ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಜರೂರು: ವಾಹನ ಮಾಲೀಕರ ಸಮಸ್ಯೆ ಹಲವಾರು

Published 25 ಮಾರ್ಚ್ 2024, 7:35 IST
Last Updated 25 ಮಾರ್ಚ್ 2024, 7:35 IST
ಅಕ್ಷರ ಗಾತ್ರ

ಮಂಗಳೂರು: ಚುನಾವಣೆ ಸಂದರ್ಭದಲ್ಲಿ ಆಡಳಿತ ಯಂತ್ರದ ಕಾರ್ಯವೈಖರಿಯೇ ಬದಲಾಗುತ್ತದೆ. ಸದಾ ಚಟುವಟಿಕೆ, ಓಡಾಟ, ಧಾವಂತ... ಚುನಾವಣೆಯನ್ನು ಸಾಂಗವಾಗಿ ಪೂರೈಸಲು ಅಧಿಕಾರಿಗಳ ಓಡಾಟಕ್ಕೆ ನೆರವಾಗುವುದು ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್‌ಗಳು. ಈ ವಾಹನಗಳಿಗೆ ಬಲು ಬೇಡಿಕೆ ಇರುವ ದಿನಗಳಲ್ಲೇ ನಡೆಯುವ ಚುನಾವಣೆ  ಅವುಗಳ ಮಾಲೀಕರ ಪಾಲಿಗೆ ಬಿಸಿ ತುಪ್ಪದಂತಾಗಿದೆ. 

‘ವರ್ಷದಲ್ಲಿ ನಮಗೆ ನಾಲ್ಕು ಕಾಸು ಸಂಪಾದನೆಯಾಗುವುದು ಮಾರ್ಚ್‌, ಏಪ್ರಿಲ್‌, ಮೇ ತಿಂಗಳುಗಳಲ್ಲಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಲ ನೇಮ, ಜಾತ್ರೆ, ಸಭೆ, ಸಮಾರಂಭಗಳು ಜಾಸ್ತಿ ನಡೆಯುವ ಈ ಅವಧಿಯಲ್ಲೇ ಚುನಾವಣೆ ನಡೆಯುತ್ತಿದೆ. ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರು ಬರುವ ಸಮಯವಿದು. ಚುನಾವಣಾ ಜರೂರು ಎಂಬ ನೆಪ ಹೇಳಿ ವಾಹನವನ್ನು ಬಳಸಿಕೊಳ್ಳುವ ಜಿಲ್ಲಾಡಳಿತ ಬಳಿಕ ಸಕಾಲದಲ್ಲಿ ಅದರ  ಬಾಡಿಗೆಯನ್ನೂ ಪಾವತಿಸುವುದಿಲ್ಲ. ಒಂದೆಡೆ ನಮ್ಮ ವರಮಾನವನ್ನೂ ಕಳೆದುಕೊಳ್ಳುವ ನಾವು, ನಮಗೆ ಬರಬೇಕಾದ ಹಣವನ್ನು ಪಡೆಯಲು ಕಚೇರಿಗೆ ಅಲೆಯಬೇಕು’ ಎಂದು ಅಲವತ್ತುಕೊಳ್ಳುತ್ತಾರೆ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಮಾಲೀಕರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 276 ಟ್ಯಾಕ್ಸಿ, 303 ಬಸ್‌ ಹಾಗೂ 171 ಮ್ಯಾಕ್ಸಿ ಕ್ಯಾಬ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಅವುಗಳಲ್ಲಿ ಬಹುತೇಕ ಟ್ಯಾಕ್ಸಿಗಳಿಗೆ ಬಾಡಿಗೆ ಮೊತ್ತವನ್ನು ಪಾವತಿ ಆಗಿದ್ದು ಏಳೆಂಟು ತಿಂಗಳ ಬಳಿಕ. ಬಾಕಿ ಪಾವತಿಗೆ ಒತ್ತಾಯಿಸಿ  ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿ ಕ್ಯಾಬ್‌ ಅಸೋಸಿಯೇಷನ್‌ ಚುನಾವಣಾ ಆಯೋಗಕ್ಕೇ ಪತ್ರ ಬರೆದಿತ್ತು. ಬಾಕಿ ಪಾವತಿ ಮಾಡದ ಹೊರತು ಲೋಕಸಭಾ ಚುನಾವಣೆಗೆ ವಾಹನ ಒದಗಿಸುವುದಿಲ್ಲ ಎಂದು ಎಚ್ಚರಿಸಿತ್ತು.

‘ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಬಳಿಸಿಕೊಂಡ  ವಾಹನಗಳಿಗೆ ಬಾಡಿಗೆ ಪಾವತಿ ಬಾಕಿ ಇಲ್ಲ. ಬಾಕಿ ಇದ್ದ ಹಣವನ್ನೂ ಈಚೆಗೆ ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ.

‘ಲೋಕಸಭಾ ಚುನಾವಣೆ ಬಂದಿದ್ದರಿಂದ, ವಿಧಾನಸಭೆ ಚುನಾವಣೆಯ ವಾಹನ ಬಾಡಿಗೆ ಬಾಕಿ ಹಣ ಬಹುತೇಕ ಪಾವತಿ ಆಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಈಗಲೂ ಕೆಲ ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ಪಾವತಿ ಆಗಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮನ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಷನ್‌ನ ಅಧ್ಯಕ್ಷ ಆನಂದ ಗೌಡ ಕೆ. ತಿಳಿಸಿದರು. 

‘ಜಿಲ್ಲಾಧಿಕಾರಿ ಕಚೇರಿ, ಪೊಲೀಸ್‌ ಕಮಿಷನರ್‌ ಅವರ ಕಚೇರಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿಯಿಂದ ಪ್ರತ್ಯೇಕವಾಗಿ ಟ್ಯಾಕ್ಸಿ ಅಥವಾ ಮ್ಯಾಕ್ಸಿ ಕ್ಯಾಬ್‌ಗಳನ್ನು  ಚುನಾವಣಾ ಕರ್ತವ್ಯಕ್ಕೆ ಬಾಡಿಗೆಗೆ ಪಡೆಯಲಾಗುತ್ತದೆ. ಚುನಾವಣಾ ಕರ್ತವ್ಯಕ್ಕೆ ಬೇರೆ ಬೇರೆ ಇಲಾಖೆಗಳಿಂದ ಅಧಿಕಾರಿಗಳನ್ನು ನಿಯೋಜನೆ ಮೇರೆಗೆ ಬಳಸಿಕೊಳ್ಳಲಾಗುತ್ತದೆ. ಅವರು ಕರ್ತವ್ಯ ಮುಗಿದ ಬಳಿಕ ತಮ್ಮ ಮಾತೃ ಇಲಾಖೆಗೆ ಮರಳುತ್ತಾರೆ. ನಮ್ಮ ವಾಹನ ಬಳಕೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವುದಿಲ್ಲ. ಹಾಗಾಗಿ ವಾಹನ ಮಾಲೀಕರು ಬಾಡಿಗೆ ಹಣವನ್ನು ಪಡೆಯಲು ಕಚೇರಿಗೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಇದರ ಬದಲು ಜಿಲ್ಲಾಧಿಕಾರಿ ಕಚೇರಿ ಮೂಲಕವೇ ವಾಹನ ಪಡೆದುಕೊಳ್ಳಬೇಕು. ವಾಹನಗಳ ಬಾಡಿಗೆ ಸಕಾಲದಲ್ಲಿ ಪಾವತಿ ಆಗುವಂತೆ ಈ ಕಚೇರಿಯೇ ‌ನೋಡಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ವಾಹನವನ್ನು ದಿನದ 24 ಗಂಟೆ ಬಳಕೆಯ ಆಧಾರದಲ್ಲಿ ಬಾಡಿಗೆಗೆ ಪಡೆಯುತ್ತಾರೆ. 24 ಗಂಟೆ ಬಳಕೆಗೆ ಟ್ಯಾಕ್ಸಿಗೆ ₹ 2,700 ಬಾಡಿಗೆ ನಿಗದಿಪಡಿಸಲಾಗಿದೆ. ಬೆಳಿಗ್ಗೆಯಿಂದ ರಾತ್ರಿವರೆಗೆ ದುಡಿದರೂ ಅದನ್ನು 12 ಗಂಟೆ ಕೆಲಸ ಎಂದು ಪರಿಗಣಿಸಿ ಅರ್ಧ ಹಣವನ್ನು ಮಾತ್ರ ನೀಡುತ್ತಾರೆ. ರಾತ್ರಿ ಹಗಲೂ ದುಡಿದರೂ ಕೆಲವೊಮ್ಮೆ ₹ 500 ಕೂಡ ಉಳಿಯುವುದಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮನ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಬೇಸರ ವ್ಯಕ್ತಪಡಿಸಿದರು.

‘ಸುಮಾರು 40 ದಿನಗಳ ಕಾಲ ಟ್ಯಾಕ್ಸಿ ಬಾಡಿಗೆ ಪಡೆಯಲಾಗುತ್ತದೆ. ಚುನಾವಣಾ ಕರ್ತವ್ಯಕ್ಕೆ ನಿಗದಿಪಡಿಸಿದ ವಾಹನವನ್ನು, ಅಧಿಕಾರಿಗಳು ಬಿಡುಗಡೆ ಮಾಡದ ಹೊರತು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ, ಬಾಡಿಗೆ ಪಾವತಿಗೆ ತಿಂಗಳಾನುಗಟ್ಟಲೆ ಕಾಯಿಸಲಾಗುತ್ತದೆ. ಇದರಿಂದ ವಿಮೆ ಮೊತ್ತ ಕಟ್ಟಲು, ವಾಹನ ಖರೀದಿಗೆ ಮಾಡಿದ ಸಾಲದ ಕಂತು ಕಟ್ಟಲು,  ಮಕ್ಕಳನ್ನು ಶಾಲಾ ಶುಲ್ಕ ಕಟ್ಟಲು ಸಮಸ್ಯೆ ಎದುರಿಸಬೇಕಾಗುತ್ತದೆ. ಚುನಾವಣಾ ಕರ್ತವ್ಯ ನಿರ್ವಹಿಸುವ ಇತರ ಇಲಾಖೆಗಳ ಸಿಬ್ಬಂದಿಗೆ ಅದೇ ದಿನ ಗೌರವ ಧನ ಪಾವತಿಸಲಾಗುತ್ತದೆ. ವಾಹನ ಮಾಲೀಕರ ಬಾಡಿಗೆ ಪಾವತಿಗೂ ಅದೇ ವ್ಯವಸ್ಥೆಯನ್ನು ಜಾರಿಗೆ ತರಬಹುದಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ದಿನದ 24 ಗಂಟೆಯೂ ಸನ್ನದ್ಧ ಸ್ಥಿತಿಯಲ್ಲಿರಬೇಕು. ಅಧಿಕಾರಿಗಳು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ನಮಗೆ ನಿದ್ರೆಗೂ ಅವಕಾಶ ಸಿಗದ ಪರಿಸ್ಥಿತಿ ಎದುರಾಗಿದ್ದೂ ಇದೆ’ ಎಂದು ಸಂಘದ ಜೊತೆ ಕಾರ್ಯದರ್ಶಿ ಶುಭಕರ ಶೆಟ್ಟಿ ಸಮಸ್ಯೆ ಹೇಳಿಕೊಂಡರು.

‘ದೃಢತಾ ಪ್ರಮಾಣಪತ್ರ ಪಡೆಯಲು ಆರ್‌ಟಿಒ ಕಚೇರಿಗೆ ಹೋದ ವಾಹನಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳುತ್ತಾರೆ. ಕಳೆದ ಚುನಾವಣೆಯಲ್ಲಿ ಕೆಲವೆಡೆ ದಾರಿ ಮಧ್ಯೆ ವಾಹನ ಅಡ್ಡಗಟ್ಟಿ ಅದರಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ಆ ವಾಹನವನ್ನು ಚುನಾವಣಾ ಕರ್ತವ್ಯಕ್ಕೆ ಬಲವಂತದಿಂದ ಬಳಸಿಕೊಳ್ಳಲಾಗಿತ್ತು. ಚುನಾವಣೆಯ ಹೆಸರಿನಲ್ಲಿ ಈ ರೀತಿಯ ವರ್ತನೆ ಸಹಿಸಲು ಸಾಧ್ಯವೇ’ ಎಂದು ಟ್ಯಾಕ್ಸಿ ಮಾಲೀಕರೊಬ್ಬರು ಪ್ರಶ್ನಿಸಿದರು.

‘ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳಿಗೆ ಇರುವ ಒತ್ತಡ ನಮಗೂ ಅರ್ಥವಾಗುತ್ತದೆ. ಆದರೆ, ನಮ್ಮ ಕಷ್ಟವನ್ನು ಅವರೂ ಅರಿತು ಪರಸ್ಪರ ಸಹಕಾರದಿಂದ ವರ್ತಿಸಬೇಕು’ ಎಂದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT