ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲ ಮಾಲಿನ್ಯದ ಸಂಘರ್ಷ

ಕೈಗಾರಿಕೆಗಳ ಮೇಲೆ ಹೋರಾಟಗಾರರ ಕೆಂಗಣ್ಣು: ನಿಯಂತ್ರಣಕ್ಕೆ ಅಧಿಕಾರಿಗಳ ಸಾಹಸ; ನೀರಿಗೆ ಪೂಜನೀಯ ಸ್ಥಾನದ ಅನಿವಾರ್ಯ
Published 11 ಮಾರ್ಚ್ 2024, 6:33 IST
Last Updated 11 ಮಾರ್ಚ್ 2024, 6:33 IST
ಅಕ್ಷರ ಗಾತ್ರ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಮಂಗಳೂರು–ಬೆಂಗಳೂರು ನಡುವೆ ಓಡಾಡುವವರು ಫರಂಗಿಪೇಟೆ ಸಮೀಪದ ಹಳೆಯ, ಸಣ್ಣ ಸೇತುವೆ ಸಮೀಪಿಸುತ್ತಿದ್ದಂತೆ ಮೂಗುಮುಚ್ಚಿಕೊಳ್ಳದೇ ಇರಲು ಸಾಧ್ಯವೇ ಇಲ್ಲ. ಪಕ್ಕದಲ್ಲೇ ಹರಿಯುವ ನೇತ್ರಾವತಿ ನದಿಗೆ ಈಚೆ ಬದಿ, 200–300 ಮೀಟರ್ ದೂರದ ಹಳ್ಳದ ನೀರು ಸೇರುವ ಈ ಜಾಗ ಈಚಿನ ವರ್ಷಗಳಲ್ಲಿ ಮಾಲಿನ್ಯ ಎಸೆಯುವ ‘ತೊಟ್ಟಿ’ಯಾಗಿ ಮಾರ್ಪಟ್ಟಿರುವುದೇ ಈ ದುರ್ವಾಸನೆಯ ಮೂಲ.

ಇತ್ತ ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಸೇತುವೆ ಬಳಿ ಬೆಳಿಗ್ಗೆ ಒಂದಿಷ್ಟು ಸಮಯ ನಿಂತು ನೋಡಿದರೆ ಬಸ್‌ಗಳು ಸೇತುವೆ ಮೇಲೆ ತಲುಪುತ್ತಿದ್ದಂತೆ ದೊಡ್ಡ ಹೂವಿನ ಹಾರಗಳು ಫಲ್ಗುಣಿ ನದಿಗೆ ಬೀಳುವ ದೃಶ್ಯ ನಿತ್ಯದ್ದು. ಫರಂಗಿಪೇಟೆಯಿಂದ ಸ್ವಲ್ಪ ಮುಂದೆ ಸಾಗಿದರೆ ಬ್ರಹ್ಮರಕೂಟ್ಲುವಿನಲ್ಲಿ ಹಳ್ಳದ ನೀರು ನೇತ್ರಾವತಿಗೆ ಸೇರುವಲ್ಲೂ ಹೀಗೆ ವಾಹನಗಳಿಂದ ಹೂಮಾಲೆಯನ್ನು ‘ಅರ್ಪಿಸುವ’ ನೋಟ ದಿನವೂ ಸಿಗುತ್ತದೆ.

ಇಲ್ಲಿ, ಒಂದು ನಂಬಿಕೆಯಾದರೆ ಮತ್ತೊಂದು ಅವಿವೇಕ ಮತ್ತು ನಿಷ್ಕಾಳಜಿಯ ದರ್ಶನ. ದೇವರಿಗೆ ಅರ್ಪಿಸಿದ ಮಾಲೆಯನ್ನು ನದಿಗೆ ಎಸೆಯುವುದರಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ ನೂರಾರು ಹಾರಗಳು ಪ್ರತಿ ನಿತ್ಯ ನದಿಯ ಪಾಲಾಗುತ್ತವೆ. ತಿಂದು ಉಳಿದ ಆಹಾರ, ಮನೆಯಲ್ಲಿ ಉತ್ಪಾದನೆಯಾದ ತ್ಯಾಜ್ಯ ಇತ್ಯಾದಿಗಳನ್ನು ಜಲಮೂಲಗಳಿಗೆ ಎಸೆಯುವ ಪರಿಪಾಠ ನಾಗರಿಕತೆಗೆ ಸಮಾನವಾಗಿ ಬೆಳೆಯುತ್ತಿರುವುದು ಪರಿಸರ ಪ್ರಿಯರಲ್ಲಿ ಅಚ್ಚರಿ ಉಂಟುಮಾಡಿದೆ.‌

ಇದು ನದಿಗಳ ಒಡಲನ್ನು ಮಲಿನಗೊಳಿಸುತ್ತಿದ್ದರೆ ಅತಿಯಾದ ಅಭಿವೃದ್ಧಿ ಚಟುವಟಿಕೆಗಳಿಂದ ನದಿಪಾತ್ರಗಳು ಅತಿಕ್ರಮಣಕ್ಕೆ ಒಳಗಾಗಿ ವಿಸ್ತಾರ ಕಳೆದುಕೊಳ್ಳುತ್ತಿರುವುದು ಮತ್ತೊಂದು ಆತಂಕದ ವಿಷಯ. ಇದೆಲ್ಲದರ ಜೊತೆಯಲ್ಲಿ ನದಿಪಾತ್ರಗಳಲ್ಲಿ ಎದ್ದುನಿಂತಿರುವ ಕೈಗಾರಿಕೆಗಳು ಮತ್ತು ವಸತಿ ಪ್ರದೇಶಗಳಾಗಿ ಮಾರ್ಪಡುತ್ತಿರುವ ಜಲಾನಯನ ಪ್ರದೇಶಗಳು ನದಿಗೆ ರಾಸಾಯನಿಕ ಮತ್ತು ಇತರ ತ್ಯಾಜ್ಯವನ್ನು ಬಿಡುತ್ತಿರುವುದರಿಂದ ಜೀವವೈವಿಧ್ಯ ನಾಶವಾಗುತ್ತಿರುವುದು ಕೂಡ ಚಿಂತಕರ ನಿದ್ದೆಗೆಡಿಸಿದೆ.

ಮಂಗಳೂರು ಸುತ್ತಮುತ್ತ ನದಿಗಳ, ವಿಶೇಷವಾಗಿ ಫಲ್ಗುಣಿಯ ಒಡಲಿಗೆ ಮತ್ತೊಮ್ಮೆ ಕಂಟಕ ಉಂಟಾಗಿದೆ. ಇದು ಪ್ರತಿ ಬಾರಿ ಮಳೆಗಾಲ ಆರಂಭಕ್ಕೆ ಮುನ್ನ ಆಗುವ ಸಹಜ ಪ್ರಕ್ರಿಯೆ ಎಂದು ಅಧಿಕಾರಿಗಳು ಬಿಂಬಿಸಿದರೆ ಕೈಗಾರಿಕೆಗಳ ಮೇಲೆ ನಿಯಂತ್ರಣ ಸಾಧಿಸದೇ ಇದ್ದರೆ ಭವಿಷ್ಯದಲ್ಲಿ ನದಿ ಮತ್ತು ಜಲಚರಗಳ ಪತ್ತೆಯೇ ಇಲ್ಲದಂತಾಗಲಿದೆ ಎಂಬುದು ಹೋರಾಟಗಾರರ ಆತಂಕದ ಮಾತು.

ನೇತ್ರಾವತಿ, ಕುಮಾರಧಾರ, ಫಲ್ಗುಣಿ, ನಂದಿನಿ ಮತ್ತು ಶಾಂಭವಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಗಳು. ಇವೆಲ್ಲವೂ ಪೂರ್ವದ ಘಟ್ಟ–ಬೆಟ್ಟಗಳ ಮೂಲಕ ಹರಿದು ಬಂದು ಮಂಗಳೂರು ಸುತ್ತಮುತ್ತ ಅರಬ್ಬಿ ಸಮುದ್ರವನ್ನು ಸೇರುತ್ತವೆ. ಹಾದಿಯುದ್ದಕ್ಕೂ ಮಾಲಿನ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ನಗರವನ್ನು ಪ್ರವೇಶಿಸಿ ಕಡಲಿನೊಡಲು ಸೇರುವ ಹಂತದಲ್ಲಿ ಮಾಲಿನ್ಯದ ಮಹಾದರ್ಶನ ಆಗುತ್ತದೆ.

ಜನಜಾಗೃತಿ, ಪರಿಸರವಾದಿಗಳ ಹೋರಾಟದಿಂದಾಗಿ ನೇತ್ರಾವತಿ, ನಂದಿನಿ ಮತ್ತು ಫಲ್ಗುಣಿಯಲ್ಲಿ ಹೆಚ್ಚು ಸಮಸ್ಯೆಗಳು ಇಲ್ಲ. ಆದರೆ ಫಲ್ಗುಣಿಯ ಮಾಲಿನ್ಯ ಅನೇಕ ವರ್ಷಗಳಿಂದ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಈ ವಿಷಯ ರಾಷ್ಟ್ರೀಯ ಹಸಿರು ನ್ಯಾಯಪೀಠದ ಅಂಗಣಕ್ಕೂ ತಲುಪಿದ್ದು ಜಿಲ್ಲಾಧಿಕಾರಿ ನೇತೃತ್ವದಲ್ಲಿ, ಮಾಲಿನ್ಯ ನಿಯಂತ್ರಣ ಮಂಡಳಿ ನೋಡಲ್ ಏಜೆನ್ಸಿಯಾಗಿರುವ ಜಂಟಿ ಸಮಿತಿಯೂ ಸ್ಥಾಪನೆಯಾಗಿದೆ. ಅದರೂ ಮಾಲಿನ್ಯಕ್ಕೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ ಎಂಬ ದೂರು ನಿರಂತರವಾಗಿ ಕೇಳಿಬರುತ್ತಿದೆ.

ಕುದುರೆಮುಖದಲ್ಲಿ ಹುಟ್ಟಿ ಪಶ್ಚಿಮ ಕರಾವಳಿಯತ್ತ ಹರಿಯುವ ಫಲ್ಗುಣಿ ನದಿ 2017ರಲ್ಲೇ ಮಾಲಿನ್ಯದ ವಿಷಯದಲ್ಲಿ ಸುದ್ದಿಯಾಗಿತ್ತು. ಮರವೂರು ಬಳಿ ಸತ್ತ ಮೀನುಗಳ ರಾಶಿ ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿದಾಗ ಮಾಲಿನ್ಯ ಖಾತರಿಯಾಗಿತ್ತು. ನಂತರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚನೆಯಾಯಿತು. ಇದೇ ಸಂದರ್ಭದಲ್ಲಿ ಕೆಂಜಾರು, ಪಡುಕೋಡಿ, ಬಂಗ್ರಕೂಳೂರು, ಮೇಲುಕೊಪ್ಪಲು, ಕುಂಜತ್ತಬೈಲ್, ಮರಕಡ ಮುಂತಾದ ಪ್ರದೇಶಗಳ ಜನರು ಬೀದಿಗಿಳಿದರು. ಹಾಗೆ ನದಿಬದಿಯ ಜನರು, ಪರಿಸರ ಪ್ರಿಯರು, ಕೈಗಾರಿಕೆ ಮತ್ತು ಆಡಳಿತದ ನಡುವಿನ ಸಂಘರ್ಷ ಆರಂಭಗೊಂಡಿತು. ಈಗ ನದಿಯ ನೀರು ಕಪ್ಪಾಗತೊಡಗಿದ್ದರಿಂದ ಮತ್ತೊಮ್ಮೆ ಹೋರಾಟದ ಕಾವು ಹೆಚ್ಚಾಗಿದೆ.

ಯಾಕೆ ಸಂಘರ್ಷ?

ಅವೈಜ್ಞಾನಿಕ ಬೈಕಂಪಾಡಿ ಕೈಗಾರಿಕಾ ವಲಯ ಮತ್ತು ಅದರ ಸುತ್ತಮುತ್ತ ನದಿಪಾತ್ರದಲ್ಲಿ ಬೆಳೆದಿರುವ ಸಾಲು ಸಾಲು ಬೃಹತ್ ಕೈಗಾರಿಕೆಗಳ ಮಾಲಿನ್ಯ ನದಿಯನ್ನು ಸೇರುತ್ತಿರುವುದೇ ಫಲ್ಗುಣಿ ಹಾಳಾಗಲು ಕಾರಣ ಎಂಬುದು ಹೋರಾಟಗಾರರ ಆರೋಪ. ಬಜಪೆ ಅವರೆಗೂ ನಿರಾಳವಾಗಿ ಹರಿಯುವ ಫಲ್ಗುಣಿ ನಂತರ ಮಾಲಿನ್ಯದ ಕೊಂಪೆಯಾಗಿದೆ ಎಂದು ಅವರು ತಮ್ಮ ವಾದಕ್ಕೆ ಸಾಕ್ಷಿ ನೀಡುತ್ತಾರೆ. ತಾಜ್ಯ ಸಂಸ್ಕರಣ ಘಟಕಗಳನ್ನು ಸ್ಥಾಪಿಸದೆ ರಾಸಾಯನಿಕಗಳನ್ನು ನದಿಗೆ ಬಿಡಲಾಗುತ್ತಿದೆ ಎಂದು ದೂರುತ್ತಾರೆ.

ಮಾಲಿನ್ಯಕ್ಕೆ ಕಾರಣಗಳು ಹಲವು ಇವೆ. ಕೈಗಾರಿಕೆಗಳ ಪಾತ್ರವೂ ಇದರಲ್ಲಿ ಇದೆ. ಆದರೆ ಜನವಸತಿ ಪ್ರದೇಶಗಳು ವಿಸ್ತಾರವಾಗುತ್ತಿರುವುದು ಮತ್ತು ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು ಕೂಡ ಫಲ್ಗುಣಿಯ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅಭಿಪ್ರಾಯಪಡುತ್ತಿದ್ದಾರೆ.

ಸಿಸಿಟಿವಿ ಕ್ಯಾಮೆರಾ; ಜನಜಾಗೃತಿ

ಜಿಲ್ಲೆಯ ಅನೇಕ ಭಾಗಗಳಲ್ಲಿ ಜನರ ಅನಾಗರಿಕ ವರ್ತನೆಯಿಂದಾಗಿ ಜಲಮೂಲಗಳು ಮಲಿನ ಆಗುತ್ತಿವೆ. ಆದರೆ ಹಲವು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರಿಂದ ಮತ್ತು ಜನಜಾಗೃತಿ ಮೂಡಿರುವುದರಿಂದ ಮಾಲಿನ್ಯ ನಿಯಂತ್ರಣಕ್ಕೆ ಬಂದಿದೆ. ಪಯಸ್ವಿನಿ ನದಿಯ ಉಗಮ ಸ್ಥಳ ಸಂಪಾಜೆ ಬಳಿ ಪೊಲೀಸ್ ಇಲಾಖೆ ವತಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಶಾಂತಮಂಗಲ ಬಳಿ ಕೋಳಿ ಮಾಂಸದ ತ್ಯಾಜ್ಯ ಎಸೆಯುತ್ತಿದ್ದಲ್ಲಿ 4 ವರ್ಷಗಳ ಹಿಂದೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸುಳ್ಯ ಸಮೀಪದ ಅರಂಬೂರಿನಲ್ಲಿ ಹೊಳೆ ದಾಟುತ್ತಿದ್ದ ಜಾಗವನ್ನು ವಾಹನ ತೊಳೆಯುವುದಕ್ಕೂ ಬಳಸಲಾಗುತ್ತಿತ್ತು. ಸೇತುವೆ ನಿರ್ಮಾಣ ಆದ ನಂತರ ಈ ಸಮಸ್ಯೆ ಪರಿಹಾರವಾಗಿದೆ.

ನೇತ್ರಾವತಿ ನದಿಯಲ್ಲಿ ಅಜಿಲಮೊಗರು, ತಂಬೆ, ಪಾಣೆಮಂಗಳೂರು ಮತ್ತಿತರ ಕಡೆಗಳಲ್ಲೂ ವಾಹನ ತೊಳೆಯುವುದು ನಿಯಂತ್ರಣಕ್ಕೆ ಬಂದಿದೆ. ಸಂಗಬೆಟ್ಟು ಮತ್ತು ಸಿದ್ಧಕಟ್ಟೆ ಕಡೆಯಿಂದ ಹರಿದು ಪೊಳಲಿ ಮೂಲಕ ಮುಂದುವರಿಯುವ ಫಲ್ಗುಣಿ ನದಿಗೆ ಶೌಚಾಲಯದ ನೀರು ಬಿಡುತ್ತಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿದೆ.

ಜಲಮೂಲಗಳಿಗೆ ತ್ಯಾಜ್ಯವನ್ನು ತಳ್ಳುವ ದುರಭ್ಯಾಸ ನಿಲ್ಲದಿದ್ದರೆ ನದಿಗಳ ಬದಿ ಈ ರೀತಿ ಕಲುಷಿತಗೊಳ್ಳುತ್ತಲೇ ಇರುತ್ತದೆ
ಜಲಮೂಲಗಳಿಗೆ ತ್ಯಾಜ್ಯವನ್ನು ತಳ್ಳುವ ದುರಭ್ಯಾಸ ನಿಲ್ಲದಿದ್ದರೆ ನದಿಗಳ ಬದಿ ಈ ರೀತಿ ಕಲುಷಿತಗೊಳ್ಳುತ್ತಲೇ ಇರುತ್ತದೆ
ಮುನೀರ್ ಕಾಟಿಪಳ್ಳ
ಮುನೀರ್ ಕಾಟಿಪಳ್ಳ
ವಿಜಯಾ ಹೆಗಡೆ
ವಿಜಯಾ ಹೆಗಡೆ

‘ಶಾಶ್ವತ ಮಾಲಿನ್ಯ’ ಅಪಾಯಕಾರಿ ಕರಗಿ ನೀರಿನೊಂದಿಗೆ ಸೇರಬಲ್ಲ ವಸ್ತುಗಳು ನದಿಗೆ ಬಿದ್ದರೆ ಮಾಲಿನ್ಯ ಆಗುತ್ತದೆ. ಆದರೆ ಅವು ಹೆಚ್ಚು ಅಪಾಯಕಾರಿಯಲ್ಲ. ಕೈಗಾರಿಕೆಗಳ ರಾಸಾಯನಿಕ ಮತ್ತು ಕಟ್ಟಡ ನಿರ್ಮಾಣದ ತ್ಯಾಜ್ಯ ನದಿಯನ್ನು ಬೇರೆ ಬೇರೆ ರೀತಿಯಲ್ಲಿ ಕಾಡುತ್ತದೆ. ನಗರೀಕರಣ ವೇಗವಾಗಿ ವಿಸ್ತಾರಗೊಳ್ಳುತ್ತಿರುವ ಮಂಗಳೂರಿನ ಸುತ್ತಮುತ್ತ ಬಹಳಷ್ಟು ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಅವುಗಳಿಗೆ ಸಂಬಂಧಿಸಿದ ತ್ಯಾಜ್ಯವನ್ನು ನದಿಯ ಬದಿಯಲ್ಲಿ ಸುರಿಯುತ್ತಾರೆ. ಇದರಿಂದ ನದಿಪಾತ್ರ ಸಣ್ಣದಾಗುತ್ತಿದೆ. ಜೋಕಟ್ಟೆ ಬಳಿ 800 ಎಕರೆಯಷ್ಟಿದ್ದ ತೇವಾಂಶ ಪ್ರದೇಶ ಈಗ 200 ಎಕರೆಗೆ ಇಳಿದಿದೆ ಎಂಬುದು ಪರಿಸ್ಥಿತಿ ಎಷ್ಟು ಗಂಭೀರ ಆಗಿದೆ ಎಂಬುದನ್ನು ಸೂಚಿಸುತ್ತದೆ. ಇಂಥ ಸ್ಥಿತಿಯಿಂದ ಜೀವ ಜಲಕ್ಕೂ ಜೀವಜಾಲಕ್ಕೂ ಕಂಟಕ ಉಂಟಾಗುತ್ತದೆ. –ರಾಮಚಂದ್ರ ಭಟ್‌ ನಿವೃತ್ತ ಪ್ರಾಧ್ಯಾಪಕ

ಕೈಗಾರಿಕೆಗಳಿಂದಲೇ ಕಂಟಕ ಫಲ್ಗುಣಿ ನದಿಯ ಮಾಲಿನ್ಯಕ್ಕೆ ಕೈಗಾರಿಕೆಗಳಿಂದ ಬಿಡುವ ರಾಸಾಯನಿಕಗಳೇ ಕಾರಣ. ಕೈಗಾರಿಕೆ ಆರಂಭಿಸುವಾಗ ತ್ಯಾಜ್ಯ ಸಂಸ್ಕರಣೆಗೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುವ ಮಾಲೀಕರು ನಂತರ ಅದರ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಮಾಲಿನ್ಯ ನಿಯಂತ್ರಣ ಮಾಡಬೇಕಾದವರು ಸಾರ್ವಜನಿಕರಿಂದ ಒತ್ತಡ ಬಂದಾಗ ಮಾತ್ರ ಚುರುಕಾಗುತ್ತಾರೆ. ಮತ್ತೆ ಎಲ್ಲವೂ ಎಂದಿನಂತೆ ಮುಂದುವರಿಯುತ್ತದೆ. ಫಲ್ಗುಣಿ ನದಿ ದಂಡೆಯಲ್ಲಿ ಒಂದು ಸುತ್ತು ಹಾಕಿದರೆ ಮಾಲಿನ್ಯದ ಮೂಲವನ್ನು ಪತ್ತೆ ಹಚ್ಚುವುದು ದೊಡ್ಡ ಕೆಲಸವೇನೂ ಅಲ್ಲ. ಎಸ್‌.ಜಿ.ಮಯ್ಯ ಪರಿಸರವಾದಿ

ಮಾಲಿನ್ಯದ ಕುಣಿಕೆ; ಮರಳು ಗಣಿಗಾರಿಕೆ ಫಲ್ಗುಣಿ ಸುತ್ತಮುತ್ತಲಿನ ಕೈಗಾಕೆಗಳು ನದಿಗೆ ಮಾಲಿನ್ಯದ ಕುಣಿಕೆ ಹಾಕಿವೆ. ಬೈಕಂಪಾಡಿ ಪ್ರದೇಶದ ಅನೇಕ ಕೈಗಾರಿಕೆಗಳಲ್ಲಿ ತ್ಯಾಜ್ಯ ನಿರ್ವಹಣಾ ಘಟಕಗಳು ಇಲ್ಲ. ದೊಡ್ಡ ಕೈಗಾರಿಕೆಗಳಲ್ಲಿ ಇದ್ದರೂ ಅನೇಕ ಸಂದರ್ಭದಲ್ಲಿ ಅವು ತುಂಬಿ ತುಳುಕುತ್ತವೆ. ಹಾಗೆ ತುಳುಕಿದ್ದೆಲ್ಲವೂ ನದಿಗೆ ಸೇರುತ್ತದೆ. ಹೀಗೆ ಮಾಲಿನ್ಯ ಬಿಡುವುದನ್ನು ಕಣ್ಣಾರೆ ಕಂಡು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ತಿಳಿಸಿದರು. ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಣಿಕಾರಿಕೆಯೂ ನದಿಗೆ ಕಂಟಕ ಉಂಟುಮಾಡಿದೆ. ಮಾಲಿನ್ಯಕ್ಕೆ ಕೈಗಾಗಿಕೆಗಳು ಕಾರಣ ಎಂದು ಹೇಳಿದರೆ ಜನವಸತಿ ಪ್ರದೇಶಗಳಿಂದ ಹೆಚ್ಚು ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಆದರೆ ಈಗ ನೀರು ಕಪ್ಪಿಟ್ಟಿರುವ ಪ್ರದೇಶದಲ್ಲಿ ಜನವಾಸ ಇಲ್ಲ ಎಂಬುದು ಗಮನಾರ್ಹ ಎಂದು ಅವರು ಹೇಳಿದರು.

ಕೈಗಾರಿಕಾ ಪ್ರದೇಶಕ್ಕೆ ತ್ಯಾಜ್ಯ ನಿರ್ವಹಣಾ ಘಟಕ ನೀರು ಕಪ್ಪುಬಣ್ಣಕ್ಕೆ ತಿರುಗುವ ಬೆಳವಣಿಗೆ ಅನೇಕ ನದಿಗಳಲ್ಲಿ ಕಂಡುಬರುತ್ತಿದೆ. ಫಲ್ಗುಣಿ ನದಿಯ ಮಾಲಿನ್ಯಕ್ಕೆ ಕಾರಣ ಎಂದು ಹೇಳಲಾಗುವ ಕೈಗಾರಿಕೆಗಳ ಪೈಕಿ ಕೆಲವೊಂದು ಕಡೆಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಗುಣಮಟ್ಟದ ವ್ಯವಸ್ಥೆ ಇದೆ. ಕೆಲವು ಕೈಗಾರಿಕೆಗಳು ಮಲಿನ ನೀರನ್ನು ಸಂಪೂರ್ಣವಾಗಿ ಮರುಬಳಕೆ ಮಾಡುತ್ತಿವೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ವಲಯ ಪರಿಸರ ಅಧಿಕಾರಿ ವಿಜಯಾ ಹೆಗಡೆ ತಿಳಿಸಿದರು.ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಸೂಚಿಸಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವವನ್ನು ಕಳೆದ ಅಕ್ಟೋಬರ್‌ನಲ್ಲಿ ಕಳುಹಿಸಲಾಗಿದೆ. ಅದರ ವಿಚಾರಣೆ ಆಗಬೇಕಷ್ಟೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT