ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಕಟ್ಟುನಿಟ್ಟಿನ ಜಾರಿಗೆ ಕ್ರಮ

ಕೋವಿಡ್‌–19 ನಿಯಂತ್ರಣ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 29 ಏಪ್ರಿಲ್ 2021, 4:58 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಹೊಸ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಕೋವಿಡ್ ಔಷಧಿಗಳು, ಆಮ್ಲಜನಕ, ರೋಗ ನಿರೋಧಕ ಲಸಿಕೆ ಸಮರ್ಪಕ ನಿರ್ವಹಣೆ ಮಾಡಬೇಕು. ರೈತರು, ಕೈಗಾರಿಕೆಗಳು ಸೇರಿದಂತೆ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಬುಧವಾರ ನಡೆದ ಕೋವಿಡ್-19 ಸೋಂಕು ನಿಯಂತ್ರಣ, ಚಿಕಿತ್ಸೆ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕರು ಅಗತ್ಯವಸ್ತು ಖರೀದಿಗೆ ನಿಗದಿಪಡಿಸಿರುವ ಸಮಯ ಹೊರತುಪಡಿಸಿ, ಅನವಶ್ಯಕವಾಗಿ ಮನೆಯಿಂದ ಹೊರಗೆ ಹೋಗಬಾರದು. ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಜಾಗೃತರಾಗಿ ಇರುವ ಮೂಲಕ ಸಹಕರಿಸಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರು, ಕೈಗಾರಿಕೆಗಳಿಗೆ ತೆರಳುವ ಕಾರ್ಮಿಕರು ಹಾಗೂ ಕೃಷಿ ಚಟುವಟಿಕೆಗಳಿಗೆ ಅವಕಾಶ ಮಾಡಿ ಕೊಡಬೇಕು ಎಂದು ತಿಳಿಸಿದರು.

ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಮಾತನಾಡಿ, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಮೂಲ ಸೌಕರ್ಯ, ಆಮ್ಲಜನಕ ಸೌಲಭ್ಯ ಒದಗಿಸಬೇಕು. ಗುಣ ಮಟ್ಟದ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಕೋವಿಡ್ ರೋಗಿಗಳನ್ನು ಹೊರತುಪಡಿಸಿ ಇತರೆ ಸಾಮಾನ್ಯ ತುರ್ತುಚಿಕಿತ್ಸೆ ಪಡೆಯಲು ಬಂದ ರೋಗಿಗಳನ್ನು ಆದ್ಯತೆಯ ಮೇಲೆ ಚಿಕಿತ್ಸೆ ನೀಡಬೇಕು. ಅಗತ್ಯ ಕಂಡುಬಂದಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಜಿಲ್ಲೆಯಲ್ಲಿ ಸದ್ಯ ಆಮ್ಲಜನಕದ ಕೊರತೆ ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಆಮ್ಲಜನಕ ಪೂರೈಕೆಯ ಬಗ್ಗೆ ಗಮನಹರಿಸಲು ಕಾರ್ಯಪಡೆ ರಚಿಸಲಾಗುವುದು. ಆಮ್ಲಜನಕ ಏಜೆನ್ಸಿ ಹಾಗೂ ಪೂರೈಕೆದಾರರನ್ನು ಸಂಪರ್ಕಿಸಿ, ಇನ್ನೂ ಹೆಚ್ಚಿನ ಆಮ್ಲಜನಕ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕರಾದ ಡಾ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್ ಯು., ಹರೀಶ್ ಪೂಂಜ, ಉಮಾನಾಥ್ ಎ. ಕೋಟ್ಯಾನ್, ಪ್ರತಾಪ್‌ಸಿಂಹ ನಾಯಕ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮೇಯರ್ ಪ್ರೇಮಾನಂದ ಶೆಟ್ಟಿ, ಪೊಲೀಸ್‌ ಕಮಿಷನರ್‌ ಎನ್‌. ಶಶಿ ಕುಮಾರ್, ಡಿಸಿಪಿ ಹರಿರಾಂ ಶಂಕರ್, ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT