ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ವೆನ್ಲಾಕ್ ಸರ್ಜಿಕಲ್ ಕಟ್ಟಡ ಉದ್ಘಾಟನೆ ನಾಳೆ

Published : 14 ಆಗಸ್ಟ್ 2024, 5:06 IST
Last Updated : 14 ಆಗಸ್ಟ್ 2024, 5:06 IST
ಫಾಲೋ ಮಾಡಿ
Comments

ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಹವಾನಿಯಂತ್ರಿತ, ಮೊಡ್ಯುಲಾರ್ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಹೊಂದಿರುವ ಸೂಪರ್ ಸ್ಪೆಷಾಲಿಟಿ ಸರ್ಜಿಕಲ್ ಕಟ್ಟಡವು ಉದ್ಘಾಟನೆಗೆ ಸಿದ್ಧವಾಗಿದೆ.

ಒಟ್ಟು ಏಳು ಅಂತಸ್ತುಗಳ ಕಟ್ಟಡದಲ್ಲಿ ನಾಲ್ಕು ಅಂತಸ್ತು ಪೂರ್ಣಗೊಂಡಿದ್ದು, ಸ್ಮಾರ್ಟ್‌ ಸಿಟಿ ಅನುದಾನದಲ್ಲಿ ₹56 ಕೋಟಿ ವೆಚ್ಚ ಮಾಡಲಾಗಿದೆ. ಈ ಕಟ್ಟಡದ ಉದ್ಘಾಟನೆಯು ಆ.15ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಜೆಸಿಂತಾ ಡಿಸೋಜ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

1,65,000 ಚದರ ಅಡಿ ವಿಸ್ತೀರ್ಣದ ಕಟ್ಟಡವು ತಳ ಅಂತಸ್ತು, ನೆಲ ಅಂತಸ್ತು ಸೇರಿ ಒಟ್ಟು ಏಳು ಅಂತಸ್ತುಗಳನ್ನು ಹೊಂದಿದೆ. ಪ್ರಸ್ತುತ 250 ಹಾಸಿಗೆಗಳ ಸೌಲಭ್ಯವಿದ್ದು, ತಳ ಅಂತಸ್ತಿನಲ್ಲಿ ಕ್ಯಾಥ್‌ಲ್ಯಾಬ್ ಮತ್ತು ರೇಡಿಯಾಲಜಿ ವಿಭಾಗಗಳಿವೆ. ನೆಲ ಅಂತಸ್ತಿನಲ್ಲಿ 15 ಹಾಸಿಗೆಗಳ ತುರ್ತು ಚಿಕಿತ್ಸಾ ವಿಭಾಗ, 8 ಹಾಸಿಗೆಗಳ ತುರ್ತು ಚಿಕಿತ್ಸಾ ಐಸಿಯು, ಎಂಡೊಸ್ಕೋಪಿ ಮತ್ತು ತುರ್ತು ಶಸ್ತ್ರ ಚಿಕಿತ್ಸಾ ಕೊಠಡಿಗಳು, ಒಂದನೇ ಮಹಡಿಯಲ್ಲಿ 60 ಹಾಸಿಗೆಗಳ ಇಎನ್‌ಟಿ ಮತ್ತು ಯುರಾಲಜಿ ಶಸ್ತ್ರಚಿಕಿತ್ಸಾ ವಾರ್ಡ್‌ಗಳು, ಎರಡನೇ ಮಹಡಿಯಲ್ಲಿ 70 ಹಾಸಿಗೆಗಳ ನ್ಯೂರೊ ಸರ್ಜರಿ, ಕಾರ್ಡಿಯೊಥೊರಾಸಿಕ್ ಸರ್ಜರಿ ಮತ್ತು ಕಣ್ಣಿನ ಶಸ್ತ್ರ ಚಿಕಿತ್ಸಾ ವಾರ್ಡ್‌ಗಳು ಇವೆ. 3 ಮತ್ತು 4ನೇ ಅಂತಸ್ತಿನಲ್ಲಿ ಪ್ರತಿ ಅಂತಸ್ತಿನಲ್ಲಿ ತಲಾ 5ರಂತೆ ಒಟ್ಟು 10  ಶಸ್ತ್ರಚಿಕಿತ್ಸಾ ಕೊಠಡಿಗಳಿವೆ. ತಲಾ 10 ಹಾಸಿಗೆಗಳ ಶಸ್ತ್ರ ಚಿಕಿತ್ಸಾ ಪೂರ್ವ ಮತ್ತು 15 ಹಾಸಿಗೆಗಳ ಶಸ್ತ್ರ ಚಿಕಿತ್ಸಾ ನಂತರದ ವಾರ್ಡ್ ಲಭ್ಯವಿದೆ ಎಂದು ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುತುವರ್ಜಿವಹಿಸಿ, ಸ್ಮಾರ್ಟ್ ಸಿಟಿ ವತಿಯಿಂದ ₹7 ಕೋಟಿ ವೆಚ್ಚದಲ್ಲಿ ಆಧುನಿಕ ವೈದ್ಯಕೀಯ ಯಂತ್ರೋಪಕರಣ ಒದಗಿಸಿದ್ದಾರೆ. ಸರ್ಕಾರದ ವತಿಯಿಂದ ₹2 ಕೋಟಿ ಹಾಗೂ ಕೆಎಂಸಿ ವತಿಯಿಂದ ₹4 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳು ಪೂರೈಕೆಯಾಗಿವೆ ಎಂದು ಹೇಳಿದರು.

1848ರಲ್ಲಿ ಪ್ರಾರಂಭವಾಗಿರುವ ಆಸ್ಪತ್ರೆಯು ಸುತ್ತಲಿನ 10 ಜಿಲ್ಲೆಗಳ, ನೆರೆಯ ಕೇರಳ ರಾಜ್ಯದ ಜನರಿಗೆ ಆರೋಗ್ಯ ಸೇವೆ ನೀಡುತ್ತಿದೆ. ಇನ್ಫೋಸಿಸ್ ನೆರವಿನಲ್ಲಿ ಪ್ರಾದೇಶಿಕ ಮಕ್ಕಳ ಆಸ್ಪತ್ರೆ 20 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಯು.ಟಿ.ಖಾದರ್ ಆರೋಗ್ಯ ಸಚಿವರಾಗಿದ್ದಾಗ ₹40 ಕೋಟಿ ವೆಚ್ಚದಲ್ಲಿ 280 ಹಾಸಿಗೆಗಳ ಮೆಡಿಸಿನ್ ಕಟ್ಟಡ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

‘ತೆರೆದ ಹೃದಯ ಚಿಕಿತ್ಸೆಯಂತಹ ಸೌಲಭ್ಯಗಳು ಆಸ್ಪತ್ರೆಯಲ್ಲಿ ಇಲ್ಲದ ಕಾರಣ, ಕ್ಲಿಷ್ಟಕರ ಪ್ರಕರಣಗಳಿದ್ದರೆ, ಕೆಎಂಸಿ ಜೊತೆ ವೈದ್ಯರ ನೆರವಿನ ಒಪ್ಪಂದ ಇರುವ ಕಾರಣ, ಅಂತಹ ಪ್ರಕರಣಗಳನ್ನು ಕೆಎಂಸಿಗೆ ಕಳುಹಿಸಬೇಕಾಗುತ್ತದೆ. ಹೊಸ ಕಟ್ಟಡ ನಿರ್ಮಾಣದಿಂದ ಕೆಲವು ಅತ್ಯಾಧುನಿಕ ಶಸ್ತ್ರಚಿಕಿತ್ಸೆಗಳನ್ನು ವೆನ್ಲಾಕ್‌ನಲ್ಲಿಯೇ ಮಾಡಬಹುದಾಗಿದೆ’ ಎಂದರು.

ಡಾ. ನವೀನ್, ಡಾ. ಸದಾನಂದ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT