ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಯ ಕ್ಷೇತ್ರ: ಬಿಜೆಪಿಯಲ್ಲಿ ಅಪಸ್ವರ; ಕಾಂಗ್ರೆಸ್‌ನಲ್ಲಿ ಪ್ರತಿಭಟನೆ ಕಿಚ್ಚು

ಸುಳ್ಯ ಕ್ಷೇತ್ರ: ಕಾಂಗ್ರೆಸ್‌ ಅಭ್ಯರ್ಥಿ ಬದಲಿಸಲು ಕಾರ್ಯಕರ್ತರ ಪಟ್ಟು
Last Updated 30 ಮಾರ್ಚ್ 2023, 4:22 IST
ಅಕ್ಷರ ಗಾತ್ರ

ಮಂಗಳೂರು: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮುಂಚಿತವಾಗಿ ಅಭ್ಯರ್ಥಿ ಘೋಷಣೆ ಮಾಡಿರುವುದು ಕಾಂಗ್ರೆಸ್‌ಗೆ ತಿರುಗುಬಾಣವಾಗಿದೆ. ಅಭ್ಯರ್ಥಿ ಬದಲಿಸುವಂತೆ ಕಾರ್ಯಕರ್ತರು ಪಟ್ಟು ಹಿಡಿದು, ಪ್ರತಿಭಟನೆಗಿಳಿದಿದ್ದಾರೆ.

ಸುಳ್ಯ ಶಾಸಕರಾಗಿರುವ ಸಚಿವ ಎಸ್. ಅಂಗಾರ ವಿರುದ್ಧ ಬಿಜೆಪಿಯ ಒಂದು ಗುಂಪು ಸಿಡಿದೆದ್ದಿದೆ. ಈ ಬಾರಿ ಅವರಿಗೆ ಟಿಕೆಟ್ ನೀಡದಂತೆ ಹೈಕಮಾಂಡ್‌ಗೆ ಸಂದೇಶ ರವಾನಿಸಿದೆ.

ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಸುಳ್ಯ ಮೀಸಲು ಕ್ಷೇತ್ರಕ್ಕೆ ಜಿಗಣಿ ಕೃಷ್ಣಪ್ಪ ಅವರ ಹೆಸರು ಪ್ರಕಟವಾಗಿದೆ. ಇದರ ಬೆನ್ನಲ್ಲೇ ಸ್ಥಳೀಯ ಕಾರ್ಯಕರ್ತರು, ಕೃಷ್ಣಪ್ಪ ಅವರನ್ನು ಬದಲಿಸಿ, ಎಚ್‌.ಎಂ. ನಂದಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು. ಇದರ ಮುಂದುವರಿದ ಭಾಗವಾಗಿ ಬುಧವಾರ 10ಕ್ಕೂ ಹೆಚ್ಚು ಬಸ್‌ಗಳಲ್ಲಿ ಮಂಗಳೂರಿಗೆ ಬಂದ ಸುಳ್ಯ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರು, ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ಕುಳಿತು, ‘ನಾಯಕರ ಅಭ್ಯರ್ಥಿ ನಮಗೆ ಬೇಡ, ಕಾರ್ಯಕರ್ತರ ಅಭ್ಯರ್ಥಿ ಬೇಕು’ ಎಂದು ಆಗ್ರಹಿಸಿದರು.

‘ಕೃಷ್ಣಪ್ಪ ಮೂಲತಃ ಸಕಲೇಶಪುರದವರು, ನಂದಕುಮಾರ್ ಮಡಿಕೇರಿಯವರು. ಇಬ್ಬರೂ ಕ್ಷೇತ್ರದ ಹೊರಗಿನವರೇ. ಇಬ್ಬರನ್ನೂ ಕ್ಷೇತ್ರದ ಉಸ್ತುವಾರಿಯಾಗಿ ಪಕ್ಷ ನೇಮಿಸಿತ್ತು. ನಂದಕುಮಾರ್ ಅವರು ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿ, ಕಾರ್ಯಕರ್ತರಿಗೆ ಹತ್ತಿರವಾಗಿದ್ದಾರೆ. ಕೃಷ್ಣಪ್ಪ ಅವರು ಪಕ್ಷದ ನಾಯಕರಿಗೆ ಆಪ್ತರು. ಹೀಗಾಗಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಪಕ್ಷದ ಕಾರ್ಯಕರ್ತರೊಬ್ಬರು ಹೇಳಿದರು.

‘ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ. 30 ವರ್ಷಗಳ ಏಕಾಧಿಪತ್ಯ ಆಡಳಿತದಿಂದ ಕ್ಷೇತ್ರವನ್ನು ಕಾಂಗ್ರೆಸ್ ಹಿಡಿತಕ್ಕೆ ಪಡೆಯಲು ಅವಕಾಶ ಬಾಗಿಲಿಗೆ ಬಂದಿರುವಾಗ, ಗೆಲ್ಲುವ ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿಸಬೇಕು. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸದೆ, ಅಭ್ಯರ್ಥಿ ಆಯ್ಕೆ ಮಾಡಿದ್ದು ಸರಿಯಲ್ಲ’ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಜಿಲ್ಲಾ ಘಟಕದ ಅಧ್ಯಕ್ಷರ ಮೂಲಕ ವರಿಷ್ಠರಿಗೆ ಕಾರ್ಯಕರ್ತರ ಅಳಲನ್ನು ತಲುಪಿಸಿದ್ದು, ಕೆಪಿಸಿಸಿ ಪ್ರಮುಖರನ್ನೂ ಭೇಟಿ ಮಾಡಲಿದ್ದೇವೆ. ವರಿಷ್ಠರು ನಿಲುವು ಬದಲಿಸದಿದ್ದರೆ, ಮುಂದಿನ ನಮ್ಮ ಹೆಜ್ಜೆಯನ್ನು ಅವರು ಕಾದು ನೋಡಲಿ’ ಎಂದು ಪದಾಧಿಕಾರಿಯೊಬ್ಬರು ಎಚ್ಚರಿಸಿದರು.

2004ರಿಂದ 2018ರವರೆಗೆ ಸತತವಾಗಿ ಸ್ಥಳೀಯರಾದ ಡಾ. ಬಿ.ರಘು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಈ ಬಾರಿ ಅವರ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಜನರು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕಾಂಗ್ರೆಸ್‌ ಹೊಸ ಮುಖಕ್ಕೆ ಮಣೆ ಹಾಕಿದೆ.

ಬಿಜೆಪಿ ಪರ್ಯಾಯ ಅಭ್ಯರ್ಥಿ ಯಾರು?

‘ಬಿಜೆಪಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯರಾದ ಕಸ್ತೂರಿ ಪಂಜ, ಭಾಗೀರಥಿ ಮುರಳ್ಯ ಅವರು ಟಿಕೆಟ್‌ ದೊರೆತರೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ. ಎಸ್‌.ಅಂಗಾರ ವಿರುದ್ಧ ಅಸಮಾಧಾನ ಇದ್ದರೂ, ಪರ್ಯಾಯ ಸಮರ್ಥ ಅಭ್ಯರ್ಥಿ ಇಲ್ಲ. ಕೊನೆ ಕ್ಷಣದಲ್ಲಿ ಪಕ್ಷ ಅಂಗಾರ ಅವರಿಗೇ ಟಿಕೆಟ್ ನೀಡುವ ಸಾಧ್ಯತೆ ಇದೆ. ಪಕ್ಷ ಟಿಕೆಟ್ ನೀಡಿದರೆ ಮತ್ತೆ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿ ಅಂಗಾರ ಇದ್ದಾರೆ’ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

‘ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. ಎಸ್. ಅಂಗಾರ ಅವರೇ ಮುಂದಿನ ಅಭ್ಯರ್ಥಿ ಆಗಲಿದ್ದಾರೆ. ಬೂತ್ ಸಮಿತಿಯಿಂದ ಅವರ ಹೆಸರನ್ನೇ ಅಂತಿಮಗೊಳಿಸಿ, ಹೈಕಮಾಂಡ್‌ಗೆ ಕಳುಹಿಸಲಾಗಿದೆ’ ಎಂದು ಬಿಜೆಪಿ ಸುಳ್ಯ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್ ಕಂಜಿಪಿಲಿ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT