ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಕಾಡಾಕ್ಕೆ ಪ್ರತಿ ವರ್ಷ ₹2 ಕೋಟಿ ಅನುದಾನ ನೀಡಿ

ಶಾಸಕರಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮನವಿ
Last Updated 31 ಜುಲೈ 2021, 6:48 IST
ಅಕ್ಷರ ಗಾತ್ರ

ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ಸುಮಾರು 30 ಮಂದಿ ವಿಧಾನಸಭಾ ಸದಸ್ಯರು ಪ್ರತಿನಿಧಿಸುತ್ತಿದ್ದು, ಅವರೆಲ್ಲರೂ ಭದ್ರಾ ಕಾಡಾ ಪ್ರಾಧಿಕಾರಕ್ಕೆ ಪ್ರತಿವರ್ಷ ₹2 ಕೋಟಿಯಂತೆ ಅನುದಾನ ಒದಗಿಸಿ ಕೊಟ್ಟರೆ ₹60 ಕೋಟಿ ಅನುದಾನ ಲಭ್ಯವಾಗುತ್ತದೆ. ಇದರಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಪ್ರಾಧಿಕಾರವನ್ನು ಮಾದರಿಯಾಗಿ ಮಾಡಲು ಅನುಕೂಲವಾಗುತ್ತದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹೇಳಿದರು.

ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮದಲ್ಲಿರುವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಚ್ಚುಕಟ್ಟು ವ್ಯಾಪ್ತಿಯ ಪ್ರತಿಯೊಂದು ಅಭಿವೃದ್ದಿ ಕೆಲಸಗಳು ಪ್ರಾಧಿಕಾರದಿಂದಲೇ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಾಸಕರು ಆಲೋಚನೆ ಮಾಡಿ ನಮ್ಮೊಂದಿಗೆ ಕೈಜೋಡಿಸಿದರೆ ರೈತರು ಎದುರಿಸುತ್ತಿರುವ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ಆಯಾ ಶಾಸಕರು ಒದಗಿಸಿದ ಅನುದಾನವನ್ನು ಆಯಾ ಕ್ಷೇತ್ರದ ಅಚ್ಚುಕಟ್ಟು ಅಭಿವೃದ್ದಿಗೆ ವಿನಯೋಗಿಸುತ್ತೇನೆ’ ಎಂದು ಭರವಸೆ ನೀಡಿದರು.

‘ನಾನು ಭದ್ರಾ ಕಾಡಾ ಅಧ್ಯಕ್ಷೆಯಾಗಿ ನೇಮಕಗೊಂಡ ಸಮಯದಲ್ಲಿ ಕೋವಿಡ್ ಲಗ್ಗೆಯಿಟ್ಟಿತು. ಅದನ್ನು ತುಂಡರಿಸಲು ರಾಜ್ಯ ಸರ್ಕಾರಕ್ಕೆ ಲಾಕ್‌ಡೌನ್ ಅನಿವಾರ್ಯತೆ ಎದುರಾಯಿತು. ಪರಿಣಾಮ ಎಲ್ಲಾ ರಂಗಗಳು ಮುಚ್ಚುವಾಂತಾಗಿ ಬೊಕ್ಕಸಕ್ಕೆ ಕೊಡಲಿ ಪೆಟ್ಟು ಬಿದ್ದ ಪರಿಣಾಮ ಅಭಿವೃದ್ದಿಯ ಕಾರ್ಯಗಳಿಗೆ ಅನುದಾನದ ಕೊರತೆ ಎದುರಾಗುವ ಸಂದಿಗ್ಧ ಪರಿಸ್ಥಿತಿಯನ್ನು ನಾವೆಲ್ಲರೂ ಕಾಣಬೇಕಾಯಿತು’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸರ್ಕಾರ ಕೊಡುವ ಗೌರವಧನ ಪಡೆಯಲು ಕಚೇರಿಗೆ ಪ್ರತಿದಿನ ಬಂದು ಕೂರಲು ಮನಸ್ಸು ಒಪ್ಪಲಿಲ್ಲ. ಇಂತಹ ಸಮಯದಲ್ಲಿಸರ್ಕಾರದೊಂದಿಗೆ ನಿಲ್ಲಬೇಕು ಸರ್ಕಾರದಮೇಲೆ ಒತ್ತಡ ತರಬಾರದು ಎಂದು ನಿರ್ಧರಿಸಿ ಪರ್ಯಾಯ ಮಾರ್ಗದೆಡೆಗೆಆಲೋಚನೆ ಮಾಡಿದಾಗನರೇಗಾಅನುದಾನ ಬಳಸಿಕೊಳ್ಳುವ ಆಲೋಚನೆ ಹೊಳೆಯಿತು. ಇದರಿಂದ ಕೊನೆಯ ಭಾಗಕ್ಕೆ ನೀರು ಕೊಡಲು ಅನುಕೂಲವಾಯಿತು’ ಎಂದು ಹೇಳಿದರು.

ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ನಿರ್ದೇಶಕ ನಾಗರಾಜಪ್ಪ ಮಾತನಾಡಿ, ‘ಈ ಸ್ಥಳದಲ್ಲಿ ಕೃಷಿ ಪದವಿ ಕಾಲೇಜು ಮಾಡಲು ಎಲ್ಲಾ ರೀತಿಯ ಅನುಕೂಲವಿದ್ದು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಮಾತನಾಡಿ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ‘ರಾಜ್ಯ ಸರ್ಕಾರ ಅನುದಾನ ನೀಡಿದರೆ ಅಚ್ಚುಕಟ್ಟು ಅಭಿವೃದ್ಧಿಗೆ ಅಧ್ಯಕ್ಷರು ಹಗಲು ರಾತ್ರಿ ಶ್ರಮಿಸುತ್ತಾರೆ, ಯಾವುದೇ ಭ್ರಷ್ಟಾಚಾರವಿಲ್ಲದೆ ಆಡಳಿತ ನಡೆಸುತ್ತಾರೆ. ಗುಣಮಟ್ಟದ ಕಾಮಗಾರಿಗೆ ಮೊದಲ ಆದ್ಯತೆ ನೀಡುತ್ತಾರೆ. ₹1 ಅನ್ನು ಅವರ ಕೈಗೆ ನೀಡಿದರೆ ₹1.20 ಕೆಲಸ ಮಾಡುವ ಚಾಕಚಕ್ಯತೆ ಅವರಲ್ಲಿದೆ’ ಎಂದು ಶ್ಲಾಘಿಸಿದರು.

ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಆನಂದ್ ಕುಮಾರ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT