ಸೋಮವಾರ, ಜೂನ್ 27, 2022
27 °C
ನದಿಗಳಂತೆ ಹರಿಯುತ್ತಿರುವ ತೋಡುಗಳು l 2 ವರ್ಷಗಳಿಂದ ನಿರಂತರ ಭೂಕುಸಿತ l ಆತಂಕದಲ್ಲಿ ಜನರು

ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ ಪಶ್ಚಿಮ ಘಟ್ಟ

ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಳೆ ಶುರುವಾಗುತ್ತಿದ್ದಂತೆಯೇ ಪಶ್ಚಿಮ ಘಟ್ಟದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ. ಕಳೆದ ವರ್ಷ ಮಡಿಕೇರಿ, ಶಿರಾಡಿ ಘಾಟಿಯಲ್ಲಿ ಸಾಕಷ್ಟು ಅನಾಹುತ ಉಂಟುಮಾಡಿದ್ದ ಭೂ ಕುಸಿತ, ಈ ಬಾರಿ ಬೆಳ್ತಂಗಡಿ ತಾಲ್ಲೂಕಿನ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸಂಭವಿಸಿದೆ.

ಪಶ್ಚಿಮ ಘಟ್ಟದಲ್ಲಿ ಹೆಚ್ಚುತ್ತಿರುವ ಭೂ ಕುಸಿತಕ್ಕೆ ಮಣ್ಣಿನ ಪದರ ಶಿಥಿಲವಾದುದು ಕಾರಣವೆ? ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅರಣ್ಯ ನಾಶವೆ? ಅಥವಾ ಬೇರೆ ಯಾವುದಾದರೂ ಕಾರಣವಿದೆಯೆ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಪಶ್ಚಿಮ ಘಟ್ಟ ಪ್ರದೇಶದ ತಪ್ಪಲಿನಲ್ಲಿರುವ ಬಲ್ಲಾಳರಾಯನ ದುರ್ಗ, ಆನಡ್ಕ ಫಾಲ್ಸ್, ಎರ್ಮಾಯಿ ಫಾಲ್ಸ್, ದಿಡುಪೆ, ಕೊಲ್ಲಿ, ಕಿಲ್ಲೂರು, ಶಿಶಿಲ, ಕಡಿರುದ್ಯಾವರ, ನಿಡಿಗಲ್, ಇಂದಬೆಟ್ಟು, ಬಾಂಜಾರು ಮಲೆ, ಸುಳ್ಯೋಡಿ, ನಾವೂರು, ನೆರಿಯ, ಚಿಬಿದ್ರೆ, ಅಂತರ, ಕೊಳಂಬೆ, ಪರ್ಪಳ ಮುಂತಾದ ಪ್ರದೇಶಗಳಲ್ಲಿ ದಿಢೀರ್‌ ನೀರಿನ ಮಟ್ಟ ಏರಿಕೆಯಾಗಿ ಅಲ್ಲಿ ವಾಸವಿರುವವರ ಸರ್ವಸ್ವವೂ ಕೊಚ್ಚಿ ಹೋಗಿದೆ. ಕೆಲವು ಕಡೆ ನದಿಗಳೇ ದಿಕ್ಕು ಬದಲಿಸಿ ಹರಿದರೆ, ಇನ್ನು ಕೆಲವೆಡೆ ಸಣ್ಣ ತೋಡುಗಳೇ ನದಿಗಳಂತೆ ಹರಿದಿವೆ. ಭೂ ಕುಸಿತದ ಪರಿಣಾಮ ಇತ್ತ ನೇತ್ರಾವತಿ, ಕುಮಾರಧಾರಾ ನದಿಗಳು ಹಲವಾರು ವರ್ಷಗಳ ಬಳಿಕ ದೊಡ್ಡಮಟ್ಟದಲ್ಲಿ ಉಕ್ಕಿ ಹರಿದಿವೆ.

ಶಿಲಾ ಪದರದ ಅಂತರ ಹೆಚ್ಚಳ: ‘ಪಶ್ಚಿಮ ಘಟ್ಟದ ಬೆಟ್ಟಗಳ ಮೇಲ್ಮೈ ಪದರದ ಹುಲ್ಲುಗಾವಲು ಮತ್ತು ಕಣಿವೆಗಳ ಶೋಲಾ ಅರಣ್ಯ ನಡುವೆ ಒಂದಕ್ಕೊಂದು ಸಂಬಂಧವಿದೆ. ಮಳೆ ನೀರನ್ನು ಬೆಟ್ಟದ ಮೇಲಿನ ಹುಲ್ಲುಗಾವಲು ತನ್ನ ಒಳ ಪದರದ ಜಲಪಥಗಳ ಮೂಲಕ ಕೆಳಗಡೆ ಇರುವ ಶೋಲಾ ಅರಣ್ಯಕ್ಕೆ ಕಳುಹಿಸುತ್ತದೆ. ಈ ಶೋಲಾ ಅರಣ್ಯದ ಒಳಗಡೆ ಇರುವ ಶಿಲಾ ಪದರಗಳಲ್ಲಿ ಶೇಖರಣೆಯಾದ ನೀರು, ಮಳೆಗಾಲ ಮುಗಿದು ಇನ್ನೊಂದು ಮಳೆಗಾಲದವರೆಗೆ ನದಿಗೆ ನೀರು ಹರಿಸಿ, ನದಿಯನ್ನು ವರ್ಷಪೂರ್ತಿ ಜೀವಂತವಾಗಿ ಇಡುತ್ತದೆ’ ಎಂದು ಪರಿಸರವಾದಿ ದಿನೇಶ್‌ ಹೊಳ್ಳ ಹೇಳುತ್ತಾರೆ.

‘ಈ ಶೋಲಾ ಅರಣ್ಯದಿಂದಾಗಿ ಅಲ್ಲಿ ಜಲಪಾತಗಳಿದ್ದು, ಜಲಪಾತಗಳ ನೀರು ವರ್ಷವಿಡೀ ನೇತ್ರಾವತಿಯ ಉಪನದಿಗಳಾಗಿ ಹರಿದು ಮುಖ್ಯ ನದಿಯನ್ನು ಸೇರುತ್ತವೆ. ಈ ಬಾರಿ ಹೀಗೆ ಭೂ ಕುಸಿತವಾಗಲು ಪಶ್ಚಿಮ ಘಟ್ಟದ ಮೇಲ್ಮೈ ಪದರ ಸಡಿಲವಾಗುತ್ತಿದೆ’ ಎನ್ನುತ್ತಾರೆ ಅವರು.

ಧರ್ಮಸ್ಥಳದಿಂದ ಪಶ್ಚಿಮಘಟ್ಟ ಅಧ್ಯಯನ

‘ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪ್ರಾಕೃತಿಕ ಸಮತೋಲನ ಕಾಪಾಡಿಕೊಳ್ಳಲು ಹಾಗೂ ಅಲ್ಲಿ ವಾಸಿಸುವ ಜನರ ಹಿತಾಸಕ್ತಿ ರಕ್ಷಣೆಗಾಗಿ ಸಂಶೋಧನಾತ್ಮಕ ಅಧ್ಯಯನ ನಡೆಸಲು ರಾಷ್ಟ್ರಮಟ್ಟದ ಸಂಶೋಧನಾ ಸಂಸ್ಥೆಯಲ್ಲಿ ₹2 ಕೋಟಿ ನೆರವಿನೊಂದಿಗೆ ಪಶ್ಚಿಮಘಟ್ಟ ಅಧ್ಯಯನ ಪೀಠ ಸ್ಥಾಪಿಸಲಾಗುವುದು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

‘ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಈ ಬಾರಿ 500ಕ್ಕೂ ಅಧಿಕ ಸ್ಥಳಗಳಲ್ಲಿ ಭೂ ಕುಸಿತ ಉಂಟಾಗಿ ಆತಂಕಕ್ಕೆ ಕಾರಣವಾಗಿದೆ. ಪ್ರಾಕೃತಿಕ ದುರಂತದ ಸಾಧ್ಯತೆಗಳು ಹೆಚ್ಚಾಗಿವೆ. ಜೀವ ವೈವಿಧ್ಯಗಳಿಂದ ಕೂಡಿರುವ ಪಶ್ಚಿಮಘಟ್ಟ ಶ್ರೇಣಿಯು ಹಲವು ಕಾರಣಗಳಿಂದ ಸೂಕ್ಷ್ಮ ಸನ್ನಿವೇಶದ ಪ್ರದೇಶವಾಗಿದೆ’ ಎಂದು ಹೇಳಿದ್ದಾರೆ.

***

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಿಂದೆಯೂ ಭಾರೀ ಮಳೆಯಾಗುತ್ತಿತ್ತು. ಆದರೆ ಇಷ್ಟೊಂದು ಕುಸಿತವಾಗಿರಲಿಲ್ಲ. ಮಾನವನ ಅತಿಯಾದ ಹಸ್ತಕ್ಷೇಪ, ಕಾಳ್ಗಿಚ್ಚು ಇದಕ್ಕೆ ಕಾರಣ

-ದಿನೇಶ್‌ ಹೊಳ್ಳ, ಪರಿಸರವಾದಿ

ಎರಡು ವರ್ಷಗಳ ಕಾಲಮಿತಿಯೊಂದಿಗೆ ಅಧ್ಯಯನ ಪೀಠವು ಕ್ರಿಯಾಯೋಜನೆಯೊಂದಿಗೆ ಕಾರ್ಯ ನಿರ್ವಹಿಸಲಿದೆ. ಸಂಶೋಧನಾ ವರದಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು.

-ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು