ಸೋಮವಾರ, ಆಗಸ್ಟ್ 2, 2021
28 °C
ಬೆಳೆ ಸರ್ವೆ ಪಟ್ಟಿಯಲ್ಲಿ ನಮೂದಾಗದ ದಾವಣಗೆರೆ ರೈತರ ಜಮೀನಿನ ಬೆಳೆ ವಿವರ

ದಾವಣಗೆರೆ | ಬೆಳೆಹಾನಿ ಪರಿಹಾರ ಕೈತಪ್ಪುವ ಆತಂಕ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಲಾಕ್‌ಡೌನ್‌ ವೇಳೆ ಹೂವು, ಹಣ್ಣು, ತರಕಾರಿ ಬೆಳೆ ಹಾನಿಯಾಗಿರುವುದಕ್ಕೆ ರಾಜ್ಯ ಸರ್ಕಾರ ಘೋಷಿಸಿದ ಪರಿಹಾರ ಹಣದಿಂದ ಜಿಲ್ಲೆಯ ಹಲವು ರೈತರು ವಂಚಿತರಾಗುವ ಆತಂಕ ಎದುರಾಗಿದೆ.

ಕಂದಾಯ ಇಲಾಖೆ ಹೊರಗುತ್ತಿಗೆ ಆಧಾರದಲ್ಲಿ ಮುಂಗಾರು ಹಾಗೂ ಹಿಂಗಾರಿಗೆ ನಡೆಸಿದ್ದ ಬೆಳೆ ಸಮೀಕ್ಷೆ ವರದಿಯನ್ನೇ ಆಧಾರವಾಗಿಟ್ಟುಕೊಂಡು ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ, ಹಲವು ರೈತರು ಜಮೀನಿನಲ್ಲಿ ಬೆಳೆದಿದ್ದ ಫಸಲಿನ ವಿವರ ಸಮೀಕ್ಷೆಯಲ್ಲಿ ನಮೂದಿಸದೇ ಇರುವುದರಿಂದ ಪರಿಹಾರ ಹಣ ಪಡೆಯಲು ಪರದಾಡುವಂತಾಗಿದೆ.

ಲಾಕ್‌ಡೌನ್‌ನಿಂದಾಗಿ ಹೂವಿನ ಬೆಳೆ ಹಾನಿಯಾಗಿರುವುದಕ್ಕೆ ಗರಿಷ್ಠ ಒಂದು ಹೆಕ್ಟೇರ್‌ಗೆ ₹ 25 ಸಾವಿರ ಹಾಗೂ ಹಣ್ಣು ಮತ್ತು ತರಕಾರಿ ಬೆಳೆ ಹಾನಿಗೆ ತಲಾ ₹ 15 ಸಾವಿರ ಪರಿಹಾರವನ್ನು ಸರ್ಕಾರ ಘೋಷಿಸಿದೆ. ಕಂದಾಯ ಇಲಾಖೆಯ ಬೆಳೆ ಸಮೀಕ್ಷೆ ವರದಿ ಪ್ರಕಾರ ಜಿಲ್ಲೆಗೆ 140 ಹೆಕ್ಟೇರ್‌ ಪುಷ್ಪ ಬೆಳೆ ಹಾನಿಗೆ ₹ 29 ಲಕ್ಷ ಪರಿಹಾರ ಮೊತ್ತ ಹಂಚಿಕೆಯಾಗಿದೆ. ಹೂವಿನ ಬೆಳೆ ಹಾನಿಗೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿತ್ತು. ಇದುವರೆಗೆ 1,315 ರೈತರಿಂದ ಅರ್ಜಿಗಳು ಬಂದಿದ್ದು, 570 ಹೆಕ್ಟೇರ್‌ ಹೂವಿನ ಬೆಳೆ ಹಾನಿಯಾಗಿದೆ.

‘ಜಿಲ್ಲೆಯಲ್ಲಿ 140 ಹೆಕ್ಟೇರ್‌ ಹೂವಿನ ಬೆಳೆ ಹಾನಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ಫಲಾನುಭವಿ ರೈತರ ಖಾತೆಗೆ ನೇರವಾಗಿ ಹಣ ಪಾವತಿಯಾಗುತ್ತಿದೆ. ಕಂದಾಯ ಇಲಾಖೆಯ ಬೆಳೆ ಸಮೀಕ್ಷೆ ವರದಿಯಲ್ಲಿ ಸುಮಾರು 300 ಹೆಕ್ಟೇರ್‌ ಹೂವಿನ ಬೆಳೆ ಕೈ ಬಿಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅರ್ಜಿ ಸಲ್ಲಿಸಿರುವ ರೈತರ ಜಮೀನಿಗೆ ತೆರಳಿ ಪಂಚನಾಮೆ ಮಾಡಿ ಬೆಳೆ ದೃಢೀಕರಿಸಲು ಅವಕಾಶ ನೀಡಲಾಗಿದೆ. ಬೆಳೆ ದೃಢೀಕರಿಸಿ ಸರ್ಕಾರಕ್ಕೆ ಪರಿಹಾರ ಹಣ ಬಿಡುಗಡೆಗೆ ಕೋರಿ ವರದಿ ಸಲ್ಲಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೋಮ್ಮನ್ನರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತರಕಾರಿ, ಹಣ್ಣಿನ ಬೆಳೆಯಲ್ಲೂ ಸಮಸ್ಯೆ: ಬೆಳೆ ಸಮೀಕ್ಷೆ ವರದಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 1,300 ಹೆಕ್ಟೇರ್‌ ತರಕಾರಿ ಬೆಳೆ ಹಾಗೂ 745 ಹೆಕ್ಟೇರ್‌ ಹಣ್ಣಿನ ಬೆಳೆ ಹಾನಿಯಾಗಿದೆ ಎಂಬ ಮಾಹಿತಿ ಬಂದಿದೆ. ಮುಂಗಾರು ಹಾಗೂ ಹಿಂಗಾರಿಗೆ ಬೆಳೆ ಸಮೀಕ್ಷೆ ನಡೆಸುವ ವೇಳೆ ಹಲವು ರೈತರ ಜಮೀನಿನಲ್ಲಿರುವ ಬೆಳೆಯ ಫೋಟೊ ತೆಗೆದು ಅಪ್‌ಲೋಡ್‌ ಮಾಡಿಲ್ಲ. ಇದರ ಪರಿಣಾಮ ಕಡಿಮೆ ಪ್ರಮಾಣದಲ್ಲಿ ತರಕಾರಿ ಹಾಗೂ ಹಣ್ಣಿನ ಬೆಳೆ ಹಾನಿಯಾಗಿದೆ ಎಂದು ಪರಿಗಣಿಸಲಾಗಿದೆ. ತರಕಾರಿ ಹಾಗೂ ಹಣ್ಣು ಬೆಳೆ ಹಾನಿಯಾಗಿರುವ ಬಗ್ಗೆ ರೈತರು ಸಲ್ಲಿಸಿದ ಅರ್ಜಿಗಳನ್ನೂ ಸ್ವೀಕರಿಸಿ ಪಟ್ಟಿ ಮಾಡಿಕೊಂಡಿದ್ದೇವೆ. ಬೆಳೆ ಸಮೀಕ್ಷೆ ಪಟ್ಟಿಯಲ್ಲಿ ಸಿಹಿಕುಂಬಳ, ಈರುಳ್ಳಿ, ಟೊಮೆಟೊ, ಎಲೆಕೋಸು, ಹೂಕೋಸು ಬೆಳೆದ ಹಲವು ರೈತರ ಹೆಸರು ಬಿಟ್ಟು ಹೋಗಿರುವ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದೇವೆ. ಅವರಿಗೂ ಪರಿಹಾರ ಕೊಡಿಸಲು ಸರ್ಕಾರ ಮಟ್ಟದಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿದ್ದೇವೆ’ ಎಂದು ಬೋಮ್ಮನ್ನರ್‌ ಮಾಹಿತಿ ನೀಡಿದರು.

*
ಮುಂಗಾರು ಹಾಗೂ ಹಿಂಗಾರು ಬೆಳೆ ಸರ್ವೆಯಲ್ಲಿ ಹಲವು ರೈತರ ಬೆಳೆ ನಮೂದಾಗದೇ ಇರುವುದರಿಂದ ಲಾಕ್‌ಡೌನ್‌ನಿಂದಾದ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಗೊಂದಲವಾಗಿದೆ.
– ಲಕ್ಷ್ಮೀಕಾಂತ ಬೋಮ್ಮನ್ನರ್‌, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

*
ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಜಮೀನಿನ ಬೆಳೆ ಸಮೀಕ್ಷೆ ನಡೆಸಬೇಕು. ಲಾಕ್‌ಡೌನ್‌ನಿಂದ ತೋಟಗಾರಿಕೆ ಬೆಳೆ ಹಾನಿಯಾದ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು.
– ಬಲ್ಲೂರು ರವಿಕುಮಾರ್‌, ಕಾರ್ಯದರ್ಶಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು