ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿ ಆಧಾರದಲ್ಲಿ ಬ್ರಾಹ್ಮಣರ ಶೋಷಣೆ ಸಹಿಸೆವು: ಅಶೋಕ್‌ ಹಾರನಹಳ್ಳಿ

Last Updated 19 ಸೆಪ್ಟೆಂಬರ್ 2022, 5:00 IST
ಅಕ್ಷರ ಗಾತ್ರ

ಮಂಗಳೂರು: ‘ಯಾವುದೇ ಜಾತಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಬ್ರಾಹ್ಮಣರನ್ನು ಜಾತಿ ಆಧಾರದಲ್ಲಿ ತುಳಿಯುವುದಕ್ಕೆ ವಿರೋಧ ಇದೆ. ಇದನ್ನು ಸಹಿಸುವುದಿಲ್ಲ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆರ.ಅಶೋಕ್‌ ಹಾರನಹಳ್ಳಿ ಹೇಳಿದರು ನಂತೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬ್ರಾಹ್ಮಣರಿಗೆ ಅವಕಾಶ ಕೊಟ್ಟರೆ ಇತರ ಜಾತಿಗಳು ಆಕ್ರೋಶ ವ್ಯಕ್ತಪಡಿಸುತ್ತವೆ ಎಂಬ ಕಾರಣಕ್ಕೆ ಸರ್ಕಾರವೂ ಅವಕಾಶಗಳನ್ನು ನಿರಾಕರಿಸುತ್ತಿದೆ. ಅರ್ಹತೆ, ಕೌಶಲ‌‌‌ಗಳ ವಿಚಾರದಲ್ಲಿ ಮೀಸಲಾತಿ ಬೇಡ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ’ ಎಂದರು.

‘ಕನಿಷ್ಠ ವೇತನವೂ ಇಲ್ಲದ ಅರ್ಚಕರಿಗೆ ಕೋವಿಡ್‌ ಸಂದರ್ಭ ನೆರವು ನೀಡುವ ಅಗತ್ಯ ಇಲ್ಲ ಎಂದು ನ್ಯಾಯಮೂರ್ತಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂತಹ ಮನಃಸ್ಥಿತಿಯವರು ಆಯಕಟ್ಟಿನ ಜಾಗದಲ್ಲಿರುವುದು ಬೇಸರದ ಸಂಗತಿ. ಬ್ರಾಹ್ಮಣರಲ್ಲಿಯೂ ಅನೇಕರು ಸಂಕಷ್ಟದಲ್ಲಿದ್ದಾರೆ. ದೇವಸ್ಥಾನಗಳಲ್ಲಿ ಅರ್ಚಕರಿಗೆ ಕನಿಷ್ಠ ವೇತನ ಇಲ್ಲ. ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವಾಗ, ಅರ್ಚಕರ ತಟ್ಟೆ ಕಾಸಿನ ಕುರಿತು ಮಾತನಾಡುವುದರಲ್ಲಿ ಅರ್ಥವೇ ಇಲ್ಲ’ ಎಂದರು.

‘ಒಂದು ಕಾಲದಲ್ಲಿ ನಾನೂ ಜಾತ್ಯತೀತ ಮನೋಭಾವ ಹೊಂದಿದ್ದೆ. ಆದರೆ ಬ್ರಾಹ್ಮಣ ಎಂಬ ಕಾರಣಕ್ಕೆ ಶೋಷಣೆಗೆ ಒಳಗಾಗಿದ್ದೇನೆ. ಹಿಂದೊಮ್ಮೆ ಹೈಕೋರ್ಟ್‌ ನ್ಯಾಯಮೂರ್ತಿಯಾಗುವ ಅವಕಾಶ ನನಗೂ ಒದಗಿತ್ತು. ಆದರೆ ಬ್ರಾಹ್ಮಣ ಎಂಬ ಕಾರಣಕ್ಕೆ ನಿರಾಕರಿಸಲಾಯಿತು’ ಎಂದು ನೋವು ತೋಡಿಕೊಂಡರು.

‘ಅನ್ಯಧರ್ಮೀಯರನ್ನು ವಿವಾಹ ಆಗುತ್ತಿರುವವರಲ್ಲಿ ಬ್ರಾಹ್ಮಣ ಯುವತಿಯರೇ ಹೆಚ್ಚು ಎಂಬ ವರದಿ ಇದೆ. ಸಮುದಾಯದಲ್ಲಿ ಸಂಸ್ಕಾರ ಉಳಿಸುವ ಕೆಲಸ ಆಗಬೇಕು. ಸಂಘಟನೆಯೂ ಆಗಬೇಕು. ಧರ್ಮ ರಕ್ಷಕರೆಂದು ಹೇಳಿಕೊಳ್ಳುವ ಪಕ್ಷದವರೂ ನಮ್ಮ ನೋವು ಕೇಳುವುದಿಲ್ಲ. ಇನ್ನೊಂದು ಪಕ್ಷದವರು ನಮ್ಮನ್ನು ಮತ ಹಾಕದವರು ಎಂದು ಹೊರಗೇ ಇಟ್ಟಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಬ್ರಾಹ್ಮಣ ಪಂಗಡದವರೆಲ್ಲ ವೈಮನಸ್ಯ ತ್ಯಜಿಸಿ ಒಗ್ಗಟ್ಟಾಗಬೇಕು. ರಾಜಕೀಯ ಪ್ರಾತಿನಿಧ್ಯ ಪಡೆಯಬೇಕು’ ಎಂದರು.

ಧಾರ್ಮಿಕ ಪರಿಷತ್‌ ಸದಸ್ಯ ಸೂರ್ಯನಾರಾಯಣ ಕಶೆಕೋಡಿ, ‘ಬ್ರಾಹ್ಮಣರು ಬೂದಿ ಮುಚ್ಚಿದ ಕೆಂಡದಂತೆ. ಬೆಂಕಿ ಆರಿಹೋಗಿ ಇದ್ದಿಲು ಆಗಿ ಬಿಟ್ಟರೆ ಎಲ್ಲರೂ ತುಳಿದುಕೊಂಡು ಹೋಗುತ್ತಾರೆ. ಸ್ವಲ್ಪ ಗಾಳಿ ಹಾಕಿ ಮತ್ತೆ ಬೆಂಕಿಯಂತಿರುವ ಬ್ರಾಹ್ಮಣರ ತೇಜಸ್ಸನ್ನು ಜಗತ್ತಿಗೆ ತೋರಿಸಬೇಕಾಗಿದೆ’ ಎಂದರು. ‘ಬ್ರಾಹ್ಮಣರು ಸುಸಂಸ್ಕೃತಿಯ ದಿರಿಸು ಧರಿಸಬೇಕು. ದೇವರು ಕೊಟ್ಟ ದೇಹವನ್ನು ಉಳಿಸಬೇಕು. ಸೊಕ್ಕಿನ ಕ್ಷಾತ್ರರನ್ನು ನಿರ್ನಾಮ ಮಾಡಿದ ಪರಶುರಾಮ ಬ್ರಾಹ್ಮಣ. ಎಲ್ಲ ಬ್ರಾಹ್ಮಣರು ಪರಾಕ್ರಮಿ ಪರಶುರಾಮನಂತಾಗಬೇಕು. ಎಲ್ಲರ ಶ್ರೇಯಸ್ಸು ಬಯಸುವ, ದೇಶವನ್ನು ಪ್ರೀತಿಸುವ, ಹೃದಯವಂತಿಕೆಯ ವಿದ್ಯೆ ಹೊಂದಬೇಕು’ ಎಂದರು.

ಸಂಘಟನಾ ಕಾರ್ಯದರ್ಶಿ ಬಿ.ಎಸ್.‌ ರಾಘವೇಂದ್ರ ಭಟ್‌, ‘ಸಂಘಟನೆಯ ಸದಸ್ಯರನ್ನು 5 ಲಕ್ಷಕ್ಕೇ ಹೆಚ್ಚಿಸುವ ಗುರಿ ಇದೆ’ ಎಂದರು.
ಅಶೋಕ್ ಹಾರನಹಳ್ಳಿ ಅವರನ್ನು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ‌, ಎಂ.ಆರ್.ವಾಸುದೇವ ಅವರು ಸನ್ಮಾನಿಸಿದರು.

ಸಂಘದ ಉಪಾಧ್ಯಕ್ಷ ಮಹೇಶ್‌ ಕಜೆ, ಸದಸ್ಯ ಪೊಳಲಿ ಗಿರಿಪ್ರಕಾಶ ತಂತ್ರಿ, ಶಿವಳ್ಳಿ ಸ್ಪಂದನ ಅಧ್ಯಕ್ಷ ಕೃಷ್ಣ ಭಟ್‌ ಕದ್ರಿ, ರಾಮಚಂದ್ರಪುರ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಹರಿಪ್ರಸಾದ್‌ ಪೆರಿಯಾಪು, ಕೂಟ ಮಹಾಜಗತ್ತಿನ ಅಧ್ಯಕ್ಷ ಚಂದ್ರಶೇಖರ ಮಯ್ಯ, ಕರಾಡ ಸಂಘ ಮಾಜಿ ಅಧ್ಯಕ್ಷ ಪುರುಷೋತ್ತಮ ಭಟ್, ಸ್ಥಾನಿಕ ಸಭಾ ಅಧ್ಯಕ್ಷ ಹರ್ಷ ಕುಮಾರ ಕೇದಿಗೆ, ಚಿತ್ಪಾವನ ಸಮಾಜದ ಅಧ್ಯಕ್ಷೆ ಪದ್ಮಜಾ, ಹೊಯ್ಸಳ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಮಂಗಳೂರು ವಲಯ ಅಧ್ಯಕ್ಷ ಎಂ.ಎಸ್.‌ ಗುರುರಾಜ, ಹವ್ಯಕ ಮಹಾ ಮಂಡಲ ಮಂಗಳೂರು ಹೋಬಳಿ ಅಧ್ಯಕ್ಷ ಗಣೇಶಕೃಷ್ಣ ಕಾಶಿಮಠ, ಕಾರ್ಯಕಾರಿ ಸಮಿತಿಯ ಚೇತನಾ ದತ್ತಾತ್ರೇಯ, ಉಮಾ ಸೋಮಯಾಜಿ ಇದ್ದರು.

ನ್ಯಾಯವಾದಿ ಮಹೇಶ್‌ ಕಜೆ ಸ್ವಾಗತಿಸಿದರು. ಡಾ.ಗೋವಿಂದ ಪ್ರಸಾದ್‌ ಕಜೆ ಕಾರ್ಯಕ್ರಮ ನಿರೂಪಿಸಿದರು. ಹರಿಪ್ರಸಾದ್‌ ಪೆರಿಯಾಪು ವಂದಿಸಿದರು.

ಅಶೋಕ್ ಹಾರನಹಳ್ಳಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ವ ಬ್ರಾಹ್ಮಣ ಬಂಧುಗಳ ಪರವಾಗಿ ಗೌರವಾರ್ಪಣೆ ನಡೆಯಿತು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಮಂಗಳೂರು ವಿವಿ ಕುಲಪತಿ ವಿ.ಎಸ್. ಯಡಪಡಿತ್ತಾಯ‌, ಎಂ.ಆರ್.ವಾಸುದೇವ ಮಹಾ ಸಬಾ ಅಧ್ಯಕ್ಷ ಹಾರನಹಳ್ಳಿ ಅವರನ್ನು ಸನ್ಮಾನಿಸಿದರು. ಉಪಾಧ್ಯಕ್ಷ ಮಹೇಶ್‌ ಕಜೆ, ಧಾರ್ಮಿಕ ಪರಿಷತ್‌ ಸದಸ್ಯ ಸೂರ್ಯನಾರಾಯಣ ಕಶೆಕೋಡಿ, ಸಂಘಟನಾ ಕಾರ್ಯದರ್ಶಿ ಬಿ.ಎಸ್.‌ ರಾಘವೇಂದ್ರ ಭಟ್‌ ಸದಸ್ಯ ಪೊಳಲಿ ಗಿರಿಪ್ರಕಾಶ ತಂತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT