ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಾನಗತಿಯಲ್ಲಿ ಪ್ರಾರಂಭವಾದ ಅಡಿಕೆ ಕೊಯ್ಲು

ಚನ್ನಗಿರಿ ತಾಲ್ಲೂಕಿನಾದ್ಯಂತ ಕೈ ಕೊಟ್ಟ ಮುಂಗಾರು
Last Updated 9 ಜುಲೈ 2021, 2:58 IST
ಅಕ್ಷರ ಗಾತ್ರ

ಚನ್ನಗಿರಿ: ಪ್ರತಿ ವರ್ಷ ಸುಗಮ ಅಡಿಕೆ ಕೊಯ್ಲಿಗೆ ಅಡ್ಡಿಯಾಗುತ್ತಿದ್ದ ಮುಂಗಾರು ಮಳೆ ಈ ಬಾರಿ ಕೈ ಕೊಟ್ಟಿರುವುದರಿಂದ ಅಡಿಕೆ ಬೆಳೆಗಾರರು ನಿಧಾನಗತಿಯಲ್ಲಿ ಅಡಿಕೆ ಕೊಯ್ಲನ್ನು ಆರಂಭಿಸಿದ್ದಾರೆ.

ಅದೇ ರೀತಿ ಕೊರೊನಾ ಲಾಕ್‌ಡೌನ್‌ನಿಂದಾಗಿ ಅಡಿಕೆ ಮಾರಾಟ ಕಾರ್ಯ ಸ್ಥಗಿತಗೊಂಡಿದ್ದು, ಲಾಕ್‌ಡೌನ್ ತೆರವುಗೊಳಿಸಿದ ಪರಿಣಾಮ ಪ್ರಮುಖ ಅಡಿಕೆ ಮಾರುಕಟ್ಟೆ ಖರೀದಿ ಕೇಂದ್ರ ತುಮ್ಕೋಸ್‌ನಲ್ಲಿ ಅಡಿಕೆ ಖರೀದಿಯನ್ನು ಆರಂಭಿಸಿರುವುದರಿಂದ ಅಡಿಕೆ ಬೆಳೆಗಾರರು ಉತ್ಸಾಹದಿಂದ ಅಡಿಕೆ ಕೊಯ್ಲನ್ನು ಚುರುಕುಗೊಳಿಸಿದ್ದಾರೆ.

ತಾಲ್ಲೂಕಿನಲ್ಲಿ 38 ಸಾವಿರ ಹೆಕ್ಟೇರ್ ಪ್ರದೇಶ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಅದರಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯುತ್ತಿರುವುದರಿಂದ ಈ ತಾಲ್ಲೂಕನ್ನು ‘ಅಡಿಕೆ ನಾಡೆಂದು’ ಕರೆಯಲಾಗುತ್ತದೆ.

ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ ತಿಂಗಳ ಮೊದಲ ವಾರದಿಂದ ಅಡಿಕೆ ಕೊಯ್ಲು ಪ್ರಾರಂಭವಾಗುತ್ತದೆ. ಹೀಗೇ ಪ್ರಾರಂಭಗೊಂಡ ಅಡಿಕೆ ಕೊಯ್ಲು 3 ತಿಂಗಳವರೆಗೆ ನಿರಂತರವಾಗಿ ಸಾಗುತ್ತದೆ. ಮುಂಗಾರು ಮಳೆ ಹಿಡಿದುಕೊಂಡಿದ್ದರೆ, ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲನ್ನು ಪ್ರಾರಂಭ ಮಾಡುವುದನ್ನು ಮುಂದಕ್ಕೆ ಹಾಕುತ್ತಿದ್ದರು. ಆದರೆ, ಮಳೆ ಇಲ್ಲದ ಕಾರಣ ಅಡಿಕೆ ಕೊಯ್ಲನ್ನು ಬೆಳೆಗಾರರು ಪ್ರಾರಂಭಿಸುವಂತಹ ಪೂರಕವಾದ ವಾತಾವರಣ ತಾಲ್ಲೂಕಿನಾದ್ಯಂತ ನಿರ್ಮಾಣವಾಗಿದೆ.

‘ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿ ಬಿದ್ದ ಕಾರಣದಿಂದಾಗಿ ಈ ಬಾರಿ ಅಡಿಕೆ ಉತ್ತಮ ಇಳುವರಿ ಬರುವ ನಿರೀಕ್ಷೆಯನ್ನು ಹೊಂದಿದ್ದೇವೆ. ಹಾಗೆಯೇ ಅಡಿಕೆಗೆ ಉತ್ತಮ ದರವೂ ಇರುವುದರಿಂದ ಅಡಿಕೆ ಬೆಳೆಗಾರರಲ್ಲಿ ನವೋಲ್ಲಾಸ ತುಂಬಿದ್ದು, ಅಡಿಕೆ ಕೊಯ್ಲನ್ನು ಚುರುಕಿನಿಂದ ಪ್ರಾರಂಭಿಸುವಂತಾಗಿದೆ. ಈ ಬಾರಿ 1 ಎಕರೆಗೆ 15ರಿಂದ 18 ಕ್ವಿಂಟಲ್ ಅಡಿಕೆ ಇಳುವರಿ ಬಂದೇ ಬರುತ್ತದೆ. 1 ಕ್ವಿಂಟಲ್ ಅಡಿಕೆ ದರ ₹ 41,500ರಿಂದ ₹ 42,500ರ ವರೆಗೆ ಮಾರಾಟವಾಗುತ್ತಿದೆ. ಒಟ್ಟಾರೆ ಈ ಬಾರಿ ಅಡಿಕೆ ಬೆಳೆಗಾರರು ಉತ್ತಮ ಆದಾಯವನ್ನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ತಾಲ್ಲೂಕಿನ ವಡ್ನಾಳ್ ಗ್ರಾಮದ ಸಂತೋಷ್.

ಕೊರೊನಾ ಲಾಕ್‌ಡೌನ್‌ನಿಂದಾಗಿ ತುಮ್ಕೋಸ್ ಅಡಿಕೆ ಖರೀದಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಅಡಿಕೆ ಖರೀದಿಯನ್ನು ಪ್ರಾರಂಭಿಸಲಾಗಿದೆ. ಇನ್ನು ಹೊಸ ಅಡಿಕೆ ಮಾರಾಟಕ್ಕೆ ಮಾರುಕಟ್ಟೆಗೆ ಬಂದಿಲ್ಲ. ಹೊಸ ಅಡಿಕೆ ಮಾರುಕಟ್ಟೆಗೆ ಬರಲು 1 ತಿಂಗಳು ಬೇಕಾಗುತ್ತದೆ. ಪ್ರಸ್ತುತ ಹಳೆ ಅಡಿಕೆಯನ್ನು ಬೆಳೆಗಾರರು ಪ್ರತಿ ದಿನ 300ರಿಂದ 400 ಚೀಲದಷ್ಟು ಮಾರಾಟ ಮಾಡುತ್ತಿದ್ದಾರೆ. ಹಳೆ ಅಡಿಕೆ ದರ 1 ಕ್ವಿಂಟಲ್‌ಗೆ ₹ 41,500ರಿಂದ ₹ 42,500ರ ವರೆಗೆ ಖರೀದಿ ಮಾಡಲಾಗುತ್ತಿದೆ. ಉತ್ತಮವಾದ ದರವೂ ಇರುವುದರಿಂದ ದಿನೇ ದಿನೇ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಲಾಕ್‌ಡೌನ್ ಮುನ್ನ 70 ಸಾವಿರ ಅಡಿಕೆ ಚೀಲಗಳನ್ನು ಬೆಳೆಗಾರರು ದಾಸ್ತಾನು ಮಾಡಿದ್ದರು. ಲಾಕ್‌ಡೌನ್ ತೆರವಿನಿಂದಾಗಿ ಹದಿನೈದು ದಿನಗಳಲ್ಲಿ 20 ಸಾವಿರ ಚೀಲ ಅಡಿಕೆ ಮಾರಾಟವಾಗಿದೆ’ ಎಂದು ತುಮ್ಕೋಸ್ ಅಧ್ಯಕ್ಷ ಆರ್.ಎಂ. ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT