ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ವಿರುದ್ಧ ಜನಜಾಗೃತಿ

ಜಿಲ್ಲೆಯ ಏಳು ಕಡೆ ವಿಶ್ವಹಿಂದೂ ಪರಿಷತ್ ಜನಜಾಗೃತಿ
Last Updated 28 ನವೆಂಬರ್ 2022, 16:30 IST
ಅಕ್ಷರ ಗಾತ್ರ

ಮಂಗಳೂರು: ನಗರದ ಗರೋಡಿ ಬಳಿ ಈಚೆಗೆ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟವನ್ನು ಖಂಡಿಸಿ ಹಾಗೂ ಕರಾವಳಿಯ ಭದ್ರತೆಗೆ ಸವಾಲೊಡ್ದುವ ಭಯೋತ್ಪಾದನೆ ಚಟುವಟಿಕೆ ಮಟ್ಟಹಾಕುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಬಜರಂಗದಳ ಹಾಗೂ ದುರ್ಗಾವಾಹಿನಿ ಸಂಘಟನೆಗಳ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಳು ಕಡೆ ಸೋಮವಾರ ಏಕಕಾಲದಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆದವು.

ನಗರದ ಅಂಬೇಡ್ಕರ್‌ ವೃತ್ತ, ಉರ್ವಸ್ಟೋರ್ ಜಂಕ್ಷನ್‌, ತೊಕ್ಕೊಟ್ಟು ಜಂಕ್ಷನ್, ಕಾವೂರು ಜಂಕ್ಷನ್‌, ಗುರುಪುರ ಕೈಕಂಬ, ಸುರತ್ಕಲ್ ಮತ್ತು ಮೂಡುಬಿದಿರೆಯಲ್ಲಿ ಈ ಸಂಘಟನೆಗಳ ಕಾರ್ಯಕರ್ತರು ರಸ್ತೆಯ ಬದಿ ಸಾಲಾಗಿ ನಿಂತು ಭಿತ್ತಿಪತ್ರ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಬೆಳಿಗ್ಗೆ 9ರಿಂದ 10 ಗಂಟೆವರೆಗೆ ನಡೆದ ಈ ಜನಜಾಗೃತಿ ಜಾಥಾದಲ್ಲಿ ಈ ಸಂಘಟನೆಗಳ ಪ್ರಮುಖರು ಭಯೋತ್ಪಾದನೆ ಚಟುವಟಿಕೆ ವಿರುದ್ಧ ಘೋಷಣೆ ಕೂಗಿದರು. ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿರುವವರನ್ನು ಹಾಗೂ ಅವರಿಗೆ ಬೆಂಬಲ ನೀಡುವವರನ್ನು ಬಂಧಿಸಬೇಕು. ಈ ಪಿಡುಗನ್ನು ಬುಡಸಮೇತ ಮಟ್ಟಹಾಕಬೇಕು ಎಂದು ಒತ್ತಾಯಿಸಿದರು.

ನಗರದ ಅಂಬೇಡ್ಕರ್‌ ವೃತ್ತದ ಬಳಿ ನಡೆದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ದಿವಾಕರ ಪಾಂಡೇಶ್ವರ, ಬಿಜೆಪಿ ಮಂಗಳೂರು ದಕ್ಷಿಣ ಕ್ಷೇತ್ರ ಘಟಕದ ಅಧ್ಯಕ್ಷ ವಿಜಯ್‌ ಕುಮಾರ್‌ ಶೆಟ್ಟಿ, ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಶರಣ್‌ ಪಂಪ್‌ವೆಲ್‌, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್‌, ಬಜರಂಗ ದಳದ ವಿಭಾಗ ಸಂಚಾಲಕ ಭುಜಂಗ ಕುಲಾಲ್‌ ಹಾಗೂ ಜಿಲ್ಲಾ ಸಂಚಾಲಕ ಪುನೀತ್‌ ಅತ್ತಾವರ ಹಾಗೂ ಇತರರು ಭಾಗವಹಿಸಿದರು.

ಉರ್ವಸ್ಟೋರ್‌ ಜಂಕ್ಷನ್‌ನಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅಖಿಲ ಭಾರತೀಯ ಸಂತ ಸಮಿತಿಯ ಕರ್ನಾಟಕ ಪ್ರದೇಶ ಪ್ರಮುಖ್ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ‘ದೇಶವನ್ನು 2047ರೊಳಗೆ ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸುವ ಹುನ್ನಾರ ನಡೆದಿದೆ. ಇದಕ್ಕೆ ಹೊಸ ಹೊಸ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಯುವತಿಯರನ್ನು ಗುರಿಯನ್ನಾಗಿಸಿ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ. ಇದರಿಂದ ಒಂದು ತಲೆಮಾರನ್ನೇ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂಬ ತಂತ್ರ ಅವರದು. ಬಾಂಬ್‌ ಸ್ಫೋಟ, ಮಾದನ ವಸ್ತುಗಳ ನಶೆಗೆ ಯುವಜನರು ಬಲಿಯಾಗುವಂತೆ ಮಾಡುವತಂತ್ರಗಳನ್ನೂ ಅನುಸರಿಸುತ್ತಿದ್ದಾರೆ. ಇದರ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT