ಗುರುವಾರ , ಜೂನ್ 30, 2022
25 °C
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಮೆಚ್ಚುಗೆ

ಅರಬಗಟ್ಟೆ ಕೋವಿಡ್‌ ಕೇಂದ್ರ ರಾಜ್ಯಕ್ಕೆ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ತಾಲ್ಲೂಕಿನ ಅರಬಗಟ್ಟೆ ಗ್ರಾಮದಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಅತ್ಯಂತ ಸುಸಜ್ಜಿತವಾದ ಮೂಲಸೌಲಭ್ಯಗಳನ್ನು ಹೊಂದಿದ 800 ಹಾಸಿಗೆಗಳಿರುವ ಕೋವಿಡ್ ಕೇಂದ್ರವನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಕೇವಲ ಎರಡು ದಿನಗಳಲ್ಲಿ ನಿರ್ಮಿಸಿರುವುದು ಶ್ಲಾಘನೀಯ. ಇದು ರಾಜ್ಯಕ್ಕೆ ಮಾದರಿ ಕೇಂದ್ರ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ತಾಲ್ಲೂಕಿನ ಅರಬಗಟ್ಟೆ ಗ್ರಾಮದಲ್ಲಿರುವ ನೂತನ ಕೋವಿಡ್ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹೊನ್ನಾಳಿ–ನ್ಯಾಮತಿ ಅವಳಿ ತಾಲ್ಲೂಕಿನಲ್ಲಿರುವ ಸೋಂಕಿತರನ್ನು ಒಂದೇ ಸೂರಿನಡಿ ತಂದು ಉತ್ತಮ ವೈದ್ಯಕೀಯ ವ್ಯವಸ್ಥೆ, ಊಟೋಪಚಾರ ಇತರ ಸೌಕರ್ಯಗಳನ್ನು ಕಲ್ಪಿಸಿಕೊಡುವ ದೃಷ್ಟಿಯಿಂದ ರೇಣುಕಾಚಾರ್ಯ ಈ ಕೇಂದ್ರ ನಿರ್ಮಾಣ ಮಾಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಸತತವಾಗಿ ಮಾಹಿತಿ ಪಡೆಯುತ್ತಿರುತ್ತೇನೆ. ಮೋದಿ ಅವರು ಪ್ರಧಾನಿಯಾಗಿ ಏಳು ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ. ಜೂನ್‌ 7ರ ಬಳಿಕ ಲಾಕ್‍ಡೌನ್ ಮುಂದುವರಿಸುವ ತೀರ್ಮಾನ ಮುಖ್ಯಮಂತ್ರಿ ತೆಗೆದುಕೊಳ್ಳಲಿದ್ದಾರೆ. ನನ್ನ ಪ್ರಕಾರ ಜೂನ್ 15ರವರೆಗೆ ಲಾಕ್‍ಡೌನ್ ಮುಂದುವರಿಸಬೇಕು’ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇನ್ನೂ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅವರೇ ಮುಂದುವರಿಯಲಿದ್ದಾರೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಹಾಗೂ ತಾಲ್ಲೂಕಿನ ಅಧಿಕಾರಿಗಳು ಅತ್ಯುತ್ತಮ ಸಹಕಾರ ನೀಡುತ್ತಿದ್ದು, ಕೊರೊನಾ ನಿರ್ವಹಣೆಗೆ ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಲಸಿಕೆ ಕೊರತೆಯಾಗದಂತೆ ಸಚಿವರು ಕ್ರಮ ಕೈಗೊಳ್ಳುತ್ತಿದ್ದಾರೆ. ಬೆಂಗಳೂರಿನ ತಮ್ಮ ಕ್ಷೇತ್ರ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಶ್ರಮವಹಿಸಿ ಲಸಿಕೆ ಪೂರೈಸುತ್ತಿದ್ದಾರೆ’ ಎಂದರು.

‘ಕೇವಲ 48 ಘಂಟೆಯಲ್ಲಿ 800 ಹಾಸಿಗೆಗಳ ಕೋವಿಡ್‌ ಕೇಂದ್ರ ನಿರ್ಮಾಣ ಮಾಡಿಸಿದ್ದು, ಇದು ದೇಶದಲ್ಲಿಯೇ ಅತಿ ದೊಡ್ಡ ಕೋವಿಡ್ ಕೇಂದ್ರ ಆಗಲಿದೆ’ ಎಂದು ಹೇಳಿದರು.

₹ 50 ಲಕ್ಷ ಚೆಕ್ ಹಸ್ತಾಂತರ: ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ ಅವರು ಸಿಎಸ್‍ಆರ್ ಅನುದಾನದಿಂದ ₹ 50 ಲಕ್ಷದ ಡಿಡಿ ವಿತರಿಸಿದರು. ಆಸ್ಪತ್ರೆಯ ಪರಿಕರಗಳು ಸೇರಿ ಇತರ ಸೇವೆಗಾಗಿ ಅದನ್ನು ಅವಳಿ ತಾಲ್ಲೂಕಿಗೆ ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ ದಾನ್ನಮ್ಮನವರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರರಾದ ಬಸನಗೌಡ ಕೋಟೂರ, ತನುಜಾ ಟಿ.ಸವದತ್ತಿ, ತಾಲ್ಲೂಕು ಪಂಚಾಯಿತಿ ಇಒ ಗಂಗಾಧರ್ ಮೂರ್ತಿ, ರಾಮಭೋವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ, ಸಿಪಿಐ ದೇವರಾಜ್, ಪಿಎಸ್‍ಐ ಬಿರಾದರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು