ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಹಿಜಾಬ್ ನಿಷೇಧ ಹಿಂಪಡೆಯುವಂತೆ ಒತ್ತಾಯ

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ ಐವನ್‌ ಡಿಸೋಜಗೆ ಸನ್ಮಾನ
Published 7 ಜುಲೈ 2024, 5:12 IST
Last Updated 7 ಜುಲೈ 2024, 5:12 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯದ ಶಾಲಾ ಕಾಲೇಜುಗಳಲ್ಲಿ  ಜಾರಿಯಾಗಿದ್ದ ಹಿಜಾಬ್‌ ನಿಷೇಧ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಅಲ್ಪಸಂಖ್ಯಾತರ ಮೀಸಲಾತಿ ರದ್ದತಿ ನಿರ್ಧಾರವನ್ನು ಹಿಂಪಡೆದು, 2ಬಿ ಪ್ರವರ್ಗದ ಮೀಸಲಾತಿಯನ್ನು ಶೇ 4ರಿಂದ ಶೇ 7ಕ್ಕೆ ಹೆಚ್ಚಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಒತ್ತಾಯಿಸಿದೆ.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಅವರಿಗೆ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಅಬ್ದುಲ‌್ ನಾಸಿರ್ ಲಕ್ಕಿಸ್ಟಾರ್, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು.

‘ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯನ್ನು ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆದಾಗ ಅಮಾಯಕರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ಹಿಂಪಡೆಯಬೇಕು. ನಗರದಲ್ಲಿ ಈ ಕುರಿತ ಪ್ರತಿಭಟನೆ ಹತ್ತಿಕ್ಕಲು ನಡೆಸಿದ್ದ ಗೋಲಿಬಾರ್‌ನಲ್ಲಿ ಮಡಿದವರಿಗೆ ಆಗಿನ ಬಿಜೆಪಿ ನೇತೃತ್ವದ ಸರ್ಕಾರ ಪರಿಹಾರ ಘೋಷಿಸಿ, ನಂತರ ಹಿಂಪಡೆದಿತ್ತು. ಅದನ್ನು ಮತ್ತೆ ಮಂಜೂರು ಮಾಡಬೇಕು. ಆ ಗೋಲಿಬಾರ್ ಕುರಿತು ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

‘ರಾಜ್ಯದಲ್ಲಿ ಕೋಮುದ್ವೇಷ ಹುಟ್ಟಿಸುವ ಭಾಷಣ ಮಾಡುವವರ ಮತ್ತು ಕೋಮು ದ್ವೇಷ ಹರಡುವವರ ವಿರುದ್ಧ ದಾಖಲಾಗುವ ಎಫ್‌ಐಆರ್‌ಗಳಿಗೆ  ಹೈಕೋರ್ಟ್‌ನಿಂದ ತಡೆಯಾಜ್ಞೆ ತರುವ ಪರಿಪಾಠ ಹೆಚ್ಚುತ್ತಿದೆ. ಸರ್ಕಾರಿ ವಕೀಲರು ಇಂತಹ ಪ್ರಕರಣಗಳಲ್ಲಿ ಅಸಡ್ಡೆ ತೋರುತ್ತಿರುವುದು ಹಾಗೂ ಕರ್ತವ್ಯಲೋಪ ಎಸಗುತ್ತಿರುವುದು ಇದಕ್ಕೆ ಕಾರಣ. ಇಂತಹ ಹುದ್ದೆಗೆ ಪ್ರಾಮಾಣಿಕ ವ್ಯಕ್ತಿಗಳನ್ನೇ ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.

ಐವನ್‌ ಡಿಸೋಜ, ‘ಈ ಬೇಡಿಕೆಗಳ ಕುರಿತು ವಿಧಾನ ಮಂಡಲದಲ್ಲಿ ಪ್ರಸ್ತಾಪಿಸಿ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ಜಿಲ್ಲಾ ವಕ್ಫ್‌ ಅಧಿಕಾರಿ ಅಬೂಬಕ್ಕರ್, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಜಿನೇಂದ್ರ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಯಶೋಧರ, ಸಮುದಾಯದ ಮುಖಂಡರಾದ ಎಸ್.ಎಂ ರಷೀದ್, ಇಬ್ರಾಹಿಂ ಕೋಡಿಜಾಲ್, ಝಕರಿಯ ಜೋಕಟ್ಟೆ, ಶೇಖಬ್ಬ, ಬಿ.ಎಂ.ಮಮ್ತಾಜ್‌ ಅಲಿ, ಕೆ.ಅಶ್ರಫ್, ಮುಹಮ್ಮದ್ ಹ್ಯಾರಿಸ್, ಮನ್ಸೂರ್ ಅಜಾದ್, ಸಿರಾಜ್ ಬಜಪೆ, ಆಸಿಫ್‌, ಅಬ್ದುಲ್ ಜಲೀಲ್ ಕೃಷ್ಣಾಪುರ, ಮೂಸಬ್ಬ ಬ್ಯಾರಿ, ಯಾಸೀನ್ ಕುದ್ರೋಳಿ, ಅಜೀಜ್‌ ಕುದ್ರೋಳಿ, ಮಕ್ಬೂಲ್ ಜಾಮಿಯಾ ಕುದ್ರೋಳಿ, ಶಂಶುದ್ದೀನ್ ಕಂಡತ್ತಪಳ್ಳಿ, ನಿಸಾರ್ ಕರಾವಳಿ, ಸಾಲಿಹ್ ಬಜಪೆ, ಮುಕ್ತಾರ್, ಅಶ್ರಫ್ ಬದ್ರಿಯಾ, ನೌಸೀರ್, ಸಮಿತಿಯ ಉಪಾಧ್ಯಕ್ಷ ರಾದ ಫಕೀರಬ್ಬ ಮಾಸ್ಟರ್, ಎ.ಕೆ.ಜಮಾಲ್, ಅಬ್ದುಲ್ ರಹ್ಮಾನ್, ಅಶ್ರಫ್ ಕಿನಾರ, ಸದಸ್ಯರಾದ ಸಿದ್ದೀಕ್‌ ಕಾಜೂರು, ಹನೀಫ್‌ ಮಲ್ಲೂರು, ಶಾಕಿರ್ ಕಣ್ಣೂರು ಭಾಗವಹಿಸಿದ್ದರು. ಸೈದುದ್ದೀನ್ ಕಾರ್ಯಕ್ರಮ ನಿರರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT