ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 1 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವಿದೆ: ಶ್ರೀರಾಮುಲು

Last Updated 14 ಏಪ್ರಿಲ್ 2020, 12:22 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜ್ಯದಲ್ಲಿ ಒಂದು ಲಕ್ಷ ಕೊರೊನಾ ಪಾಸಿಟಿವ್‌ ಪ್ರಕರಣ ಕಾಣಿಸಿಕೊಂಡರೂ ರೋಗಿಗಳಿಗೆ ಚಿಕಿತ್ಸೆ ನೀಡಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

‘ಕೋವಿಡ್‌–19’ ಕುರಿತು ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್‌ ಆಸ್ಪತ್ರೆಗಳನ್ನು ತೆರೆಯಲಾಗಿದೆ. 6,000 ಐಸೋಲೇಷನ್‌ ಬೆಡ್‌ಗಳಿವೆ. 1,000 ಐಸಿಯುಗಳಿವೆ. 150 ವೆಂಟಿಲೇಟರ್‌ಗಳನ್ನು ಖರೀದಿಸಲಾಗಿದೆ. ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್‌ಗಳನ್ನು ಬಳಸಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಹೇಳಿದರು.

ರಾಜ್ಯದಲ್ಲಿ 258 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. 65 ಜನ ಈಗಾಗಲೇ ಗುಣಮುಖರಾಗಿದ್ದಾರೆ. ಪಾಸಿಟಿವ್‌ ಪ್ರಕರಣ ಹೆಚ್ಚುತ್ತಿರುವುದರ ಜೊತೆಯಲ್ಲೇ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಸೂರ್ಯನ ಕಿರಣಗಳು ಎಲ್ಲೆಲ್ಲಿ ಚೆನ್ನಾಗಿ ಬೀಳುತ್ತಿವೆಯೋ ಅಲ್ಲೆಲ್ಲ ರೋಗಿಗಳು ಬಹಳ ಬೇಗನೆ ಗುಣಮುಖರಾಗುತ್ತಿರುವುದು ಸಂತೋಷದ ವಿಚಾರ. ಕೋವಿಡ್‌ ಪ್ರಕರಣಗಳಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಇಂದು 12ನೇ ಸ್ಥಾನದಲ್ಲಿದೆ. ಇನ್ನು ಮುಂದೆ ಕೊರೊನಾ ಸೋಂಕಿತರ ಸೆಕೆಂಡರಿ ಕಾಂಟೆಕ್ಟ್‌ಗಳನ್ನೂ ಪರೀಕ್ಷೆಗೊಳಪಡಿಸಲಾಗುವುದು. ರಾಜ್ಯದಲ್ಲಿ ಕೊರೊನಾವನ್ನು ಹಿಮ್ಮೆಟ್ಟಿಸಿರುವುದರ ಹಿಂದೆ ಎಲ್ಲರ ಪರಿಶ್ರಮದ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಾವೆಲ್ಲ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರವರೆಗೆ ಲಾಕ್‌ಡೌನ್‌ ಅನ್ನು ವಿಸ್ತರಿಸಿದ್ದಾರೆ. ಅವರು ಹೇಳಿದ ಸಪ್ತ ಸೂತ್ರಗಳನ್ನು ಎಲ್ಲರೂ ಪಾಲಿಸಬೇಕು. ಕೊರೊನಾ ಸೋಂಕು ಸಮುದಾಯಮಟ್ಟದಲ್ಲಿ ಹರಡದಂತೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಮೇ 3ರವರೆಗೂ ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ನಿಗದಿಪಡಿಸಿದ ಸಮಯದಲ್ಲಿ ಮಾತ್ರ ದಿನನಿತ್ಯ ಬಳಕೆ ಖರೀದಿಸಲು ಹೊರಗೆ ಬರಬೇಕು. ಆಗ ಮಾತ್ರ ಈ ರೋಗವನ್ನು ಹಿಮ್ಮೆಟ್ಟಿಸಲು ಸರ್ಕಾರದ ಕೆಲಸ ಸುಲಭವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಕೊರೊನಾ ಶಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆತರುವ ‘108’ ಆಂಬುಲೆನ್ಸ್‌ ಸಿಬ್ಬಂದಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ನೀಡಿಲ್ಲ ಹಾಗೂ ಸಂಬಳವನ್ನು ಕೊಡದೇ ಇರುವ ಬಗ್ಗೆ ಸಚಿವರ ಗಮನಕ್ಕೆ ತಂದಾಗ, ‘ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಸಂಬಳ ಪಾವತಿಸುವ ಬಗ್ಗೆ ಗುತ್ತಿಗೆದಾರ ಕಂಪನಿ ಜೊತೆಗೆ ಮಾತುಕತೆ ನಡೆಸುತ್ತೇವೆ. ಸಿಬ್ಬಂದಿಗೆ ಅಗತ್ಯ ಸುರಕ್ಷಾ ಪರಿಕರ ವಿತರಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯಲ್ಲೇ ಕೊರೊನಾ ಪರೀಕ್ಷೆಗೆ ಅವಕಾಶ’

‘ದಾವಣಗೆರೆ ಜಿಲ್ಲೆಯಲ್ಲೇ ಕೊರೊನಾ ವೈರಸ್‌ ಪರೀಕ್ಷೆ ನಡೆಸಲು ಇಲ್ಲಿನ ಪ್ರಯೋಗಾಲಯಕ್ಕೆ ಅನುಮತಿ ನೀಡಿ ಕಿಟ್‌ಗಳನ್ನು ಪೂರೈಸುವಂತೆ ಜನಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಐಸಿಎಫ್‌ಆರ್‌ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಎರಡು–ಮೂರು ದಿನಗಳಲ್ಲಿ ಪ್ರಯೋಗಾಲಯ ಆರಂಭಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುವುದು’ ಎಂದು ಶ್ರೀರಾಮುಲು ಭರವಸೆ ನೀಡಿದರು.

ಜಿಲ್ಲಾಡಳಿತದ ಕಾರ್ಯವೈಖರಿಗೆ ಮೆಚ್ಚುಗೆ

‘ಜಿಲ್ಲೆಯಲ್ಲಿ ಕೊರೊನಾ ಹಿಮ್ಮೆಟ್ಟಿಸುವಲ್ಲಿ ಶ್ರಮಿಸಿದ ಜಿಲ್ಲಾಡಳಿತ, ವೈದ್ಯರು, ನರ್ಸ್‌, ಸಂಸದರು, ಶಾಸಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ’ ಎಂದು ಸಚಿವ ಶ್ರೀರಾಮುಲು ಮೆಚ್ಚುಗೆ ವ್ಯಕ್ತಪಡಿಸಿದರು.

‘ದಾವಣಗೆರೆ ಜಿಲ್ಲೆಯಲ್ಲಿ ಮೂರು ಕೋವಿಡ್‌ ಪ್ರಕರಣಗಳಿದ್ದಾಗ ಆತಂಕ ಉಂಟಾಗಿತ್ತು. ಆದರೆ, ಈಗ ಮೂವರೂ ಕ್ವಾರಂಟೈನ್‌ ಅವಧಿ ಮುಗಿಸಿ ಗುಣಮುಖರಾಗಿದ್ದಾರೆ. ಹೊಸ ಪ್ರಕರಣ ವರದಿಯಾಗದೇ ಇರುವುದು ಸಂತೋಷದ ವಿಷಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT