ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಕುತ್ತೆತ್ತೂರು-ಸೂರಿಂಜೆ ರಸ್ತೆ; ಉದ್ಯಮಗಳ್ದ್ದಿದೂ ಅಭಿವೃದ್ಧಿ ಮರೀಚಿಕೆ

Last Updated 4 ಏಪ್ರಿಲ್ 2012, 9:10 IST
ಅಕ್ಷರ ಗಾತ್ರ

ಸುರತ್ಕಲ್: ಇಲ್ಲಿನ ಕುತ್ತೆತ್ತೂರು- ಸೂರಿಂಜೆ ನಡುವೆ ಸುಮಾರು 4 ಕಿಲೋಮೀಟರ್ ರಸ್ತೆ ತೀರಾ ಹದಗೆಟ್ಟಿದೆ. ಸಂಚಾರಕ್ಕೆ ಬಿಡಿ, ನಡೆದಾಡಲೂ ಈ ರಸ್ತೆಯಲ್ಲಿ ಪರದಾಡುವಂತಾಗಿದೆ. ಕುತ್ತೆತ್ತೂರು ಸುತ್ತಮುತ್ತ ಕೈಗಾರಿಕೆಗಳು ತಲೆಎತ್ತಿದ್ದರೂ, ಇಲ್ಲಿ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ ಎನ್ನುವುದು ಸ್ಥಳೀಯರ ಅಳಲು.

ರಸ್ತೆ ಹದಗೆಟ್ಟಿರುವುದರಿಂದ ರಿಕ್ಷಾ ಚಾಲಕರು ಬಾಡಿಗೆಗೆ ಬರಲೂ ಹಿಂದೇಟು ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ, ಈ ರಸ್ತೆಯಲ್ಲಿ ಸಂಚಾರ ನಿಲ್ಲಿಸುತ್ತೇವೆ ಎಂದು ಬಸ್ ಮಾಲಕರೂ ಎಂದು ಸ್ಥಳೀಯರಿಗೆ ತಿಳಿಸಿದ್ದಾರೆ. ರಸ್ತೆ ಡಾಂಬರೀಕರಣಕ್ಕಾಗಿ ಸರ್ಕಾರದ ವಿವಿಧ ಇಲಾಖೆಗಳಿಗೆ, ಎಂಆರ್‌ಪಿಎಲ್ ಕಂಪೆನಿಗೆ ಮನವಿ ಮಾಡಿದರೂ ಯಾವುದೇ ಪರಿಣಾಮವಿಲ್ಲ ಎಂಬುದು ಅವರ ದೂರು.

ಲೋಕೋಪಯೋಗಿ ಇಲಾಖೆ ಈ ರಸ್ತೆಯ ತೇಪೆ ಕಾರ್ಯಕ್ಕೆ ರೂ. 3 ಲಕ್ಷ ಅಂದಾಜುಪಟ್ಟಿಯನ್ನು ತಯಾರಿಸಿ ತೇಪೆ ಕಾರ್ಯ ನಡೆಸಿತ್ತು. ಆದರೆ ಕೇವಲ 50 ಮೀಟರ್ ತೇಪೆ ಕಾರ್ಯ ನಡೆಸುವಾಗಲೇ ರೂ. 3 ಲಕ್ಷ ಖಾಲಿಯಾಗಿದೆ ಎಂದು ಎಂಜಿನಿಯರ್ ಸ್ಥಳೀಯರಿಗೆ ತಿಳಿಸಿದ್ದಾರೆ. ಈ ಬಗ್ಗೆ ಅನುಮಾನ ವ್ಯಕ್ತಪಡಿಸುವ ಸ್ಥಳೀಯರು ಕೇವಲ 50 ಮೀ ಕೆಲಸಕ್ಕೆ ರೂ. 3 ಲಕ್ಷ ವ್ಯಯವಾಗಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ. ಎಂಜಿನಿಯರ್ ಸ್ಥಳ ಪರಿಶೀಲನೆ ಮಾಡದೆ ಕಚೇರಿಯಲ್ಲೇ ಕುಳಿತು ಅಂದಾಜು ಪಟ್ಟಿ ತಯಾರಿಸಿದ್ದಾರೆಯೇ ಎಂದು ಟೀಕಿಸಿದ್ದಾರೆ.

ಪ್ರತಿಭಟನೆ ನಿರ್ಧಾರ: ಕುತ್ತೆತ್ತೂರು ಪ್ರದೇಶವನ್ನು ದತ್ತು ಸ್ವೀಕರಿಸಿರುವುದಾಗಿ ಎಂಆರ್‌ಪಿಎಲ್ ಹೇಳುತ್ತವೆ. ಆದರೆ ಕುತ್ತೆತ್ತೂರು ಪ್ರದೇಶದ ಅಭಿವೃದ್ಧಿ  ನಿರೀಕ್ಷೆ ಹುಸಿಯಾಗಿದೆ. ಎರಡೆರಡು ಭಾರೀ ಇಲ್ಲಿನ ನಾಗರಿಕರು ಮನವಿ ಸಲ್ಲಿಸಿದರೂ ಕೇವಲ ಭರವಸೆ ಮಾತ್ರ ಲಭಿಸಿದೆ. ಡಾಂಬರೀಕರಣಕ್ಕೆ 76 ಲಕ್ಷ ಅಂದಾಜು ಪಟ್ಟಿಯನ್ನು ಕಂಪೆನಿ ತಯಾರಿಸಿದೆ ಹಾಗೂ 45 ದಿನದಲ್ಲಿ ಮಂಜೂರಾತಿ ದೊರಕುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿ ಎರಡು ತಿಂಗಳು ಕಳೆದಿದೆ. ಆದರೆ ಕಾಮಗಾರಿ ನಡೆಸುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಇದೇ 17ರಂದು ಬೆ.7-ಸಂಜೆ 7ರವರೆಗೆ ಪ್ರತಿಭಟನೆ ನಡೆಸಲೂ ನಿರ್ಧರಿಸಿದ್ದಾರೆ. ಈ ಹಿಂದೆ ಮಂಗಳಪೇಟೆ ಮೆಣಸುಕಾಡು ರಸ್ತೆ ಅಭಿವೃದ್ಧಿಗೂ ಇದೇ ರೀತಿ ಎಂಆರ್‌ಪಿಎಲ್ ಭರವಸೆ ನೀಡಿತ್ತಾದರೂ ಕಾಮಗಾರಿ ಮಂಜೂರು ಮಾಡಿಲ್ಲ ಎಂದು ಸ್ಥಳೀಯ ಗ್ರಾ.ಪಂ. ಸದಸ್ಯ ಶ್ರೀಧರ ಶೆಟ್ಟಿ ದೂರಿದ್ದಾರೆ.

ಕೈಗಾರಿಕೆಗಳ ಭಾರೀ ಗಾತ್ರದ ವಾಹನ ಸಂಚಾರದಿಂದ ಕುತ್ತೆತ್ತೂರು ರಸ್ತೆ ಪೂರ್ತಿ ಹದಗೆಟ್ಟಿದೆ. ಇಲ್ಲಿ ಸಂಚರಿಸುತ್ತಿದ್ದ ಬಸ್‌ಗಳು ಈ ಹಿಂದೆ ಸಂಚಾರ ಮೊಟಕುಗೊಳಿಸಿದಾಗ ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ್ದ ಕರುಣಾಕರ ಶೆಟ್ಟಿ, ರಸ್ತೆಗಾಗಿ ಭೂಮಿ ನೀಡಿದ್ದ ನಮಗೇ ಈಗ ರಸ್ತೆಯಿಲ್ಲದಂತಾಗಿದೆ. ನಮ್ಮ ಬಟ್ಟಲಿನಲ್ಲಿ ಹೊರಗಿನವರು ಉಣ್ಣುವ ಪರಿಸ್ಥಿತಿಯಿದೆ. ನಮ್ಮ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ತನ್ನದೆಂದರೂ ಅಭಿವೃದ್ಧಿಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಡಾಂಬರೀಕರಣದ ಜವಾಬ್ದಾರಿ ಸ್ಥಳೀಯ ಕಂಪೆನಿಗಳಿಗಿದ್ದರೂ ಜಾಣಕಿವುಡು ಅನುಸರಿಸುತ್ತಿದೆ ಎಂದು ದೂರಿದ್ದಾರೆ.

4ರ ಗಡುವು: ಡಾಂಬರೀಕರಣಕ್ಕೆ ಎಂಆರ್‌ಪಿಎಲ್ ಸ್ಥಳೀಯರಲ್ಲಿ ಏಪ್ರಿಲ್ 4ರವರೆಗೆ ಕಾಲಾವಕಾಶ ಕೇಳಿದೆ. ಅಷ್ಟರೊಳಗೆ ಯಾವುದೇ ಕ್ರಮಕೈಗೊಳ್ಳದಿದ್ದರೆ 17ರಂದು ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಗೆ ಕಂಪೆನಿ ಅಥವಾ ಲೋಕೋಪಯೋಗಿ ಇಲಾಖೆ ಸ್ಪಂದಿಸದಿದ್ದಲ್ಲಿ ಕಂಪೆನಿ ಗೇಟ್, ಜಿಲ್ಲಾಧಿಕಾರಿ ಕಚೇರಿ, ಎಂಎಸ್‌ಇಝೆಡ್ ಕಚೇರಿ ಮುಂಭಾಗ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT