ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು ಗಡಿ ನಿರ್ಬಂಧ ತೆರವಿಗೆ ಆನ್‌ಲೈನ್‌ ಅಭಿಯಾನ

ನಿರ್ಬಂಧ ತೆರವು ಮಾಡಿ; ಉದ್ಯೋಗ ಉಳಿಸಿ
Last Updated 2 ಆಗಸ್ಟ್ 2020, 12:43 IST
ಅಕ್ಷರ ಗಾತ್ರ

ಮಂಗಳೂರು: ಕೇರಳ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಗಡಿಯನ್ನು ಬಂದ್ ಮಾಡಿದ್ದು, ಉದ್ಯೋಗಕ್ಕಾಗಿ ನಗರಕ್ಕೆ ಬರುವ ಕಾಸರಗೋಡಿನ ಹಲವಾರು ಮಂದಿ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಗಡಿ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿ ಆನ್‌ಲೈನ್‌ ಅಭಿಯಾನ ಆರಂಭಿಸಿದ್ದಾರೆ.

ಟೀಂ ಸಹಯಾತ್ರಿ ತಂಡ ಓಪನ್ ದಿ ಬಾರ್ಡರ್‌ ಮತ್ತು ಸೇವ್‌ ಮೈ ಜಾಬ್‌ ಹ್ಯಾಷ್‌ ಟ್ಯಾಗ್‌ನೊಂದಿಗೆ ಈ ಅಭಿಯಾನ ಶುರು ಮಾಡಿದ್ದು, ಮಂಗಳೂರಿಗೆ ಬರುವ ಕಾಸರಗೋಡಿನ ಜನರಿಗೆ ಅನುಕೂಲ ಮಾಡಿಕೊಡುವಂತೆ ಕಾಸರಗೋಡು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಇ–ಮೇಲ್ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಕಾಸರಗೋಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುತ್ತಿದೆ. ಅನೇಕ ಜನರು ಉದ್ಯೋಗಕ್ಕಾಗಿ ಮಂಗಳೂರನ್ನು ಅವಲಂಬಿಸಿದ್ದು, ಗಡಿ ನಿರ್ಬಂಧ ತೆರವು ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ.

ನಗರದಲ್ಲಿ ಲೆಕ್ಕಪರಿಶೋಧಕರಾಗಿರುವ ಕಾಸರಗೋಡಿನ ಪೃಥ್ವಿರಾಜ್‌ ಜೆ.ಎಸ್‌., ‘ಕಾಸರಗೋಡು ಜಿಲ್ಲಾಡಳಿತ ಗಡಿ ಬಂದ್‌ ಮಾಡಿದ್ದರಿಂದ ನಾವು ಕಾಸರಗೋಡಿನಲ್ಲಿಯೇ ಉಳಿಯುವಂತಾಗಿದೆ. ಇದರಿಂದ ಉದ್ಯೋಗಕ್ಕೆ ಹೋಗಲಾಗದೇ ವೇತನ ಕಡಿತ ಅನುಭವಿಸುವಂತಾಗಿದೆ’ ಎಂದು ಹೇಳಿದ್ದಾರೆ.

‘ಕಾಸರಗೋಡು ಜಿಲ್ಲಾಡಳಿತದ ಆದೇಶದ ಪ್ರಕಾರ ಒಂದು ವೇಳೆ ನಾವು ಮಂಗಳೂರಿಗೆ ತೆರಳಿದರೆ, 28 ದಿನಗಳವರೆಗೆ ಕಾಸರಗೋಡಿಗೆ ಬರುವಂತಿಲ್ಲ. ಮಂಗಳೂರಿನಲ್ಲಿ ಉದ್ಯೋಗವಿದ್ದರೂ, ಅಲ್ಲಿ ವಸತಿ ಸೌಕರ್ಯವಿಲ್ಲದ ಶೇ 90 ರಷ್ಟು ಜನರಲ್ಲಿ ನಾನು ಒಬ್ಬ. ಮಂಗಳೂರಿನಲ್ಲಿ ಹೋಟೆಲ್‌, ಲಾಡ್ಜ್‌ಗಳಲ್ಲಿಯೂ ಹೊರ ರಾಜ್ಯಗಳ ಜನರಿಗೆ ರೂಂಗಳನ್ನು ಕೊಡುತ್ತಿಲ್ಲ. ಇಂತಹ ಪರಿಸ್ಥಿತಿಯಿಂದಾಗಿ ಕೆಲವರು ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ನಾಲ್ಕು ತಿಂಗಳಿಂದ ವೇತನ ರಹಿತ ರಜೆಯಲ್ಲಿ ಕಾಲ ಕಳೆಯುತ್ತಿದ್ದೇವೆ. ಕುಟುಂಬದ ನಿರ್ವಹಣೆಗೆ ನಾವು ಏನು ಮಾಡಬೇಕು' ಎಂದು ಹರಿಪ್ರಸಾದ್‌ ಕುಂಬಳೆ ಪ್ರಶ್ನಿಸಿದ್ದಾರೆ.

ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಇತ್ತೀಚೆಗೆ ಮಂಗಳೂರಿಗೆ ತೆರಳುವ ಬ್ಯಾಂಕ್ ನೌಕರರು ಹಾಗೂ ವೈದ್ಯರಿಗೆ ಅವಕಾಶ ನೀಡಿದ್ದು, ತಮ್ಮ ಖಾಸಗಿ ವಾಹನಗಳಲ್ಲಿಯೇ ಸಂಚರಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಉಳಿದ ನೌಕರರು ಮಾತ್ರ ಇತ್ತ ನೌಕರಿಗೂ ಬರಲಾಗದೇ, ಅತ್ತ ಕಾಸರಗೋಡಿನಲ್ಲೂ ಉಳಿಯಲಾಗದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕಾಸರಗೋಡಿನ ಬಹುತೇಕ ಜನರು ಮಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಕಂಪನಿಗಳು ಉದ್ಯೋಗಕ್ಕೆ ಹಾಜರಾಗಿ, ಇಲ್ಲವೇ ರಾಜೀನಾಮೆ ನೀಡಿ ಎಂದು ಒತ್ತಾಯಿಸುತ್ತಿವೆ.

ಕೇಂದ್ರದ ಆದೇಶಕ್ಕೂ ಬೆಲೆ ಇಲ್ಲವೇ?
ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಅಂತರರಾಜ್ಯ ಗಡಿ ನಿರ್ಬಂಧ ತೆರವು ಮಾಡಲಾಗಿದೆ. ಆದರೆ, ಕೇರಳ ಸರ್ಕಾರ ಮಾತ್ರ ಅನಗತ್ಯವಾದ ನಿರ್ಣಯಗಳಿಂದ ಗಡಿ ಭಾಗದ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಯಾವುದೇ ಆದೇಶಗಳಿಗೆ ಬೆಲೆ ಇಲ್ಲವೇ ಎಂದು ಗುರು ವಿಕ್ರಮ್‌ ಪ್ರಶ್ನಿಸಿದ್ದಾರೆ.

ಗಡಿ ನಿರ್ಬಂಧ ತೆರವುಗೊಳಿಸದೇ ನಮ್ಮಂಥ ಅನೇಕರು ನಿರುದ್ಯೋಗಿಗಳಾಗಿದ್ದೇವೆ. ಕೇಂದ್ರ ಸರ್ಕಾರದ ಆದೇಶದಂತೆ ಕೂಡಲೇ ಗಡಿ ನಿರ್ಬಂಧ ತೆರವು ಮಾಡಿ. ಕೇಂದ್ರದ ಆದೇಶದ ವಿರುದ್ಧ ಗಡಿ ಬಂದ್‌ ಮಾಡುವುದು ಎಷ್ಟು ಸರಿ ಎಂದು ಅಕ್ಷಯ ಕೃಷ್ಣ ಕೆ. ಕೇಳಿದ್ದಾರೆ.

*
ಗಡಿ ನಿರ್ಬಂಧ ತೆರವಿನ ಕುರಿತು ಕಾಸರಗೋಡು ಜಿಲ್ಲಾಧಿಕಾರಿ ಜತೆಗೆ ಚರ್ಚೆ ನಡೆಸಲಾಗುವುದು. ಆದಷ್ಟು ಶೀಘ್ರದಲ್ಲಿ ಸಮಸ್ಯೆ ಪರಿಹರಿಸಲಾಗುವುದು.
-ಡಾ.ಕೆ.ವಿ. ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ

*
ಸೋಮವಾರ (ಇದೇ 3) ಕಂದಾಯ ಸಚಿವ ಇ.ಚಂದ್ರಶೇಖರನ್‌ ಅವರೊಂದಿಗೆ ಸಭೆ ನಡೆಯಲಿದ್ದು, ಗಡಿ ನಿರ್ಬಂಧಕ ತೆರವಿನ ಕುರಿತು ಚರ್ಚಿಸಲಾಗುವುದು.
-ಡಾ.ಡಿ.ಸಜಿತ್‌ ಬಾಬು, ಕಾಸರಗೋಡು ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT