥೆ ಇಲ್ಲ. ಸಂಜೆಯ ವೇಳೆ ದಾರಿದೀಪಗಳಿಲ್ಲದ ರಸ್ತೆಯಲ್ಲಿ ಜನರು ಭಯದಿಂದಲೇ ಹೆಜ್ಜೆ ಹಾಕುತ್ತಾರೆ. ಕಳ್ಳರ ಕಾಟದ ಆತಂಕ ಒಂದೆಡೆಯಾದರೆ, ರಸ್ತೆಯ ಅಕ್ಕಪಕ್ಕ ಪೊದೆಗಳಿರುವುದರಿಂದ ಸರೀಸೃಪಗಳು ರಸ್ತೆಯ ಮೇಲೆ ಚಲಿಸಿದರೂ ಗೊತ್ತಾಗದು ಎಂಬುದು ನಿವಾಸಿಗಳ ಹೇಳಿಕೆ.

‘ನಸುಕಿನಲ್ಲಿ ವಾಕಿಂಗ್ ಹೊರಟರೆ, ಈ ರಸ್ತೆಯಲ್ಲಿ ಸಾಗುವಾಗ ಭಯವಾಗುತ್ತದೆ. ಉದ್ದಕ್ಕೂ ಬೀದಿದೀಪ ಇಲ್ಲ. ಮಹಾನಗರ ಪಾಲಿಕೆ ಇಲ್ಲಿ ದಾರಿದೀಪ ಅಳವಡಿಸಿ, ನಮಗೆ ಮುಕ್ತವಾಗಿ ಓಡಾಡುವ ವಾತಾವರಣ ಕಲ್ಪಿಸಬೇಕು’ ಎನ್ನುತ್ತಾರೆ ಸ್ಥಳೀಯರಾದ ಮೀನಾ.

‘ಬೀದಿದೀಪ ಅಳವಡಿಸುವಂತೆ ಡಿಸೆಂಬರ್‌ನಲ್ಲಿ ನಡೆದ ಮೇಯರ್ ಫೋನ್ ಇನ್ ಕಾರ್ಯಕ್ರಮದಲ್ಲಿ ವಿನಂತಿಸಿದ್ದೇವೆ. ನಂತರ ಪಾಲಿಕೆಯ ಆಯುಕ್ತರನ್ನು ಖುದ್ದು ಭೇಟಿ ಮಾಡಿ, ಮನವಿ ಸಲ್ಲಿಸಿದ್ದೇವೆ. ವಾರ್ಡ್ ಸದಸ್ಯರ ಬಳಿಯೂ ಸಮಸ್ಯೆ ಹೇಳಿಕೊಂಡಿದ್ದೇವೆ. ಆದರೆ, ಇನ್ನೂ ಬೀದಿದೀಪದ ವ್ಯವಸ್ಥೆಯಾಗಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಭಗೀರಥ ಐ.

 ‘ಮಂಜಾಲಕಟ್ಟೆಯಿಂದ ಜಾರಂದಾಯ ಸ್ಥಾನದವರೆಗೆ ಸಮರ್ಪಕವಾದ ತೋಡು ಇಲ್ಲ. ಇದರಿಂದಾಗಿ ಅಲ್ಲಲ್ಲಿ ಕೊಳಚೆ ನೀರು ನಿಂತಿರುತ್ತದೆ. ಕೆಲವು ಕಡೆಗಳಲ್ಲಿ ಹೊಸದಾಗಿ ತೋಡು ಮಾಡಿದ್ದು, ಅದು ಅತ್ಯಂತ ಕಿರಿದಾಗಿದೆ. ತೋಡಿನ ನಡುವೆ ಕೆಲವರು ಮಣ್ಣು ಹಾಕಿ, ನಿವೇಶನಕ್ಕೆ ತೆರಳಲು ದಾರಿ ಮಾಡಿಕೊಂಡಿದ್ದಾರೆ. ಸರಿಯಾದ ತೋಡು ಇಲ್ಲದ ಕಾರಣ ಮಳೆಗಾಲದಲ್ಲಿ ರಸ್ತೆ ಹೊಳೆಯಂತಾಗುತ್ತದೆ’ ಎಂದು ಅವರು ಬೇಸರಿಸಿದರು.

ಅಲ್ಲಲ್ಲಿ ಪೈಪ್‌ಲೈನ್‌ಗಾಗಿ ರಸ್ತೆ ಅಗೆದು ಅದನ್ನು ಹಾಗೆಯೇ ಬಿಡಲಾಗಿದೆ. ಹೆಚ್ಚಿನ ಕಡೆಗಳಲ್ಲಿ ಉತ್ತಮವಾದ ರಸ್ತೆಗಳು ಇವೆ. ಮಾಲೆಮಾರ್‌ನಿಂದ ಕೊಟ್ಟಾರ ಜಲ್ಲಿಗುಡ್ಡೆಗೆ ತಲುಪುವ ರಸ್ತೆಯಲ್ಲಿ ಚರಂಡಿ ಪೈಪ್‌ ಅಳವಡಿಸಲು ಅಗೆತ ಮಾಡಿದ್ದು, ಅದನ್ನು ಹಾಗೆಯೇ ಬಿಡಲಾಗಿದೆ. ಹೀಗಾಗಿ ಕಳೆದ ವರ್ಷ ಮಾಡಿದ್ದ ರಸ್ತೆ ಈಗಲೇ ಹಾಳಾಗಿದೆ ಎನ್ನುತ್ತಾರೆ ನಿವೃತ್ತ ಅಧಿಕಾರಿ ಜಯಕೃಷ್ಣನ್.

ಜನರಿಗೆ ಓಡಾಡಲು ಸಮಸ್ಯೆಯಾಗುತ್ತಿದ್ದು ಬೀದಿ ದೀಪ ಅಳವಡಿಸುವಂತೆ ಹಲವಾರು ಬಾರಿ ಮಹಾನಗರ ಪಾಲಿಕೆ ಅಧಿಕಾರಿಗಳು ಮೇಯರ್‌ಗೆ ವಿನಂತಿಸಿದ್ದೇವೆ.
– ಭಗೀರಥ ಎಂ ಮಾಲಾಡಿ, ಕೋರ್ಟ್ ನಿವಾಸಿ

‘ಮಾರ್ಗಸೂಚಿ ಫಲಕ ಇಲ್ಲ’

ಕೊಟ್ಟಾರಚೌಕಿಯು ಹಲವು ರಸ್ತೆಗಳ ಸಂಗಮವಾಗಿದೆ. ಇಲ್ಲಿ ರಸ್ತೆ ನಿರ್ಮಾಣದ ವೇಳೆ ಮಾರ್ಗಸೂಚಿ ಫಲಕಗಳನ್ನು ತೆರವು ಮಾಡಲಾಗಿತ್ತು. ನಂತರ ಇಲ್ಲಿ ಸೂಚನಾ ಫಲಕಗಳನ್ನು ಹಾಕಿಲ್ಲ. ಇದರಿಂದ ಹೊರ ಪ್ರದೇಶಗಳಿಂದ ಮಂಗಳೂರಿಗೆ ಬರುವವರಿಗೆ ಯಾವ ರಸ್ತೆಯಲ್ಲಿ ಸಾಗಬೇಕೆಂದು ಗೊಂದಲವಾಗುತ್ತದೆ. ಈ ಬಗ್ಗೆ ಸಂಚಾರ ಪೊಲೀಸ್ ಠಾಣೆಗೆ ಮನವಿ ನೀಡಲಾಗಿತ್ತು. ಅವರು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರ ಜೊತೆ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಹಿಂಬರಹ ಕೊಟ್ಟು ತಿಂಗಳು ಕಳೆದಿವೆ. ಆದರೆ ಈವರೆಗೂ ಮಾರ್ಗಸೂಚಿ ಫಲಕಗಳನ್ನು ಹಾಕಿಲ್ಲ ಎಂದು ನಿವೃತ್ತ ಅಧಿಕಾರಿ ಜಯಕೃಷ್ಣನ್ ಹೇಳಿದರು.

‘ಸ್ಮಾರ್ಟ್ ಸಿಟಿಯಿಂದ ವಿಳಂಬ’

‘ಬೀದಿದೀಪ ಮೂಲ ಸೌಕರ್ಯಗಳಲ್ಲಿ ಒಂದಾಗಿದ್ದು ಇದನ್ನು ಒದಗಿಸುವುದು ಪಾಲಿಕೆಯ ಹೊಣೆ. ಮಾಲಾಡಿ ಕೋರ್ಟ್‌ನ ಜಾರಂದಾಯ ಸ್ಥಾನದ ಪ್ರದೇಶ ಮಾತ್ರವಲ್ಲ ನನ್ನ ವಾರ್ಡ್‌ನ ಬಹುತೇಕ ಕಡೆಗಳಲ್ಲಿ ಬೀದಿದೀಪದ ಸಮಸ್ಯೆ ಇದೆ. ಗುಡ್ಡ ಪ್ರದೇಶ ಇರುವ ಕೆಲವು ಕಡೆಗಳಲ್ಲಿ ದೀಪಗಳಿಲ್ಲ. ತೋಡಿನ ಬದಿಯಲ್ಲಿ ಇರುವ ಮನೆಗಳಿಗೂ ಸಮಸ್ಯೆಯಾಗಿದೆ. ಅಲ್ಲಿ ಕಂಬಗಳನ್ನು ಹಾಕಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಳವಡಿಸಬೇಕಾಗಿರುವ ಬೀದಿದೀಪಗಳ ಪೂರೈಕೆ ವಿಳಂಬವಾದ ಕಾರಣ ಬೀದಿ ದೀಪಗಳ ಅಳವಡಿಕೆಗೆ ಹಿನ್ನಡೆಯಾಗಿದೆ. ಈ ಬಗ್ಗೆ ಮೇಯರ್ ವಿಶೇಷ ಪ್ರಯತ್ನ ನಡೆಸಿದ್ದಾರೆ’ ಎಂದು 18ನೇ ವಾರ್ಡ್‌ನ ಪಾಲಿಕೆ ಸದಸ್ಯೆ ಗಾಯತ್ರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT