ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ಕೋಟಾದ ಬೆಡ್ ನೀಡದ ಖಾಸಗಿ ಆಸ್ಪತ್ರೆ

ಕೋವಿಡ್‌ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವದ್ವಯರ ಆಕ್ರೋಶ
Last Updated 22 ಮೇ 2021, 4:00 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್ ರೋಗಿಗಳಿಗೆ ಬೆಡ್ ನೀಡುವ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ವಾಗ್ವಾದ ನಡೆಯಿತು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್‌ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಬೈರತಿ ಬಸವರಾಜ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರು ಬೆಡ್‌ಗಳ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಖಾಸಗಿ ಮೆಡಿಕಲ್ ಕಾಲೇಜುಗಳು ಶೇ 75, ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಬೆಡ್‍ಗಳನ್ನು ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಮಾಡಲಾದ ರೋಗಿಗಳಿಗಾಗಿ ಒದಗಿಸಲೇಬೇಕು. ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಜನರ ಪ್ರಾಣ ರಕ್ಷಿಸುವುದು ನನ್ನ ಕರ್ತವ್ಯ. ಜೆಜೆಎಂಎಂ ಕಾಲೇಜು, ಎಸ್‍.ಎಸ್. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 91 ಬೆಡ್‍ಗಳನ್ನು ಮಾತ್ರ ನೀಡಿದ್ದು, ಸರ್ಕಾರದ ಸೂಚನೆ ಪಾಲಿಸುತ್ತಿಲ್ಲ’ ಎಂದು ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಎಸ್‌.ಎಸ್. ಆಸ್ಪತ್ರೆಯ ಪ್ರಾಂಶುಪಾಲ ಡಾ. ಬೂದಿಹಾಳ್‌ ಪ್ರಸಾದ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಡಾ.ಬೂದಿಹಾಳ್ ಪ್ರಸಾದ್, ‘ನಾನ್‌ ಕೋವಿಡ್ ರೋಗಿಗಳಿಗೂ ಕೆಲವು ಸಲ ಆಕ್ಸಿಜನ್, ವೆಂಟಿಲೇಟರ್ ಬೇಕಾಗುತ್ತದೆ. ಆಡಳಿತ ಮಂಡಳಿ ಜೊತೆಗೇ ಈ ಕುರಿತು ಚರ್ಚಿಸಿ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಸುಧಾಕರ್‌, ‘ರಾಜ್ಯ ಮಟ್ಟದಲ್ಲಿ ಸರ್ಕಾರ ಕೈಗೊಂಡ ನಿರ್ಧಾರವನ್ನು ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜುಗಳು ಪಾಲಿಸದಿರುವುದು ಅಚ್ಚರಿ ತಂದಿದೆ. ಖಾಸಗಿ ಆಡಳಿತ ಮಂಡಳಿಯೊಂದಿಗೆ ಸರ್ಕಾರ ಎಂದಿಗೂ ಘರ್ಷಣೆ ಬಯಸುವುದಿಲ್ಲ. ರಾಜ್ಯದಲ್ಲಿ ಎಲ್ಲ ಖಾಸಗಿ ಮೆಡಿಕಲ್ ಕಾಲೇಜುಗಳೂ ನಿಗದಿತ ಪ್ರಮಾಣದಲ್ಲಿ ಬೆಡ್ ನೀಡಿ ಸ್ಪಂದಿಸುತ್ತಿವೆ. ಸರ್ಕಾರಿ ಆಸ್ಪತ್ರೆಗಳಿಂದ ಶಿಫಾರಸು ಮಾಡುವ ರೋಗಿಗಳಿಗೆ ನಿಗದಿತ ಸಂಖ್ಯೆಯ ಬೆಡ್ ನೀಡಲೇಬೇಕು. ನಾವೇನು ಉಚಿತವಾಗಿ ನೀಡಿ ಎಂದು ಹೇಳುತ್ತಿಲ್ಲ. ಇದು ಆರೋಗ್ಯ ತುರ್ತುಪರಿಸ್ಥಿತಿ ‌ಕಾಲವಾಗಿದ್ದರಿಂದ ಮಾತ್ರ ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳು ಚಿಕಿತ್ಸೆ ನೀಡಬೇಕು’ ಎಂದು ತಾಕೀತು ಮಾಡಿದರು.

‘ಖಾಸಗಿ ಆಸ್ಪತ್ರೆಗಳು ಬೆಡ್ ಲಭ್ಯತೆ ಕುರಿತು ಫಲಕದಲ್ಲಿ ‌‌‌ಪ್ರದರ್ಶಿಸಬೇಕು. ನಿಗದಿಯಂತೆ ಬೆಡ್‍ಗಳನ್ನು ಪಡೆಯದಿದ್ದರೆ ಡಿಎಚ್‌ಒ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಸಹಕಾರ ನೀಡದವರ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಡಿಎಚ್‍ಒ ಕಾನೂನು ಕ್ರಮ ಕೈಗೊಂಡು ಬೆಡ್‌ಗಳನ್ನು ಸುಪರ್ದಿಗೆ ತೆಗೆದುಕೊಳ್ಳಬೇಕು’ ಎಂದು ಸುಧಾಕರ್‌ ಸೂಚನೆ ನೀಡಿದರು.

ಮನೆಯಲ್ಲಿರುವವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಿ: ಹೋಂ ಐಸೋಲೇಷನ್‍ಗೆ ಒಳಗಾಗುವ ಸೋಂಕಿತರಿಂದಲೇ ಇತರರಿಗೆ ಹೆಚ್ಚು ಸೋಂಕು ಹರಡುತ್ತಿರುವುದು ಕಂಡುಬಂದಿದ್ದು, ಇನ್ನು ಮುಂದೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಹೋಂ ಐಸೋಲೇಷನ್‍ಗೆ ಅವಕಾಶ ನೀಡದೆ, ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಬೇಕು. ಬಾರದೇ ಇರುವವರನ್ನು ಪೊಲೀಸರ ಸಹಾಯ ಪಡೆದು ಕಳುಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಸದ್ಯ 4,789 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಇದರಲ್ಲಿ 3,259 ಜನ ಹೋಂ ಐಸೋಲೇಷನ್‌ನಲ್ಲಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲೇ 1,986 ಜನ ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 12 ಕೋವಿಡ್ ಕೇರ್ ಸೆಂಟರ್‌ಗಳು (ಸಿಸಿಸಿ) ಕಾರ್ಯನಿರ್ವಹಿಸುತ್ತಿದ್ದು, 760 ಜನ ಸದ್ಯ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಜಿಲ್ಲೆಯಲ್ಲಿ ಉತ್ತಮ ಸೌಲಭ್ಯಗಳಿರುವ ವಸತಿನಿಲಯಗಳು, ಸರ್ಕಾರಿ ಹಾಗೂ ಖಾಸಗಿ ಸಮುದಾಯ ಭವನಗಳನ್ನು ಗುರುತಿಸಿ, ಕೋವಿಡ್ ಕೇರ್ ಸೆಂಟರ್‌ಗಳನ್ನಾಗಿ ಪರಿವರ್ತಿಸಬೇಕು. ರೋಗಿಯನ್ನು ದಾಖಲಿಸಿದ 5 ಗಂಟೆಯ ಒಳಗಾಗಿ ಅವರಿಗೆ ನಿಗದಿತ ಎಲ್ಲ ಔಷಧ, ಸಾಮಗ್ರಿಗಳಿರುವ ಮೆಡಿಕಲ್ ಕಿಟ್ ಒದಗಿಸಬೇಕು’ ಎಂದರು.

ಆಂಬುಲೆನ್ಸ್‌ಗೆ ದರ ನಿಗದಿ: ‘ಕೋವಿಡ್ ಹೆಚ್ಚುತ್ತಿರುವ ಸಂದರ್ಭದ ಲಾಭ ಪಡೆದು ಖಾಸಗಿ ಆಂಬುಲೆನ್ಸ್‌ಗಳು ರೋಗಿಗಳಿಂದ ನಿಗದಿಗಿಂತ ಹೆಚ್ಚಿನ ದರ ವಸೂಲಿ ಮಾಡುವ ಮೂಲಕ ನೊಂದಿರುವವರಿಗೆ ಇನ್ನಷ್ಟು ಹಿಂಸೆ ನೀಡುವ ಅಮಾನವೀಯ ವರ್ತನೆ ತೋರುತ್ತಿವೆ. ಈ ಕುರಿತು ಬಹಳಷ್ಟು ದೂರುಗಳು ಕೇಳಿಬಂದಿದ್ದು, ಈ ದಿಸೆಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಚರ್ಚಿಸಲಾಗಿದೆ. ಹೆಚ್ಚಿನ ದರ ಪಡೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಸುಧಾಕರ್ ಹೇಳಿದರು.

ಸಾವಿನ ಸಂಖ್ಯೆ ಮುಚ್ಚಿಡಬೇಡಿ: ಜಿಲ್ಲಾಡಳಿತ ನೀಡುವ ಸಾವಿನ ಸಂಖ್ಯೆ ಲೆಕ್ಕ ಸರಿಯಿಲ್ಲ. ದಿನಕ್ಕೆ ಐದಾರು ಮಂದಿ ಕೊರೊನಾದಿಂದ ಮೃತಪಟ್ಟರೂ ಒಂದು, ಎರಡು ಎಂದು ಲೆಕ್ಕ ತೋರಿಸುತ್ತಾರೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಸುಧಾಕರ್, ‘ವಸ್ತುಸ್ಥಿತಿಗೆ ಅನುಗುಣವಾಗಿ ವರದಿ ನೀಡಿ. ಸಾವಿನ ಪ್ರಮಾಣ ಮುಚ್ಚಿಟ್ಟು ಸಾಧನೆ ಮಾಡುವುದು ಏನಿದೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಕಪ್ಪು ಶಿಲೀಂಧ್ರ ಆತಂಕಪಡುವ ಅಗತ್ಯವಿಲ್ಲ: ‘ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಸೋಂಕು ಕಂಡುಬಂದಿದ್ದು, ಜಿಲ್ಲೆಯಲ್ಲಿಯೂ ಈವರೆಗೆ
15ರಿಂದ 20 ಜನರಲ್ಲಿ ಈ ಸೋಂಕು ಕಂಡುಬಂದಿದೆ. ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕುವಂತೆ ಮಾಡಲಾಗಿದ್ದು, ಅಗತ್ಯವಿರುವ ಔಷಧ ಪೂರೈಕೆಗೂ ಕ್ರಮ ವಹಿಸಲಾಗಿದೆ. ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿರುವವರ ಆರೋಗ್ಯ ತಪಾಸಣೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಬಿಡುಗಡೆಯಾದ ದಿನದಿಂದ 3, 7, 15 ದಿನಗಳ ಅವಧಿಯಲ್ಲಿ ಅವರಿಗೆ ಯಾವ ಪರೀಕ್ಷೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚಿಸಲಾಗಿದೆ’
ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ.ಲಿಂಗಣ್ಣ, ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಡಿಎಚ್‌ಒ ಡಾ. ನಾಗರಾಜ್ ಇದ್ದರು.

ಎಲ್ಲ ತಾಲ್ಲೂಕುಗಳಲ್ಲಿ ಆಮ್ಲಜನಕ ಘಟಕ

ಕೋವಿಡ್ ರೋಗಿಗಳಿಗಾಗಿ ರಾಜ್ಯದಲ್ಲಿ ಆಮ್ಲಜನಕದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿಯೂ ಆಮ್ಲಜನಕ ಘಟಕವನ್ನು ಸ್ಥಾಪಿಸುವ ಆಲೋಚನೆ ಇದೆ. ಜಿಲ್ಲೆಗೆ ಒಟ್ಟು 115 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ವಿವಿಧ ಮೂಲಗಳಿಂದ ಒದಗಿಸಲಾಗಿದೆ. ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ಅವರು ವೈಯಕ್ತಿಕ ಖರ್ಚಿನಲ್ಲಿ ಆಮ್ಲಜನಕ ಒದಗಿಸಿರುವುದನ್ನು ಸ್ಮರಿಸಿದರು.

ಇಬ್ಬರ ಅಮಾನತಿಗೆ ಆದೇಶ

ಕೋವಿಡ್ ಬೆಡ್‌ ನೀಡುವಲ್ಲಿ ವಿಫಲರಾದ ನೋಡಲ್ ಅಧಿಕಾರಿ ಶ್ರೀನಿವಾಸ್ ಹಾಗೂ ವೆಂಟಿಲೇಟರ್ ಸೂಕ್ತವಾಗಿ ನಿರ್ವಹಣೆ ಮಾಡದ ಜಗಳೂರು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನೀರಜ್ ಅವರನ್ನು ಅಮಾನತು ಮಾಡಲು ಸಚಿವರು ಸೂಚಿಸಿದರು.

‘ಕೋವಿಡ್ ಸೋಂಕಿತರೊಬ್ಬರಿಗೆ ಬೆಡ್ ನೀಡಲು ಶ್ರೀನಿವಾಸ್ ಅವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಕೊನೆಗೆ ರೋಗಿ ಮೃತಪಟ್ಟರು. ಕರೆ ಸ್ವೀಕರಿಸಿ ವಿಷಯ ತಿಳಿಸಿದ್ದರೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

‘ತಕ್ಷಣವೇ ಅಮಾನತು ಮಾಡಿ, 302 ಕೇಸ್ ಬುಕ್ ಮಾಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಸೂಚಿಸಿದರು.

‘ವೆಂಟಿಲೇಟರ್ ನೀಡಿ 8 ತಿಂಗಳು ಕಳೆದರೂ ಆರಂಭಿಸಿರಲಿಲ್ಲ. ವೈದ್ಯರಿಗೆ ಇರುವ ಗೌರವವನ್ನು ಕಳೆದುಬಿಟ್ಟಿರಿ. ನೀವೇಕೆ ಸರ್ಕಾರಿ ಆಸ್ಪತ್ರೆಗೆ ಬಂದಿರಿ? ಖಾಸಗಿ ಕ್ಲಿನಿಕ್ ಇಟ್ಟುಕೊಳ್ಳಿ’ ಎಂದು ಜಗಳೂರು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನೀರಜ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ಅಮಾನತು ಮಾಡಿ ಎಂದು ಜಿಲ್ಲಾಧಿಕಾರಿಗೆ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT