ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ ದರ್ಶನ್ ಯೋಜನೆ ಜಾರಿಗೆ ಆದ್ಯತೆ -ಸ್ಮೃತಿ ಇರಾನಿ

ಕುಕ್ಕೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ
Last Updated 28 ಡಿಸೆಂಬರ್ 2022, 4:20 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ‘ಪವಿತ್ರ ಶ್ರದ್ಧಾಕೇಂದ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೇಂದ್ರ ಸರ್ಕಾರದ ‘ಸ್ವದೇಶಿ ದರ್ಶನ್’ ಯೋಜನೆಯನ್ನು ಜಾರಿಗೆ ತರಲು ಉತ್ಸುಕಳಾಗಿದ್ದೇನೆ. ದೇವಳದಿಂದ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳಿಸಿ, ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಬಂದರೆ ಖಂಡಿತವಾಗಿಯೂ ಯೋಜನೆ ಜಾರಿಗೊಳಿಸಲಾಗುತ್ತದೆ’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ ಅವರು ದೇವಳದ ಕಿರುಷಷ್ಠಿ ಮಹೋತ್ಸವದ ಕಾರ್ತಿಕ ವೇದಿಕೆಯಲ್ಲಿ ‘ಆಧುನಿಕ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ’ ಎಂಬ ವಿಷಯವಾಗಿ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದರು.

‘ಕ್ಷೇತ್ರಕ್ಕೆ ಬಂದಾಗ ದೇವಳದಿಂದ ನಡೆಸಲಾಗುವ ವಿದ್ಯಾಸಂಸ್ಥೆಗಳ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಲು ದೇವಳದ ಆಡಳಿತ ಸಮಿತಿ ಅಧ್ಯಕ್ಷರು ವಿನಂತಿಸಿದ್ದರು. ಆ ಪ್ರಕಾರ ಗ್ರಾಮೀಣ ಯುವ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅವಕಾಶ ದೊರಕಿದೆ’ ಎಂದು ಹೇಳಿದರು.

ನಟಿಯಾಗಿ ಮತ್ತು ರಾಜಕಾರಣಿ ಯಾಗಿ ತಮ್ಮ ಕರ್ತವ್ಯವನ್ನು ಯಾವ ರೀತಿ ನಿಭಾಯಿಸಿದ್ದೀರಿ ಎಂಬ ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ
ಉತ್ತರಿಸಿದ ಕೇಂದ್ರ ಸಚಿವರು, ‘ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತೆ. ಅಲ್ಲದೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದೇನೆ. ಅವು ಜೀವನ ಮೌಲ್ಯ ಮತ್ತು ದೇಶ ಸೇವೆಗೆ ಪ್ರೇರಣೆ ನೀಡುತ್ತದೆ. ಪರೋಪಕಾರ, ದೇಶ ಸೇವೆ ಮತ್ತು ಜನತಾ ಸೇವೆಯ ಮಹತ್ವವನ್ನು ಆರ್‌ಎಸ್‌ಎಸ್‌ನಿಂದ ಕಲಿತುಕೊಂಡೆ’ ಎಂದರು.

ಮಹಿಳೆಯರಿಗೆ ಏನಾದರೂ ಸಮಸ್ಯೆಯಾದರೆ ಸಂಪರ್ಕಿಸುವ ಬಗ್ಗೆ ಕನ್ನಿಕಾ ಕಳಿಗೆ ಅವರ ಪ್ರಶ್ನೆಗೆ ಉತ್ತರಿಸಿ, ‘ನನ್ನ ಇಮೇಲ್‌ ಐಡಿ ಮತ್ತು ನನ್ನ ಪೋನ್ ನಂಬರ್ ನನ್ನ ವೆಬ್ ಸೈಟ್‌ನಲ್ಲಿ ಇದೆ. ಅದನ್ನು ಸಂಪರ್ಕಿಸಿದರೆ ತಕ್ಷಣ ಸ್ಪಂದಿಸುತ್ತೇನೆ. ಮಹಿಳೆಯರು ತಮಗೆ ಸಂಕಷ್ಟ ಎದುರಾದಾಗ ಹೆಲ್ಪ್ ಲೈನ್ ಸಂಖ್ಯೆ 1098ಗೆ ಕರೆ ಮಾಡಬಹುದು. ಪ್ರತಿ ದಿನ ಸುಮಾರು 70 ಲಕ್ಷ ಕರೆಗಳು ಇದಕ್ಕೆ ಬರುತ್ತಿವೆ. ಇದಕ್ಕೆ ಸಮರ್ಪಕವಾಗಿ ಸ್ಪಂದನೆ ನೀಡಲಾಗುತ್ತದೆ. ಭಾರತದ ಎಲ್ಲಾ ಜಿಲ್ಲೆಗಳ ಕೇಂದ್ರ ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ಕೇಂದ್ರಗಳನ್ನು ಕೇಂದ್ರ ಸರ್ಕಾರವು ಆರಂಭಿಸಿದೆ. ಈಗಾಗಲೇ ಸುಮಾರು 700ಕ್ಕೂ ಅಧಿಕ ಕೇಂದ್ರಗಳು ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿವೆ’ ಎಂದು ಹೇಳಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಕಾಲೇಜಿನ ಪ್ರಾಂಶುಪಾಲ ದಿನೇಶ್ ಪಿ.ಟಿ, ಎಸ್ಎಸ್‌ಪಿಯು ಕಾಲೇಜು ಪ್ರಾಂಶುಪಾಲ ಸೋಮಶೇಖರ್ ನಾಯಕ್ ಇದ್ದರು. ಪ್ರಾಧ್ಯಾಪಕ ಡಾ.ಗೋವಿಂದ ಎನ್.ಎಸ್. ಸ್ವಾಗತಿಸಿದರು. ವಿದ್ಯಾರ್ಥಿನಿ ಆಶಿತಾ ವಂದಿಸಿದರು. ಶ್ರುತಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT