ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಈಗ ಕೊರೊನಾ ಗೆದ್ದವರ ‘ಬಿಡುಗಡೆ ಪರ್ವ’

ದಾವಣಗೆರೆಯ ಬಾಷಾನಗರದ ಸ್ಟಾಫ್‌ ನರ್ಸ್‌, ಕೆಟಿಜೆ ನಗರದ ಮಹಿಳೆ ಸೇರಿ 7 ಜನ ಗುಣಮುಖ
Last Updated 22 ಮೇ 2020, 16:25 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್‌–19 ರೋಗದಿಂದ ಗುಣಮುಖರಾಗಿರುವ ಬಾಷಾನಗರದ ಸ್ಟಾಫ್‌ ನರ್ಸ್‌ (ಪಿ–533) ಸೇರಿ ಏಳು ಜನರನ್ನು ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ಶುಕ್ರವಾರ ಆತ್ಮೀಯವಾಗಿ ಮನೆಗೆ ಬೀಳ್ಕೊಡಲಾಯಿತು.

ಜಿಲ್ಲಾ ಆಸ್ಪತ್ರೆಯಿಂದ ಹೊರಗೆ ಬಂದ ಕೋವಿಡ್‌ ಮುಕ್ತ ರೋಗಿಗಳನ್ನು ಕೆಂಪು ಹಾಸಿನ ಮೇಲೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದಲ್ಲಿ ವೈದ್ಯರು ಹಾಗೂ ಅಧಿಕಾರಿಗಳು ಪುಷ್ಪವೃಷ್ಟಿ ಮಾಡುವ ಮೂಲಕ ಶುಭ ಕೋರಿದರು. ಈ ರೋಗದಿಂದ ಗುಣಮುಖರಾದವರ ಸಂಖ್ಯೆ 21ಕ್ಕೆ ಏರಿತು.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದೆ. ಬುಧವಾರ ಏಳು ಜನ, ಗುರುವಾರ ಐದು ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. 19 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಶನಿವಾರ ಬಿಡುಗಡೆ ಹೊಂದುವ ನಿರೀಕ್ಷೆ ಇದೆ. ಇದೀಗ ‘ಕೊರೊನಾ ಬಿಡುಗಡೆ ಪರ್ವ’ ಶುರುವಾಗಿದ್ದು, ವೈದ್ಯರು ಹಾಗೂ ಅಧಿಕಾರಿಗಳ ವಿಶ್ವಾಸವನ್ನು ಹೆಚ್ಚಿಸಿದೆ.

ಬಾಷಾನಗರದ ಆರೋಗ್ಯ ಕೇಂದ್ರದ ಸ್ಟಾಫ್‌ ನರ್ಸ್‌ ಸಂಪರ್ಕದಿಂದ ಹಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು, ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರು ಮನೆಗೆ ತೆರಳಿದ್ದಾರೆ. ಎರಡು ದಿನಗಳ ಹಿಂದೆ ಅವರ ಹಿರಿಯ ಮಗ (ಪಿ–585) ಬಿಡುಗಡೆ ಹೊಂದಿದ್ದರು.

26 ವರ್ಷದ ಯುವತಿ (ಪಿ–581), 30 ವರ್ಷದ ಯುವಕ (ಪಿ–660), 25 ವರ್ಷದ ಯುವಕ (ಪಿ–661), ಕೆಟಿಜೆನಗರದ 52 ವರ್ಷದ ಮಹಿಳೆ (ಪಿ–665), 36 ವರ್ಷದ ಮಹಿಳೆ (ಪಿ–666) ಹಾಗೂ 40 ವರ್ಷದ ಮಹಿಳೆ (ಪಿ–696) ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.

‘ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ನೀಡಿದರು. ನಮ್ಮನ್ನು ರೋಗದಿಂದ ಮುಕ್ತಗೊಳಿಸಿ ಬದುಕಿಸಿದ್ದಕ್ಕೆ ಧನ್ಯವಾದಗಳು...’ ಎಂದು 30 ವರ್ಷದ ಯುವಕ (ಪಿ–660) ಜಿಲ್ಲಾಧಿಕಾರಿ ಬಳಿಗೆ ತೆರಳಿ ಕೈಮುಗಿದು ಕೃತಜ್ಞತೆ ಸಲ್ಲಿಸಿದರು. ಬಳಿಕ ಆಂಬುಲೆನ್ಸ್‌ನಲ್ಲಿ ಎಲ್ಲಾ ರೋಗಿಗಳು ತಮ್ಮ ಮನೆಗೆ ತೆರಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಕೋವಿಡ್‌ ನೋಡಲ್‌ ಅಧಿಕಾರಿ ಪ್ರಮೋದ ನಾಯಕ, ಜಿಲ್ಲಾ ಸರ್ಜನ್‌ ಡಾ. ಸುಭಾಸ್‌ಚಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ಅವರೂ ಹಾಜರಿದ್ದರು.

ಇಂದು 19 ಜನರ ಬಿಡುಗಡೆ
‘19 ರೋಗಿಗಳ ಎರಡನೇ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ನೆಗೆಟಿವ್‌ ಎಂಬ ಪ್ರಾಥಮಿಕ ವರದಿ ಬಂದಿದೆ. ಹೀಗಾಗಿ 19 ರೋಗಿಗಳನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡುತ್ತೇವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಆಸ್ಪತ್ರೆ ಆವರಣದಲ್ಲೇ ವೈದ್ಯರೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ ಜಿಲ್ಲಾಧಿಕಾರಿ, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಇನ್ನೂ ಮೂರು ತಿಂಗಳ ನಾವೆಲ್ಲ ಕಾಲ ಹೆಚ್ಚು ಜಾಗರೂಕರಾಗಿ ಕೆಲಸ ಮಾಡಬೇಕು. ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಂತೆ ಚಿಕಿತ್ಸೆ ನೀಡಿ, ಗುಣಮುಖರನ್ನಾಗಿ ಮಾಡಿ ಮನೆಗೆ ಕಳುಹಿಸಿಕೊಡಬೇಕು’ ಎಂದು ಸಲಹೆ ನೀಡಿದರು.

ಬಾಲಕಿ ಸೇರಿ ಮೂವರಿಗೆ ಕೋವಿಡ್‌
ಜಿಲ್ಲೆಯಲ್ಲಿ ಬಾಲಕಿ ಸೇರಿ ಮತ್ತೆ ಮೂವರಿಗೆ ಕೋವಿಡ್‌–19 ರೋಗ ಇರುವುದು ಶುಕ್ರವಾರ ದೃಢಪಟ್ಟಿದೆ.

ಜಾಲಿನಗರದ 15 ವರ್ಷದ ಬಾಲಕನ (ಪಿ–1483) ಸಂಪರ್ಕದಿಂದ 42 ವರ್ಷದ ಮಹಿಳೆ (ಪಿ-1656), 14 ವರ್ಷದ ಬಾಲಕಿ (ಪಿ-1657) ಹಾಗೂ 18 ವರ್ಷದ ಯುವಕನಿಗೆ (ಪಿ–1658) ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. 93 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT