ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷ ಭಾರತ 8.5ರಷ್ಟು ಜಿಡಿಪಿ ಸಾಧಿಸಲಿದೆ: ಡಿ.ವಿ.ಸದಾನಂದ ಗೌಡ

Last Updated 5 ನವೆಂಬರ್ 2020, 6:54 IST
ಅಕ್ಷರ ಗಾತ್ರ

ಮಂಗಳೂರು: ಮುಂದಿನ ವರ್ಷ ಭಾರತ 8.5ರಷ್ಟು ಜಿಡಿಪಿ ಸಾಧಿಸಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಲ್ಲಿ ನಡೆಯುತ್ತಿರುವ ಬಿಜೆಪಿಯ ರಾಜ್ಯ ವಿಶೇಷ ಸಭೆ (ಕಾರ್ಯಕಾರಿಣಿ)ಯಲ್ಲಿ ಮಾತನಾಡಿದರು.

ಭಾರತದಲ್ಲಿ ಪ್ರತಿ 10 ಲಕ್ಷ ಮಂದಿಗೆ ಕೇವಲ 5.5 ಸಾವಿರ ಮಂದಿಗೆ ಕೋವಿಡ್ ಬಂದಿದ್ದರೆ, ಪಾಶ್ಚಾತ್ಯ ದೇಶಗಳಲ್ಲಿ ಇದು 20 ಸಾವಿರಕ್ಕೂ ಅಧಿಕ ಇದೆ. ಸಾವಿನ ಪ್ರಮಾಣ ಭಾರತದಲ್ಲಿ ಪ್ರತಿ 10 ಲಕ್ಷ ಮಂದಿಗೆ ಕೇವಲ 83 ಇದ್ದರೆ, ಪಾಶ್ಚಾತ್ಯ ದೇಶಗಳಲ್ಲಿ ಇದು ಸುಮಾರು 494ಕ್ಕೂ ಅಧಿಕ ಇದೆ. ವೆಂಟಿಲೇಟರ್, ಮಾಸ್ಕ್, ಪಿಪಿಇ ಕಿಟ್ ತಯಾರಿಯಲ್ಲಿ ಭಾರತಕ್ಕೆ ಸ್ವಾವಲಂಬನೆ ಬಂದಿದೆ. ಕೋವಿಡ್ ಸಂದರ್ಭದಲ್ಲೂ ಕೃಷಿ ಕ್ಷೇತ್ರ ಶೇ 18 ಪ್ರಗತಿ ಸಾಧಿಸಿದೆ. ಇದೆಲ್ಲ ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ ಫಲ ಎಂದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ‘ಆರ್.ಆರ್. ನಗರದಲ್ಲಿ 40 ಸಾವಿರ, ಶಿರಾದಲ್ಲಿ 20 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸುತ್ತದೆ. ವಿಧಾನಪರಿಷತ್ ಚುನಾವಣೆಯಲ್ಲೂ ಜಯ ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳೂರು ಸೇರಿದಂತೆ ರಾಜ್ಯದ 10 ನಗರಗಳಿಗೆ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ತಲಾ ₹50 ಕೋಟಿ ಬಿಡುಗಡೆ ಮಾಡಲಾಗುವುದು. ಈ ಯೋಜನೆಯಡಿ ₹125 ಕೋಟಿ ಖರ್ಚು ಮಾಡಲು ಅವಕಾಶವಿದೆ ಎಂದರು.

ಲವ್ ಜಿಹಾದ್ ತಡೆಗೆ ರಾಜ್ಯದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುವುದು. ಯಾರು ಮಾಡುತ್ತಾರೊ ಬಿಡುತ್ತಾರೋ ಗೊತ್ತಿಲ್ಲ‌‌ ನಮ್ಮ ರಾಜ್ಯದಲ್ಲಿ ಇದಕ್ಕೆ ಕಡಿವಾಣ ಹಾಕಲು ಸಮಗ್ರವಾಗಿ ಚರ್ಚಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಾಗರದ ಅಲೆಗಳಿಂದ ವಿದ್ಯುತ್ ಉತ್ಪಾದನೆಗೆ ಸರ್ಕಾರ ಆದ್ಯತೆ ನೀಡಲಿದೆ. ಮೀನುಗಾರಿಕೆ, ಸಾಗರೋತ್ಪನ್ನ ಮೌಲ್ಯವರ್ಧನೆಗೂ ಆದ್ಯತೆ ನೀಡುವ ಮೂಲಕ ಉದ್ಯೋಗಾವಕಾಶ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್, ಜೆಡಿಸ್ ಸಮ್ಮಿಶ್ರ ಸರ್ಕಾರದ 18 ಶಾಸಕರು ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದಾರೆ. ಬಹುಶಃ ದೇಶದಲ್ಲಿ ಇಷ್ಟೊಂದು ಪ್ರಮಾಣದ ಶಾಸಕರು ರಾಜೀನಾಮೆ ನೀಡಿರುವುದು ಇದೇ ಮೊದಲು ಎಂದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ‘ಕಾಂಗ್ರೆಸ್ ತುರ್ತು ಪರಿಸ್ಥಿತಿಯಿಂದ ಪಾಠ ಕಲಿತಿಲ್ಲ. ಕಾಂಗ್ರೆಸ್ ಸಹವಾಸದಲ್ಲಿ ಶಿವಸೇನೆಯೂ ಅದೇ ದಾರಿಯಲ್ಲಿ ಸಾಗುತ್ತಿದೆ. ತುರ್ತು ಪರಿಸ್ಥಿತಿ ವಿರುದ್ದ ಸಿಡಿದೆದ್ದಿದ್ದ ಬಾಳ ಠಾಕ್ರೆ ಅವರ ಸಿದ್ಧಾಂತಕ್ಕೆ ವಿರುದ್ಧವಾಗಿ ಮಹಾರಾಷ್ಟ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ‌ ಕೆಲಸ ಮಾಡುತ್ತಿದೆ. ತತುರ್ತು ಪರಿಸ್ಥಿತಿಯ ಪರಿಣಾಮವನ್ನು ಕಾಂಗ್ರೆಸ್ ಎದುರಿಸಿದ ರೀತಿಯಲ್ಲಿ ಶಿವಸೇನೆಯೂ ಎದುರಿಸಬೇಕಾಗುತ್ತದೆ’ ಎಂದು ವಾಗ್ದಾಳಿ ನಡೆಸಿದರು.

ಜಾತಿ ಮತ್ತು ಕೋಮುಗಳನ್ನು ಒಡೆದು, ಸಮಾಜವಾದದ ಹೆಸರಿನಲ್ಲಿ ಮಜಾವಾದವನ್ನು ಕಾಂಗ್ರೆಸ್ ಬೆಳೆಸಿತ್ತು. ಇದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT