ಶನಿವಾರ, ಮಾರ್ಚ್ 25, 2023
25 °C

ಯು.ಎ.ಪಿ.ಎ ರದ್ಧತಿಗೆ ರಾಜ್ಯವ್ಯಾಪಿ ಹೋರಾಟ: ಸಾತಿ ಸುಂದರೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ರದ್ಧತಿಗಾಗಿ ರಾಜ್ಯವ್ಯಾಪಿ ಹೋರಾಟ ರೂಪಿಸಲಾಗುವುದು’ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.

‘ಯು.ಎ.ಪಿ.ಎ ನೆಪವೊಡ್ಡಿ ಆಡಳಿತ ಪಕ್ಷದವರು ಮಾನವಹಕ್ಕು ಹೋರಾಟಗಾರರು, ಚಿಂತಕರು, ಪತ್ರಕರ್ತರು, ಮಹಿಳಾ ಹೋರಾಟಗಾರರನ್ನು ಬಂಧಿಸುವ ಕೆಲಸ ನಡೆಯುತ್ತಿದೆ. ದೇಶದ್ರೋಹ ಕಾನೂನು ವಿಧಿ 124 ಇದೇ ರೀತಿ ದುರ್ಬಳಕೆಯಾಗುತ್ತಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.   

‘ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಈವರೆಗೆ 5,229 ಪ್ರಕರಣಗಳು ದಾಖಲಿಸಲಾಗಿದ್ದು, ಹಲವರನ್ನು ಬಂಧಿಸಲಾಗಿದೆ. ಯುಎಪಿಎ ರಾಜಕೀಯ ದುರ್ಬಳಕೆಯಾಗುತ್ತಿರುವುದರ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಬ್ರಿಟಿಷರ ಕಾಲದ ಈ ಕಾನೂನು ಈಗ ಅಗತ್ಯವಿದೆಯೇ ಎಂದು ಪ್ರಶ್ನಿಸಿದೆ. ಇದನ್ನು ಜನವಿರೋಧಿ ಎಂದು ಪರಿಗಣಿಸಿ ರದ್ದು ಮಾಡಬೇಕು’ ಎಂದು ಆಗ್ರಹಿಸಿದರು.

‘ಈ ಕಾಯ್ದೆಯ ಬಗ್ಗೆ ಜನಾಂದೋಲನ ರೂಪಿಸಿಸಲು ಪ್ರತಿ ಜಿಲ್ಲೆಯಲ್ಲೂ ಪ್ರಗತಿಪರರು, ಸಮಾನ ಮನಸ್ಕರು ಹಾಗೂ ಜನಮುಖಿ ಚಿಂತಕರನ್ನು ಒಟ್ಟುಗೂಡಿಸಲಾಗುವುದು. ಬೀದರ್‌  ಚಾಮರಾಜನಗರ ಜಿಲ್ಲೆಯವರೆಗೆ ಮೆರವಣಿಗೆ, ಜಾಥಾಗಳ ಮೂಲಕ ಈ ಕಾಯ್ದೆಯ ರದ್ಧತಿಗೆ ಜನಾಂದೋಲನ ರೂಪಿಸಲಾಗುವುದು’ ಎಂದು ಹೇಳಿದರು.

ಮುಖಂಡ ಆವರಗೆರೆ ಚಂದ್ರು ಮಾತನಾಡಿ, ‘ಸರ್ಕಾರ ಜನರನ್ನು ಮತದಾರರನ್ನಾಗಿ ನೋಡುತ್ತಿದೆಯೇ ಹೊರತು ಮನುಷ್ಯರನ್ನಾಗಿ ಅಲ್ಲ. ಆಡಳಿತ ಹಾಗೂ ವಿರೋಧ ಪಕ್ಷಗಳೆರಡೂ ಒಂದೇ ನಾಣ್ಯದ ಮುಖಗಳು ಇದ್ದಂತೆ, ಮತಗಳಿಗಾಗಿ ಓಲೈಸುವ ಕೆಲಸ ಮಾಡುತ್ತಿವೆ’ ಎಂದು ಆರೋಪಿಸಿದರು.

ಜಿಲ್ಲಾ ಖಜಾಂಚಿ ಆನಂದರಾಜ್ ಮಾತನಾಡಿ, ‘ರಾಜಕಾರಣಿಗಳಿಗೆ ಜಿಲ್ಲೆಗೆ ಕೈಗಾರಿಕೆಗಳನ್ನು ತರಬೇಕು ಎಂಬ ಚಿಂತನೆ ಇಲ್ಲ. ಎಚ್.ಕೆ. ರಾಮಚಂದ್ರಪ್ಪ ಅವರು ಕೈಗಾರಿಕೆಗಳನ್ನು ತರಬೇಕು ಎಂಬ ಹಿತಾಸಕ್ತಿಯಿಂದ ಕೈಗಾರಿಕೆಗಳನ್ನು ತರಲು ಹೋರಾಟ ಮಾಡಿದ್ದರು’ ಎಂದು ಸ್ಮರಿಸಿದರು. 

ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿ ಆವರಗೆರೆ ಚಂದ್ರು ಅವರನ್ನು ಘೋಷಿಸಿದ್ದು, ಶನಿವಾರ ನಡೆದ ಜಿಲ್ಲಾ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ಕಾರ್ಮಿಕ ಮುಖಂಡರಾದ ಆವರಗೆರೆ ಉಮೇಶ್‌, ಆವರಗೆರೆ ವಾಸು, ಟಿ.ಎಸ್‌. ನಾಗರಾಜ ಹಾಗೂ ಐರಣಿ ಚಂದ್ರು ಇದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು