ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಸಿಗದಿದ್ದರೂ ಕಲಾವಿದ ಸಣ್ಣವನಾಗಲ್ಲ: ರಾಮಚಂದ್ರ ಹೆಗಡೆ

ಕೊಂಡದಕುಳಿ ರಾಮಚಂದ್ರ ಹೆಗಡೆಗೆ ‘ಯಕ್ಷಧ್ರುವ ಪಟ್ಲ’ ಪ್ರಶಸ್ತಿ ಪ್ರದಾನ
Published 27 ಮೇ 2024, 6:05 IST
Last Updated 27 ಮೇ 2024, 6:05 IST
ಅಕ್ಷರ ಗಾತ್ರ

ಮಂಗಳೂರು: ‘ಕಲಾವಿದನಾದವ ಪ್ರಶಸ್ತಿಗಾಗಿ ವಶೀಲಿ ಮಾಡಬಾರದು. ಪ್ರಶಸ್ತಿ ಸಿಗದಿದ್ದರೆ ಕಲಾವಿದ ಸಣ್ಣವ ಆಗುವುದೇ ಇಲ್ಲ. ನಮಗೆ ಪ್ರಶಸ್ತಿ ಸಿಗದಿದ್ದರೂ ಇನ್ನೊಬ್ಬರಿಗೆ ಸಿಕ್ಕಾಗ ಸಂತೋಷ ಪಡಬೇಕು’ ಎಂದು ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅಭಿಪ್ರಾಯಪಟ್ಟರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಅಡ್ಯಾರ್‌ ಗಾರ್ಡನ್‌ನಲ್ಲಿ ಭಾನುವಾರ ಏರ್ಪಡಿಸಿದ್ದ‘ಯಕ್ಷಧ್ರುವ ಪಟ್ಲ ಸಂಭ್ರಮ’ ಕಾರ್ಯಕ್ರಮದಲ್ಲಿಅವರು 2024ನೇ ಸಾಲಿನ ಯಕ್ಷಧ್ರುವ ಪಟ್ಲ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಈ ಪ್ರಶಸ್ತಿ ನನಗೆ ಸಿಕ್ಕಿದ್ದುಅಲ್ಲವೇ ಅಲ್ಲ. ನನ್ನ ಅಜ್ಜ ಮತ್ತು ಗುರು ಕೊಂಡದಕುಳಿ ರಾಮ ಹೆಗಡೆ, ನನ್ನನ್ನು ಬೆಳೆಸಿದ ಕಾಳಿಂಗ ನಾವಡರಿಗೆ ಸಿಗಬೇಕಾದ ಪ್ರಶಸ್ತಿ ಇದು. ಹಿಂದಿನ ತಲೆಮಾರಿನ ಅನೇಕ ಕಲಾವಿದರು ಊರಿಂದ ಊರಿಗೆ ನಡೆದುಹೋಗಿ ಯಕ್ಷಗಾನ ಕಲೆಗೆ ನೀರು ಗೊಬ್ಬರ ಹಾಕಿ ಬೆಳೆಸಿದ್ದಾರೆ. ಯಕ್ಷಗಾನಕ್ಕೆ ಬದುಕನ್ನೇ ಸವೆಸಿದ್ದಾರೆ. ಅವರಿಗೆ ಪ್ರಶಸ್ತಿಯೂ ಇಲ್ಲ, ಸಂಬಳವೂ ಇಲ್ಲ. ಅದರ ಫಲವನ್ನು ಈಗಿನ ತಲೆಮಾರಿನವರು ಅನುಭವಿಸುತ್ತಿದ್ದೇವೆ. ತೆಂಕುತಿಟ್ಟು ಆಗಲಿ, ಬಡಗು ಆಗಲಿ, ಬಡಾಬಡಗು ಆಗಲಿ ಯಕ್ಷಗಾನ ಕಲಾವಿದರು ಪರಸ್ಪರ ಗೌರವಿಸುವುದನ್ನು ಮೊದಲು ಕಲಿಯಬೇಕು’ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಟ್ರಸ್ಟ್‌ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ, ‘ಟ್ರಸ್ಟ್ ವತಿಯಿಂದ  ಯಕ್ಷಗಾನ ಕಲಾವಿದರಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರಲಿದ್ದೇವೆ’ ಎಂದರು.

ಕನ್ಯಾಡಿ ಶ್ರೀರಾಮ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಒಳ್ಳೆಯ ಕೆಲಸಕ್ಕಾಗಿ ದಾನ ಮಾಡುವ ಸಂಪತ್ತು ವ್ಯರ್ಥವಾಗದು. ಕೂಡಿಡುವ ಬದಲು ಯೋಗ್ಯರಿಗೆ ಹಂಚಿದರೆ ಸಂಪತ್ತು ದುಪ್ಪ
ಟ್ಟಾಗುತ್ತದೆ’ ಎಂದು ಹೇಳಿದರು. ಒಡಿಯೂರು ಸಂಸ್ಥಾನದ ಗುರುದೇವಾ
ನಂದ ಸ್ವಾಮೀಜಿ, ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.

ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪ್ರಸಾದ್, '4 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ದೇಶದ ನಾನಾ ಭಾಗದಲ್ಲಿ ಯಕ್ಷಗಾನ ಆಯೋಜಿಸಿ ಈ ಕಲೆಯನ್ನು ಪಸರಿಸುತ್ತಿರುವುದು ಶ್ಲಾಘನೀಯ’ ಎಂದರು.

ಆರೋಗ್ಯ ಶಿಬಿರವನ್ನು ಡಾ.ರವೀಶ್ ತುಂಗಾ  ಹಾಗೂ ರಕ್ತದಾನ ಶಿಬಿರವನ್ನು ಡಾ. ಶ್ರೀಧರ್ ಶೆಟ್ಟಿ ಉದ್ಘಾಟಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ಸಿ.ಎ ದಿವಾಕರ್ ರಾವ್ –ಶೈಲಾ ದಿವಾಕರ್ ದಂಪತಿಗೆ 2024ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಲಾ ಗೌರವ: ವೈದಿಕ ಕ್ಷೇತ್ರದ ಸಾಧಕ ಯಾಜಿ ನಿರಂಜನ್ ಭಟ್, ಪತ್ರಕರ್ತ ಚಿದಂಬರ ಬೈಕಂಪಾಡಿ, ನಿವೃತ್ತ ಯೋಧರಾದ ಲೆ.ಕ. ವಿನ್ಸೆಂಟ್ ಡಿಸೋಜ, ಕಮಾಂಡರ್ ಶಾಮ್ ರಾಜ್, ದುಬೈನ ಯಕ್ಷಗಾನ ಅಭ್ಯಾಸ ತರಬೇತಿ, ಶಾಸ್ತ್ರೀಯ ಸಂಗೀತ ಕ್ಷೇತ್ರದ ಕುದುಮಾರು ಎಸ್. ವೆಂಕಟರಾವ್, ಸಾಹಿತಿ  ಡಾ. ರಮಾನಂದ ಬನಾರಿ, ಹರಿದಾಸ ಜಗದೀಶ್ ದಾಸ್ ಪೊಳಲಿ, ರಂಗಕರ್ಮಿ ಲಕ್ಷ್ಮಣ ಕುಮಾರ್ ಮಲ್ಲೂರು, ಭರತನಾಟ್ಯ ಕಲಾವಿದ ಬೆಳ್ತಂಗಡಿ ಕಮಲಾಕ್ಷ ಆಚಾರ್, ಕಂಬಳ ಕ್ಷೇತ್ರದಲ್ಲಿ ಅಶೋಕ್ ಶೆಟ್ಟಿ ಬೇಲಾಡಿ, ಯಕ್ಷಗಾನ ಚಿದಂಬರ ಬಾಬು ಪೂಜಾರಿ, ಯಕ್ಷಗಾನ (ಬಡಗು) ನಿರ್ಜೆಡ್ದು ಚಂದ್ರ ಕುಲಾಲ್, ಯಕ್ಷಗುರು ಮಹಾವೀರ ಪಾಂಡಿ, ಹವ್ಯಾಸಿ ಜಗನ್ನಾಥ ಶೆಟ್ಟಿ ಸಚ್ಚರಿಪೇಟೆ, ಮಹಿಳಾ ಪೂರ್ಣಿಮಾ ಯತೀಶ್ ರೈ, ದೈವಾರಾಧನೆ ಕ್ಷೇತ್ರದಲ್ಲಿ ಕೊರಗ ಪಾಣಾರ, ಭಜನೆ ಕ್ಷೇತ್ರದ ಭೋಜ ಸುವರ್ಣ ಕುಲಶೇಖರ ಅವರಿಗೆ ಯಕ್ಷಧ್ರುವ ಕಲಾ ಗೌರವ ಪ್ರದಾನ ಮಾಡಲಾಯಿತು. ಟ್ರಸ್ಟ್ ವತಿಯಿಂದ ಕಟ್ಟಿಸಿದ ಮನೆಗಳನ್ನು ಸುದೀಪ್‌, ಕನ್ಯಾನ ಸದಾಶಿವ ಶೆಟ್ಟಿ ಹಾಗೂ ವಕ್ವಾಡಿ ಪ್ರವೀಣ್ ಶೆಟ್ಟಿಯವರು ಕಲಾವಿದರಿಗೆ  ಹಸ್ತಾಂತರಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ , ಕಟೀಲು ಕ್ಷೇತ್ರದ ಆನುವಂಶಿಕ ಪ್ರಧಾನ ಅರ್ಚಕ ವೆಂಕಟ್ರಮಣ ಅಸ್ರಣ್ಣ, ಉದ್ಯಮಿಗಳಾದ ಪ್ರಕಾಶ್‌ ಶೆಟ್ಟಿ, ಕೆ.ಎಂ. ಶೆಟ್ಟಿ, ಶಶಿಧರ ಶೆಟ್ಟಿ, ಗೋಪಾಲ ಶೆಟ್ಟಿ ಮತ್ತಿತರರು ಭಾಗವಹಿಸಿದರು.

ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.  

ಗಿರಕಿಗೆ ಮಾರುಹೋದ ನಟ ಸುದೀಪ್‌

ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರು ಪ್ರದರ್ಶಿಸಿದ ಗಿರಕಿಗೆ ಚಿತ್ರ ನಟ ಸುದೀಪ್ ಮಾರುಹೋದರು. ‘ಈ ರೀತಿ ಎರಡು ಸುತ್ತು ಗಿರಕಿ ಹೊಡೆದರೆ ನನೆ ನಿಲ್ಲುವುದಕ್ಕೇ ಆಗದು. ಅಷ್ಟು ಸುತ್ತುಗಳನ್ನು ಹೊಡೆದ ಬಳಿಕವೂ ಸಮತೋಲನ ಕಾಯ್ದುಕೊಂಡಿರುವುದು ನಿಜಕ್ಕೂ ಅದ್ಭುತ. ಈ ತರಹದ ಕಲೆ ನಿಮ್ಮಲ್ಲಿ ಮಾತ್ರ ಇರುವುದು’ ಎಂದು ಸುದೀಪ್‌ ಮೆಚ್ಚುಗೆ ಸೂಚಿಸಿದರು. ‘ನನನ್ನು ಅಭಿನಯ ಚಕ್ರವರ್ತಿ ಎನ್ನುತ್ತೀರಿ ಬಾದ್‌ಶಾಹ ಎನ್ನುತ್ತೀರಿ. ನಾವು ಎಷ್ಟು ಚಿಕ್ಕವರು ಎಂಬುದು ಹೊರಗೆ ಹೋದಾಗಲೇ ಗೊತ್ತಾಗುವುದು. ಈ ಕಲಾವಿದರ ಮುಂದೆ ನಾವು ಬಹಳ ಚಿಕ್ಕವರು’ ಎಂದರು. 

‘ತುಳುವರು ಸಿಕ್ಕಾಪಟ್ಟೆ ಸ್ವಾಭಿಮಾನಿಗಳು. ಬಹಳ ಸುಲಬವಾಗಿ ಯಾರನ್ನೂ ಇಷ್ಟಪಡಲ್ಲ ಎಂದು ಚೆನ್ನಾಗಿ ಗೊತ್ತು. ಅಂತಹದ್ದರಲ್ಲಿ ನಿಮ್ಮ ಮನಸುಗಳಲ್ಲಿ ಚಿಕ್ಕ ಜಾಗವನ್ನು ನನಗೆ ಕೊಟ್ಟಿದ್ದೀರಿ’ ಎಂದು ಕೃತಜ್ಞತೆ ಸಲ್ಲಿಸಿದರು.

‘ನನ್ನಮ್ಮನಿಗೆ ತುಳು ಚೆನ್ನಾಗಿ ಬರುತ್ತದೆ. ಆದರೆ ನನಗೆ ‘ಎಂಚಿನ ಮಾರಾಯ್ರೆ ಉಣಸ್ ಆಂಡಾ.. .ಎಂದು ಅತಿಥಿಗಳನ್ನು ವಿಚಾರಿಸುವಷ್ಟು ತುಳುವನ್ನು ಮಾತ್ರ ಹೇಳಿಕೊಟ್ಟಿದ್ದಾರೆ’ ಎಂದರು. ಟ್ರಸ್ಟ್‌ನ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ಸೂಚಿಸಿದ ಅವರು ‘ಪಟ್ಲ ಫೌಂಡೇಷನ್ ಆಲದ ಮರವಾಗಿದೆ. ಇನ್ನೂ ದೊಡ್ಡದಾಗಿ ಬೆಳೆಯಲಿ’ ಎಂದು ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT