ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನ ಗಂಧರ್ವ ಖ್ಯಾತಿಯ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ನಿಧನ

Last Updated 12 ಅಕ್ಟೋಬರ್ 2021, 4:44 IST
ಅಕ್ಷರ ಗಾತ್ರ

ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಭಾಗವತ, ಗಾನ ಗಂಧರ್ವರೆಂದೇ ಖ್ಯಾತರಾಗಿದ್ದ ಪದ್ಯಾಣ ಗಣಪತಿ ಭಟ್ (66) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಕೆಲವು ತಿಂಗಳ ಹಿಂದೆ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಬಳಿಕ ಅದು ನ್ಯೂಮೋನಿಯಾಕ್ಕೆ ತಿರುಗಿತ್ತು. ಈ ಮಧ್ಯೆ, ಹೃದಯ ಸಂಬಂಧಿ ಕಾಯಿಲೆಯೂ ಅವರನ್ನು ಕಾಡಿತ್ತು.ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಅವರುಚೇತರಿಸಿಕೊಂಡು ಮನೆಗೆ ಮರಳಿದ್ದರು. ಇಂದು ಬೆಳಿಗ್ಗೆ 7.30ಕ್ಕೆ ಹೃದಯಾಘಾತಕ್ಕೊಳಗಾಗಿ ನಿಧನರಾದರು.

ಗಣಪತಿ ಭಟ್ಟರು ಸುಮಾರು 4 ದಶಕಗಳಿಗೂ ಹೆಚ್ಚು ಕಾಲ ಯಕ್ಷರಂಗದಲ್ಲಿ ಭಾಗವತರಾಗಿ ಮೆರೆದಿದ್ದರು. ಸುರತ್ಕಲ್, ಕರ್ನಾಟಕ, ಹೊಸನಗರ, ಎಡನೀರು, ಹನುಮಗಿರಿ ಸೇರಿದಂತೆ ಹಲವು ವ್ಯವಸಾಯಿ ಯಕ್ಷಗಾನ ಮೇಳಗಳಲ್ಲಿ ಭಾಗವತರಾಗಿದ್ದರು.

ಗಣಪತಿ ಭಟ್ಟರುಪತ್ನಿ ಶೀಲಾಶಂಕರಿ, ಮಕ್ಕಳಾದ ಸ್ವಸ್ತಿಕ್,ಕಾರ್ತಿಕ್ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

16ನೇ ವಯಸ್ಸಿನಿಂದಲೇ ಆರಂಭವಾದ ಪದ ಯಾನ

ಪದ್ಯಾಣ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ 1955ರಲ್ಲಿ ಜನಿಸಿದ್ದ ಗಣಪತಿ ಭಟ್ಟರು ಆ ಕಾಲದಲ್ಲಿ ಭಾಗವತಿಕೆಗೆ ಹೆಸರಾಗಿದ್ದ ಅವರ ಅಜ್ಜ ಪುಟ್ಟು ನಾರಾಯಣ ಭಟ್ಟರಿಂದಲೇ ಭಾಗವತಿಕೆಯ ಪ್ರಾಥಮಿಕ ಪಾಠ ಪಡೆದು, ಬಳಿಕ ಮಾಂಬಾಡಿ ನಾರಾಯಣ ಭಾಗವತರಲ್ಲಿ ಅಭ್ಯಾಸ ಮುಂದುವರಿಸಿದರು.

ಭಾಗವತಿಕೆಯ ಸೂಕ್ಷ್ಮಪಾಠ, ತಾಳಗತಿ ಹಾಗೂ ಪಟ್ಟುಗಳಲ್ಲಿ ಪರಿಣತಿ ಹೊಂದಿದ್ದ ಗಣಪತಿ ಭಟ್ಟರು ತಮ್ಮ 16ನೇ ವಯಸ್ಸಿನಲ್ಲೇ ಚೌಡೇಶ್ವರೀ ಮೇಳಕ್ಕೆ ಸಂಗೀತಗಾರರಾಗಿ ಸೇರುವ ಮೂಲಕ ತಮ್ಮ ಪದ ಯಾನ ಆರಂಭಿಸಿದ್ದರು. ಬಳಿಕ ಕುಂಡಾವು ಮೇಳ, ಕಸ್ತೂರಿ ವರದರಾಯ ಪೈ ಯಾಜಮಾನ್ಯದ ಸುರತ್ಕಲ್‌ ಮೇಳ ಸೇರಿ ಖ್ಯಾತಿಯ ಉತ್ತುಂಗಕ್ಕೇರಿದರು.

ಸುರತ್ಕಲ್ ಮೇಳದಲ್ಲಿಡಾ.ಶೇಣಿ ಗೋಪಾಲಕೃಷ್ಣ ಭಟ್ಟ, ವಿದ್ವಾಂಸ ಶಂಕರನಾರಾಯಣ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ್‌, ಕುಂಬ್ಳೆ ಸುಂದರ ರಾವ್‌ ಮೊದಲಾದ ಕಲಾವಿದರ ಒಡನಾಟದಲ್ಲಿ ವಿಜ್ರಂಭಿಸಿದ್ದರು.

ಅಭಿಮಾನಿಗಳಿಂದ ಪದ್ಯಾಣ ಪದಯಾನ ಎಂಬ ಅಭಿನಂದನ ಗ್ರಂಥವೂ ಸೇರಿದಂತೆಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಅವರು ಭಾಜನರಾಗಿದ್ದಾರೆ. ‘ಈ ಟಿವಿ’ ವಾಹಿನಿಯಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಭಾಗವಹಿಸಿದ ಯಕ್ಷಗಾನದ ಭಾಗವತರು ಎಂಬ ಕೀರ್ತಿಯೂ ಗಣಪತಿ ಭಟ್ಟರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT