ಗುರುವಾರ , ಆಗಸ್ಟ್ 11, 2022
23 °C
8 ತಿಂಗಳಲ್ಲಿ ನಾಲ್ಕು ಪ್ರಕರಣ, 16 ದಿನಗಳಲ್ಲಿ 7 ಪ್ರಕರಣ ಪತ್ತೆಹಚ್ಚಿದ ಪೊಲೀಸರು

ದಾವಣಗೆರೆ: ಗಾಂಜಾ ಪ್ರಕರಣಗಳ ಪತ್ತೆ ಕಾರ್ಯ ಚುರುಕು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಡ್ರಗ್ಸ್‌ ಮಾಫಿಯಾದಲ್ಲಿ ಕನ್ನಡ ಚಿತ್ರರಂಗದಲ್ಲಿ ಇರುವವರು ಸಿಕ್ಕಿಬೀಳುತ್ತಿದ್ದಂತೆ ಗಾಂಜಾ ಪ್ರಕರಣಗಳ ಪತ್ತೆ ಕಾರ್ಯ ಚುರುಕುಗೊಂಡಿದೆ. ಅದರ ಪರಿಣಾಮ ಜಿಲ್ಲೆಯಲ್ಲಿಯೂ ಆಗಿದೆ. ಆಗಸ್ಟ್‌ ಅಂತ್ಯದವರೆಗೆ ನಾಲ್ಕೇ ಪ್ರಕರಣ ಪತ್ತೆಯಾಗಿದ್ದರೆ, ಸೆಪ್ಟೆಂಬರ್‌ನಲ್ಲಿ ಈವರೆಗೆ 7 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಗಾಂಜಾ, ಹೆರಾಯಿನ್‌, ಅಫೀಮ್‌ ಎಲ್ಲವೂ ನಿಷೇದಿತ ಮಾದಕ ದ್ರವ್ಯಗಳಾಗಿವೆ. ಗಾಂಜಾವನ್ನು ಕೃಷಿಕರು ಕಾನೂನುಬಾಹಿರವಾಗಿ ಜಮೀನಿನಲ್ಲಿ ಬೆಳೆಯುತ್ತಿದ್ದು, ಈಗ ಅವುಗಳ ಪತ್ತೆ ಕಾರ್ಯ ನಡೆಯುತ್ತಿದೆ.

ದಾವಣಗೆರೆ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಶಿರಮಗೊಂಡನಹಳ್ಳಿಯಲ್ಲಿ ಸೆ.1ರಂದು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಇಎನ್‌ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದರು. 920 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು.

ಸೆ.10ರಂದು ಚನ್ನಗಿರಿಯಲ್ಲಿ ಇನೊವಾ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನು ಚನ್ನಗಿರಿ ಪೊಲೀಸರು ಪತ್ತೆಹಚ್ಚಿ 5.250 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರು. ವಿಜಯವಾಡದಿಂದ ಗಾಂಜಾ ತಂದಿದ್ದು ಗೊತ್ತಾಗಿತ್ತು. ಸೆ.12ರಂದು ಹರಿಹರ ಪೊಲೀಸರು ಹನಗವಾಡಿಯಲ್ಲಿ ಮೂವರನ್ನು ಬಂಧಿಸಿ 4.170 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರು.

ಚನ್ನಗಿರಿ ತಾಲ್ಲೂಕಿನ ಗೆದ್ದಲಹಟ್ಟಿ ಗ್ರಾಮದಲ್ಲಿ ಬೆಳೆದಿದ್ದ 10 ಕೆ.ಜಿ. ಗಾಂಜಾ ಸೆ.14ರಂದು ಪತ್ತೆಯಾಗಿತ್ತು. ಒಬ್ಬನನ್ನು ಸಂತೇಬೆನ್ನೂರು ಪೊಲೀಸರು ಬಂಧಿಸಿದ್ದರು. ಸಿಇಎನ್‌ ಪೊಲೀಸರು ಸೆ.15ರಂದು ದೇವರಾಜ ಅರಸು ಬಡಾವಣೆಯಲ್ಲಿ 310 ಗ್ರಾಂ ಗಾಂಜಾ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಸೆ. 16ರಂದು ಬನಸಿರಿ ಬಡಾವಣೆಯಲ್ಲಿ ಇಬ್ಬರನ್ನು ಬಂಧಿಸಿ 280 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು. ಕೆಟಿಜೆ ನಗರ ಪೊಲೀಸರು ಭೂಮಿಕಾನಗರದಲ್ಲಿ 282 ಗ್ರಾಂ ಗಾಂಜಾ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದರು.

ಸೆಪ್ಟೆಂಬರ್‌ 1ರಿಂದ 16ರ ವರೆಗೆ 21.212 ಕೆ.ಜಿ. ವಶಪಡಿಸಿಕೊಂಡಿರುವ ಪೊಲೀಸರು 20 ಮಂದಿಯನ್ನು ಬಂಧಿಸಿದ್ದಾರೆ.

‘ಸಿನಿಮಾರಂಗದ ಕೆಲವರು ಡ್ರಗ್ಸ್‌ ಮಾರಾಟದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಕ್ಕೂ ಇದಕ್ಕೂ ಸಂಬಂಧವಿಲ್ಲ. ಗೃಹ ಸಚಿವರು ದಾವಣಗೆರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾದಕ ದ್ರವ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಬಳಿಕ ಡಿಜಿ ಅವರು ಎಲ್ಲ ಜಿಲ್ಲೆಗಳಿಗೆ ಇದೇ ಸೂಚನೆ ನೀಡಿದ್ದರು. ಅದರಂತೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೊರೊನಾ ಬಂದಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಅವರವರ ಮನೆ ಸೇರಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳಿಗೆ ಸರಬರಾಜು ಆಗುತ್ತಿದೆ ಎಂಬುದು ಸರಿಯಲ್ಲ. ಗಾಂಜಾ ಚಟ ಹೊಂದಿದರುವವರಿಗೆ ಇದು ಹೋಗುತ್ತಿದೆ. ಅಂಥವರನ್ನೇ ಪತ್ತೆಹಚ್ಚಿದಾಗ ಸರಬರಾಜಿನ ಮೂಲ ಗೊತ್ತಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು