ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ ಜಿಲ್ಲೆಯಿಂದ 10 ಸಾವಿರ ಜನರ ನಿರೀಕ್ಷೆ

ಯುವನಿಧಿ: 12ರಂದು ಶಿವಮೊಗ್ಗದಲ್ಲಿ ಚಾಲನೆ
Published 3 ಜನವರಿ 2024, 16:24 IST
Last Updated 3 ಜನವರಿ 2024, 16:24 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಯುವನಿಧಿ’ ಯೋಜನೆಗೆ ಜ. 12ರಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದು, ಜಿಲ್ಲೆಯಲ್ಲಿ ಯುವನಿಧಿ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಮತ್ತು ಕಾಲೇಜು ಪ್ರಾಂಶುಪಾಲರೊಂದಿಗೆ ಬುಧವಾರ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅವರು ಮಾತನಾಡಿದರು.

‘ಜ.12ರಂದು ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ‌ನೊಂದಣಿಯಾದವರಿಗೆ ನೇರವಾಗಿ ಡಿಬಿಟಿ ಮೂಲಕ ಮಾಸಿಕ ಶಿಷ್ಯವೇತನಕ್ಕೆ ಚಾಲನೆ ನೀಡಲಿದ್ದು, ಜಿಲ್ಲೆಯಿಂದ 10 ಸಾವಿರಕ್ಕಿಂತ ಹೆಚ್ಚು ಅರ್ಹರನ್ನು ಕಳುಹಿಸಿಕೊಡಲಾಗುತ್ತದೆ. ಇದಕ್ಕಾಗಿ ಎಲ್ಲಾ ತಾಲ್ಲೂಕುಗಳಿಂದ ಕರೆದುಕೊಂಡು ಹೋಗಿ ಬರಲು ವಾಹನದ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಸೇವಾಸಿಂಧು ಪೋರ್ಟಲ್‍ನಲ್ಲಿ ನೋಂದಣಿ ಮಾಡಬಹುದಾಗಿದ್ದು, ಯಾರೂ ಈ ಯೋಜನೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ತಹಶೀಲ್ದಾರ್ ಕಚೇರಿ, ತಾಲ್ಲೂಕು ಪಂಚಾಯಿತಿಯಲ್ಲಿ ನೋಂದಣಿ ಅಭಿಯಾನವನ್ನು ಹೆಚ್ಚುವರಿಯಾಗಿ ಮಾಡಲಾಗುತ್ತಿದೆ. ತಾಂತ್ರಿಕ ಸಮಸ್ಯೆಗಳ ನಿವಾರಣೆಗಾಗಿ ದಾವಣಗೆರೆ ಪಾಲಿಕೆ ನಿಯಂತ್ರಣ ಕೊಠಡಿಯಲ್ಲಿ ಕಾಲ್ ಸೆಂಟರ್ ತೆರೆಯಲಾಗಿದ್ದು, ತಾಲ್ಲೂಕು ಕಚೇರಿಗಳಲ್ಲಿ ಕಾಲ್ ಸೆಂಟರ್ ಅನ್ನು ತಾತ್ಕಾಲಿಕವಾಗಿ ತೆರೆಯಬೇಕು’ ಎಂದು ತಹಶೀಲ್ದಾರರಿಗೆ ಸೂಚನೆ ನೀಡಿದರು.

ನೋಡಲ್ ಅಧಿಕಾರಿಗಳ ನೇಮಕ:

ಯುವನಿಧಿ ಯೋಜನೆಗೆ ನೊಂದಣಿ ಮಾಡಿಸಲು ಎಲ್ಲಾ ತಾಲ್ಲೂಕಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುತ್ತಿದ್ದು, ಎಲ್ಲಾ ಕಾಲೇಜುಗಳಲ್ಲಿಯೂ ಅಭಿಯಾನ ಮಾಡುವ ಮೂಲಕ ಯುವಕರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಉತ್ತೀರ್ಣರಾದ ಅಂತಿಮ ಪದವಿ ವಿದ್ಯಾರ್ಥಿಗಳ ವಿವರವನ್ನು ನ್ಯಾಡ್‍ಗೆ ಅಪ್‍ಲೋಡ್ ಮಾಡುವಂತೆ ಸೂಚಿಸಿದರು.

‘ಯೋಜನೆಗೆ ನೋಂದಣಿ ಆರಂಭವಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 500 ಜನರಿಗಿಂತ ಹೆಚ್ಚು ನೊಂದಣಿಯಾಗಿದ್ದು, ಜ.12 ರೊಳಗೆ 10 ಸಾವಿರ ಪದವಿ, ಡಿಪ್ಲೊಮಾ ಪಡೆದ ಯುವ ಜನರನ್ನು ನೊಂದಣಿ ಮಾಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ದಿನ ಡಿಬಿಟಿ ಮೂಲಕ ಯೋಜನೆಯ ಲಾಭ ಕಲ್ಪಿಸಲು ನೊಂದಣಿಗೆ ಅಭಿಯಾನ ಮಾಡಲಾಗುತ್ತಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಇದ್ದರು.      

ಅರ್ಜಿ ಹಾಕುವ ವಿಧಾನ

ಸೇವಾಸಿಂಧೂ ಪೋರ್ಟಲ್‍ಗೆ ಹೋಗಿ ಮೆನುನಲ್ಲಿ ಕ್ಲಿಕ್ ಅಫ್ಲಿಕೇಷನ್ ಸರ್ವೀಸಸ್ ಕ್ಲಿಕ್‌ ಮಾಡಿದಾಗ ಎಲ್ಲಾ ಸೇವೆಗಳು ತೆರದುಕೊಳ್ಳಲಿದ್ದು ಅಲ್ಲಿ ಯುವನಿಧಿ ಅರ್ಜಿ ಕ್ಲಿಕ್ ಮಾಡಿದಾಗ ಅರ್ಜಿಯ ಪುಟ ತೆರದುಕೊಳ್ಳುತ್ತದೆ. ಇಲ್ಲಿ ವಿದ್ಯಾರ್ಥಿಯ ಸ್ವಯಂ ಘೋಷಣೆ ‘ಯಸ್’ ಅಥವಾ ‘ನೋ’ ಇದರಲ್ಲಿ 6 ಅರ್ಹತೆಗಳನ್ನು ಹೊಂದಿರಬೇಕು. ನಂತರ ಆಧಾರ್ ದೃಢೀಕರಣ ಮಾಡಬೇಕು. ಆಧಾರ್ ಮಾಹಿತಿ ಬಾಕ್ಸ್ ಚೆಕ್ ಮಾಡಿ ನಂತರ ಒಟಿಪಿ ಜನರೇಟ್ ಮಾಡಿದ ಬಳಿಕ ಮೊಬೈಲ್‍ಗೆ ಒಟಿಪಿ ಬರುತ್ತದೆ. ನಂತರ ಎಲ್ಲಾ ವಿವರ ಅರ್ಜಿಗೆ ಆಧಾರ್‌ನಂತೆ ತೆರೆದುಕೊಳ್ಳಲಿದ್ದು ಸಬ್‍ಮಿಟ್ ಮಾಡಬೇಕು. ವಿಳಾಸ ಸರಿಯಿದ್ದಲ್ಲಿ ಯಥಾವತ್ತು ಇಲ್ಲದಿದ್ದಲ್ಲಿ ಅರ್ಜಿದಾರರ ತಾಲ್ಲೂಕು ಜಿಲ್ಲೆ ಟೈಪ್ ಮಾಡಬೇಕು. ನಂತರ ನಾಡ್‍ನಲ್ಲಿ ಪದವಿ ಶಿಕ್ಷಣದ ಪ್ರಮಾಣ ಪತ್ರದ ಸಂಖ್ಯೆ ಟೈಪ್ ಮಾಡಿದಲ್ಲಿ ವಿವರ ಸ್ವಯಂಪ್ರೇರಿತವಾಗಿ ತೆರದುಕೊಳ್ಳುತ್ತದೆ. ಶಿಕ್ಷಣದ ವಿವರ ದಾಖಲು ಮಾಡಬೇಕು ಇದು ಅರ್ಜಿ ನೊಂದಣಿಯ ವಿವಿಧ ಹಂತಗಳಾಗಿರುತ್ತವೆ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT