ಬುಧವಾರ, ಜನವರಿ 22, 2020
26 °C
ಸಾದಿ ತೋಜಾಲೆ, ತಪ್ಪಾವೊಡ್ಜಿ: ಕುಲಪತಿ

ತುಳು ಪರಿಷತ್‌: ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು (ಏರ್ಯ ಲಕ್ಷ್ಮೀನಾರಾಯಣ ಆಳ್ವ ಚಾವಡಿ): ‘ಜವನೆರೆಗ್‌ ಸಾದಿ ತೋಜಾಲೆ, ಸಾದಿ ತಪ್ಪಾವೊಡ್ಜಿ (ಯುವಜನರಿಗೆ ಬದುಕಿನ ದಾರಿ ತೋರಿಸಿ, ಹಾದಿ ತಪ್ಪಿಸಬೇಡಿ)’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಸ್‌. ಯಡಪಡಿತ್ತಾಯ ಪೋಷಕರು, ಹಿರಿಯರು, ಮಾರ್ಗದರ್ಶಕರಿಗೆ ಕಿವಿಮಾತು ಹೇಳಿದರು.

ತುಳು ಪರಿಷತ್‌, ಮಂಗಳೂರು ವಿಶ್ವವಿದ್ಯಾಲಯ ಸಾರಥ್ಯದಲ್ಲಿ ಗುರುವಾರ ಇಲ್ಲಿ ನಡೆದ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಎನ್ನ ಪಾತೆರ ಜವನೆರ್‌ ಕೇನುಜ್ಜೆರ್‌, ಬತ್ತಿನ ಪೆಟ್ಟ್‌ಗೇ ಕೋಣೆ ಸೇರ್‌ದ್‌ ಬಾಕಿಲ್‌ ಪಾಡೊನ್ವೆರ್‌’ (ಯುವಕರು ನನ್ನ ಮಾತು ಕೇಳಲ್ಲ, ಅಸಡ್ಡೆ ಮಾಡ್ತಾರೆ. ಆತ–ಆಕೆ ಶಾಲಾ ಕಾಲೇಜಿನಿಂದ ಬಂದೊಡನೆಯೇ ಮೊಬೈಲ್‌ ಹಿಡಿದು ಕೋಣೆ ಸೇರಿ ಬಾಗಿಲು ಹಾಕೊಳ್ತಾರೆ) ಎಂಬುದು ಮನೆಯ ಹಿರಿಯರ ಗೋಳು. ಆದರೆ, ಹೇಳುವಂತೆ ಹೇಳಿದರೆ ಕೇಳುತ್ತಾರೆ, ಮಾದರಿಯಾಗಿದ್ದರೆ ಅನುಸರಿಸುತ್ತಾರೆ’ ಎಂದರು.  ‘ಯುವಜನರು ಮೊಬೈಲ್‌, ಇಂಟರ್‌ನೆಟ್‌ಗಳಲ್ಲಿ ಮುಳುಗಿದ್ದಾರೆ ಎಂದು ಗೊಣಗುವ ಬದಲು ಹಿರಿಯರಾದವರು, ಮೊಬೈಲ್‌ ಫೋನ್‌, ಟಿವಿ, ಜಾಲತಾಣಗಳಿಂದಾಚೆಗಿನ ವಿಷಯಗಳತ್ತ ಬೆಳಕು ಚೆಲ್ಲಬೇಕು. ಸರಿದಾರಿಯಲ್ಲಿ ಸಾಗುವಂತೆ ಅಧ್ಯಯನ, ಆಚಾರ, ಸಂಸ್ಕೃತಿಯನ್ನು ತಿಳಿ ಹೇಳಬೇಕು. ಯುವಜನರ ನಾಯಕತ್ವವಿದ್ದರೆ ದೇಶ ವಿಶ್ವಗುರು ಆಗಲು ಸಾಧ್ಯ’ ಎಂದು ಹೇಳಿದರು.

‘ಯುವ ಜನರಿಗೆ ತುಳುನಾಡು, ಭಾಷೆ, ಆಚರಣೆಗಳ ಇತಿಹಾಸ ತಿಳಿಸಿರಿ. ಇತಿಹಾಸ ಮರೆಯದವರಿಂದಷ್ಟೇ ಇತಿಹಾಸ ನಿರ್ಮಿಸಲು ಸಾಧ್ಯ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಥಮ ತುಳವ ಕುಲಪತಿಯೂ ಆಗಿರುವ ಡಾ. ಯಡಪಡಿತ್ತಾಯ ತಿಳಿಸಿದರು. ‘ಇಂದಿನ ದಿನಗಳಲ್ಲಿ ಯುವಕರಷ್ಟೇ ಅಲ್ಲ, ಹಿರಿಯರೂ ಅಡಿ ತಪ್ಪಿ ಜಾರಿ ಬೀಳುತ್ತಾರೆ. ಕಾಲೆಳೆಯುವವರೂ ಇರುತ್ತಾರೆ. ಜಾರಿ ಬೀಳದಂತೆ ಎಚ್ಚರಿಕೆಯಿಂದ ಮುನ್ನುಗ್ಗಬೇಕಿದೆ. ನಂಬಿಕೆ ಇರಲಿ, ಆದರೆ ವಿಶ್ಲೇಷಿಸಿ (ಟ್ರಸ್ಟ್‌, ಬಟ್‌ ವೆರಿಫೈ)’ ಎಂದು ಸಲಹೆ ನೀಡಿದರು. ‘ಕುಟುಂಬ, ಹಿರಿಯರು, ತಾಯಿ ತಂದೆಯವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸ್ಥಿತಿ ಬೇಡ, ಅವರ ಋಣ ತೀರಿಸಲು ಅಸಾಧ್ಯ. ಸೇವೆ ಮಾಡಿ’ ಎಂದರು.

ವಿದ್ಯಾರ್ಥಿಸ್ನೇಹಿ ಪಠ್ಯ: ‘ನನ್ನ ಅವಧಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಹಲವು ವಿದ್ಯಾರ್ಥಿ ಸ್ನೇಹಿ ಕ್ರಮಗಳನ್ನು ಜಾರಿ ಗೊಳಿಸುತ್ತಿದೆ. ಇದರ ಅಂಗವಾಗಿ ವಿದ್ಯಾರ್ಥಿ ಸ್ನೇಹಿ ಪಠ್ಯಕ್ರಮ(ಸಿಲಬಸ್‌)ವನ್ನು ಜಾರಿಗೊಳಿಸಲಾಗುವುದು’ ಎಂದು ಹೇಳಿದ ಕುಲಪತಿ, ‘ವಿದ್ಯಾರ್ಥಿಗಳ ಭಾವನೆಯನ್ನು ಅರಿತು, ಪ್ರೋತ್ಸಾಹಿಸುವ ಗುಣ ಹಿರಿಯರಲ್ಲಿರಬೇಕು’ ಎಂದರು.

ತುಳುವಿಗೆ ಕಬಡ್ಡಿ ಸ್ಪರ್ಷ: ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಮಾತನಾಡಿ, ‘ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನವನ್ನು ಕಬಡ್ಡಿ ಆಟಗಾರ ವಿದ್ಯಾರ್ಥಿ ಹರ್ಷಿತ್‌ ಅವರಿಂದ ಉದ್ಘಾಟಿಸಿರುವುದು ಔಚಿತ್ಯ ಪೂರ್ಣ. ಇಂದಿನ ಸ್ಥಿತಿಯಲ್ಲಿ ತುಳು ಸಾಂವಿಧಾನಿಕ ಸ್ಥಾನಮಾನ ಪಡೆಯಲು ಯುವಜನರಲ್ಲಿ ಕಬಡ್ಡಿ ಆಟದ ಪಟ್ಟು ಅಳವಡಿಸುವ ಹೋರಾಟ ಅಗತ್ಯ. ಸಾವಿಧಾನಿಕ ಸ್ಥಾನಮಾನ ಸಿಗುವವರೆಗೆ ಕಾಯದೆ, ತುಳು ಭಾಷೆಯ ಬೆಳವಣಿಗೆಗೆ ಸಾಂಸ್ಥಿಕ ರೂಪ ನೀಡುವುದು, ಶೈಕ್ಷಣಿಕವಾಗಿ ಸಮಗ್ರ ಕಲಿಕೆ, ವ್ಯಾಪಕ ಅಧ್ಯಯನದ ಭಾಗವಾಗಿಸುವುದು, ತುಳು ಇತಿಹಾಸ ಸಂಗ್ರಹ, ಸಾಹಿತ್ಯ ವಿಸ್ತರಣೆ ಅನುವಾದ ಇತ್ಯಾದಿ ವ್ಯವಸ್ಥಿತವಾಗಿ ಆಗಬೇಕು’ ಎಂದರು.

ಯುವ ಜಾಗೃತಿ: ಹೊಸ ತಲೆಮಾರಿನ ತುಳುವರಲ್ಲಿ (ಯುವಜನರಿಗೆ) ಭಾಷೆಯ ಕೊಡುಗೆ ಜಾಗೃತಿ ಮೂಡಿಸಿ, ಬೆಳವಣಿಗೆಗೆ ಅವರಲ್ಲಿ ಜಾಗೃತಿ ಮೂಡಿಸುವುದು ವಿದ್ಯಾರ್ಥಿ ಸಮ್ಮೇಳನದ ಉದ್ದೇಶ ಎಂದು ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಾನಾಥ ಗಟ್ಟಿ ಕಾಪಿಕಾಡ್‌ ತಿಳಿಸಿದರು.

ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನವನ್ನು ಬಂಟ್ವಾಳ ಎಸ್‌ವಿಎಸ್‌ ಕಾಲೇಜಿನ ಪದವಿ ವಿದ್ಯಾರ್ಥಿ ಹರ್ಷಿತ್‌ ಕೆ. ಉದ್ಘಾಟಿಸಿದರು. ಎ.ಜೆ. ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಆಶಿಶ್‌ ಶೆಟ್ಟಿ ಚಿತ್ರಕಲಾ ಸ್ಪರ್ಧೆಯನ್ನು ರೇಖಾ ಚಿತ್ರ ಬಿಡಿಸಿ ಉದ್ಘಾಟಿಸಿದರು. ಸುರತ್ಕಲ್‌ ಗೋವಿಂದದಾಸ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಅನನ್ಯಾ ಜೀವನ್‌ ಉಳ್ಳಾಲ್‌ ಅಧ್ಯಕ್ಷತೆ ವಹಿಸಿದ್ದರು. ‌ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿನಿ ರಾಜಶ್ರೀ ಜೆ. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿಗಳಿಗೆ ಹೂವಿನ ಬದಲು ಪುಸ್ತಕ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಪ್ರಭಾಕರ ನೀರುಮಾರ್ಗ, ಗೌರವ ಅಧ್ಯಕ್ಷ ಸ್ವರ್ಣ ಸುಂದರ್‌, ಸದಸ್ಯ ಶಿವಾನಂದ ಕರ್ಕೇರ, ಮಾಜಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ಗಟ್ಟಿ ಡಿ.ಎಸ್‌, ಧರಣೇಂದ್ರ ಕುಮಾರ್‌ , ‘ಮ್ಯಾಪ್ಸ್‌’ ಕಾಲೇಜು ಅಧ್ಯಕ್ಷ ದಿನೇಶ್‌ ಆಳ್ವ, ಶುಭೋದಯ ಶೆಟ್ಟಿ ಇದ್ದರು.

ನಿರ್ಣಯಗಳು: ಪದವಿ ಪೂರ್ವ ಶಿಕ್ಷಣದಲ್ಲಿ ತುಳು ಭಾಷೆ ಕಲಿಸಬೇಕು, ವಸ್ತು ಪ್ರದರ್ಶನಾಲಯ ನಿರ್ಮಿಸಬೇಕು, ತುಳು ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಬೇಕು, ರಾಜ್ಯದ ಅಧಿಕೃತ ಭಾಷೆ ಪರಿಗಣನೆ,  ತುಳು ಅಸ್ಮಿತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಭಿಮಾನ ಹುಟ್ಟಿಸಲು ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯ ಸ್ವೀಕರಿಸಲಾಯಿತು.

ತುಳು ವಿವಿ ಬೇಕು: ಅನನ್ಯಾ

‘ತೆಲುಗು ಭಾಷಿಕ ಆಂಧ್ರ ಪ್ರದೇಶದ ಕುಪ್ಪಂ ವಿಶ್ವವಿದ್ಯಾಲಯದಲ್ಲಿ ತುಳು ಅಧ್ಯಯನ ಪೀಠ ಇದೆ. ಹಾಗಿರುವಾಗ ಇಲ್ಲಿನ ತುಳು ನೆಲದಲ್ಲಿ ತುಳು ವಿಶ್ವವಿದ್ಯಾಲಯ ಸ್ಥಾಪನೆಗೆ ನಾವು ಪ್ರಯತ್ನಿಸಬೇಕು, ತುಳುವಿಗೆ ಸಾಂವಿಧಾನಿಕ ಸ್ಥಾನಮಾನಕ್ಕೆ ಪರಿಶ್ರಮಿಸಬೇಕು’ ಎಂದು ಸುರತ್ಕಲ್‌ ಗೋವಿಂದದಾಸ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಅನನ್ಯಾ ಜೀವನ್‌ ಉಳ್ಳಾಲ್‌ ಹೇಳಿದರು.

‘ಜಾತಿ ಧರ್ಮ ವೈವಿಧ್ಯದ ತುಳುನಾಡಿನಲ್ಲಿ ತುಳುಭಾಷೆ ಸಾಮರಸ್ಯದ ಕೊಂಡಿಯಾಗಿದೆ. ಇಲ್ಲಿನ ನಿರ್ದಿಷ್ಟ ದೇಗುಲ, ದರ್ಗಾ, ಚರ್ಚ್‌ಗಳು ಭಾವೈಕ್ಯದ ಸ್ವರೂಪಗಳು. ದೈವಾರಾಧನೆ ತುಳುನೆಲದ ಸಂಸ್ಕೃತಿ. ನ್ಯಾಯಾಲಯಗಳಲ್ಲೂ ಇತ್ಯರ್ಥವಾಗದ ಪ್ರಕರಣ ದೈವಸ್ಥಾನಗಳಲ್ಲಿ ರಾಜಿಯಾಗುವುದು ಇಲ್ಲಿನ ನಂಬಿಕೆಯ ನೆಲೆಗಟ್ಟು’ ಎಂದು ವಿಶ್ಲೇಷಿಸಿದರು.

ಪ್ರದೇಶ ಸೀಮಿತ, ವ್ಯಾಪ್ತಿ ಅಪರಿಮಿತ: ಹರ್ಷಿತ್‌

‘ಹಿಂದೆಲ್ಲ ರಾಮೇಶ್ವರ, ನೀಲೇಶ್ವರ, ಅಂಕೋಲಾ ವರೆಗೆ ದಟ್ಟೈಸಿತ್ತು ಎಂದು ಪಾಡ್ದನ, ಐತಿಹ್ಯಗಳಲ್ಲಿ ಉಲ್ಲೇಖವಾಗಿರುವ ತುಳು ಭಾಷೆ ಇಂದು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಚದುರಿದೆ. ಆದರೆ, ಭಾಷೆಯ ವ್ಯಾಪ್ತಿ ವಿಶ್ವಮಟ್ಟದಲ್ಲಿರುವುದು ಹೆಮ್ಮೆಯ ವಿಷಯ’ ಎಂದು ಸಮ್ಮೇಳನ ಉದ್ಘಾಟಿಸಿದ ಬಂಟ್ವಾಳ ಎಸ್‌ವಿಎಸ್‌ ಕಾಲೇಜಿನ ಪದವಿ ವಿದ್ಯಾರ್ಥಿ ಹರ್ಷಿತ್‌ ಕೆ. ಅಭಿಪ್ರಾಯಪಟ್ಟರು.

‘ಸಂಶೋಧನೆ ಅಕಾಡೆಮಿ ಮಟ್ಟದಿಂದ ವಿಸ್ತರಣೆ ಆಗಬೇಕು, ತುಳುಲಿಪಿ ಜನಪ್ರಿಯ ಆಗಬೇಕು, ಮೌಖಿಕ–ಲಿಖಿತ ಸಾಹಿತ್ಯದ ಸಂಗ್ರಹ ವೃದ್ಧಿಸಬೇಕು, ಭಾಷೆಯನ್ನು ಮುಂದಿನನ ಪೀಳಿಗೆಯಲ್ಲೂ ಬೆಳೆಸಲು ಹಿರಿಯರು ಕಿರಿಯರಲ್ಲಿ ಅರಿವು ಮೂಡಿಸಬೇಕು’ ಎಂದು ಹಿರಿಯರಿಗೆ, ಸಹಪಾಠಿಗಳಿಗೆ ಮನವಿ ಮಾಡಿದರು.

‘ಸದಸ್ಯನಾಗಿ ಹೋದೆ, ಅಧ್ಯಕ್ಷನಾಗಿ ಬಂದೆ’

‘ತುಳು ಸಾಹಿತ್ಯ ಅಕಾಡೆಮಿಗೆ ಸದಸ್ಯನಾಗಿದ್ದ ಅವಧಿಯಲ್ಲಿ ಹೊರಬಂದಿದ್ದೆ. ಆ ಬಳಿಕ ಅತ್ತ ಸುಳಿಯುವ ಮನಸ್ಸಾಗಿರಲಿಲ್ಲ. ಬಳಿಕ ಜನರ ಮನದಿಚ್ಛೆಯಂತೆ ಅಧ್ಯಕ್ಷನಾಗಿ ಬಂದೆ’ ಎಂದು ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌ ಹೇಳಿದರು.

ವಿದ್ಯಾರ್ಥಿ ತುಳು ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು. ಅದೇ ರೀತಿ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಗಳಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು. ಅತಿಥಿಯಾಗಿದ್ದ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ತುಳು ಅಕಾಡೆಮಿ ಹಾಗೂ ತುಳು ಭಾಷೆಗೆ ಸೌಲಭ್ಯಕ್ಕಾಗಿ ಪ್ರಯತ್ನಿಸುವೆ ಎಂದರು. ಪರಿಷತ್‌ ಪದಾಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು