ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಪುರ: 152 ಹಸುಗಳಿಂದ 500 ಲೀ. ಹಾಲು ಉತ್ಪಾದಿಸುತ್ತಿರುವ ಮುಂಗುಸುವಳ್ಳಿಯ ಲತಾ

ಉತ್ಪಾದನೆ ಮಾಡುತ್ತಿರುವ ರೈತ ಮಹಿಳೆ
Last Updated 1 ಡಿಸೆಂಬರ್ 2021, 5:29 IST
ಅಕ್ಷರ ಗಾತ್ರ

ಧರ್ಮಪುರ: ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅದಮ್ಯ ಉತ್ಸಾಹ, ಅದಕ್ಕೆ ನೀರೆರೆದ ಪತಿಯ ಸಹಕಾರ ಇಂದು ಹೈನುಗಾರಿಕೆಯಲ್ಲಿ ಅಧಿಕ ಮತ್ತು ಗುಣಮಟ್ಟದ ಹಾಲು ಉತ್ಪಾದನೆಯ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಸಾಧನೆ ಮಾಡಿರುವ ಮಹಿಳೆ ಮುಂಗುಸುವಳ್ಳಿಯ ಜಿ.ಪಿ.ಲತಾ ಅವರದು.

ಪದವಿಯಲ್ಲಿ ಇಂಗ್ಲಿಷ್ ಐಚ್ಚಿಕ ವಿಷಯವನ್ನು ತೆಗೆದುಕೊಂಡು ಪದವಿ ಪೂರ್ಣಗೊಳಿಸಿದ ಮೇಲೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಲತಾ ಕೃಷಿಯ ಕಡೆ ಹೆಚ್ಚು ಗಮನಹರಿಸಿದರು. ಅದಕ್ಕಾಗಿ ಆರಂಭದಲ್ಲಿ ದಾಳಿಂಬೆ ಬೆಳೆದು ಉತ್ತಮ ಲಾಭವನ್ನು ಕಂಡುಕೊಂಡರು. ದಾಳಿಂಬೆಗೆ ಬಂದ ಬ್ಯಾಕ್ಟಿರೀಯಾ ಬ್ಲೈಟ್‌ನಿಂದಾಗಿ ಕೊನೆಗೆ ದಾಳಿಂಬೆ ಗಿಡಗಳನ್ನೇ ತೆಗೆಯಬೇಕಾಯಿತು. ಆದರೂ ಧೃತಿಗೆಡದೆ ಹೈನುಗಾರಿಕೆಗೆ ಹೆಚ್ಚು ಒತ್ತು ಕೊಟ್ಟು ಇಂದು ಚಿತ್ರದುರ್ಗ ಜಿಲ್ಲೆಯಲ್ಲಿಯೇ ಅಧಿಕ ಮತ್ತು ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಹೆಸರು ಗಳಿಸಿದ್ದಾರೆ.

ಲತಾ ತಮ್ಮ 25 ಎಕರೆಯ ವಿಸ್ತೀರ್ಣದಲ್ಲಿ 2001ರಲ್ಲಿ ಪ್ರಾರಂಭವಾದ ಹೈನುಗಾರಿಕೆ ಇಂದು ಬೃಹದಾಕಾರವಾಗಿ ಬೆಳೆಸಿದ್ದು, ಶೆಡ್‌ಗಳಲ್ಲಿ ವಿವಿಧ ತಳಿಯ ಹಸುಗಳನ್ನು ಸಾಕಿದ್ದಾರೆ. ಎಚ್ಎಫ್, ಜರ್ಸಿ, ಗೀರ್, ಮಲೆನಾಡು ಗಿಡ್ಡ, ಕಾಂಕ್ರೀಜಾ ಹಸುಗಳು ಮತ್ತು ಮುರಾ ಎಮ್ಮೆಗಳು ಸೇರಿ 152 ಹಸುಗಳಿವೆ. ನಿತ್ಯ 450ರಿಂದ 500 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹತ್ತಿರದ ಹರಿಯಬ್ಬೆ ಹಾಲು ಉತ್ಪಾದಕ ಸಂಘಕ್ಕೆ ಕೊಡುತ್ತಿದ್ದಾರೆ.

ಕೆಲವು ವರ್ಷಗಳವರೆಗೆ ಅಕ್ಷಯ ಕಲ್ಪಕ್ಕೂ ಹಾಲು ಪೂರೈಕೆಯಾಗುತ್ತಿತ್ತು. ಒಂದು ವರ್ಷಕ್ಕೆ ಹಾಲು ಉತ್ಪಾದನೆಯಲ್ಲಿ ಕನಿಷ್ಟ ₹ 30 ಲಕ್ಷ ಆದಾಯ ಬರುತ್ತಿದೆ ಎನ್ನುತ್ತಾರೆ ಲತಾವರು.

20ವರ್ಷಗಳ ಅವಧಿಯಲ್ಲಿ ಹೈನುಗಾರಿಕೆಯಿಂದ ಬರೀ ಹಾಲು ಉತ್ಪಾದನೆ ಮಾತ್ರವಲ್ಲದೆ, ಕರುಗಳ ಮಾರಾಟ,ಸಗಣಿಗೊಬ್ಬರ, ಗಂಜಳದಿಂದ ತಮ್ಮ 10ಎಕರೆಯ ಅಡಿಕೆ ತೋಟ ಬೆಳಸಿ ರಾಸಾಯನಿಕ ಗೊಬ್ಬರ ಮತ್ತು ಔಷಧಿ ಬಳಸದೇ ಬರೀ ಸಾವಯವ ಗೊಬ್ಬರದ ಮೂಲಕ ಅದರಲ್ಲೂ ಉತ್ತಮ ಆದಾಯ ಕಾಣುತ್ತಿದ್ದಾರೆ.

ಹಸುಗಳಿಗೆ ಬೇಕಾಗಿರುವ ಮೇವನ್ನು ತಮ್ಮ ಜಮೀನಿನಲ್ಲಿಯೇ ಬೆಳಸಿಕೊಂಡು ಸೈಲೇಜ್ ಮಾಡಿಕೊಳ್ಳುವುದರ ಮೂಲಕ ಸಂಗ್ರಹಿಸುತ್ತಾರೆ. ಮೆಕ್ಕೆಜೋಳ, ಸೋಯಾಬಿನ್, ಹುರುಳಿ, ನೇಪಿಯರ್, ಕುದುರೆಮೆಂಥ್ಯಗಳನ್ನು (ಲೂಸರ್) ಹಸುಗಳಿಗೆ ನೀಡುವುದರಿಂದ ಗುಣಮಟ್ಟದ ಹಾಲು ಸಿಗುತ್ತದೆ. ಮೇವು ಸಂಗ್ರಹಿಸಲು ಪಾಲಿಹೌಸ್ ನಿರ್ಮಿಸಲಾಗಿದೆ.

ಜಮೀನಿಗೆ ಬೇಕಾಗಿರುವ ಸಾವಯವ ಗೊಬ್ಬರ, ಗೋಬರ್ ಗ್ಯಾಸ್ ಉತ್ಪಾದನೆಯಾಗುತ್ತಿದ್ದು ಅಧಿಕ ಖರ್ಚಿಲ್ಲದೆ ಉತ್ತಮ ಆದಾಯ ಕಾಣುತ್ತಿದ್ದಾರೆ.

ಜಮೀನಿನಲ್ಲಿ ಮಳೆ ನೀರು ಸಂಗ್ರಹ ಮಾಡಿಕೊಂಡು ಬೇರೆ ರೈತರಿಗೆ ಮಾದರಿಯಾಗಿದ್ದಾರೆ. 8 ಸಾವಿರ ಅಡಿಕೆ ಗಿಡಗಳು, 300 ತೆಂಗು, ಸೀಬೆ, ಹಲಸು, ಮಾವು, ಮೋಸಂಬಿ, ನಿಂಬೆ, ನೇರಳೆ, ಸೀತಾಫಲ, ವಾಟರ್ ಆ್ಯಪಲ್, ಸ್ಟಾರ್ ಫ್ರೂಟ್, ಲಕ್ಷ್ಮಣ ಫಲ, ರಾಮ ಫಲ, ಸಪೋಟ, ಕರ್ಜೂರ, ಶ್ರೀಗಂಧ, ಸಿಲ್ವರ್ ಓಕ್, ಹುಣಸೆ, ಮಹಾಘನಿ ಬೆಳೆಸುವುದರ ಮೂಲಕ ಐದು ಎಕರೆಯನ್ನು ಅರಣ್ಯ ಕೃಷಿಯನ್ನಾಗಿಸಿದ್ದಾರೆ.

ಅವರ ಈ ಎಲ್ಲ ಸಾಧನೆಗಳಿಂದ ಬೆಂಗಳೂರು ಜಿಕೆವಿಕೆಯಿಂದ ಜಿಲ್ಲಾ ರೈತ ಮಹಿಳೆ ಪ್ರಶಸ್ತಿ, ಚಿತ್ರದುರ್ಗ ಮುರುಘಾ ಮಠದಿಂದ ಸನ್ಮಾನ, ಜಿಲ್ಲಾ ಮಟ್ಟದ ತೋಟಗಾರಿಕಾ ಮೇಳದಲ್ಲಿ ಸನ್ಮಾನಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT