ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಮುಷ್ಕರ: ಜನಜೀವನ‌ ಸಾಮಾನ್ಯ

ಬಸ್,‌ ಆಟೋ ಸಂಚಾರ‌ ಸಹಜ: ಕಾರ್ಮಿಕ ಸಂಘಟನೆಗಳ ಪ್ರತಿಭಟನೆ
Last Updated 8 ಜನವರಿ 2020, 14:51 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲೆಯಲ್ಲಿ ಬುಧವಾರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಮುಷ್ಕರ ಶಾಂತಿಯುತವಾಗಿ ನಡೆಯಿತು. ಜನ ಜೀವನ, ವಾಹನ ಸಂಚಾರಗಳು ಎಂದಿನಂತೆ ಇದ್ದವು.

ಬ್ಯಾಂಕ್‌, ಅಂಚೆ ಕಚೇರಿಯಲ್ಲಿ ಸೇವೆ ಮಧ್ಯಾಹ್ನದ ವರೆಗೆ ಸ್ವಲ್ಪ ವ್ಯತ್ಯಯವಾಯಿತು. ಉಳಿದ ಕಡೆ ಯಾವುದೇ ಸಮಸ್ಯೆಗಳಾಗಲಿಲ್ಲ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ವಿರಳವಾಗಿ ಓಡಿದವು. ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಶಾಲಾ ಕಾಲೇಜುಗಳು ತೆರೆದಿದ್ದವು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಜಯದೇವ ಸರ್ಕಲ್‌ನಿಂದ ವೃತ್ತದಲ್ಲಿ ಜಮಾವಣೆಗೊಂಡರು. ಬಳಿಕ ಕ್ಲಾಕ್‌ಟವರ್‌ ವರೆಗೆ ಬೃಹತ್‌ ಮೆರವಣಿಗೆ ನಡೆಸಿದರು. ಕ್ಲಾಕ್‌ ಟವರ್‌ ಬಳಿ ರಸ್ತೆಯಲ್ಲಿಯೇ ಪ್ರತಿಭಟನಕಾರರು ಕುಳಿತರು. ಮಧ್ಯಾಹ್ನ 1.45ರ ವರೆಗೆ ಪ್ರತಿಭಟನ ಸಭೆ ನಡೆಯಿತು.

ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಐಬಿಇಎ, ಎಐಐಇಎ, ಬಿಎಸ್‌ಎನ್‌ಎಲ್‌, ಪೋಸ್ಟಲ್‌, ಕರ್ನಾಟಕ ಶ್ರಮಿಕ ಶಕ್ತಿ, ನೆರಳುಬೀಡಿ ಕಾರ್ಮಿಕರ ಯೂನಿಯನ್‌, ಕರ್ನಾಟಕ ಜನಶಕ್ತಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ, ಕ್ವಾರಿ ಕಾರ್ಮಿಕರು, ಬೀಡಿ ಕಾರ್ಮಿಕರು, ಅಂಗನವಾಡಿ ನೌಕರರು, ಹಸಿರು ಸೇನೆ ಮತ್ತು ರೈತ ಸಂಘ ಹೀಗೆ ಹಲವು ಸಂಘಟನೆಗಳು ಕೈ ಜೋಡಿಸಿದ್ದವು.

ಭಾರತದ ಆರ್ಥಿಕ ಬೆಳವಣಿಗೆ ಬಿದ್ದು ಹೋಗಿದೆ ಎಂದು ಎಲ್ಲ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಇದರಿಂದ ಉದ್ಯೋಗ ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ. ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಬೇಕು. ಸರಿಯಾದ ವೇತನ ಕೊಡಬೇಕು. ಕಾರ್ಮಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಕಾರ್ಮಿಕ ವಿರೋಧಿ ಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಅದನ್ನು ರದ್ದು ಮಾಡಬೇಕು. ಕಾರ್ಪೊರೇಟ್‌ ಪರ ನೀತಿ ಕೈಬಿಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಕನಿಷ್ಠ ವೇತನ ₹ 21 ಸಾವಿರ ನೀಡಬೇಕು. ಗುತ್ತಿಗೆ ಪದ್ಧತಿ ನಿಯಂತ್ರಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯ ಮಾಡಬಾರದು. ರೈಲ್ವೆ ಖಾಸಗೀಕರಣ ಮಾಡಬಾರದು. ರಕ್ಷಣೆ, ಕಲ್ಲಿದ್ದಲು, ಬ್ಯಾಂಕಿಂಗ್‌, ವಿಮೆ ಮುಂತಾದ ರಂಗಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಬಾರದು. ಅಸಂಘಟಿತ ಕಾರ್ಮಿಕರಿಗೆ ಶಾಸನ ಬದ್ಧ ಭವಿಷ್ಯನಿಧಿ ಮತ್ತ ಪಿಂಚಣಿ ಒದಗಿಸಬೇಕು. ಸಾಮಾಜಿಕ ಭದ್ರತಾ ಮಂಡಳಿಗಳ ನಿಧಿ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕು ಎಂದು ಒತ್ತಾಯಿಸಿದರು.

ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಗಳಿಗಾಗಿ ಡಾ. ಸ್ವಾಮಿನಾಥನ್‌ ವರದಿ ಜಾರಿಗೆ ತರಬೇಕು. ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವ ಬದಲು ರೈತರ ಸಾಲ ಮನ್ನಾ ಮಾಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಲಪಡಿಸಬೇಕು. ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೆ ತರಬೇಕು ಎಂದರು.

ಕೇಂದ್ರ ಸರ್ಕಾರವು ಹಿಂದುತ್ವ, ಸರ್ವಾಧಿಕಾರ, ಫ್ಯಾಸಿಸ್ಟ್‌ ನಿಲುವಿನತ್ತ ಸಾಗುತ್ತಿದೆ. ಸಂವಿಧಾನ ವಿರೋಧಿ, ದೇಶದ ಏಕತೆ ಮತ್ತು ಸಮಗ್ರತೆಗೆ ಮಾರಕವಾಗಿರುವ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ನೀತಿಯಿಂದಾಗಿ ಉದ್ಯೋಗ ಇಲ್ಲ. ವ್ಯಾಪಾರ ಕುಸಿದಿದೆ. ಸಾರ್ವಜನಿಕ ಉದ್ದಿಮೆಗಳು ಕುಸಿಯುತ್ತಿವೆ. ಬ್ಯಾಂಕ್‌ಗಳಲ್ಲಿ ಠೇವಣಿಗೆ ಬಡ್ದಿ ಕಡಿಮೆಯಾಗಿದೆ. ಬಿಎಸ್‌ಎನ್‌ಎಲ್‌ಗೆ ನೀಡಬೇಕಾದ ಸವಲತ್ತು ನೀಡದೇ ನಷ್ಟಕ್ಕೆ ಸರ್ಕಾರವೇ ದೂಡಿದೆ. ಈ ಎಲ್ಲದರ ವಿರುದ್ಧ ಕೆಂಪು, ನೀಲಿ, ಹಸಿರು ಒಂದಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

ಕಾರ್ಮಿಕ ನಾಯಕ ಎಚ್‌.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಾರ್ಮಿಕ ಮತ್ತು ರೈತ ನಾಯಕರಾದ ಎಚ್‌.ಜಿ. ಉಮೇಶ್‌, ರಾಘವೇಂದ್ರ ನಾಯರಿ, ಜಬೀನಾ ಖಾನಂ, ಸತೀಶ್‌ ಅರವಿಂದ್‌, ಹುಚ್ಚವ್ವನಹಳ್ಳಿ ಮಂಜುನಾಥ್‌, ಆವರೆಗೆರೆ ಚಂದ್ರು, ಆವರೆಗೆರೆ ವಾಸು, ಅನಿಸ್‌ ಪಾಷಾ, ಬಲ್ಲೂರು ರವಿಕುಮಾರ್‌, ಕೆ.ಎಲ್‌. ಭಟ್‌, ಕೈದಾಳೆ ಮಂಜುನಾಥ್‌, ಕುಕ್ಕುವಾಡ ಮಂಜುನಾಥ್‌, ಕೆ.ಎಂ. ಆನಂದರಾಜ್‌, ಕರಿಬಸಪ್ಪ, ಎಂ.ಬಿ. ಶಾರದಮ್ಮ, ವಿಶಾಲಾಕ್ಷಿ, ರುದ್ರಮ್ಮ, ಷಣ್ಮುಖಪ್ಪ, ಪ್ರಕಾಶ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT