ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ನಿವೇಶನಕ್ಕಾಗಿ 22,170 ಅರ್ಜಿ

ಸರ್ಕಾರಕ್ಕೆ ಸಲ್ಲಿಕೆಯಾದ ಬೇಡಿಕೆ ಸಮೀಕ್ಷೆ ವರದಿ * ನಿವೇಶನ ನಿರ್ಮಿಸಲು ಅನುಮೋದನೆ ನಿರೀಕ್ಷೆಯಲ್ಲಿ ಧೂಡಾ
Last Updated 15 ಸೆಪ್ಟೆಂಬರ್ 2021, 4:53 IST
ಅಕ್ಷರ ಗಾತ್ರ

ದಾವಣಗೆರೆ: ನಿವೇಶನಕ್ಕಾಗಿ ಅರ್ಜಿ ಹಾಕುವ ಅವಧಿ ಮುಗಿದಿರುವುದರಿಂದ ಧೂಡಾ ಕಚೇರಿ ಮುಂದೆ ನಿರಂತರ 25 ದಿನಗಳ ಕಾಲ ಇದ್ದ ಗದ್ದಲ ಈಗ ನಿಂತು ಹೋಗಿದೆ. ಈ 25 ದಿನಗಳಲ್ಲಿ ಸುಮಾರು 40 ಸಾವಿರ ಮಂದಿ ಅರ್ಜಿ ತಗೊಂಡು ಹೋಗಿದ್ದಾರೆ. ಅದರಲ್ಲಿ 22,170 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ರೈತರಿಂದ ಭೂಮಿ ಖರೀದಿಸಿ ನೇರವಾಗಿ ನಿವೇಶನ ನಿರ್ಮಿಸಲು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು ಸರ್ಕಾರದಿಂದ ಅನುಮತಿ ಕೇಳಿತ್ತು. ಆದರೆ ಬೇಡಿಕೆ ಸಮೀಕ್ಷೆ ಮಾಡದೇ ಬಡಾವಣೆ ನಿರ್ಮಿಸುವಂತಿಲ್ಲ ಎಂದು ಸರ್ಕಾರ ತಿಳಿಸಿತ್ತು. ಅದರಂತೆ ಸಮೀಕ್ಷೆ ಮತ್ತು ನಿವೇಶನಕ್ಕೆ ಅರ್ಜಿ ಸಲ್ಲಿಸಲು ಆ.11ರಿಂದ ಸೆ. 4ರವರೆಗೆ ಅವಕಾಶ ನೀಡಿತ್ತು.

‘ಸಾರ್ವಜನಿಕರಿಂದ ಬಂದ ಅರ್ಜಿಗಳ ಆಧಾರದಲ್ಲಿ ನಿವೇಶನ ನಿರ್ಮಿಸಲು ಅವಕಾಶ ನೀಡಬೇಕು ಎಂದು ಸೆ. 8ರಂದು ಮತ್ತೆ ಧೂಡಾದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ಸರ್ಕಾರದಿಂದ ಮಾರ್ಗಸೂಚಿ ಬರಲಿದೆ’ ಎಂದು ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಒಮ್ಮೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದರೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರೈತರೊಂದಿಗೆ ಕೊನೇ ಸುತ್ತಿನ ಮಾತುಕತೆ ನಡೆಯಲಿದೆ. ಬಳಿಕ ನಿವೇಶನ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ಅವರು ವಿವರಿಸಿದ್ದಾರೆ.

ಕುಂದವಾಡದಲ್ಲಿ 53 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ರೈತರ ಜತೆಗೆ ಈಗಾಗಲೇ ಮೂರು ಸುತ್ತಿನ ಮಾತುಕತೆಯೂ ನಡೆದಿದೆ. ರೈತರಿಂದ ಒಪ್ಪಿಗೆ ಪತ್ರ ಕೂಡ ಪಡೆಯಲಾಗಿದೆ. ಒಪ್ಪಿಗೆ ಪತ್ರ ಇರುವುದರಿಂದ ಮುಂದೆ ತಕರಾರುಗಳು ಇರುವುದಿಲ್ಲ.

ಸರ್ಕಾರ ಅನುಮತಿ ನೀಡಿದ ಕೂಡಲೇ ರೈತರ ಖಾತೆಗೆ ಆರ್‌ಟಿಜಿಎಸ್‌ ಮೂಲಕ ನೇರವಾಗಿ ಹಣ ಪಾವತಿಸಿ ಭೂಮಿಯನ್ನು ಧೂಡಾದ ಸುಪರ್ದಿಗೆ ತೆಗೆದುಕೊಳ್ಳಲಾಗುತ್ತದೆ. ರೈತರಿಗೆ ಪಾವತಿಸಿದ ಜಮೀನಿನ ವೆಚ್ಚ, ಅಭಿವೃದ್ಧಿಯ ವೆಚ್ಚ ಸೇರಿಸಿ ಚದರ ಅಡಿಗೆ ದರ ನಿಗದಿ ಪಡಿಸಲಾಗುವುದು. ಒಂದು ವರ್ಷದ ಒಳಗೆ ನಿವೇಶನ ಹಂಚಿಕೆ ಆಗಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT