ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮಹಿಳೆಗೆ ಸುರಕ್ಷಿತ ವಾತಾವರಣವಿಲ್ಲ: ವಿಎಚ್‌ಪಿ ಆರೋಪ

ಹೆಣ್ಣು ಮಕ್ಕಳು ಕಿರುಗತ್ತಿ ಇಟ್ಟುಕೊಳ್ಳಲು ಅವಕಾಶ ನೀಡಿ: ವಿಎಚ್‌ಪಿ
Published 20 ಏಪ್ರಿಲ್ 2024, 12:41 IST
Last Updated 20 ಏಪ್ರಿಲ್ 2024, 12:41 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೆಣ್ಣುಮಕ್ಕಳಿಗೆ ರಕ್ಷಣೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಯುವತಿಯರ ಕೊಲೆ, ಅವರ ಮೇಲೆ ಅತ್ಯಾಚಾರ, ಆಸಿಡ್ ದಾಳಿಗಳು ಹೆಚ್ಚಿವೆ. ಹಾಗಾಗಿ ಹೆಣ್ಣುಮಕ್ಕಳು, ಸಿಖ್ಖ್ ಧರ್ಮದ ಮಹಿಳೆಯರಂತೆ ಆತ್ಮರಕ್ಷಣೆಗೆ ಕಿರ್ಪಣ್ (ಕಿರುಗತ್ತಿ) ಇಟ್ಟುಕೊಳ್ಳುವುದಕ್ಕೆ ಅವಕಾಶ ನೀಡಬೇಕು’ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಒತ್ತಾಯಿಸಿದೆ.

ಹುಬ್ಬಳ್ಳಿಯ ಕಾಲೇಜೊಂದರ ಆವರಣದಲ್ಲಿ ಹಾಡಹಗಲೇ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು ಎಂದೂ ಸಂಘಟನೆ ಒತ್ತಾಯಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ವಿಎಚ್‌ಪಿಯ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ‘ನೇಹಾಳನ್ನು ಅಮಾನುಷವಾಗಿ ಕೊಲೆ ಮಾಡಿದ್ದರ ಹಿಂದೆ ಮೂಲಭೂತವಾದಿ ಸಂಘಟನೆಗಳ ಕೈವಾಡ ಇದೆ. ಫಯಾಜ್‌ ಸ್ನೇಹಿತರೂ ಇದರಲ್ಲಿ ಭಾಗಿಯಾಗಿದ್ದಾರೆ. ಇದೊಂದು ‘ಲವ್‌ ಜಿಹಾದ್‌’ ಕೃತ್ಯ ಎಂದು ಯುವತಿಯ ತಂದೆಯೇ ಆರೋಪ ಮಾಡಿದ್ದಾರೆ. ಎನ್‌ಐಎ ತನಿಖೆಯಿಂದ ಮಾತ್ರ ನೇಹಾ ಕುಟುಂಬಕ್ಕೆ ನ್ಯಾಯ ಕೊಡಿಸಲು ಸಾಧ್ಯ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ಬಳಿಕ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಲೇ ಇದೆ. ಬೆಂಗಳೂರಿನ ‘ರಾಮೇಶ್ವರ ಕೆಫೆ’ಯಲ್ಲಿ ಬಾಂಬ್ ಸ್ಫೋಟ, ವಿಧಾನಸೌಧದಲ್ಲೇ ಪಾಕಿಸ್ತಾನದ ಪರ ಘೋಷಣೆ, ಹನುಮಾನ್ ಚಾಲೀಸ್ ಆಡಿಯೊ ಪ್ರಸಾರ ಮಾಡಿದ ಮಳಿಗೆ ಮಾಲೀಕನಿಗೆ ಹಲ್ಲೆ, ರಾಮನವಮಿ ಆಚರಣೆಗೆ ಅಡ್ಡಿಪಡಿಸುವ ಬೆಳವಣಿಗೆಗಳು ನಡೆದಿವೆ. ನಟಿ ಹರ್ಷಿಕಾ ಪೂಣಚ್ಚ ಅವರ ಕುಟುಂಬದವರು ಕನ್ನಡದಲ್ಲಿ ಮಾತನಾಡಿದರು ಎಂಬ ಕಾರಣಕ್ಕೆ ಅವರ ಮೇಲೆ ದಾಳಿ ನಡೆದಿದೆ. ಮೈಸೂರಿನಲ್ಲಿ ಯೂಟ್ಯೂಬರ್ ಒಬ್ಬರ ಮೇಲೆ ಹಲ್ಲೆ ನಡೆದಿದೆ. ನಗರದ ಸಾಯಿಮಂದಿರದಲ್ಲಿ ಮುಸ್ಲಿಂ ಗೂಂಡಾಗಳು ಮತ ಯಾಚನೆಗೆ ತಡೆ ಒಡ್ಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ವೋಟ್‌ ಬ್ಯಾಂಕ್‌ ಸಲುವಾಗಿ ಈ ಕೃತ್ಯಗಳಿಗೆ ಮೌನವಹಿಸುವ ಮೂಲಕ ಬೆಂಬಲ ನೀಡುತ್ತಿರುವಂತಿದೆ. ರಾಜ್ಯದಲ್ಲಿ ಟಿಪ್ಪುವಿನ ಆಡಳಿತ ನಡೆಯುತ್ತಿದೆಯೇ ಎಂಬ ಸಂಶಯ ಮೂಡಿದೆ’ ಎಂದರು.

‘ಉಡುಪಿ ಜಿಲ್ಲೆಯ ನೇಜಾರಿನಲ್ಲಿ ದೀಪಕ್ ಚೌಗಲೆ ಎಂಬಾತ ಮುಸ್ಲಿಂ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದಾನೆ. ಕಡಬದಲ್ಲಿ ವಿದ್ಯಾರ್ಥಿನಿ ಮೇಲೆ ಆಸಿಡ್ ದಾಳಿ ನಡೆದಿದ್ದು, ಈ ಕೃತ್ಯಗಳೂ ಖಂಡನೀಯ. ಪ್ರೀತಿ ಪ್ರೇಮದ ಹೆಸರಿನಲ್ಲಿ ಹೆಸರು ಮರೆಮಾಚಿ, ಹಿಂದೂ ಯುವತಿಯರಿಗೆ ಬಲೆ ಬೀಸಿ ಅವರನ್ನು ಮದುವೆಯಾಗಿ, ಮತಾಂತರ ಮಾಡುತ್ತಾರೆ. ಅದಕ್ಕೆ ಒಪ್ಪದಿದ್ದರೆ ಕೊಲೆಯನ್ನೇ ಮಾಡುತ್ತಾರೆ. ಇಲ್ಲವೇ ಅವರ ನಗ್ನ ವಿಡಿಯೊ ತೆಗೆದು ಬೆದರಿಕೆ ಒಡ್ಡುತ್ತಾರೆ’ ಎಂದು ಅವರು ಆರೋಪಿಸಿದರು.

‘ಹಿಂದೂಗಳ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸುತ್ತೇವೆ’ ಎಂದರು.

ಸೌಜನ್ಯಾಗೆ ನ್ಯಾಯ ಕೊಡಿಸಲು ಹೋರಾಟ ನಡೆಸುತ್ತಿರುವವರು ಹಾಗೂ ಆಕೆಯ ತಂದೆ–ತಾಯಿ ಲೋಕಸಭಾ ಚುನಾವಣೆಯಲ್ಲಿ ನೋಟಾ ಚಲಾಯಿಸುವಂತೆ ಅಭಿಯಾನ ಹಮ್ಮಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಶರಣ್‌, ‘ನೋಟಾ ಚಲಾವಣೆಯಿಂದ ನ್ಯಾಯ ಸಿಗಲಿದೆ ಎಂದು ಅಭಿಯಾನ ಹಮ್ಮಿಕೊಂಡಿದ್ದಾರೆ. ‌ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೋಟಾಕ್ಕೂ ಅವಕಾಶ ನೀಡಲಾಗಿದೆ. ಅಭಿಯಾನಕ್ಕೆ ಚುನಾವಣೆಯಲ್ಲಿ ಇದಕ್ಕೆ ಯಾವ ರೀತಿ ಬೆಂಬಲ‌ ಸಿಗುತ್ತದೆ ನೋಡೊಣ. ಸೌಜನ್ಯಾ ಹತ್ಯೆ ಮಾಡಿದವರಿಗೂ ಶಿಕ್ಷೆ ಆಗಬೇಕು ಎಂಬುದು ನಮ್ಮ ಆಗ್ರಹವೂ ಹೌದು’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಾಂತ ಸಹ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ಕಾರ್ಯದರ್ಶಿ ರವಿ ಅಸೈಗೋಳಿ, ಸಂಯೋಜಕರಾದ ಪ್ರೀತಂ ಕಾಟಿಪಳ್ಳ, ಶ್ವೇತಾ ಆದ್ಯಪಾಡಿ, ವಿಭಾಗ ಸಂಯೋಜಕ ಪುನೀತ್ ಅತ್ತಾವರ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT