ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಭ್ಯರ್ಥಿ ಬೃಜೇಶ್‌ಗೆ ಆರತಿ ಬೆಳಗಿ ದೇಣಿಗೆ ನೀಡಿದ ಮಹಿಳೆಯರು

Published 4 ಏಪ್ರಿಲ್ 2024, 5:22 IST
Last Updated 4 ಏಪ್ರಿಲ್ 2024, 5:22 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಗುರುವಾರ ನಾಮಪತ್ರ ಸಲ್ಲಿಸಲಿದ್ದು, ಅವರ ಇಡುಗಂಟಿಗೆ ನಗರದ ಕೆಲ ಮಹಿಳೆಯರು ದೇಣಿಗೆ ನೀಡಿ, ಬುಧವಾರ ಶುಭ ಹಾರೈಸಿದರು.

ಹೂವಿನ ವ್ಯಾಪಾರಿ ಯಶೋದಾ ಪಂಪ್‌ವೆಲ್‌, ಮೀನು ಮಾರಾಟ ಮಾಡುವ ಲಲಿತಾ ಪುರುಷೋತ್ತಮ್, ಸ್ಟೇಟ್‌ಬ್ಯಾಂಕ್‌ನಲ್ಲಿ ಒಣಮೀನು ವ್ಯಾಪಾರ ಮಾಡುವ ಕಲಾವತಿ, ಅನಸೂಯ, ಪೂರ್ಣಿಮಾ, ಶಾಂಭವಿ, ಕಾರ್ಮಿಕರಾದ ರಾಧಾ, ಬೀದಿ ನಾಯಿಗಳಿಗೆ ಆಹಾರ ಹಾಕುವ ರಜನಿ ಶೆಟ್ಟಿ ಅವರು ಪಕ್ಷದ ಚುನಾವಣಾ ಕಚೇರಿಯಲ್ಲಿ ಅಭ್ಯರ್ಥಿಗೆ ಆರತಿ ಬೆಳಗಿ, ತಿಲಕ ಇಟ್ಟು, ಹೂವಿನ ಹಾರ ಹಾಕಿ ದೇಣಿಗೆ ಮೊತ್ತವನ್ನು ಹಸ್ತಾಂತರಿಸಿದರು.

ಇಡುಗಂಟಿಗೆ ದೇಣಿಗೆ ನೀಡಿದ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸಿದ ಬೃಜೇಶ್‌ ಚೌಟ, ‘ಸೇನೆಯಲ್ಲಿ ನನಗೆ ಮಾದರಿಯಾಗಿದ್ದ, 1971ರ ಯುದ್ಧ ಗೆಲ್ಲಿಸಿಕೊಟ್ಟ ಮಾಣೆಕ್‌ ಷಾ ಜನ್ಮದಿನ ಇಂದು. ಸೇನೆಯಲ್ಲಿ ಅವರು 8ನೇ ಗೂರ್ಖಾ ರೆಜಿಮೆಂಟ್‌ನಲ್ಲಿದ್ದರು ಎಂಬ ಕಾರಣಕ್ಕೆ ನಾನೂ ಅದೇ ರೆಜಿಮೆಂಟ್‌ ಆಯ್ಕೆ ಮಾಡಿಕೊಂಡಿದ್ದೆ. ಹಿಂದವಿ ಸಾಮ್ರಾಜ್ಯ ಕಟ್ಟಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯ ತಿಥಿ ಇಂದು. ಅವರ ತಾಯಿ ಭವಾನಿ ಖಡ್ಗವನ್ನು ಕೊಟ್ಟು ಯುದ್ಧಕ್ಕೆ ಹರಸಿ ಕಳುಹಿಸಿಕೊಟ್ಟಿದ್ದರು. 20 ದಿನ ಚುನಾವಣೆಯ ಯುದ್ಧದಲ್ಲಿ ಹೋರಾಟ ಮಾಡಲು ನನಗೆ ಕೆಳ ಮಧ್ಯಮ ವರ್ಗದ ತಾಯಂದಿರ‌ ಆಶೀರ್ವಾದ ಸಿಕ್ಕಿದೆ. ಅದಕ್ಕಿಂತ ದೊಡ್ಡ ಖುಷಿ ಬೇರೆ ಯಾವುದೂ ಇಲ್ಲ’ ಎಂದರು.

‘ನಾರಿ ಶಕ್ತಿ ಮೇಲೆ ವಿಶ್ವಾಸ ಇಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ನಾರಿಶಕ್ತಿಯನ್ನು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸಂಕಲ್ಪ ಹೊಂದಿರುವ ಪಕ್ಷ ನಮ್ಮದು. ಇಂತಹ ಪಕ್ಷದ ಅಭ್ಯರ್ಥಿಯಾದ ನನಗೆ ತಾಯಂದಿರ ಆಶೀರ್ವಾದ ಸಿಕ್ಕಿದ್ದು ಸೌಭಾಗ್ಯ. ಜಿಲ್ಲೆಯನ್ನು ಹಿಂದುತ್ವದ ಭದ್ರ ಕೋಟೆಯಾಗಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ನನ್ನ ಮೇಲಿಟ್ಟ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ಆಗದಂತೆ ಕೆಲಸ ಮಾಡುತ್ತೇನೆ’ ಎಂದರು.

ರಜನಿ ಶೆಟ್ಟಿ, ‘ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಬೃಜೇಶ್‌ ಚೌಟ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ನಾವು ಅವರನ್ನು ಬೆಂಬಲಿಸುತ್ತೇವೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶ ಬದಲಾಗಿದೆ. ಬೃಜೇಶ್ ಚೌಟ ಸಂಸದರಾದರೆ ಜಿಲ್ಲೆ ಇನ್ನಷ್ಟು ಬದಲಾಗಲಿದೆ’ ಎಂದರು.

'ಮಹಿಳೆಯರು ಒಟ್ಟು ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದನ್ನು ಇನ್ನಷ್ಟೇ ಎಣಿಕೆ ಮಾಡಬೇಕಿದೆ' ಎಂದು ಪಕ್ಷದ ಲೋಕಸಭಾ ಚುನಾವಣೆ ಪ್ರಭಾರಿ ಕ್ಯಾ.ಗಣೇಶ ಕಾರ್ಣಿಕ್‌ ತಿಳಿಸಿದರು.

ಪಕ್ಷದ ಮುಖಂಡರಾದ ಜಗದೀಶ್ ಶೇಣವ, ಸಂಜಯ ಪ್ರಭು, ನಿತಿನ್‌ ಕುಮಾರ್‌ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT