ಗುರುವಾರ , ಸೆಪ್ಟೆಂಬರ್ 23, 2021
22 °C
ಯೋಗ ದಿನಾಚರಣೆ: ಆನ್‌ಲೈನ್‌ನಲ್ಲಿ ಯೋಗಾಭ್ಯಾಸ

ಯೋಗ ಭಾರತದ ಬಹುದೊಡ್ಡ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದ ಹಲವೆಡೆ ಭಾನುವಾರ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಕೆಲವೆಡೆ ಆನ್‌ಲೈನ್‌ ಮೂಲಕ ಯೋಗಾಭ್ಯಾಸ ನಡೆಯಿತು. ಇನ್ನು ಕೆಲ ವಿದ್ಯಾ ಸಂಸ್ಥೆಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಯೋಗ ದಿನವನ್ನು ಆಚರಿಸಲಾಯಿತು.

ಆನ್‌ಲೈನ್‌ ಯೋಗಾಭ್ಯಾಸ: ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಗರದಲ್ಲಿ ಭಾನುವಾರ ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ ಅವರು ತಮ್ಮ ಮನೆಯಿಂದಲೇ ಆನ್‌ಲೈನ್‌ ಮೂಲಕ ಯೋಗಾಭ್ಯಾಸ ಹೇಳಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ವಿಶ್ವದ ಎಲ್ಲ ಜನಾಂಗದವರನ್ನು ಭಾರತೀಯ ಸಂಸ್ಕೃತಿಯ ಭಾಗವಾದ ಯೋಗ ಆಕರ್ಷಿಸುತ್ತಿದೆ. ಯೋಗವು ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಸಹಕಾರಿಯಾಗಿದೆ. ಯೋಗ ಎಂಬುದು ಜಗತ್ತಿಗೆ ಭಾರತದ ಬಹುದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.

ಯೋಗ ಎಂಬ ಶಬ್ದ ಸಂಸ್ಕೃತದ ಯುಜ್‌ನಿಂದ ಬಂದಿದ್ದು, ಕೂಡಿಸು, ಜೋಡಿಸು, ಸೇರಿಸು, ಒಂದಾಗಿಸು ಎಂಬ ಅರ್ಥವಿದೆ. ಯೋಗವು ಆಧ್ಯಾತ್ಮಿಕ ಅದರಲ್ಲೂ ಮುಖ್ಯವಾಗಿ ವಿಜ್ಞಾನ ಆಧಾರಿತವಾಗಿದೆ. ಇದು ಆರೋಗ್ಯಕರ ಜೀವನ ಕಲೆ ಮತ್ತು ವಿಜ್ಞಾನವಾಗಿದೆ ಎಂದು ಹೇಳಿದರು.

ಅಂತರರಾಷ್ಟ್ರೀಯ ಯೋಗ ದಿನವನ್ನು ವಿಶ್ವದಾದ್ಯಂತ ಪ್ರತಿ ವರ್ಷದ ಜೂನ್ 21 ರಂದು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 2015 ರಲ್ಲಿ ಆರಂಭವಾದ ಯೋಗ ದಿನಾಚರಣೆಗೆ ವಿಶ್ವದಾದ್ಯಂತ ಮನ್ನಣೆ ದೊರೆತಿದೆ. ಮೊದಲ ಯೋಗ ದಿನಾಚರಣೆಯಲ್ಲಿ 35,985 ಜನರು ಭಾಗವಹಿಸುವ ಮೂಲಕ ದಾಖಲೆ ಬರೆಯುವಂತಾಗಿತ್ತು ಎಂದು ಹೇಳಿದರು.

ಶಾರದಾ ವಿದ್ಯಾಲಯ: ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಆನ್‌ಲೈನ್ ಪ್ರಸಾರದ ಮೂಲಕ ಹಮ್ಮಿಕೊಳ್ಳಲಾಯಿತು.

ಉದ್ಘಾಟಿಸಿ ಮಾತನಾಡಿದ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್‌, ಶರೀರ ಹಾಗೂ ಮನಸ್ಸಿನ ಸ್ವಾಸ್ಥ್ಯಕ್ಕೆ ಯೋಗ ಅತ್ಯಂತ ಸಹಕಾರಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನದಿಂದ ಯೋಗಕ್ಕೆ ವಿಶ್ವದಾದ್ಯಂತ ಮನ್ನಣೆ ದೊರಕಿದ್ದು, ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ವಿದ್ಯಾಲಯದ ಪಠ್ಯಕ್ರಮದಲ್ಲಿ ಯೋಗವನ್ನು ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳು ಯೋಗವನ್ನು ತಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸುವ ಮೂಲಕ ಆರೋಗ್ಯಭಾಗ್ಯವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾಲಯದ ಶಿಕ್ಷಕಿ ರಜನಿ ಶೆಣೈ ಕಾರ್ಯಕ್ರಮ ಆರಂಭವಾಯಿತು. ವಿದ್ಯಾಲಯದ ಪ್ರಾಂಶುಪಾಲೆ ಸುನೀತಾ ವಿ. ಮಡಿ, ಉಪ-ಪ್ರಾಂಶುಪಾಲ ದಯಾನಂದ ಕಟೀಲ್ ವೇದಿಕೆಯಲ್ಲಿದ್ದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು